ವರ್ಷದ ವಿಶೇಷ- ಕನ್ನಡ ಸಿನಿಮಾ | ಎಲ್ಲಿಂದಲೋ ಬಂದವರು, ಎಲ್ಲಿಗೆ ಹೋದರು?
ಪ್ರತಿ ಬಾರಿಯಂತೆ ಈ ವರ್ಷವೂ ದೊಡ್ಡ ಸಂಖ್ಯೆಯಲ್ಲಿ ಹೊಸಬರು ಬಂದಿದ್ದಾರೆ. ಬರೀ ಹೀರೋಗಳಷ್ಟೇ ಅಲ್ಲ, ನಿರ್ದೇಶಕರು, ನಿರ್ಮಾಪಕರು, ನಾಯಕಿಯರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು, ಹೀಗೆ ಬಂದವರ ಪಟ್ಟಿ ದೊಡ್ಡದಿದೆ...
ಕಳೆದ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಕನ್ನಡ ಚಿತ್ರರಂಗಕ್ಕೆ ಬಂದರು. ಅವರೆಲ್ಲಾ ಆ ನಂತರ ಏನಾದರು? ಎತ್ತ ಹೋದರು? ಎಂಬುದು ಗೊತ್ತಿಲ್ಲ. ಈ ವರ್ಷವೂ ದೊಡ್ಡ ಸಂಖ್ಯೆಯಲ್ಲಿ ಹೊಸಬರು ಬಂದಿದ್ದಾರೆ. ಬರೀ ಹೀರೋಗಳಷ್ಟೇ ಅಲ್ಲ, ನಿರ್ದೇಶಕರು, ನಿರ್ಮಾಪಕರು, ನಾಯಕಿಯರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು … ಹೀಗೆ ಬಂದವರ ಪಟ್ಟಿ ದೊಡ್ಡದಿದೆ. ಆದರೆ, ಅವರನ್ನು ಪ್ರೇಕ್ಷಕರು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಹೊಸಬರ ಮೇಲೆ 300 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯಾಗಿದೆ. ಅವೆಲ್ಲವೂ ಸಂಪೂರ್ಣ ನಷ್ಟ ಎಂಬುದು ಗಮನಾರ್ಹ.
ಒಟ್ಟಾರೆ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಅಷ್ಟೇನೂ ಚೆನ್ನಾಗಿರಲಿಲ್ಲ ಎಂಬ ವಿಷಯ ಹೊಸದೇನಲ್ಲ. ಒಂದು ಕಡೆ ಹಲವು ಸಮಸ್ಯೆ, ವಿವಾದ, ಸೋಲುಗಳ ಜೊತೆಗೆ ಈ ವರ್ಷ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ. ಬಿಡುಗಡೆಯಾದ 220 ಚಿತ್ರಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಮಾತ್ರ ಹಾಕಿದ ಬಂಡವಾಳವನ್ನು ವಾಪಸ್ ಪಡೆಯುವುದರ ಜೊತೆಗೆ ಕೆಲವು ಕೋಟಿಗಳ ಲಾಭವಾಗಿದ್ದು ಬಿಟ್ಟರೆ, ಮಿಕ್ಕಂತೆ ಬಿಡುಗಡೆಯಾದ ಚಿತ್ರಗಳ ಪೈಕಿ ಒಟ್ಟಾರೆ 600 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ, ಹೊಸಬರ ಚಿತ್ರಗಳು 300ರಿಂದ 400 ಕೋಟಿ ಕಳೆದುಕೊಂಡಿವೆ ಎಂದು ಹೇಳಲಾಗಿದೆ.
100ಕ್ಕೂ ಹೆಚ್ಚು ಹೊಸ ನಾಯಕರು, ನಿರ್ದೇಶಕರು
ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ 20ರಿಂದ 30 ಹಳಬರ ಅಥವಾ ಜನ ಗುರುತಿಸುವಂತಹ ನಟರ ಚಿತ್ರಗಳಿರಬಹುದು. ಮಿಕ್ಕಂತೆ, ಎಲ್ಲವೂ ಹೊಸಬರ ಚಿತ್ರಗಳೇ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಹೊಸ ನಾಯಕರು, ನಾಯಕಿಯರು, ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಸಂಗೀತ ನಿರ್ದೇಶಕರು ಅದೃಷ್ಟಪರೀಕ್ಷೆಗೆ ಒಳಗಾಗಿದ್ದಾರೆ. ಅದರಲ್ಲಿ ಬೆರಳಣಿಕೆಯಷ್ಟು ಮಂದಿ ಸ್ವಲ್ಪ ಗಮನ ಸೆಳೆದಿದ್ದು ಬಿಟ್ಟರೆ, ಮಿಕ್ಕವರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಗಿದ್ದಾರೆ.
