ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಈಗೇನು ಮಾಡುತ್ತಿದ್ದಾರೆ ಗೊತ್ತೆ?
x
ಗುಜುರಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಯಾಕೂಬ್‌ ಖಾದರ್‌ ಗುಲ್ವಾಡಿ

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಈಗೇನು ಮಾಡುತ್ತಿದ್ದಾರೆ ಗೊತ್ತೆ?

ರಿಸರ್ವೇಶನ್‌, ತ್ರಿಪಲ್‌ ತಲಾಕ್‌ ಚಿತ್ರದ ಮೂಲಕ ಗಮನ ಸೆಳೆದಿದ್ದ ಯಾಕೂಬ್‌ ಖಾದರ್‌ ಗುಲ್ವಾಡಿ ಬದುಕಿನ ಮೇಲೆ ಕೋವಿಡ್‌ ಬೀರಿದ ಪರಿಣಾಮ ಅವರು ಸಿನಿಮಾ ರಂಗದಿಂದ ದೂರ ಸರಿದಿದ್ದಾರೆ!


ಇತ್ತೀಚಿನ ವರ್ಷಗಳಲ್ಲಿ, ಭಾರತದ ಸ್ವತಂತ್ರ ಚಲನಚಿತ್ರ ನಿರ್ಮಾಪಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿದ್ದಾರಾದರೂ ಕಮರ್ಷಿಯಲ್‌ ಮತ್ತು ಮುಖ್ಯವಾಹಿನಿ ಚಲನಚಿತ್ರಗಳ ನಡುವೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಜಾಗತಿಕವಾಗಿ ಹರಡಿದ ಕೋವಿಡ್ ೧೯, ಬಹುತೇಕ ಎಲ್ಲಾ ಕ್ಷೇತ್ರಗಳಂತೆಯೇ ಸಿನೆಮಾ ರಂಗಕ್ಕೂ ದೊಡ್ಡ ಹೊಡೆತ ನೀಡಿತು. ಜಾಗತಿಕ ಮಹಾಮಾರಿ ನೀಡಿದ ಆ ಆಘಾತದಿಂದ ಹಲವಾರು ಚಲನಚಿತ್ರ ತಯಾರಕರು ತತ್ತರಿಸಿ ಹೋಗಿದ್ದಾರೆ.

ಅದರಲ್ಲೂ, ಚಿತ್ರರಂಗದಲ್ಲಿ ಆಗ ತಾನೆ ನೆಲೆ ಕಂಡುಕೊಳ್ಳಲು ಶುರು ಮಾಡಿದ್ದ ಸ್ವತಂತ್ರ ಚಲನಚಿತ್ರ ನಿರ್ಮಾಪಕರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಅವರಲ್ಲಿ, ಕೆಲವರಂತೂ ಸಿನಿರಂಗವನ್ನು ತೊರೆದೇ ಹೋದರು. ರಿಸರ್ವೇಶನ್‌ (2017) ಚಿತ್ರಕ್ಕಾಗಿ ರಾಷ್ಟ್ರೀಯ ರಜತ ಕಮಲ ಪ್ರಶಸ್ತಿ ಪಡೆದ ಮತ್ತು ತ್ರಿಪಲ್‌ ತಲಾಕ್‌ (2019) ಚಿತ್ರದ ಮೂಲಕ ಗಮನ ಸೆಳೆದಿದ್ದ ಉಡುಪಿಯ ಕುಂದಾಪುರ ಮೂಲದ ಯಾಕೂಬ್‌ ಖಾದರ್‌ ಗುಲ್ವಾಡಿ ಕೂಡ ಅಂತಹವರ ಸಾಲಿನಲ್ಲಿ ನಿಲ್ಲುತ್ತಾರೆ. ಸಿನಿಮಾ ಜಗತ್ತಿಗೆ ಕಾಲಿಡುವ ಮುನ್ನ ಜೀವನೋಪಾಯವಾಗಿದ್ದ ಗುಜುರಿ ವ್ಯಾಪಾರಕ್ಕೆ ಅವರು ಮತ್ತೆ ಮರಳಿದ್ದಾರೆ.

