
ಬರಗೂರು ರಾಮಚಂದ್ರಪ್ಪ ́ಸ್ವಪ್ನ ಮಂಟಪʼಕ್ಕೆ ವಿಜಯ್ ರಾಘವೇಂದ್ರ ಹೀರೋ
ಪ್ರಯೋಗಾತ್ಮಕ ಚಿತ್ರಗಳನ್ನು ಉತ್ತೇಜಿಸಲು ಪ್ರತಿ ಜಿಲ್ಲೆಯಲ್ಲಿ 150 ಆಸನಗಳ ಜನತಾ ಚಿತ್ರಮಂದಿರ ತೆರೆಯಬೇಕು; ಪ್ರವೇಶ ದರ 100 ರೂ.ಗಿಂತ ಹೆಚ್ಚಿರಬಾರದು ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಪ್ರಯೋಗಾತ್ಮಕ ಚಿತ್ರಗಳನ್ನು ಉತ್ತೇಜಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲೂ 150 ಆಸನಗಳ ಜನತಾ ಚಿತ್ರಮಂದಿರಗಳನ್ನು ತೆರೆಯಬೇಕು ಮತ್ತು ಅದರ ಪ್ರವೇಶ ದರ 100 ರೂ.ಗಳಿಗಿಂತ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಮತ್ತು ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಸ್ವಪ್ನ ಮಂಟಪ’ ಚಿತ್ರವು ಇದೇ ಜುಲೈ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಎ.ಎಂ.ಬಾಬು ಮೈಸೂರು ತಮ್ಮ ಮಲೆ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ ‘ಸ್ವಪ್ನ ಮಂಟಪ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ರಂಜನಿ ರಾಘವನ್ ಮುಂತಾದವರು ನಟಿಸಿದ್ದು, ಈ ಚಿತ್ರವು ಬರಗೂರರ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಆ ಕಥೆಗೆ ಬರಗೂರರೇ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಜುಲೈ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಕುರಿತು ಮಾತನಾಡಿರುವ ಬರಗೂರು ರಾಮಚಂದ್ರಪ್ಪ, ‘ನಾನು 25 ವರ್ಷಗಳ ಹಿಂದೆ ಬರೆದಿದ್ದ ‘ಸ್ವಪ್ನ ಮಂಟಪ’ ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಂಡಿದೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವುದೆ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದ ನಾಯಕ - ನಾಯಕಿಯಾಗಿ ವಿಜಯ್ ರಾಘವೇಂದ್ರ, ರಂಜನಿ ರಾಘವನ್ ಅಭಿನಯಿಸಿದ್ದು, ಇಬ್ಬರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಅನೇಕ ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನಗೊಂಡಿದೆ’ ಎಂದರು.
ಇಂತಹ ಪ್ರಯೋಗಾತ್ಮಕ ಚಿತ್ರಗಳನ್ನು ಉತ್ತೇಜಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲೂ 150 ಆಸನಗಳ ಚಿತ್ರಮಂದಿರಗಳನ್ನು ತೆರೆಯಬೇಕು ಎನ್ನುವ ಡಾ. ಬರಗೂರು ರಾಮಚಂದ್ರಪ್ಪ, ‘150 ಆಸನಗಳ ಜೊತೆಗೆ ಟಿಕೆಟ್ ದರ 100 ರೂಪಾಯಿಗಳನ್ನು ಮೀರಬಾರದು. ಆಗ ಹೆಚ್ಚಿನ ಜನರು ಸಿನಿಮಾ ನೋಡಲು ಮುಂದೆ ಬರುತ್ತಾರೆ. ಈ ಸಲಹೆಯನ್ನು ಮುಖ್ಯಮಂತ್ರಿಗಳಿಗೆ ನಾನು ಕೆಲವು ದಿನಗಳ ಹಿಂದೆ ಕೊಟ್ಟಿದ್ದೇನೆ. ಸರ್ಕಾರ ಆದಷ್ಟು ಬೇಗ ಈ ಕಾರ್ಯ ಮಾಡಿದರೆ ಚಿತ್ರರಂಗಕ್ಕೆ ಅನುಕೂಲವಾಗುತ್ತದೆ’ ಎಂದರು.