ಈ ವರ್ಷ ಪ್ರಾರಂಭವಾಗಿದ್ದು ‘ಆದರ್ಶ ರೈತ’ ಮತ್ತು ‘ಒಂಟಿ ಬಂಟಿ’ ಎಂಬ ಹೊಸಬರ ಚಿತ್ರಗಳಿಂದ. ಮುಕ್ತಾಯವಾಗಿದ್ದು ‘ಔಟ್ ಆಫ್ ಸಿಲಬಸ್’ ಎಂಬ ಹೊಸಬರ ಚಿತ್ರದಿಂದ. ಈ ಮಧ್ಯೆ, ಸಾಲುಸಾಲು ಹೊಸಬರ ಚಿತ್ರಗಳು ಬಂದಿವೆ. ಕೆಲವು ಚಿತ್ರಗಳಲ್ಲಿ ನಾಯಕ-ನಾಯಕಿ ಹೊಸಬರಾಗಿ ತಂತ್ರಜ್ಞರು ಹಳಬರಾದರೆ, ಇನ್ನೂ ಕೆಲವು ಚಿತ್ರಗಳಲ್ಲಿ ನಾಯಕ-ನಾಯಕಿ ಒಂದೆರಡು ಚಿತ್ರಗಳಲ್ಲಿ ನಟಿಸಿ, ನಿರ್ಮಾಪಕರು, ನಿರ್ದೇಶಕರು ಹಳಬರಾಗಿರುತ್ತಾರೆ. ಮಿಕ್ಕಂತೆ ಕೆಲವು ಚಿತ್ರಗಳಲ್ಲಿ ಎಲ್ಲರೂ ಹೊಸಬರೇ ಆಗಿರುತ್ತಾರೆ. ಒಂದಿಷ್ಟು ಹೊಸಬರು, ಅನನುಭವಿಗಳು ತಾವೇ ತಂಡ ಕಟ್ಟಿಕೊಂಡು, ಹೊಸ ಹುರುಪಿನಿಂದ ಸಾಹಸಕ್ಕಿಳಿದಿದ್ದೂ ಇದೆ. ಇವೆರನ್ನೆಲ್ಲಾ ಸೇರಿಸಿದರೆ ಈ ವರ್ಷ 100ಕ್ಕೂ ಹೆಚ್ಚು ಹೊಸ ನಾಯಕರು, ನಾಯಕಿಯರು, ನಿರ್ಮಾಪಕರು, ನಿರ್ದೇಶಕರು, ಛಾಯಾಗ್ರಾಹಕರು, ಸಂಕಲನಕಾರರು, ಸಂಗೀತ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಎಷ್ಟೋ ಚಿತ್ರಗಳ ಹೆಸರುಗಳೇ ಕೇಳಿರುವುದಿಲ್ಲ
ಈ ವರ್ಷ ಬಿಡುಗಡೆಯಾದ ಚಿತ್ರಗಳ ಪಟ್ಟಿಯನ್ನು ನೋಡಿದರೆ, ಸಾಕಷ್ಟು ಸಂಖ್ಯೆಯಲ್ಲಿ ಹೊಸಬರ ಚಿತ್ರಗಳು ಸಿಗುತ್ತವೆ. ‘ಬರ್ಬರಿಕಾ’, ‘ಜೊತೆಯಾಗಿರು’, ‘ಕರುನಾಡ ಕಣ್ಮಣಿ’, ‘ಕ್ಲಿಕ್’, ‘ಕ್ರಶ್’, ‘ಯಥಾ ಭವ’, ‘ಅಲೆಮಾರಿ ಈ ಬದುಕು’, ‘ಲೇಡೀಸ್ ಬಾರ್’, ‘ಮಂಡ್ಯ ಹೈದ’, ‘ಐಶು ವಿಥ್ ಮಾದೇಶ’, ‘ಕಪ್ಪು ಬಿಳುಪಿನ ನಡುವೆ’, ‘ಒಂದು ಪ್ರೇತದ ಕಥೆ’, ‘ನಮೋ ಭಾರತ್’, ‘ಜುಗಲ್ಬಂದಿ’, ‘ಛಾಯ’, ‘ಗಿರಿನಾಡ ಪ್ರೇಮಿ’, ‘ಮನದರಸಿ’, ‘ಕೊಲೆಯಾದವನೇ ಕೊಲೆಗಾರ’, ‘ರಾಕ್ಷಸತಂತ್ರ’, ‘ಮುಕ್ತ ಮನಸು’, ‘ನಾಲ್ಕನೆ ಆಯಾಮ’, ‘ಪುಕ್ಸಟ್ಟೆ ಪೈಸೆ’, ‘ತುಂಬರ’, ‘ಇತ್ಯಾದಿ’, ‘ಅಲೈಕ್ಯ’, ‘ದಿ ಸೂಟ್’, ‘ನಿರ್ಮುಕ್ತ’, ‘ಅನರ್ಥ’, ‘ಸಹಾರ’, ‘ಯಾವೋ ಇವೆಲ್ಲಾ’, ‘ಚಿ.ತೂ. ಸಂಘ’, ‘ಆರಾಟ’, ‘ರಮೇಶ್ ಸುರೇಶ್’, ‘ಯು235’, ‘ನಸ್ಸಾಬ್’, ‘ಮೂಕ ಜೀವ’, ‘ಮಾಂತ್ರಿಕ’, ‘ಜನಕ’, ‘ಗೋಪಿಲೋಲ’, ‘ಧ್ರುವತಾರೆ’, ‘ಲೈಫ್ ಆಫ್ ಮೃದುಲ’, ‘ದಿ ರೂಲರ್ಸ್’ ಮುಂತಾದ ಹಲವು ಚಿತ್ರಗಳು ಸಿಗುತ್ತವೆ.
ಈ ಪೈಕಿ ಅದೆಷ್ಟೋ ಚಿತ್ರಗಳ ಹೆಸರುಗಳು ಕೇಳಿರುವುದಕ್ಕೆ ಸಾಧ್ಯವಿಲ್ಲ. ಎಷ್ಟೋ ಚಿತ್ರಗಳ ಪೋಸ್ಟರ್‍ಗಳನ್ನು ಪ್ರೇಕ್ಷಕರು ನೋಡಿರಲಿಕ್ಕಿಲ್ಲ. ಈ ಚಿತ್ರಗಳು ಯಾವಾಗ ಬಿಡುಗಡೆಯಾದವು? ಎಲ್ಲಿ ಪ್ರದರ್ಶನ ಕಂಡವು? ಎಷ್ಟು ಜನ ನೋಡಿದರು? ಎಷ್ಟು ಪ್ರದರ್ಶನಗಳು ನಡೆದವು? ಈ ಚಿತ್ರಗಳ ಗುಣಮಟ್ಟ ಹೇಗಿತ್ತು? ಹೀಗೆ ಯಾವ ವಿಷಯವೂ ಗೊತ್ತಿರುವುದಿಲ್ಲ. ಒಂದೇ ಸತ್ಯ ಎಂದರೆ ಈ ಎಲ್ಲಾ ಚಿತ್ರಗಳು ಬಿಡುಗಡೆಯಾದವು ಎಂಬುದು. ಈ ಚಿತ್ರಗಳು ತಮಗೆ ದೊಡ್ಡ ಹೆಸರು, ಜನಪ್ರಿಯತೆ, ಖ್ಯಾತಿ ತಂದುಕೊಡಬಹುದು ಎಂದು ಅದೆಷ್ಟು ಜನ ಕನಸು ಕಂಡಿದ್ದರೋ, ಈ ಚಿತ್ರಕ್ಕಾಗಿ ಏನೇನೂ ಮಾರಾಟ ಮಾಡಿ ಹೂಡಿಕೆ ಮಾಡಿದ್ದರೋ, ಅದೆಲ್ಲಿಂದ ದುಡ್ಡು ಹೊಂದಿಸಿ ತಂದು ಸಿನಿಮಾಗೆ ಹಾಕಿದ್ದರೋ ಗೊತ್ತಿಲ್ಲ. ಆದರೆ, ಹೊಸಬರ ಚಿತ್ರಗಳಿಂದ ಅವರಿಗೆ ಒಂದಿಷ್ಟು ಅನುಭವವಾಯಿತು, ಚಿತ್ರರಂಗ ಹೇಗೆ ಕೆಲಸ ಮಾಡುತ್ತದೆ ಎಂಬ ವಿಷಯ ಗೊತ್ತಾಯಿತು, ಇಲ್ಲಿ ಈಸುವುದು ಜೈಸುವುದು ಎರಡೂ ಎಷ್ಟು ಕಷ್ಟ ಎಂಬುದು ಗೊತ್ತಾಯಿತು ಎಂಬುದು ಬಿಟ್ಟರೆ, ಕನಸು ಕನಸಾಗಿಯೇ ಉಳಿಯಿತು. ಹಾಕಿದ ದುಡ್ಡಷ್ಟೂ ಪೋಲಾಯಿತು ಎಂಬುದು ಕಟು ಸತ್ಯ.
