ಮೂರು ಕೋಟಿ ಋಣಕ್ಕಾಗಿ ಧರೆಗಿಳಿದ ಸ್ಟಾರ್ ನಟ!
x

ಆಂಧ್ರ ಕಿಂಗ್ ತಾಲೂಕ

ಮೂರು ಕೋಟಿ ಋಣಕ್ಕಾಗಿ ಧರೆಗಿಳಿದ ಸ್ಟಾರ್ ನಟ!

ಈ ಸಿನಿಮಾದಲ್ಲಿ ಉಪೇಂದ್ರ ಒಂದೆರಡು ಅವಾರ್ಡ್ ಪಡೆಯುವ ದೃಶ್ಯಗಳನ್ನು ತೋರಿಸಲಾಗಿದೆ. ಅದು ಫ್ಲ್ಯಾಶ್‌‌‌ ಬ್ಯಾಕ್ ದೃಶ್ಯ ಎನ್ನುವ ಕಾರಣಕ್ಕೋ, ವೇದಿಕೆ ಕಾರ್ಯಕ್ರಮ ಎನ್ನುವ ಕಾರಣಕ್ಕೋ ಗೊತ್ತಿಲ್ಲ, ಉಪೇಂದ್ರರನ್ನು ಯುವತ್ವದಿಂದ, ಆಕರ್ಷಕವಾಗಿ ತೋರಿಸಲಾಗಿದೆ. ಇ


Click the Play button to hear this message in audio format

ಒಂದು ಗ್ಯಾಪ್ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ತೆಲುಗು ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಸಿನಿಮಾ‌ ಆಂಧ್ರಕಿಂಗ್ ತಾಲೂಕ. ಚಿತ್ರವನ್ನು ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಿಗೆ ಪ್ರಾಮುಖ್ಯತೆ ನೀಡುವಂತೆ ಹೊರತಂದಿದ್ದೇವೆ ಎನ್ನುವುದು ಚಿತ್ರತಂಡದ ಅನಿಸಿಕೆ. ಆದರೆ ಕನ್ನಡದಲ್ಲಿ ಖುದ್ದು ಉಪೇಂದ್ರ ಡಬ್ಬಿಂಗ್ ಮಾಡಿದ್ದಾರೆ ಎನ್ನುವುದರ ಹೊರತಾಗಿ ಯಾವ ಪ್ರಾಮುಖ್ಯತೆ ಕೂಡ ಕಾಣಿಸಿಲ್ಲ ಎನ್ನುವುದು ವಾಸ್ತವ.

ಆಂಧ್ರ ಕಿಂಗ್ ತಾಲೂಕ ಎನ್ನುವ ಶೀರ್ಷಿಕೆಯೇ ಕನ್ನಡಿಗರಿಗೆ ಅರ್ಥವಾಗಬೇಕಾಗಿಲ್ಲ.‌ ಆದರೆ ಆಂಧ್ರಕಿಂಗ್ ಜತೆ ತಾಲೂಕ ಪದ ಸೇರಿರುವುದಕ್ಕೆ ಒಂದು ಮುಖ್ಯ ಕಾರಣ ಇದೆ. ಇದು 2002ನೇ ವರ್ಷದಲ್ಲಿ ನಡೆಯುವ ಕಥೆ. ಆಗ ಆಂಧ್ರ ಮತ್ತು ತೆಲಂಗಾಣ ಎರಡೂ ಸೇರಿ ಒಂದೇ ರಾಜ್ಯವಾಗಿದ್ದ ಸಂದರ್ಭ. ಒಟ್ಟು ಆಂಧ್ರದ ಕಿಂಗ್ ಎಂದು ಜನಪ್ರಿಯನಾದ ಟಾಲಿವುಡ್ ಸ್ಟಾರ್ ಹಿನ್ನೆಲೆಯಲ್ಲಿ ಮೂಡಿ‌ ಬಂದಿರುವ ಕಥೆ ಇದು. ಆ ಸ್ಟಾರ್ ಸೂರ್ಯಕುಮಾರ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ.