ಕಲಾತ್ಮಕ ಮತ್ತು ಪ್ರಯೋಗಾತ್ಮಕ ಚಿತ್ರಗಳಿಗೂ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ ಎನ್ನುವ ಬರಗೂರು ರಾಮಚಂದ್ರಪ್ಪ, ‘ಒಂದೊಂದು ಚಿತ್ರಕ್ಕೂ ಅದನ್ನು ನೋಡುವ ಪ್ರೇಕ್ಷಕವರ್ಗವೊಂದು ಇದ್ದೇ ಇರುತ್ತದೆ. ತುಂಬಾ ದೊಡ್ಡ ಹೀರೋಗಳಿಗೆ ಅವರದ್ದೇ ಆದ ಒಂದು ಪ್ರೇಕ್ಷಕವರ್ಗ ಇರುತ್ತದೆ. ಹಾಗೆಂದು ಹೀರೋಗಳಿರುವ ಎಲ್ಲಾ ಚಿತ್ರಗಳು ಯಶಸ್ವಿಯಾಗಿವೆ ಎಂದು ಹೇಳೋದು ಕಷ್ಟ. ಕಲಾತ್ಮಕ ಚಿತ್ರಗಳನ್ನು ನೋಡುವುದಕ್ಕೂ ಒಂದು ಪ್ರೇಕ್ಷಕವರ್ಗ ಇರುತ್ತದೆ. ಆದರೆ, ಅದನ್ನು ಮೀರಿ ಇನ್ನಷ್ಟು ಜನರಿಗೆ ತಲುಪುವುದು ಹೇಗೆ? ಹಾಗಾಗಿಯೇ, ನಾವು ಕಲಾತ್ಮಕ ಚಿತ್ರಗಳಿಗೆ ಇರುವ ಚೌಕಟ್ಟನ್ನು ಮುರಿಯುವ ಕೆಲಸವನ್ನು ಮಾಡಬೇಕು. ನನ್ನ ನಿರ್ದೇಶನದ ಚಿತ್ರಗಳು ಪ್ರೇಕ್ಷಕರಿಗೆ ನಿದ್ದೆ ತರಿಸುವುದಿಲ್ಲ. ನಿದ್ದೆ ಮಾಡದೆಯೇ ನನ್ನ ಚಿತ್ರಗಳನ್ನು ನೋಡಬಹುದು. ಹೆಚ್ಚು ಜನರಿಗೆ ಚಿತ್ರವನ್ನು ತಲುಪಿಸುವುದು ಹೇಗೆ? ಜನ ನೋಡದೇ ಇದ್ದರೆ, ಚಿತ್ರ ಸಾರ್ಥಕವಲ್ಲ ಎನ್ನುವುದು ನನ್ನ ನಂಬಿಕೆ. ಹಾಗಾಗಿ ಹೆಚ್ಚು ಜನರಿಗೆ ತಲುಪಿಸುವ ಕೆಲಸವನ್ನು ನಿರ್ದೇಶಕರು ಮಾಡಬೇಕು’ ಎಂದರು.
ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಚರ್ಚೆಯ ಅವಶ್ಯಕತೆ ಇದೆ ಎನ್ನುವ ರಾಮಚಂದ್ರಪ್ಪ, ‘ಹಿಂದೆ ಒಂದು ಚಿತ್ರ 100 ದಿನ ಪ್ರದರ್ಶನವಾದಾಗ ಒಂದು ಸಂಭ್ರಮವಿತ್ತು. ಆಗ ಒಂದು ಚಿತ್ರ 100 ದಿನ ಓಡುವುದಕ್ಕೂ, ಈಗ ಓಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಗ ಒಂದು ಚಿತ್ರ 25 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿತ್ತು. ಅಲ್ಲಿ ಯಶಸ್ವಿಯಾದರೆ ಸಂಭ್ರಮ ಆಚರಿಸಲಾಗುತ್ತಿತ್ತು. ಈಗ ನೂರಾರು, ಕೆಲವು ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೂರ್ನಾಲ್ಕು ದಿನಗಳಲ್ಲಿ ಹಾಕಿದ ಬಂಡವಾಳ ವಾಪಸ್ಸು ಪಡೆಯುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, 10 ದಿನಕ್ಕೆ ಸಂಭ್ರಮಾಚರಣೆ ಶುರುವಾಗಿದೆ. 10 ದಿನಕ್ಕೆ ಸಂಭ್ರಮ ಪಡುತ್ತೇವೆ ಎಂದರೆ, ನಮಗೆ ಹಿನ್ನಡೆಯಾಗುತ್ತಿದೆ ಎಂದರ್ಥ. ಈ ಕುರಿತು ನಾವು ಚರ್ಚೆ ಮಾಡುತ್ತಿಲ್ಲ. ಸಂಬಂಧಪಟ್ಟವರು ಕೂತು, ಯಾಕೆ ಹೀಗಾಗುತ್ತಿದೆ ಎಂದು ಚರ್ಚಿಸಬೇಕು. ಕಾರಣಗಳನ್ನು ಹುಡುಕಬೇಕು. ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯಗಳಿರುತ್ತವೆ. ಚಿತ್ರರಂಗಕ್ಕೆ ಸಂಭಂಧಿಸಿದ ವಿವಿಧ ಸಂಘ-ಸಂಸ್ಥೆಗಳು ಕೂತು ಚರ್ಚೆ ಮಾಡಬೇಕು. ಇದರಲ್ಲಿ ಸರ್ಕಾರವೂ ತೊಡಗಿಸಿಕೊಳ್ಳಬೇಕು. ಅಂತಹ ಚರ್ಚೆಯಿಂದ ಮಾತ್ರ ನಾವು ಎಲ್ಲಿ ಎಡವುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ’ ಎಂದರು.
‘ಸ್ವಪ್ನ ಮಂಟಪ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ರಂಜನಿ ರಾಘವನ್ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ಮಿಕ್ಕಂತೆ ಅಂಬರೀಶ್ ಸಾರಂಗ, ರಜನಿ, ರಾಜಪ್ಪ ದಳವಾಯಿ, ಮೈಸೂರು ಮಂಜುಳ, ಶಿವಲಿಂಗ ಪ್ರಸಾದ್, ಸುಂದರ್ ರಾಜ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ಮತ್ತು ನಾಗರಾಜ್ ಆದವಾನಿ ಅವರ ಛಾಯಾಗ್ರಹಣವಿದೆ.