ಯಾಕೆ ಪ್ರೇಕ್ಷಕರು ಹೊಸಬರ ಚಿತ್ರ ನೋಡುತ್ತಿಲ್ಲ?
ಯಾಕೆ ಹೊಸಬರ ಚಿತ್ರ ಗೆಲ್ಲಲಿಲ್ಲ? ಸರಳವಾಗಿ ಹೇಳಬೇಕೆಂದರೆ ಪ್ರೇಕ್ಷಕರು ನೋಡಲಿಲ್ಲ. ಯಾಕೆ ಪ್ರೇಕ್ಷಕರರು ಹೊಸಬರ ಚಿತ್ರಗಳನ್ನು ನೋಡಲಿಲ್ಲ? ಈ ವಿಷಯವನ್ನು ಪ್ರಮುಖವಾಗಿ ಅರ್ಥ ಮಾಡಿಕೊಳ್ಳಬೇಕು. ಬರೀ ಈ ವರ್ಷವಷ್ಟೇ ಅಲ್ಲ, ಕಳೆದ ಒಂದು ದಶಕದಿಂದ ನೋಡಿದರೆ, ಸಾಕಷ್ಟು ಸಂಖ್ಯೆಯ ಹೊಸಬರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಅವರೆಲ್ಲರಿಗೂ ಹಸಿವು, ಉತ್ಸಾಹವಿದೆಯೇ ಹೊರತು, ಏನು ಮಾಡಬೇಕೆಂಬ ಸ್ಪಷ್ಟತೆ ಇಲ್ಲ. ಅವರಿಗೆ ಹಳಬರ ಅಥವಾ ಹಿರಿಯರ ಮಾರ್ಗದರ್ಶನವಿಲ್ಲ. ಹಾಗಾಗಿ, ಅವರವರೇ ಒಂದಿಷ್ಟು ಜನ ಸೇರಿಕೊಂಡು ಏನೋ ಮಾಡುವುದಕ್ಕೆ ಹೊರಡುತ್ತಾರೆ. ಅದರಲ್ಲಿ ಬಹಳಷ್ಟು ಬಾರಿ ಪಕ್ವತೆ ಇರುವುದಿಲ್ಲ. ಗುಣಮಟ್ಟ, ಸ್ಪಷ್ಟತೆ, ಹೊಸತನ ಏನೂ ಇರುವುದಿಲ್ಲ. ಹೊಸತನವಿಲ್ಲದ ಪ್ರಯತ್ನಗಳನ್ನು ನೋಡಿ ಪ್ರೇಕ್ಷಕರು ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ, ಹೊಸಬರು ಎಂದರೆ ಪ್ರೇಕ್ಷಕರು ಹೆದರುತ್ತಿದ್ದಾರೆ. ಹೊಸಬರ ಚಿತ್ರಗಳು ಚೆನ್ನಾಗಿದ್ದವೋ, ಇಲ್ಲವೋ ನಂತರದ ಮಾತು. ಆದರೆ, ಕನಿಷ್ಠ ಪ್ರೇಕ್ಷಕರು ಚಿತ್ರವನ್ನು ನೋಡುವ ಮನಸ್ಸು ಮಾಡುತ್ತಿಲ್ಲ. ಹಾಗಾಗಿಯೇ, ಹೊಸಬರ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ.
ಇದು ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಇರುವ ಸಮಸ್ಯೆ ಎನ್ನುತ್ತಾರೆ ವಿತರಕರೊಬ್ಬರು. ಈ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿರುವ ಅವರು, ‘ಬೇರೆ ಭಾಷೆಗಳಲ್ಲೂ ಸಾಕಷ್ಟು ಹೊಸಬರು ಬರುತ್ತಿದ್ದಾರೆ. ಅಲ್ಲಿನ ಕೆಲವು ಜನಪ್ರಿಯ ಚಿತ್ರಗಳಷ್ಟೇ ಇಲ್ಲಿ ಬಿಡುಗಡೆ ಆಗುತ್ತಿರುವುದರಿಂದ, ನಮಗೆ ಅಲ್ಲೇನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಬೇರೆ ಭಾಷೆಗಳಲ್ಲೂ ಹೊಸಬರದ್ದು ಇದೇ ಸಮಸ್ಯೆ. ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಜನ ಚ್ಯೂಸಿಯಾಗಿದ್ದಾರೆ. ಅವರು ಜನಪ್ರಿಯ ನಟರ ಅಥವಾ ನಿರೀಕ್ಷಿತ ಚಿತ್ರಗಳನ್ನಷ್ಟೇ ಹೆಚ್ಚಾಗಿ ನೋಡುತ್ತಿದ್ದಾರೆ. ಹಾಗಾಗಿ, ಹೊಸಬರ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ’ ಎಂದು ಹೇಳುತ್ತಾರೆ.
