
ಸಿನಿಮಾದ ಪೋಸ್ಟರ್
Kannada Cinema Review: 'ವೀರ ಚಂದ್ರಹಾಸ'ದಲ್ಲಿ ಯಕ್ಷಗಾನ ಕಲೆಗೆ ಆಧುನಿಕತೆಯ ಸ್ಪರ್ಶ
ಕನ್ನಡದಲ್ಲಿ ಇದುವರೆಗೂ ಹಲವು ಪ್ರಯೋಗಗಳಾಗಿವೆ. ಇದೀಗ ರವಿ ಬಸ್ರೂರು, ಯಕ್ಷಗಾನವೆಂಬ ಸಾಂಪ್ರದಾಯಿಕ ಕಲೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ‘ವೀರ ಚಂದ್ರಹಾಸ’ವೆಂಬ ಹಳೆಯ ಯಕ್ಷಗಾನ ಪ್ರಸಂಗವನ್ನು ಸಿನಿಮಾ ಮಾಡಿದ್ದಾರೆ.
ಚಿತ್ರ: Veera Chandrahasa Kannada cinema review
ತಾರಾಗಣ: ಶಿಥಿಲ್ ಶೆಟ್ಟಿ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಹೆಗಡೆ ಕಡಬಾಳ್, ನಾಗಶ್ರೀ, ಶಿವರಾಜಕುಮಾರ್ ಮುಂತಾದವರು
ನಿರ್ದೇಶನ: ರವಿ ಬಸ್ರೂರು
ನಿರ್ಮಾಣ: ಎನ್.ಎಸ್. ರಾಜಕುಮಾರ್
ಕನ್ನಡದಲ್ಲಿ ಇದುವರೆಗೂ ಹಲವು ಪ್ರಯೋಗಗಳಾಗಿವೆ. ಇದೀಗ ರವಿ ಬಸ್ರೂರು, ಯಕ್ಷಗಾನವೆಂಬ ಸಾಂಪ್ರದಾಯಿಕ ಕಲೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ‘ವೀರ ಚಂದ್ರಹಾಸ’ವೆಂಬ ಹಳೆಯ ಯಕ್ಷಗಾನ ಪ್ರಸಂಗವನ್ನು ಸಿನಿಮಾ ಮಾಡಿದ್ದಾರೆ. ಇದುವರೆಗೂ ರಂಗದ ಮೇಲೆ ಯಕ್ಷಗಾನ ನೋಡುತ್ತಿದ್ದವರನ್ನು, ಚಿತ್ರಮಂದಿರಗಳಲ್ಲಿ ನೋಡುವಂತೆ ಮಾಡುವ ಮೂಲಕ ಹೊಸ ಅನುಭವವನ್ನು ನೀಡಿದ್ದಾರೆ.
ಚಂದ್ರಹಾಸನ ಕಥೆ ಕನ್ನಡಿಗರಿಗೆ ಹೊಸದೇನಲ್ಲ. ಹಲವು ವರ್ಷಗಳ ಹಿಂದೆ ಬಿ.ಎಸ್. ರಂಗ ಅವರು ‘ಚಂದ್ರಹಾಸ’ ಚಿತ್ರವನ್ನು ಮಾಡಿದ್ದರು. ಈ ಚಿತ್ರದಲ್ಲಿ ಚಂದ್ರಹಾಸನಾಗಿ ಡಾ. ರಾಜಕುಮಾರ್ ಮತ್ತು ಮಂತ್ರಿ ದುಷ್ಟಬುದ್ಧಿಯಾಗಿ ಉದಯಕುಮಾರ್ ಕಾಣಿಸಿಕೊಂಡಿದ್ದರು. ಈಗ ಅದೇ ಕಥೆ ಹೊಸ ರೂಪದಲ್ಲಿ ಬಂದಿದೆ. ಇಲ್ಲಿ ಸಂಭಾಷಣೆ, ವೇಷಭೂಷಣ, ಪದ್ಯಗಳು ಎಲ್ಲವೂ ಯಕ್ಷಗಾನದ್ದೇ. ಪಾತ್ರಧಾರಿಗಳು ಸಹ ಯಕ್ಷಗಾನದ ಮೂಲದವರೇ. ಈ ಯಕ್ಷಗಾನದ ಕಥೆಗೆ ಗ್ರಾಫಿಕ್ಸ್ ಮೂಲಕ ಆಧುನಿಕ ಸ್ಪರ್ಶ ಕೊಟ್ಟು ಒಂದು ವಿಭಿನ್ನ ಪ್ರಯತ್ನ ಮಾಡಲಾಗಿದೆ.
