ಯಶ್‍ ಬೆಳವಣಿಗೆ ಹಿಂದೆ ನಮ್ಮ ಶ್ರಮ ಸಾಕಷ್ಟಿದೆ ಎಂದ ಯಶ್‍ ತಾಯಿ ಪುಷ್ಪಾ
x

‘ಕೊತ್ತಲವಾಡಿ’ 

ಯಶ್‍ ಬೆಳವಣಿಗೆ ಹಿಂದೆ ನಮ್ಮ ಶ್ರಮ ಸಾಕಷ್ಟಿದೆ ಎಂದ ಯಶ್‍ ತಾಯಿ ಪುಷ್ಪಾ

‘ಕೊತ್ತಲವಾಡಿ’ ಚಿತ್ರಕ್ಕೆ ಶ್ರೀರಾಜ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಪೃಥ್ವಿ ಅಂಬಾರ್, ಕಾವ್ಯ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‍ ನಟರಂಗ, ಮಾನಸೀ ಸುಧೀರ್ ಮುಂತಾದವರು ನಟಿಸಿದ್ದಾರೆ.


ಯಶ್‍ ತಾಯಿ ಪುಷ್ಪಾ ಅರುಣ್‍ ಕುಮಾರ್​ , ಪಿಎ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿ ‘ಕೊತ್ತಲವಾಡಿ’ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಮುಂದಿನ ಶುಕ್ರವಾರ (ಆಗಸ್ಟ್ 01) ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಟ್ರೇಲರ್​ ಬಿಡುಗಡೆಯಾಗಿದೆ.

ತಾವು ಚಿತ್ರ ನಿರ್ಮಾಣ ಮಾಡುತ್ತಿರುವುದು ಯಶ್‍ಗೆ ಗೊತ್ತಿದೆ ಎನ್ನುವ ಪುಷ್ಪಾ, ‘ಜನ ಹೇಗೆ ತಗೋತಾರೆ ಎಂಬ ಭಯವಿದೆ. ಅದೇ ರೀತಿ ಪ್ರೇಕ್ಷಕರು ಕೈಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ. ನಾವು ಒಬ್ಬ ಸೆಲೆಬ್ರಿಟಿಯ ಮನೆಯವರಾಗಿ ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಅದು ಬಿಟ್ಟರೆ, ಮುಚ್ಚಿಟ್ಟು ಮಾಡುವಂತದ್ದೇನಿಲ್ಲ. ಯಶ್​ಗೆ ಗೊತ್ತಿಲ್ಲದೆ ನಾವೇನೂ ಮಾಡಿಲ್ಲ. ಅವನಿಗೂ ಗೊತ್ತು, ನಮಗೂ ಗೊತ್ತು. ಜನ ಒಪ್ಪಿಕೊಂಡರೆ ಅದಕ್ಕಿಂತ ಬೇರೆ ಖುಷಿ ಇನ್ನೊಂದಿಲ್ಲ’ ಎನ್ನುತ್ತಾರೆ.

ಈ ಚಿತ್ರ ನಿರ್ಮಾಣ ಮಾಡೋಕೆ ಯಶ್‍ ಕಾರಣ ಎನ್ನುವ ಪುಷ್ಪಾ, ‘ನಾನು ಯಶ್‍ನ ನೋಡಿ ಬಹಳ ಸ್ಫೂರ್ತಿಗೊಂಡು ಸಿನಿಮಾ ಮಾಡಿದ್ದೇನೆ. ಬಹಳ ಕಷ್ಟ ಇತ್ತು ಒಂದು ಕಾಲದಲ್ಲಿ. ನಮಗೆ ನಿರ್ಮಾಪಕರು ಸಿಗುತ್ತಿರಲಿಲ್ಲ. ಸಿಕ್ಕರೂ ಏನೇನೋ ಸಮಸ್ಯೆಗಳು. ಗೆದ್ದ ಮೇಲೆ ಅವೆಲ್ಲಾ ಮಾತಾಡೋಣ. ಯಶ್‍ ಹಲವು ವರ್ಷಗಳ ನಂತರ ‘ರಾಕಿಂಗ್‍ ಸ್ಟಾರ್‍’ ಅಂತ ಕಾಣಿಸಿತು. ಅದರ ಹಿಂದೆ ಪಟ್ಟಿರುವ ಶ್ರಮ ಗೊತ್ತಾಗುವುದಿಲ್ಲ. ಈ ವಾತಾವರಣ ನೋಡಿ ಸಿನಿಮಾ ಮಾಡಬೇಕು ಎಂದು ಮುಂದೆ ಬಂದಿದ್ದೇವೆ. ಅವನಿಂದ ತುಂಬಾ ಕಲಿತಿದ್ದೇವೆ. ಯಶ್‍ಗಿರುವ ಸಿನಿಮಾ ಪ್ಯಾಶನ್‍ ನೋಡಿ ಹೆಜ್ಜೆ ಇಟ್ಟಿದ್ದೇವೆ. ಅವನನ್ನು ನೋಡಿ ನಮಗೂ ಸಿನಿಮಾ ಮಾಡಬೇಕು ಎಂಬ ಆಸೆ ಬಂದು, ಈ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ.

