ನಾವೆಲ್ಲಾ ಬೇರೆಯವರ ಕಥೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ: ‘UI’ ಡೀಕೋಡ್ ಮಾಡಿದ ಉಪೇಂದ್ರ
ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ. ಎಲ್ಲವೂ ನೇರವಾಗಿಯೇ ಇದೆ. ಚಿತ್ರದಲ್ಲಿ ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳಿವೆ. ಕೆಲವರು ಕೆಲವು ರೀತಿ ಚಿತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದರು ಉಪೇಂದ್ರ.
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವನ್ನು ಅಭಿಮಾನಿಗಳು ಡಿಕೋಡ್ ಮಾಡಿದ್ದೇ ಮಾಡಿದ್ದು. ಚಿತ್ರದ ಕಥೆಯನ್ನು, ಸಿನಿಮಾದಲ್ಲಿ ಬರುವ ಸಿನಿಮಾವನ್ನು, ಚಿತ್ರದ ಒಳಾರ್ಥವನ್ನು ತಮ್ಮದೇ ರೀತಿಯಲ್ಲಿ ಡೀಕೋಡ್ ಮಾಡುತ್ತಿದ್ದಾರೆ. ಇದುವರೆಗೂ ಉಪೇಂದ್ರ ‘UI’ ಚಿತ್ರದ ಬಗ್ಗೆ ಯಾವೊಂದು ವಿಷಯವನ್ನೂ ಬಿಟ್ಟುಕೊಟ್ಟಿರಲಿಲ್ಲ. ಏನು ಕೇಳಿದರೂ ಚಿತ್ರ ನೋಡಿ ಎಂದು ಹೇಳುತ್ತಿದ್ದರು. ಚಿತ್ರದ ಬಗ್ಗೆ ಹೆಚ್ಚಿನ ವಿಷಯ ಗೊತ್ತಾಗಬಾರದು ಎಂಬ ನಿಟ್ಟಿನಲ್ಲಿ, ಅವರು ಟ್ರೇಲರ್ ಸಹ ಬಿಡುಗಡೆ ಮಾಡಿರಲಿಲ್ಲ. ಈಗ ಚಿತ್ರವನ್ನು ಮೊದಲ ಬಾರಿಗೆ ಡೀಕೋಡ್ ಮಾಡಿದ್ದಾರೆ.
ಇತ್ತೀಚೆಗೆ ‘UI’ ಪತ್ರಿಕಾಗೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಉಪೇಂದ್ರ ಹಲವು ವಿಷಯ ಚಿತ್ರವನ್ನು ಡೀಕೋಡ್ ಮಾಡಿದ್ದಾರೆ. ಚಿತ್ರದಲ್ಲಿ ತಾವು ಹೇಳುವುದಕ್ಕೆ ಹೊರಟಿದ್ದೇನು ಎಂಬುದನ್ನು ವಿವರಿಸಿದ್ದಾರೆ.