ಮೀಸಲಾತಿ ಕುರಿತ ಚಿತ್ರ ʼರಿಸರ್ವೇಶನ್‌ʼ

ಯಾಕೂಬ್‌ ಖಾದರ್‌ ಗುಲ್ವಾಡಿ ನಿರ್ಮಿಸಿದ ಮತ್ತು ನಿಖಿಲ್ ಮಂಜು ನಿರ್ದೇಶನದ ರಿಸರ್ವೇಶನ್, 2017 ರಲ್ಲಿ 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ (ಕನ್ನಡ) ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಮೀಸಲಾತಿ ಪ್ರಕ್ರಿಯೆಯ ಜಟಿಲತೆ ಮತ್ತು ಅಂಚಿನ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಭಾರತೀಯ ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ರಚಿಸಲಾದ ಮೀಸಲಾತಿ ಕುರಿತಾಗಿನ ವಿಷಯವೇ ಈ ಚಿತ್ರದ ಕಥಾವಸ್ತು.

ಚಿತ್ರವು ಪ್ರಾಥಮಿಕ ಮತ್ತು ಮಧ್ಯಮ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಸವಾಲುಗಳ ಕುರಿತು ಬೆಳಕು ಚೆಲ್ಲಿದ್ದು, ತಮ್ಮ ಮಗುವನ್ನು ಇಂಗ್ಲಿಷ್ ಶಾಲೆಗೆ ಸೇರಿಸಲು ಪ್ರಯತ್ನಿಸುವ ಬ್ರಾಹ್ಮಣ ಕುಟುಂಬದ ಸುತ್ತಲೂ ಚಿತ್ರದ ಕಥೆ ಸಾಗುತ್ತದೆ. 2018ರಲ್ಲಿ ಮೆಲ್ಬೋರ್ನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ರಿಸರ್ವೇಶನ್‌ ಚಿತ್ರವು ಪ್ರದರ್ಶನ ಕಂಡಿದೆ.

ತಲಾಖ್‌ ಕುರಿತ ತಪ್ಪು ಕಲ್ಪನೆಗಳ ವಿಮರ್ಶೆ ʼತ್ರಿಪಲ್‌ ತಲಾಖ್‌ʼ

ರಿಸರ್ವೇಶನ್‌ ಚಿತ್ರದ ಯಶಸ್ಸಿನ ನಂತರ, ಯಾಕೂಬ್ ಅವರು 2019ರಲ್ಲಿ ʼತ್ರಿಪಲ್‌ ತಲಾಖ್ʼ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ನವ್ಯಾ ಪೂಜಾರಿ ಮತ್ತು ಅಝರ್ ಶಾ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ರೂಪ ವರ್ಕಾಡಿ, ರವಿಕಿರಣ್ ಮುರ್ಡೇಶ್ವರ್, ಬೇಬಿ ಫಾಹಿಮಾ ಮೊದಲಾದವರೂ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವು ಕರಾವಳಿ ಕರ್ನಾಟಕದ ʼಬ್ಯಾರಿʼ ಭಾಷೆಯಲ್ಲಿ ತೆರೆಕಂಡ ಮೂರನೇಯ ಚಿತ್ರ ಎನ್ನುವುದು ಗಮನಾರ್ಹ. ಕರಾವಳಿ ಕರ್ನಾಟಕದ ಕುಂದಾಪುರ, ಗುಲ್ವಾಡಿ, ಕೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ, 90 ನಿಮಿಷಗಳ ಅವಧಿಯ ‌ʼತ್ರಿಪಲ್ ತಲಾಖ್ʼ ಚಿತ್ರವು ಸಾಮಾನ್ಯ ಜನರಲ್ಲಿ ತಲಾಖ್‌ಗೆ ಸಂಬಂಧಿಸಿದ ಹಲವಾರು ಪೂರ್ವಾಗ್ರಹಗಳನ್ನು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ ಎನ್ನುತ್ತಾರೆ ನಿರ್ಮಾಪಕರು.