‘ಕೊತ್ತಲವಾಡಿ’ ಕಥೆ ಆಯ್ಕೆ ವಿಚಾರವಾಗಿ ಮಾತನಾಡುವ ಅವರು, ‘ಒಂದು ಅಂಗಡಿಗೆ ಹೋಗಿ ನೂರು ಸೀರೆ ಇಟ್ಟರೂ, ಒಂದು ಸೀರೆ ಎತ್ತಿಕೊಳ್ಳುತ್ತೇನೆ. ತುಂಬಾ ಹುಡುಕಲ್ಲ. ಯಾವುದೇ ಕೆಲಸಕ್ಕೂ judgement ಬಹಳ ಮುಖ್ಯ. ಈ ವಿಷಯದಲ್ಲೂ ಅಷ್ಟೇ. ನಿರ್ದೇಶಕರು ಕೆಲವು ಕಥೆ ಹೇಳಿದರು. ಆದರೆ, ಕಡಿಮೆ ಬಜೆಟ್‍ನಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ಒಂದು ಹಳ್ಳಿ ಕಥೆಯನ್ನು ಆಯ್ಕೆ ಮಾಡಿದ್ದೇವೆ. ನಮ್ಮ ಶಕ್ತಿಗೆ ಅನುಸಾರವಾಗಿ ಈ ಚಿತ್ರ ಮಾಡಿದ್ದೇವೆ. ಸಿನಿಮಾ ನೋಡಿ ನನಗೆ judgement ಇದೆಯೋ, ಇಲ್ಲವೋ ಹೇಳಿ. ನಾನು ಒಪ್ಪೋದು ಮುಖ್ಯವಲ್ಲ. ಅಭಿಮಾನಿ ದೇವರುಗಳು ಹೇಳಬೇಕು. ನಾವು ಕೆಲಸ ಮಾಡಿದ್ದೇವೆ ಅಷ್ಟೇ. ಅಭಿಮಾನಿ ದೇವರುಗಳು ಹೇಳಬೇಕು. ನಾವು ಚೆನ್ನಾಗಿ ಅಡುಗೆ ಮಾಡಿರಬಹುದು. ಆದರೆ, ರುಚಿ ನೋಡಿ ಖುಷಿಪಡಬೇಕಾಗಿರುವವರು ಅವರು. ಅವರು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ.

‘ಕೊತ್ತಲವಾಡಿ’ ಚಿತ್ರವು ಕಡಿಮೆ ಬಜೆಟ್‍ನ ‘ಕೆಜಿಎಫ್‍’ ತರಹ ಇದೆ, ಅಲ್ಲಿ ಚಿನ್ನಕ್ಕಾಗಿ ಕಾದಾಟವಿದೆ, ಇಲ್ಲಿ ಮಣ್ಣಿಗಾಗಿ ಹೋರಾಟವಿದೆ ಎಂಬ ಮಾತಿಗೆ ಉತ್ತರಿಸುವ ಅವರು, ‘ನಾವು ಚಿನ್ನ ತೆಗೆಯೋಕೆ ಆಗದಿದ್ದರೂ, ಮಣ್ಣಾದರೂ ತೆಗೆದಿದ್ದೇವೆ. ಚಿನ್ನಕ್ಕೆ ಬೆಲೆ ಜಾಸ್ತಿ. ಮಣ್ಣು ನಮ್ಮನೆ ತೋಟದಲ್ಲೂ ಸಿಗುತ್ತದೆ. ಹಾಗಾಗಿ, ನಮ್ಮ ಲೆವೆಲ್‍ಗೆ ಒಂದು ಪ್ರಯತ್ನ ಮಾಡಿದ್ದೇವೆ. ‘ಕೆಜಿಎಫ್’ ಚಿತ್ರವನ್ನು ವಿಜಯ್‍ ಕಿರಗಂದೂರು ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ಅವರಂತಹ ನಿರ್ಮಾಪಕರು ಇನ್ನೂ ಹೆಚ್ಚಾಗಬೇಕು. ನಮ್ಮ ಕೈಯಲ್ಲಿ ಅಷ್ಟೊಂದು ಹಣ ಸಾಧ್ಯವಿಲ್ಲ. ನಾವು ಕಾಟನ್‍ ಸೀರೆ ಉಟ್ಟುಕೊಂಡರೆ, ರೇಶ್ಮೆ ಸೀರೆ ಉಟ್ಟುಕೊಂಡ ಫೀಲ್‍ ಬರುತ್ತದೆ. ನಾವು ಕಾಟನ್‍ ಸೀರೆ ಇಟ್ಟಿದ್ದೇವೆ. ರೇಶ್ಮೆ ಸೀರೆ ಉಡುವ ಶಕ್ತಿ ನನಗಿಲ್ಲ’ ಎನ್ನುತ್ತಾರೆ.

ಇಷ್ಟು ದಿನ ಗೃಹಿಣಿಯಾಗಿದ್ದ ಪುಷ್ಪಾ ಅವರು, ಈಗ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ. ಈ ಹೊಸ ಪ್ರಪಂಚ ಹೇಗಿದೆ ಎಂಬ ಪ್ರಶ್ನೆಗೆ, ಇದು ಹೊಸ ಪ್ರಪಂಚವೇನೂ ಅಲ್ಲ ಎನ್ನುತ್ತಾರೆ. ‘ಒಬ್ಬರು ಮುಂದೆ ಹೋಗುತ್ತಿದ್ದಾರೆ ಎಂದರೆ ಅವರ ಹಿಂದೆ ಸಾಕಷ್ಟು ಜನ ಕಷ್ಟಪಟ್ಟಿರುತ್ತಾರೆ. ಪರದೆಯ ಮುಂದೆ ಕಾಣಿಸಿಕೊಮಡವರು ಮಾತ್ರವಲ್ಲ, ತೆರೆಯ ಹಿಂದೆ ಬಹಳಷ್ಟು ಜನ ಕಷ್ಟಪಟ್ಟಿರುತ್ತಾರೆ. ಕಾಣೋದು ಕಲಾವಿದರು ಮಾತ್ರ. ಹಿಂದೆ ಟೀ ಕೊಡುವ ಹುಡುಗನಿಂದ ಹಲವರು ಕಷ್ಟಪಟ್ಟಿರುತ್ತಾರೆ. ಹಾಗೆಯೇ, ನಾವು ಸಹ ಮನೆಯಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ಅದನ್ನು ಹೇಳೋಕೆ ಆಗಲ್ಲ. ಇದು ಹೊಸದಂತೂ ಅಲ್ಲ. ಯಶ್‍ ಬಂದಾಗಲೇ ನಾವೂ ಇಲ್ಲಿಗೆ ಬಂದಿದ್ದೇವೆ. ಊರು ಬಿಟ್ಟು ಅವನ ಹಿಂದೆ ಬಂದು, ಬಾಡಿಗೆ ಮನೆ ಮಾಡಿಕೊಂಡಿದ್ದೆವು. ಅವನು ಈ ಮಟ್ಟಕ್ಕೆ ಬರುವುದಕ್ಕೆ ನಮ್ಮ ಶ್ರಮವೂ ಸಾಕಷ್ಟಿದೆ. ನಮ್ಮ ಕಥೆ ಕೇಳಿದರೆ ಪುಸ್ತಕ ಬರೆಯಬಹುದು’ ಎಂದು ಮಾತು ಮುಗಿಸುತ್ತಾರೆ.

‘ಕೊತ್ತಲವಾಡಿ’ ಚಿತ್ರಕ್ಕೆ ಶ್ರೀರಾಜ್‍ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಪೃಥ್ವಿ ಅಂಬಾರ್, ಕಾವ್ಯ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್‍ ನಟರಂಗ, ಮಾನಸೀ ಸುಧೀರ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ಸಂಯೋಜಿಸಿದರೆ, ಶೀರ್ಷಿಕೆ ಗೀತೆ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಅಭಿನಂದನ್‍ ಕಶ್ಯಪ್‍ ಹೊತ್ತಿದ್ದಾರೆ.

Read More
Next Story