ನಮ್ಮ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯ
ಈ ಕುರಿತು ಮಾತನಾಡಿರುವ ಉಪೇಂದ್ರ, ‘ನಾವೆಲ್ಲಾ ಬೇರೆಯವರ ಕಥೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಅವರಿಂದ ಪ್ರೇರಣೆ ಪಡೆಯುತ್ತಿದ್ದೇವೆ. ನಮಗೆ ಬೇರೆಯವರ ಕಥೆಗಳೇ ಬೇಕು. ನಮಗೆ ನಮ್ಮ ಕಥೆಗಳು ಬೇಡ. ನನ್ನ ಜೀವನವನ್ನು ನಾನು ಚೆನ್ನಾಗಿ ಇಟ್ಟುಕೊಂಡರೆ, ಅದಕ್ಕಿಂತ ಇನ್ನೇನೂ ಬೇಕಾಗಿಲ್ಲ. ಅದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕೊನೆಯಲ್ಲಿ ಒಂದು ಗಡಿಯಾರ ತೋರಿಸುತ್ತೇನೆ. ನಾನು ಬೇರೇನೋ ಹೇಳಿ ಒಪ್ಪಿಸಬಹುದಿತ್ತು. ನಿಮ್ಮ ಸಮಯದ ಬಗ್ಗೆ ಗಮನ ಇಡಿ ಎಂದು ಹೇಳಬಹುದಿತ್ತು. ಆದರೆ, ಅದನ್ನು ಜನರಿಗೇ ಬಿಟ್ಟಿದ್ದೇನೆ. ಜನರೇ ಅದನ್ನು ಅವರೇ ಅರ್ಥ ಮಾಡಿಕೊಂಡಾಗ ಅದರ ಮಜವೇ ಬೇರೆ. ಈ ಚಿತ್ರದಲ್ಲಿ ಸಾಕ್ಷಾತ್ಕಾರ ಎನ್ನುವುದು ಎಷ್ಟು ಮುಖ್ಯ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ. ಅದೇ ಕಾರಣಕ್ಕೆ ಚಿತ್ರದಲ್ಲಿ ಅಂತ್ಯದಲ್ಲಿ ಕಥೆ ಬಿಸಾಕಿ ಹೋಗುತ್ತೇನೆ. ಇನ್ನು ಮುಂದೆ ಕಥೆಯನ್ನೇ ಮಾಡುವುದಿಲ್ಲ ಎನ್ನುವಂತೆ ತೋರಿಸಿದ್ದೇನೆ. ಏಕೆಂದರೆ, ಕಥೆ ಮಾಡುವ ಮೂಲಕ ನಾನು ನಿಮ್ಮ ತಲೆಗೆ ಏನೋ ತುರುಕುವ ಪ್ರಯತ್ನ ಮಾಡುತ್ತೇನೆ. ನಾನೇನೋ ಬಿತ್ತುವ ಕೆಲಸ ಮಾಡುತ್ತೇನೆ’ ಎಂದರು.
ಬೇರೆ ಯಾರೂ ವಿಲನ್ ಅಲ್ಲ, ಇಲ್ಲಿ ನಾನೇ ವಿಲನ್
ಈ ಚಿತ್ರದ ವಿಲನ್ ಯಾರು? ಕಲ್ಕಿ ಪಾತ್ರವಾ? ಎಂಬ ಪ್ರಶ್ನೆಗೆ ಉತ್ತರಿಸುವ ವಿಲನ್, ‘ಇಲ್ಲಿ ವಿಲನ್ ಯಾರು ಎಂದು ಗೊತ್ತಾದರೆ, ಸಿನಿಮಾ ಚೆನ್ನಾಗಿ ಅರ್ಥವಾಗಿಬಿಡುತ್ತದೆ. ಕಲ್ಕಿ ವಿಲನ್ನಾ? ಸತ್ಯ ವಿಲನ್ನಾ? ಎಂಬುದು ಮುಖ್ಯವಲ್ಲ. ಅವರಿಬ್ಬರೂ ಒಂದು ಉದ್ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಇಲ್ಲಿ ವ್ಯವಸ್ಥೆ ಎಂದರೆ ಯಾರು? ನಾನು, ನೀವು. ಹಾಗಾಗಿ, ಇಲ್ಲಿ ಬೇರೆ ಯಾರೋ ವಿಲನ್ ಅಲ್ಲ, ನಾನು ಎನ್ನುವುದೇ ವಿಲನ್’ ಎಂದು ಡೀಕೋಡ್ ಮಾಡಿದರು ಉಪೇಂದ್ರ.