ಕೋವಿಡ್‌-19 ಪ್ರತಿಕೂಲ ಪರಿಣಾಮ

ʼಡಿಸೆಂಬರ್ 8, 2019 ರಂದು ಯುನೈಟೆಡ್ ಕಿಂಗ್‌ಡಂನ ಬ್ರಿಸ್ಟಲ್‌ನಲ್ಲಿರುವ ಸ್ಕಾಟ್ ಸಿನಿಮಾಸ್‌ನಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡ ಟ್ರಿಪಲ್ ತಲಾಖ್, ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುವ ಅವಕಾಶಗಳನ್ನು ಪಡೆದಿತ್ತು. ಆದರೆ ಕೋವಿಡ್ -19 ಜಾಗತಿಕ ಹೊಡೆತಕ್ಕೆ ‌ʼತ್ರಿಪಲ್ ತಲಾಖ್ʼ ಅನಾಯಾಸವಾಗಿ ಬಲಿಯಾಯಿತು. ನಾನು 20 ದಿನಗಳ ಕಾಲ ಕೋವಿಡ್‌ನೊಂದಿಗೆ ಹೋರಾಡಿದೆ. ನಾನು ಸಾವಿನ ಬಾಗಿಲನ್ನು ಬಹುತೇಕ ತಟ್ಟಿ ಬಂದಿದ್ದೆ. ಅದೃಷ್ಟವಶಾತ್, ನಾನು ಕಥೆ ಹೇಳುವ ಸಲುವಾಗಿಯೇ ಬದುಕುಳಿದಿದ್ದೇನೆʼ ಎಂದು ಯಾಕೂಬ್ ಖಾದರ್ ನಗುವಾಗ ವಿಷಾದ ಇಣುಕಿದಂತೆ ಭಾಸವಾಗುತ್ತದೆ.

ತ್ರಿಪಲ್ ತಲಾಖ್‌ ಚಿತ್ರದ ದುರಂತ ವೈಫಲ್ಯದಿಂದ ಆಘಾತಕ್ಕೊಳಗಾದ ಖಾದರ್ ರಿಗೆ ತಮ್ಮ ಜೀವನೋಪಾಯಕ್ಕಾಗಿ ಹಳೆಯ ವೃತ್ತಿಗೆ ಮರಳುವ ಅನಿವಾರ್ಯತೆ ಎದುರಾಗುತ್ತದೆ. “ಸಾಂಕ್ರಾಮಿಕ ರೋಗ ಅಪ್ಪಳಿಸಿದಾಗ, ತ್ರಿಪಲ್ ತಲಾಖ್ ಚಿತ್ರದ ಕುರಿತಾಗಿನ ನನ್ನ ಯೋಜನೆಗಳೆಲ್ಲಾ ತಲೆಕೆಳಗಾಯಿತು. ಆ ಸಮಯದಲ್ಲಿ ಜೀವನ ನಡೆಸುವುದು ನನಗೆ ಕಷ್ಟಕರವಾಗಿತ್ತು. ನನ್ನ ಮುಂದೆ ಗುಜುರಿ ವ್ಯವಹಾರಕ್ಕೆ ಇಳಿಯುವುದು ಬಿಟ್ಟರೆ ಬೇರೆ ಅವಕಾಶವಿರಲಿಲ್ಲ” ಎಂದು ಹಳೆಯ ವೃತ್ತಿಗೆ ಮರಳಿದ ವೃತ್ತಾಂತಗಳನ್ನು ವಿವರಿಸುತ್ತಾರೆ ಖಾದರ್.

ತನ್ನ ಜೀವನದಲ್ಲಿ ದೊಡ್ಡ ಕನಸು ಕಾಣುತ್ತಿದ್ದ ಯಾಕೂಬ್‌ ಅವರದ್ದು ಬಾಲ್ಯದಲ್ಲಿ ತೀರಾ ಬಡತನದ ಕುಟುಂಬ. ಕೇವಲ 12ನೇ ವರ್ಷದವರಾಗಿದ್ದಾಗಲೇ ಮನೆಯ ಬಡತನದ ಕಾರಣಕ್ಕೆ ಶಾಲೆಯನ್ನು ತೊರೆದ ಖಾದರ್‌ ಗುಜುರಿ ವ್ಯವಹಾರ ನಡೆಸುತ್ತಿದ್ದ ತಮ್ಮ ಸಹೋದರನ ಜೊತೆಗೆ ಸೇರಿಕೊಳ್ಳುತ್ತಾರೆ.