ಕುಂತಳ ಸಾಮ್ರಾಜ್ಯದ ಮಹಾಮಂತ್ರಿಯಾದ ದುಷ್ಟಬುದ್ಧಿಗೆ (ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ), ಸಾಮ್ರಾಟನಾಗಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗಲೇ, ಅನಾಥ ಬಾಲಕ ಚಂದ್ರಹಾಸ ಮುಂದೊಂದು ದಿನ ಸಾಮ್ರಾಟನಾಗುತ್ತಾನೆ ಎಂಬ ಭವಿಷ್ಯವನ್ನು ರಾಜಪುರೋಹಿತರು ಹೇಳುತ್ತಾರೆ. ಇದರಿಂದ ಸಿಟ್ಟಾಗುವ ದುಷ್ಟಬುದ್ಧಿ, ಚಂದ್ರಹಾಸನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ, ಕಟುಕರಿಂದ ಪಾರಾಗಿ, ಇನ್ನೊಂದು ರಾಜವಂಶದಲ್ಲಿ ಬೆಳೆಯುವ ಚಂದ್ರಹಾಸ (ಶಿಥಿಲ್ ಶೆಟ್ಟಿ), ಹಲವು ವರ್ಷಗಳ ನಂತರ ಪುನಃ ದುಷ್ಟಬುದ್ಧಿಯನ್ನು ಭೇಟಿಯಾಗುತ್ತಾನೆ. ಚಂದ್ರಹಾಸ ಸತ್ತಿಲ್ಲ ಎಂಬ ವಿಷಯ ತಿಳಿದ್ದು ದುಷ್ಟಬುದ್ಧಿ, ಅವನನ್ನು ಸಾಯಿಸುವುದಕ್ಕೆ ಇನ್ನೊಂದು ತಂತ್ರ ಹಾಕುತ್ತಾನೆ. ಈ ಪ್ರಯತ್ನದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೇ ಚಿತ್ರದ ಕಥೆ.
ಒಂದು ಯಕ್ಷಗಾನ ಪ್ರಸಂಗವನ್ನು ಸಿನಿಮಾ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ ರವಿ ಬಸ್ರೂರು. ಚಿತ್ರದಲ್ಲಿ ಯಕ್ಷಗಾನದ ಸಂಭಾಷಣೆ, ಪದ್ಯ, ಚಂಡೆ-ಮದ್ದಳೆಯ ಜೊತೆಗೆ ಗ್ರಾಫಿಕ್ಸ್ ಬೆರಸಿ ಚಿತ್ರ ಮಾಡಲಾಗಿದೆ. ಒಂದು ಗಂಭೀರವಾದ ಕಥೆಯನ್ನು ಮಧ್ಯೆ ಹಾಸ್ಯ ಬೆರಸಲಾಗಿದೆ. ಪದ್ಯಗಳನ್ನು ಬಹಳ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕಾಳಿಂಗ ನಾವಡರ ಒಂದು ಹಾಡನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಗ್ರಾಫಿಕ್ಸ್, ಕಲಾ ನಿರ್ದೇಶನ, ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ.
ಚಿತ್ರವನ್ನು ಕಮರ್ಷಿಯಲ್ ಆಗಿಸುವ ನಿಟ್ಟಿನಲ್ಲಿ ಚಿತ್ರದ ಕೊನೆಯಲ್ಲಿ ಹೊಸ ಪಾತ್ರಗಳನ್ನು ಪರಿಚಯಿಸುವುದರ, ಎರಡನೆಯ ಭಾಗಕ್ಕೆ ಮುನ್ನಡಿ ಬರೆಯಲಾಗಿದೆ. ಈ ಭಾಗವು ಪ್ರೇಕ್ಷಕರಿಗೆ ‘ಕೆಜಿಎಫ್’ ಚಿತ್ರವನ್ನು ನೆನಪಿಸಿದರೆ ಆಶ್ವರ್ಯವಿಲ್ಲ. ಯಕ್ಷಗಾನ ಪ್ರಸಂಗಗಳನ್ನು ನೋಡುತ್ತಾ ಬಂದವರಿಗೆ ಇದು ವಿಶೇಷವೆಂದನಿಸದಿರಬಹುದು. ಆದರೆ, ನೋಡದಿರುವವರಿಗೆ ಇದೊಂದು ವಿಭಿನ್ನ ಅನುಭವ.
ದುಷ್ಟಬುದ್ಧಿಯಾಗಿ ಕಾಣಿಸಿಕೊಂಡಿರುವ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಈ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ. ಪ್ರಸನ್ನ ಅವರು ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಾರೆ. ಚಂದ್ರಹಾಸನ ಪಾತ್ರ ಮಾಡಿರುವ ಶಿಥಿಲ್ ಶೆಟ್ಟಿ ಗಮನ ಸೆಳೆಯುತ್ತಾರೆ. ಮದನನಾಗಿ ಉದಯ ಹೆಗಡೆ ಕಡಬಾಳ್, ವಿಷಯೆಯಾಗಿ ನಾಗಶ್ರೀ ಇಷ್ಟವಾಗುತ್ತಾರೆ. ಶಿವರಾಜಕುಮಾರ್ ಅವರು ಸಿಂಗಾನಲ್ಲೂರು ಸಂಸ್ಥಾನದ ‘ನಾಡಚಕ್ರವರ್ತಿ ಶಿವ ಪುಟ್ಟಸ್ವಾಮಿ’ಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಧ್ವನಿ ಪೇಲವವಾಗಿದೆ. ಪಾತ್ರಕ್ಕೆ ತಕ್ಕುದಾದ ಧ್ವನಿ ಬಳಸಿಕೊಂಡಿದ್ದರೆ ಚೆನ್‍ನಾಗಿರುತ್ತಿತ್ತು. ‘ಗರುಡ’ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್ ಚಿತ್ರದ ಕೊನೆಗೆ ಅತಿಥಿಗಳಾಗಿ ಬರುತ್ತಾರೆ.
ಕರ್ನಾಟಕದ ಕರಾವಳಿ ಭಾಗದ ಯಕ್ಷಗಾನವನ್ನು ಇಷ್ಟಪಡುವವರು, ಒಂದು ವಿಭಿನ್ನ ಪ್ರಯತ್ನ ನೋಡಬೇಕು ಎನ್ನುವವರು ಚಿತ್ರವನ್ನು ಒಮ್ಮೆ ನೋಡಬಹುದು