ಅಷ್ಟಾದರೂ ಯಾಕೆ ಹೊಸಬರು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ?
ಹೊಸಬರಿಗೆ ಇದು ಕಾಲವಲ್ಲ ಎಂದು ಗೊತ್ತಿದ್ದರೂ ಯಾಕೆ ಹೊಸಬರು ಅಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಬರಬಹುದು. ಇದು ಸಹಜ. ಅವರೆಲ್ಲರೂ ಚಿತ್ರಗಳನ್ನು ನೋಡಿ ಬೆಳೆದಿರುತ್ತಾರೆ. ಚಿತ್ರರಂಗದಲ್ಲಿ ದೊಡ್ಡದೇನನ್ನೋ ಸಾಧಿಸಬೇಕು ಎಂದು ಕನಸು ಕಂಡಿರುತ್ತಾರೆ. ಚಿತ್ರ ಯಶಸ್ವಿಯಾಗುತ್ತದೋ ಇಲ್ಲವೋ ಎಂಬುದು ಬೇರೆ ಮಾತು. ಒಂದು ಪ್ರಯತ್ನ ಮಾಡೋಣ ಎಂದು ಮುಂದಾಗುತ್ತಿದ್ದಾರೆ.
ಕೈಗೆಟಕುವ ತಂತ್ರಜ್ಞಾನದಿಂದ ಕಡಿಮೆ ಬಜೆಟ್‍ನ ಚಿತ್ರಗಳನ್ನು ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ತಮ್ಮ ನಡುವೆ ಇರುವ ಉತ್ಸಾಹಿಗಳನ್ನು ಮತ್ತು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪರಸ್ಪರ ಕೈಜೋಡಿಸುತ್ತಿದ್ದಾರೆ. ತಮ್ಮತಮ್ಮಲ್ಲೇ ತಂಡಗಳನ್ನು ಕಟ್ಟಿಕೊಂಡು ಚಿತ್ರ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ತಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತಿಲ್ಲ ಎಂಬುದು ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಹಾಗಂತ ಸುಮ್ಮನೆ ಕೈಕಟ್ಟಿ ಕೂರುವಂತೆಯೂ ಇಲ್ಲ. ಹಾಗಾಗಿ, ತಮ್ಮ ಸ್ನೇಹಿತರು, ಬಂಧು-ಬಳಗದವರ ಮಧ್ಯದಲ್ಲೇ ಸಂಪನ್ಮೂಲ ಮತ್ತು ಹಣವನ್ನೂ ಕೂಡಿಸಿ, ಚಿತ್ರ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.
ಹೊಸಬರ ಚಿತ್ರಗಳಿಗೆ ಪ್ರೇಕ್ಷಕರು ಸ್ಪಂದಿಸುತ್ತಿಲ್ಲ ಎಂಬ ವಿಷಯ ಸ್ಪಷ್ಟವಾಗಿದ್ದರೂ, ಹಾಗಂತ ಪ್ರಯತ್ನಗಳೇನೂ ನಿಂತಿಲ್ಲ. ಈಗಲೂ ಸಾಕಷ್ಟು ಹೊಸಬರ ಚಿತ್ರಗಳ ಕೆಲಸಗಳು ನಡೆಯುತ್ತಲೇ ಇವೆ ಮತ್ತು ಅವೆಲ್ಲವೂ ಮುಂದಿನ ವರ್ಷಗಳಲ್ಲಿ ಪ್ರತಿಫಲಿಸಲಿವೆ. ಲಾಭ-ನಷ್ಟವೆಲ್ಲವೂ ಹೊರಗಿನವರಿಗೆ. ಹೊಸಬರಿಗೆ ಅದೊಂದು ಕನಸು ಮತ್ತು ಪ್ರಯೋಗ. ಎಲ್ಲಿಯವರೆಗೂ ಹೊಸ ಕನಸುಗಳು ಬೀಳುತ್ತಿರುತ್ತವೋ, ಅಲ್ಲಿಯವರೆಗೂ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ.