ನಮ್ಮ ಕೆಲಸವನ್ನು ಮೊದಲು ನಾವು ಸರಿ ಮಾಡಬೇಕು; ಹೊಸಬರಿಗೆ ಯಶ್‍ ಸಲಹೆ
x

ನಟ ಯಶ್‌ 

ನಮ್ಮ ಕೆಲಸವನ್ನು ಮೊದಲು ನಾವು ಸರಿ ಮಾಡಬೇಕು; ಹೊಸಬರಿಗೆ ಯಶ್‍ ಸಲಹೆ

ನಮ್ಮ ಕೆಲಸವನ್ನು ನಾವು ಸರಿ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ನಮ್ಮ ಕೈ ಬಿಟ್ಟಿಲ್ಲ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ’ ಎಂದರು.


ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಿಲ್ಲ, ಬೇರೆ ಭಾಷೆಯ ಚಿತ್ರಗಳನ್ನೇ ಹೆಚ್ಚಾಗಿ ನೋಡುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಈ ಬಗ್ಗೆ ಮಾತನಾಡಿರುವ ಯಶ್‍, ಮೊದಲು ನಮ್ಮ ಕೆಲಸವನ್ನು ನಾವು ಸರಿ ಮಾಡಬೇಕು, ಒಳ್ಳೆಯ ಚಿತ್ರಗಳನ್ನು ಕೊಡಬೇಕು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ಕೈ ಬಿಡುವುದಿಲ್ಲ ಎಂದು ಯಶ್‍ ಹೇಳಿದ್ದಾರೆ.

ಯಶ್‍ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಹೀಗೆ ಅಪರೂಪಕ್ಕೆಂಬಂತೆ, ಭಾನುವಾರ ಸಂಜೆ ಯೋಗರಾಜ್‍ ಭಟ್‍ ನಿರ್ದೇಶನದ ‘ಮನದ ಕಡಲು’ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿದ್ದಾರೆ. ಲುಲು ಮಾಲ್‍ನಲ್ಲಿ ನಡೆದ ಸಮಾರಂಭಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಹಿಂದೆ ನಾನು ಸಹ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ ಎಂದು ಬಯ್ಯುತ್ತಿದೆ ಎಂದಿರುವ ಯಶ್‍, ‘ಜನ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ, ಬೇರೆ ಭಾಷೆ ಸಿನಿಮಾಗಳನ್ನೇ ನೋಡುತ್ತಾರೆ ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದೆ. ನಮ್ಮ ಕೆಲಸವನ್ನು ನಾವು ಸರಿ ಮಾಡಿಕೊಂಡು, ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಕನ್ನಡಿಗರು ಯಾವತ್ತೂ ನಮ್ಮ ಕೈ ಬಿಟ್ಟಿಲ್ಲ. ಅಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಸಿನಿಮಾಗಳನ್ನು ಹರಸುತ್ತಾರೆ’ ಎಂದರು.

ಎಲ್ಲಕ್ಕಿಂತ ಮೊದಲು ನಾವು ಅಪ್‍ಗ್ರೇಡ್‍ ಆಗಬೇಕು ಎನ್ನುವ ಅವರು, ‘ಬಹಳಷ್ಟು ಜನ ಬಂದು ಹೊಸಬರ ಚಿತ್ರವನ್ನು ಲಾಂಚ್ ಮಾಡಿ, ಇವೆಂಟ್‍ಗೆ ಬನ್ನಿ ಎಂದು ಕರೆಯುತ್ತಿರುತ್ತಾರೆ. ಇವೆಂಟ್‍ಗಳಿಂದ ಗಮನ ಸೆಳೆಯಬಹುದು. ನಿಜವಾದ ಗೆಲುವು ಸಿಗೋದು ನಾವು ಬರುವುದರಿಂದಲ್ಲ, ನೀವು ಮಾಡುವ ಕೆಲಸಗಳಿಂದ. ಮೊದಲು ನಾವು ಅಪ್‍ಗ್ರೇಡ್‍ ಆಗಬೇಕು, ಕೆಲಸ ಕಲಿಯಬೇಕು, ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಯಾರ ಮುಂದೆಯೇ ನಾವು ಕಡಿಮೆ ಎಂಬ ಯೋಚನೆ ತಲೆಯಲ್ಲಿ ಇರಬಾರದು. ನಾವು ಯಾರಲ್ಲೂ ಏನೂ ಬೇಡುವುದು ಬೇಡ. ಕಷ್ಟಪಟ್ಟು ಕೆಲಸ ಮಾಡಬೇಕು. ಬೇರೆಯವರೆಲ್ಲರೂ ನಮಗೆ ಗೌರವ ಕೊಡುವಂತೆ ದುಡಿಯಬೇಕು’ ಎಂದರು.

ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುವ ಹೊಸಬರಿಗೆ ಕಿವಿಮಾತು ಹೇಳಿದ ಯಶ್‍, ‘ಹೊಸ ಸಿನಿಮಾಗಳು ಬರಬೇಕು. ಬರೀ ನಟನೆಯಷ್ಟೇ ಸಿನಿಮಾ ಅಲ್ಲ, ನೀವು ಹೇಗೆ ನಿಮ್ಮ ವೃತ್ತಿಜೀವನವನ್ನ ರೂಪಿಸಿಕೊಳ್ಳಬೇಕು, ಟ್ರೆಂಡ್‍ ಏನಿದೆ, ನಿಮ್ಮ ಜವಾಬ್ದಾರಿ ಏನು ಎಂಬುದನ್ನು ತಿಳಿದುಕೊಂಡು ಬರಬೇಕು. ನಿರ್ದೇಶಕರೂ ಸಾಕಷ್ಟು ತಯಾರಿ ಮಾಡಿಕೊಂಡು ಬರಬೇಕು’ ಎಂದರು.

ಪ್ರೇಕ್ಷಕರ ಪ್ರೀತಿ ದೊಡ್ಡ ಜವಾಬ್ದಾರಿ ತುಂದುಕೊಡುತ್ತದೆ ಎನ್ನುವ ಅವರು, ‘ಅಭಿಮಾನಿಗಳ ಕೂಗು ದೊಡ್ಡಸ್ತನ ತಂದುಕೊಡುವುದಿಲ್ಲ. ಜವಾಬ್ದಾರಿ ತಂದುಕೊಡುತ್ತದೆ. ಅದು ಯಾವತ್ತೂ ಕುಗ್ಗುವಂತೆ ನಡೆದುಕೊಳ್ಳುವುದಿಲ್ಲ. ಅದು ಇನ್ನಷ್ಟು ಮೇಲೆ ಹೋಗುವ ತರಹ ನಡೆದುಕೊಳ್ಳುತ್ತೀನಿ. ಒಬ್ಬ ವ್ಯಕ್ತಿ ತಾನಾಗೇ ಬೆಳೆದು ಬಿಡುವುದಿಲ್ಲ. ಅವರ ಸುತ್ತಮುತ್ತ ಸಾಕಷ್ಟು ಜನ ನಿಂತು, ಬೆವರು ಹರಿಸಿ, ಇನ್ನೊಬ್ಬನನ್ನು ಮುಂದೆ ತಳ್ಳುತ್ತಾರೆ. ಹಾಗೆ ಮುಂದೆ ಬಂದವನು ನಾನು. ಜವಾಬ್ದಾರಿಯಿಂದ ಮುಂದೆ ಸಾಗಿ, ಅವರು ಖುಷಿಪಡುವಂತಹ ಕೆಲಸ ಮಾಡಬೇಕು ಎಂಬುದು ನನ್ನ ಗುರಿ’ ಎಂದರು.

ಇ.ಕೆ. ಎಂಟರ್‍ಟೈನರ್ಸ್ ಲಾಂಛನದಡಿ ಇ. ಕೃಷ್ಣಪ್ಪ ನಿರ್ಮಿಸಿರುವ ‘ಮನದ ಕಡಲು’ ಚಿತ್ರವು ಮಾರ್ಚ್‍ 28ರಂದು ಬಿಡುಗಡೆ ಆಗುತ್ತಿದೆ. ಯೋಗರಾಜ್‍ ಭಟ್‍್ ಕಥೆ-ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್‍ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ.

Read More
Next Story