
ಯಜಮಾನ ಸಿನಿಮಾ
'ಯಜಮಾನ'ನಿಗೆ 25ರ ಸಂಭ್ರಮ: 4K ಡಿಜಿಟಲ್, 7.1 ಸೌಂಡ್‌ನೊಂದಿಗೆ ನ. 7ಕ್ಕೆ 'ಸಾಹಸಸಿಂಹ'ನ ರೀ-ಎಂಟ್ರಿ!
ಯಜಮಾನ ಚಿತ್ರವನ್ನು ಡಿಐ ಬಳಸಿ 4k ಡಿಜೆಟಲ್ ಪ್ರೊಜೆಕ್ಷನ್ಗೆ ತಯಾರು ಮಾಡಲಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡಿರುವ ಚಿತ್ರಮಂದಿರಗಳಲ್ಲಿ ವೀಕ್ಷಿಸಬಹುದಾಗಿದೆ.
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ, 'ಸಾಹಸಸಿಂಹ' ಡಾ. ವಿಷ್ಣುವರ್ಧನ್ ಅವರ 175ನೇ ಚಿತ್ರ 'ಯಜಮಾನ' ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದೆ. 2000ನೇ ಇಸವಿಯಲ್ಲಿ ಬಿಡುಗಡೆಯಾಗಿ, ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದ ಈ ಚಿತ್ರ, ಇದೀಗ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ನವೆಂಬರ್ 7ರಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಮರು-ಬಿಡುಗಡೆಯಾಗುತ್ತಿದೆ.
ಹೈಟೆಕ್ ಸ್ಪರ್ಶದೊಂದಿಗೆ 'ಯಜಮಾನ'
ಕಾಲಕ್ಕೆ ತಕ್ಕಂತೆ 'ಯಜಮಾನ' ಚಿತ್ರಕ್ಕೆ ಹೊಸ ರೂಪ ನೀಡಲಾಗಿದೆ. ವಿಷ್ಣುವರ್ಧನ್ ಅವರ ಅಭಿಮಾನಿ ಹಾಗೂ ಉದ್ಯಮಿ ಮುನಿಸ್ವಾಮಿ ಎಸ್.ಡಿ ಅವರು, ಈ ಚಿತ್ರವನ್ನು ಇಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರವನ್ನು ಸಂಪೂರ್ಣವಾಗಿ ಡಿಐ (Digital Intermediate) ಮಾಡಿ, 4K ರೆಸಲ್ಯೂಶನ್‌ಗೆ ಅಪ್‌ಗ್ರೇಡ್ ಮಾಡಲಾಗಿದೆ. ಮೋನೋ ಟ್ರ್ಯಾಕ್‌ನಲ್ಲಿದ್ದ ಮೂಲ ಧ್ವನಿಯನ್ನು ಅತ್ಯಂತ ಪರಿಶ್ರಮದಿಂದ 5.1 ಮತ್ತು 7.1 ಡಿಜಿಟಲ್ ಸೌಂಡ್ ಸಿಸ್ಟಮ್‌ಗೆ ಪರಿವರ್ತಿಸಲಾಗಿದ್ದು, ಹಾಡುಗಳು ಮತ್ತು ಸಂಭಾಷಣೆಗಳು ಇನ್ನಷ್ಟು ಸ್ಪಷ್ಟವಾಗಿ, ಅತ್ಯುತ್ತಮ ಅನುಭವ ನೀಡಲಿವೆ ಎಂದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ತಿಳಿಸಿದ್ದಾರೆ.
ದಾಖಲೆಗಳ ಯಜಮಾನ
ಇಪ್ಪತ್ತೈದು ವರ್ಷಗಳ ಹಿಂದೆಯೇ ಈ ಚಿತ್ರ ಮಾಡಿದ ಸಾಧನೆಗಳು ಹಲವಾರು. ನಿರ್ಮಾಪಕಿ ಮೆಹರುನ್ನಿಸಾ ರೆಹಮಾನ್ ಅವರ ಪ್ರಕಾರ, 'ಯಜಮಾನ' ಆಗಲೇ ₹35 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ವಾರ ಹಾಗೂ 4 ಕೇಂದ್ರಗಳಲ್ಲಿ ಒಂದು ವರ್ಷ ಪೂರೈಸಿದ ಹೆಗ್ಗಳಿಕೆ ಈ ಚಿತ್ರದ್ದು. "ಹಳ್ಳಿಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡಿದ ಅಭಿಮಾನಿಗಳ ಪ್ರೀತಿ ಅವಿಸ್ಮರಣೀಯ" ಎಂದು ಚಿತ್ರತಂಡ ನೆನಪಿಸಿಕೊಂಡಿದೆ.
'ಹಿಂದಿನದಕ್ಕಿಂತ ದೊಡ್ಡ ಗೆಲುವು ನೀಡಿ'
ಚಿತ್ರದ ರಜತೋತ್ಸವ ಸಂಭ್ರಮದಲ್ಲಿ ಮಾತನಾಡಿದ ನಿರ್ಮಾಪಕಿ ಮೆಹರುನ್ನಿಸಾ, "ವಿಷ್ಣುವರ್ಧನ್ ಹಾಗೂ ಕೆ.ವಿ. ನಾಗೇಶ್ ಕುಮಾರ್ ಅವರೇ ಈ ಚಿತ್ರಕ್ಕೆ ಕಾರಣ. ಈಗ ಮುನಿಸ್ವಾಮಿ ಅವರು ದೊಡ್ಡ ಜವಾಬ್ದಾರಿ ಹೊತ್ತು ಮರು-ಬಿಡುಗಡೆ ಮಾಡುತ್ತಿದ್ದಾರೆ. ಹಿಂದೆ ನೀವು ನೀಡಿದ ಪ್ರೀತಿಗಿಂತ ದೊಡ್ಡ ಗೆಲುವನ್ನು ಈಗ ನೀಡಿ," ಎಂದು ಮನವಿ ಮಾಡಿದರು. "ನಾನು ಸಾಹಸಸಿಂಹರ ದೊಡ್ಡ ಅಭಿಮಾನಿ. ಅವರ ಮೇಲಿನ ಪ್ರೀತಿಯಿಂದ ಈ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ತರುತ್ತಿದ್ದೇನೆ. ದಯವಿಟ್ಟು ಎಲ್ಲರೂ ಚಿತ್ರಮಂದಿರದಲ್ಲೇ ನೋಡಿ ಆಶೀರ್ವದಿಸಿ," ಎಂದು ಮುನಿಸ್ವಾಮಿ ಕೇಳಿಕೊಂಡರು.
ನೆನಪಿನ ಬುತ್ತಿ ಬಿಚ್ಚಿಟ್ಟ ತಾರಾಬಳಗ
ಕಾರ್ಯಕ್ರಮದಲ್ಲಿ ಚಿತ್ರದ ತಾರಾಬಳಗದ ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹಾಗೂ ಸಂಭಾಷಣೆಕಾರ ರವಿಶ್ರೀವತ್ಸ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ನಿರ್ಮಾಪಕ ಕೆ. ಮಂಜು ಹಾಗೂ ಅವರ ಪುತ್ರ ಶ್ರೇಯಸ್ ಮಂಜು ಕೂಡ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