ಅದು ಸೂರ್ಯ ಕುಮಾರ್ ನಟನೆಯ 100ನೇ ಚಿತ್ರದ ಶೂಟಿಂಗ್ ಸಂದರ್ಭ. ಆದರೆ ನಿರ್ಮಾಪಕ‌ ಆ ಚಿತ್ರವನ್ನು ಅರ್ಧದಲ್ಲೇ ಕೈ ಬಿಡುವ ನಿರ್ಧಾರ ಮಾಡಿರುವುದಾಗಿ ಹೇಳುತ್ತಾರೆ.‌ ಕಾರಣ ಚಿತ್ರದ ಬಜೆಟ್ ಹೆಚ್ಚಾಗುತ್ತಾ ಹೋಗಿದೆ. ಸೂರ್ಯ ಕುಮಾರ್ ನಟನೆಯಲ್ಲಿ ತೆರೆಕಂಡ ಈ ಹಿಂದಿನ 9 ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿರುತ್ತವೆ. ಹೀಗಾಗಿ ನಿರ್ಮಾಪಕರಿಂದ ಚಿತ್ರಕ್ಕೆ ಬಜೆಟ್ ಹೊಂದಿಸಲು ಸಾಧ್ಯವಾಗುವುದಿಲ್ಲ. ನೂರನೇ ಚಿತ್ರ‌ ಪೂರ್ತಿಯಾಗಲು ಮೂರು ಕೋಟಿ ರೂಪಾಯಿ ಬೇಕಾಗಿರುತ್ತದೆ. ಆದರೆ ವ್ಯಾಪಾರವಾಗದ ಸಿನಿಮಾಗೆ ಮೂರು ಕೋಟಿ ನೀಡಲು ಯಾರೂ ಸಿದ್ಧರಿರುವುದಿಲ್ಲ.‌ ಮೂರು ಕೋಟಿಗಾಗಿ ಪರಿತಪಿಸುವ ಆಂಧ್ರ ಕಿಂಗ್ ನ ಬ್ಯಾಂಕ್ ಅಕೌಂಟ್ ಗೆ 3ಕೋಟಿ ರೂಪಾಯಿಗಳ ಮೊತ್ತ ಜಮಾ ಆಗುತ್ತದೆ. ಅದು ಒಬ್ಬ ಅಭಿಮಾನಿ ಹಾಕಿದ್ದಾನೆ ಎನ್ನುವ ಅರಿವಾದಾಗ ಆ ಅಭಿಮಾನಿಯ ಬಗ್ಗೆ ತಿಳಿಯಲು ಆಂಧ್ರಕಿಂಗ್ ಮುಂದಾಗುತ್ತಾನೆ. ಆಗ ಬಯಲಾಗುವ ಅಭಿಮಾನಿಯೇ ನಿಜವಾದ ಆಂಧ್ರಕಿಂಗ್ ಎನ್ನುವ ಹಾಗೆ ಚಿತ್ರಕಥೆ ಸಾಗುತ್ತದೆ.

ಚಿತ್ರದಲ್ಲಿ ರಿಯಲ್ ಸ್ಟಾರ್ ಹೇಗಿದ್ದಾರೆ?