ಸಾಮಾಜಿಕ, ರಾಜಕೀಯ ಜೊತೆಗೆ ವೈಯಕ್ತಿಕ ವಿಷಯ
‘UI’ ಮೂಲಕ ಉಪೇಂದ್ರ ಸಾಮಾಜಿಕ ಅಥವಾ ರಾಜಕೀಯ ವಿಷಯವನ್ನು ಹೇಳುವುದರ ಜೊತೆಗೆ ವೈಯಕ್ತಿಕ ವಿಷಯವನ್ನು ಹೇಳುತ್ತಿದ್ದಾರಂತೆ. ಈ ಕುರಿತು ಮಾತನಾಡಿರುವ ಅವರು, ‘ಕೆಲಸ ಎನ್ನುವುದು ಹುಡುಕೋದಲ್ಲ. ಅದನ್ನು ಮಾಡೋದು. ನಾನು ನಿರ್ದೇಶಕನಾಗಬೇಕು ಎಂದು ಬಹಳಷ್ಟು ಜನ ನನ್ನ ಹತ್ತಿರ ಬರುತ್ತಾರೆ. ಮುಂದೆ ನಿರ್ದೇಶಕರಾಗೋದಲ್ಲ, ಈಗಲೇ ಆಗಿಬಿಡಿ ಎಂದು ಅವರಿಗೆ ಹೇಳುತ್ತೇನೆ. ಚಿತ್ರದ ನಿರ್ದೇಶನ ಮಾಡಬೇಕಾ? ಕೈಯಲ್ಲಿ ಮೊಬೈಲ್ ಇದೆ. ಅದರಲ್ಲೇ ಕ್ಯಾಮೆರಾ ಇದೆ. ಸಂಗೀತ ಸಿಗುತ್ತದೆ. ಅಲ್ಲೇ ಎಡಿಟ್ ಮಾಡಬಹುದು. ಪ್ರದರ್ಶನ ಮಾಡುವುದಕ್ಕೆ ಯೂಟ್ಯೂಬ್ ಇದೆ. ಇಷ್ಟೆಲ್ಲಾ ಸೌಲಭ್ಯಗಳಿರುವಾಗ ಯಾಕೆ ಕಾಯಬೇಕು? ನಾಳೆಯೇ ನಿರ್ದೇಶಕನಾಗಬಹುದು. ಯಾವುದೇ ವಿಷಯ ಆಗಬೇಕಾದರೂ ಈ ಕ್ಷಣದಲ್ಲಿ ಆಗಬೇಕು. ಅದಕ್ಕೆ ಮನಸ್ಸಿನಲ್ಲಿ ಬದಲಾವಣೆ ಆಗಬೇಕು. ಅದನ್ನೇ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೇ’ ಎಂದರು ಉಪೇಂದ್ರ.
ಎಲ್ಲಾ ನಿರ್ದೇಶಕರು ವಾಲ್ಮೀಕಿ ಮತ್ತು ವ್ಯಾಸರಿಗೆ ಹಣ ಕೊಡಬಬೇಕು
ಇನ್ನು, ಚಿತ್ರದಲ್ಲಿ ರಾಮಾಯಣ ಅಥವಾ ಮಹಾಭಾರತದ ಉಲ್ಲೇಖವಿಲ್ಲದಿದ್ದರೂ, ಅದು ಯಾವತ್ತೂ ಪ್ರಸ್ತುತ ಮತ್ತು ಅದನ್ನು ಮೂಲವಾಗಿಟ್ಟುಕೊಂಡೇ ಚಿತ್ರ ಮಾಡಲಾಗುತ್ತಿದೆ ಎನ್ನುತ್ತಾರೆ ಉಪೇಂದ್ರ. ‘ರಾಮಾಯಣ ಮತ್ತು ಮಹಾಭಾರತ ಯಾವತ್ತೂ ಪ್ರಸ್ತುತ. ಈಗಲೂ ಅದನ್ನಿಟ್ಟುಕೊಂಡು ಹಲವರು ಸಿನಿಮಾ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಕಾಪಿರೈಟ್ ವಿಷಯವೇನಾದರೂ ಬಂದರೆ, ಎಲ್ಲಾ ನಿರ್ದೇಶಕರು ವಾಲ್ಮೀಕಿ ಮತ್ತು ವ್ಯಾಸರಿಗೆ ಕಾಪಿರೈಟ್‍ನಲ್ಲಿ ಹಣ ಕೊಡಬೇಕು. ಏಕೆಂದರೆ, ಎಷ್ಟೋ ಸಾವಿರ ವರ್ಷಗಳ ಹಿಂದೆ ಅವರು ಹೇಳಿದ ಹಲವು ವಿಷಯಗಳನ್ನೇ ಎಲ್ಲರೂ ತೆಗೆದುಕೊಂಡು ಚಿತ್ರ ಮಾಡುತ್ತಿದ್ದಾರೆ. ಏಕೆಂದರೆ, ಅದು ಹೊರಗಿನ ವಿಷಯವಲ್ಲ. ಒಳಗಿರುವ ವಿಷಯ. ಆತ್ಮವನ್ನು ರಾಮನಿಗೆ ಹೋಲಿಸುತ್ತಾರೆ. ಅದಕ್ಕೇ ರಾಮನನ್ನು ಆತ್ಮರಾಮ ಎನ್ನುತ್ತಾರೆ. ಪ್ರಾಣಕ್ಕೆ ಹನುಮಂತ ಎನ್ನುತ್ತಾರೆ. ಅದಕ್ಕೆ ಆತ್ಮ (ರಾಮ), ಪ್ರಾಣ (ಹನುಮಂತ) ತಬ್ಬಿಕೊಂಡಿರೋದನ್ನು ನೋಡಬಹುದು. ಸೀತೆ ಅನ್ನೋದು ಒಂದು ಮನಸ್ಸು. ಅದೊಂದು ಎಂದರೆ ಮಾಯಾಜಿಂಕೆ. ರಾವಣ ಎಂದರೆ ಬಲದ ಸಂಕೇತ. ಈ ಆತ್ಮಕ್ಕೂ, ಬಲಕ್ಕೂ ಸದಾ ಘರ್ಷಣೆ ನಡೆಯುತ್ತಿರುತ್ತದೆ. ಅದಕ್ಕೆ ಕಾರಣ ಮನಸ್ಸು. ಅದೇ ರಾಮಾಯಣ. ಇದೇ ವಿಷಯವನ್ನು ಬೇರೆಬೇರೆ ವ್ಯಾಖ್ಯಾನಿಸಿ ರೀತಿ ಚಿತ್ರ ಮಾಡಲಾಗುತ್ತಿದೆ’ ಎಂದರು.
ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ
ಉಪೇಂದ್ರ ಯಾವತ್ತೂ ಪ್ರೇಕ್ಷಕರು ತಮಗಿಂತ ಮೇಲಿದ್ದಾರೆ ಎಂದು ಹೇಳುತ್ತಿದ್ದರು. ಅದನ್ನು ಮತ್ತೊಮ್ಮೆ ಜನ ನಿರೂಪಿಸಿದ್ದಾರೆ ಎನ್ನುತ್ತಾರೆ. ‘ಪ್ರೇಕ್ಷಕರು ಚಿತ್ರವನ್ನು ಚೆನ್ನಾಗಿಯೇ ಡೀಕೋಡ್ ಮಾಡಿದ್ದಾರೆ. ಕನ್ನಡಕ್ಕಿಂತ ಬೇರೆ ಭಾಷೆಗಳಲ್ಲಿ ಜನ ಚೆನ್ನಾಗಿ ಡೀಕೋಡ್ ಮಾಡುತ್ತಿದ್ದಾರೆ. ಚಿತ್ರದ ಕೊನೆಯ ಶಾಟ್ ಬಗ್ಗೆ ಒಬ್ಬರು ಮಾತ್ರ ಮಾತನಾಡಿದ್ದಾರೆ. ಈ ಚಿತ್ರದಿಂದ ಏನೇನು ಅರ್ಥವಾಯ್ತು ಎಂಬುದು ಅವರವರಿಗೆ ಬಿಟ್ಟಿದ್ದು. ಏಕೆಂದರೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತದೆ. ಇಲ್ಲಿ ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ. ಎಲ್ಲವೂ ನೇರವಾಗಿಯೇ ಇದೆ. ಆದರೆ, ಇಂಥ ಚಿತ್ರಗಳಿಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಸರ್ವಾನುಮತದಿಂದ ಹೇಳುವುದು ಕಷ್ಟ. ಒಬ್ಬೊಬ್ಬರು ಒಂದೊಂದು ರೀತಿ ಗ್ರಹಿಸುತ್ತಾರೆ. ಚಿತ್ರದಲ್ಲಿ ಸಾಮಾಜಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಂಶಗಳಿವೆ. ಕೆಲವರು ಕೆಲವು ರೀತಿ ಚಿತ್ರವನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದರು ಉಪೇಂದ್ರ.