ರದ್ದಿ ಅಂಗಡಿಗೆ ಬರುವ ಹಳೆಯ ಪುಸ್ತಕ-ಮ್ಯಾಗಝಿನ್‌ಗಳು ಬಾಲಕ ಖಾದರ್‌ ರನ್ನು ಸೆಳೆಯುತ್ತದೆ. ಅದೇ ಪುಸ್ತಕಗಳ ಮೂಲಕ ಶಾಲೆಯಲ್ಲಿ ನಿಲ್ಲಿಸಿದ ಓದನ್ನು ತಮ್ಮದೇ ಆದ ರೀತಿಯಲ್ಲಿ ಶುರು ಮಾಡುತ್ತಾರೆ. “ಜನರಿಂದ ತಿರಸ್ಕರಿಸಲ್ಪಟ್ಟ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಗಮನಿಸತೊಡಗಿದೆ. ಅದೃಷ್ಟವಶಾತ್, ನಮ್ಮೂರಿನವರಾದ ತರಂಗ ವಾರಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಗುಲ್ವಾಡಿ ಅವರ ಪರಿಚಯವೂ ದೊರೆಯಿತು. ನನಗೆ ಓದು ಬರಹದಲ್ಲಿ ಆಸಕ್ತಿ ಇದೆ ಎಂದು ಗೊತ್ತಾದ ಬಳಿಕ ಅವರು ನನಗೆ ಬೇಕಾದ ರೀತಿಯಲ್ಲಿ ಬರೆಯುವ ತರಬೇತಿ ನೀಡಿದರು” ಎಂದು ಯಾಕೂಬ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಸಾಹಿತಿ ವೈದೇಹಿ ಅವರ ಕತೆಯನ್ನಾಧರಿಸಿದ ʼಗುಲಾಬಿ ಟಾಕೀಸ್‌ʼ ಚಿತ್ರಕ್ಕೆ ಸಂಬಂಧಿಸಿದಂತೆ ಗಿರೀಶ್‌ ಕಾಸರವಳ್ಳಿ ಅವರು ಬ್ಯಾರಿ ಸಂಪ್ರದಾಯಗಳ ಕುರಿತು ಅರಿವುಳ್ಳ ಒಬ್ಬರನ್ನು ಹುಡುಕುತ್ತಿರಬೇಕಾದರೆ, ಸಾಹಿತ್ಯದೊಂದಿಗಿನ ಒಡನಾಟ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿದ್ದ ಖಾದರ್‌ ಕಣ್ಣಿಗೆ ಬೀಳುತ್ತಾರೆ. ಹಾಗೆ, ಅಚಾನಕ್‌ ಆಗಿ ಗುಲಾಬಿ ಟಾಕೀಸ್‌ ಚಿತ್ರದಲ್ಲಿ ತೊಡಗಿಸಿಕೊಂಡ ಖಾದರ್‌ ಅವರಿಗೆ ಅಲ್ಲಿಂದ ಸಿನೆಮಾ ಕ್ಷೇತ್ರದಲ್ಲಿ ಆಸಕ್ತಿ ಹುಟ್ಟಿಕೊಳ್ಳುತ್ತದೆ.

ಮೊದಲು ಕೆಲಸ ಮಾಡಿದ ʼಗುಲಾಬಿ ಟಾಕೀಸ್‌ʼಗೆ ವಿವಿಧ ಪ್ರಶಸ್ತಿಗಳು, ಮೆಚ್ಚುಗೆಗಳು ಬಂದರೆ, ನಂತರ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ ʼಹಜ್ʼ ಚಿತ್ರಕ್ಕೆ ಮೂರು ರಾಜ್ಯ ಪ್ರಶಸ್ತಿ ಮತ್ತು ಎರಡು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಬಂದಿತ್ತು. ಕ್ರಮೇಣ, ಸಾಹಿತ್ಯ, ಸಮಾಜಸೇವೆ ಎಂದೆಲ್ಲಾ ತೊಡಗಿಸಿಕೊಂಡಿದ್ದ ಖಾದರ್‌ ತಮ್ಮ ಆಸಕ್ತಿಯ ಕ್ಷೇತ್ರವನ್ನು ಸಿನೆಮಾ ಲೋಕಕ್ಕೂ ವಿಸ್ತರಿಸುತ್ತಾರೆ. ಕಾಸರವಳ್ಳಿ, ಡಾ. ನಾಗತಿಹಳ್ಳಿ ಚಂದ್ರಶೇಖರ ಮೊದಲಾದ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿದ ಖಾದರ್‌ ಕಾಸ್ಟ್ಯೂಮ್‌ ಡಿಸೈನರ್‌, ಕಲಾ ನಿರ್ದೇಶನ, ಕತೆ, ಚಿತ್ರಕತೆ, ಸಂಭಾಷಣೆ, ಅಭಿನಯ ಎಂದೆಲ್ಲಾ ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಾರೆ. ಹೀಗಿರುವಾಗ ತಾವೇ ಒಂದು ಚಿತ್ರವನ್ನು ನಿರ್ಮಿಸಬೇಕೆಂಬ ಅವರ ಕನಸು ತಮ್ಮ ಪತ್ನಿಯ ಒಡವೆಗಳನ್ನು ಮಾರಿ ಚಿತ್ರ ನಿರ್ಮಿಸುವಷ್ಟು ತೀವ್ರವಾಗುತ್ತದೆ. ಮೀಸಲಾತಿ ಸುತ್ತ ಹೆಣೆದಿರುವ ʼರಿಸರ್ವೇಶನ್‌ʼ ಎಂಬ ಚಿತ್ರವನ್ನು ತಮ್ಮ ʼಗುಲ್ವಾಡಿ ಟಾಕೀಸ್ʼ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸುತ್ತಾರೆ.

ರಿಸರ್ವೇಶನ್‌ ಚಿತ್ರದ ಯಶಸ್ಸಿನಿಂದ ಇನ್ನಷ್ಟು ಉತ್ತೇಜನಗೊಂಡ ಖಾದರ್‌, ಆ ಹೊತ್ತಿಗೆ ದೇಶಾದ್ಯಂತ ಗಮನ ಸೆಳೆದಿದ್ದ ʼತ್ರಿವಳಿ ತಲಾಖ್‌ʼ ಬಗ್ಗೆ ಚಿತ್ರ ನಿರ್ಮಿಸಲು ಮುಂದಾಗುತ್ತಾರೆ. ತಲಾಖ್‌ ಕುರಿತಂತೆ ಇರುವ ಪೂರ್ವಗ್ರಹಗಳನ್ನು ಒಡೆಯಲು ಇದೇ ವಿಷಯದ ಮೇಲೆ ʼಟ್ರಿಪಲ್ ತಲಾಖ್ʼ ಎಂಬ ಚಿತ್ರವನ್ನು ತಾವೇ ಬರೆದು ನಿರ್ಮಿಸುತ್ತಾರೆ. ಸುಮಾರು 40 ದೇಶಗಳ ಫಿಲಂ ಫೆಸ್ಟಿವಲ್‌ನಲ್ಲಿ ಈ ಚಿತ್ರವು ಭಾಗವಹಿಸಿತ್ತಾದರೂ ಕೋವಿಡ್‌ ಅಬ್ಬರದಿಂದಾಗಿ ಚಿತ್ರದೊಂದಿಗೆ ಖಾದರ್‌ ಅವರೂ ಸದ್ದಿಲ್ಲದೆ ಬದಿಗೆ ಸರಿಯಬೇಕಾಯಿತು.

ಆದಾಗ್ಯೂ, ಯಾಕೂಬ್ ಅವರಿಗೆ ಗುಜುರಿ ವ್ಯವಹಾರಕ್ಕೆ ಹಿಂದಿರುಗಿದ ಬಗ್ಗೆ ಈಗ ಯಾವುದೇ ಪಶ್ಚಾತ್ತಾಪವಿಲ್ಲ. “ನಾನು ಅದನ್ನು ಪ್ರೀತಿಸುತ್ತೇನೆ; ಇದು ನನ್ನ ಸೃಜನಶೀಲತೆ ಮತ್ತು ಜೀವನೋಪಾಯದ ಮೂಲ. ಪ್ರತಿ ರದ್ದಿ ತುಣುಕು ನನ್ನ ಸೃಜನಶೀಲತೆಯನ್ನು ಸೆಳೆಯುತ್ತದೆ. ನನಗೆ ಗುಜರಿಯನ್ನೇ ಕಲೆಯಾಗಿ ಪರಿವರ್ತಿಸುವ ವಿಶ್ವಾಸವಿದೆ. ಸಾಮಾಜಿಕ ಕಳಕಳಿ ಇರುವ ಸಿನಿಮಾ ಮಾಡುವ ಕನಸು ನನಗಿನ್ನೂ ಇದೆ. ನನ್ನ ಕನಸುಗಳು ಅಷ್ಟು ಸುಲಭವಾಗಿ ಸಾಯುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಆಶಾವಾದದ ನಗು ಚೆಲ್ಲುತ್ತಾರೆ ಯಾಕೂಬ್.

Read More
Next Story