ಈ ಸಿನಿಮಾದಲ್ಲಿ ಉಪೇಂದ್ರ ಒಂದೆರಡು ಅವಾರ್ಡ್ ಪಡೆಯುವ ದೃಶ್ಯಗಳನ್ನು ತೋರಿಸಲಾಗಿದೆ. ಅದು ಫ್ಲ್ಯಾಶ್‌‌‌ ಬ್ಯಾಕ್ ದೃಶ್ಯ ಎನ್ನುವ ಕಾರಣಕ್ಕೋ, ವೇದಿಕೆ ಕಾರ್ಯಕ್ರಮ ಎನ್ನುವ ಕಾರಣಕ್ಕೋ ಗೊತ್ತಿಲ್ಲ, ಉಪೇಂದ್ರರನ್ನು ಯುವತ್ವದಿಂದ, ಆಕರ್ಷಕವಾಗಿ ತೋರಿಸಲಾಗಿದೆ. ಇವೆರಡು ದೃಶ್ಯಗಳನ್ನು ಹೊರತು ಪಡಿಸಿ ಉಳಿದ ದೃಶ್ಯಗಳಲ್ಲಿ ಉಪೇಂದ್ರ ತೀರ ಡಲ್ ಆಗಿದ್ದಾರೆ. ಒಬ್ಬ ಸ್ಟಾರ್ ನಟನ ಬಗ್ಗೆ ಹೇಳುವ ಕಥೆಯಲ್ಲಿ ಆತನನ್ನು ಹೇಗೆ ತೋರಿಸಬೇಕು ಎಂದೇ ಯೋಚಿಸದ ಹಾಗಿದೆ. ಕೆಲವೊಂದು ದೃಶ್ಯಗಳಲ್ಲಿ ಸ್ವತಃ ಉಪೇಂದ್ರ ಮೇಕಪ್ ಇರದೆ ಎದುರು ಬಂದು ನಿಂತರೂ ಅಷ್ಟೊಂದು ಕೆಟ್ಟದಾಗಿ ಕಾಣಲಾರರು ಅನಿಸುತ್ತದೆ. ಅದರಲ್ಲೂ ಅಭಿಮಾನಿ ಮತ್ತು ಸ್ಟಾರ್ ನ‌ ಮೊದಲ ಭೇಟಿಯಲ್ಲಿ ಪರಿಸ್ಥಿತಿಯ ಹಿನ್ನೆಲೆ ಅದೇನೇ ಇದ್ದರೂ ಸ್ಟಾರ್ ನಟನ ಪ್ರಭಾವಳಿ ಎತ್ತಿ ತೋರಿಸಲೇಬೇಕಾದ ಅಗತ್ಯ ಖಂಡಿತವಾಗಿ ಇತ್ತು. ಆದರೆ ಉಪ್ಪಿಯ ಅವತಾರ ರಕ್ತ ಕಣ್ಣೀರು ಮೋಹನನ್ನು ನೆನಪಿಸುತ್ತದೆ! ಅದು ಕೂಡ ಗ್ಲಾಮರ್ ಗೆ ಹೆಸರಾದ ಟಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ ನಟನನ್ನು ಹೇಗೆ ತೋರಿಸಬೇಕು ಎನ್ನುವ ಪ್ರಯತ್ನ ನಡೆಯದೇ ಹೋಗಿರುವುದು ವಿಪರ್ಯಾಸವೇ ಸರಿ. ಇಷ್ಟಕ್ಕೂ ಸೂರ್ಯಕುಮಾರ್ ಗ್ಲಾಮರ್ ಇಲ್ಲದ ತಾರೆಯಂತೂ ಅಲ್ಲ. ಅದಕ್ಕೆ ಸಾಕ್ಷಿಯಾಗಿ ರಾಮ್ ಪೋತಿನೇನಿ " ನಿಮ್ಮ ಕೈ ಬೆರಳುಗಳು ಮೃದು ಅಂತ ಕೇಳಿದ್ದೆ.‌ ಮುಟ್ಟಿದಾಗ ನಿಜಕ್ಕೂ ಅದು ಎಷ್ಟು ಸತ್ಯ ಎಂದು ಗೊತ್ತಾಯಿತು" ಎನ್ನುವ ಡೈಲಾಗ್ ಹೇಳುತ್ತಾರೆ! ನಿಜಕ್ಕೂ ಈ ಸಂಭಾಷಣೆಯನ್ನು ಯಾವ ಕಾರಣಕ್ಕೆ ಬಳಸಿದ್ದಾರೆ ಎನ್ನುವುದೇ ಗೊತ್ತಾಗುವುದಿಲ್ಲ. ಬಹುಶಃ ಮೆತ್ತಗಿನ ಬೆರಳುಗಳ ಇನ್ನಾವುದೋ ಸ್ಟಾರ್ ನನ್ನು ಈ ಪಾತ್ರದಲ್ಲಿ ಕಲ್ಪಿಸಿಕೊಂಡು ಬರೆದಿರುವ ಸಾಧ್ಯತೆಯೂ ಇದೆ. ಆದರೆ ಉಪ್ಪಿಯನ್ನಂತೂ ಅಷ್ಟೊಂದು ಗ್ಲಾಮರಸ್ಸಾಗಿ ತೋರಿಸಿಲ್ಲ ಎನ್ನುವುದು ಸತ್ಯ.

ರಾಮ್ ಪೋತಿನೇನಿ ಬಿಲ್ಡಪ್ ಹೇಗಿದೆ?

ಒಂದು ಕಡೆ ಸ್ಟಾರ್ ನಟನ ಪಾತ್ರವನ್ನು ಸಹತೆಯ ಹೆಸರಲ್ಲಿ ಡಿಗ್ಲಾಮರೈಸ್ ಮಾಡಿರುವ ನಿರ್ದೇಶಕ ಮತ್ತೊಂದೆಡೆ ಸಾಮಾನ್ಯ ಅಭಿಮಾನಿಯಾದ ರಾಮ್ ಪೋತಿನೇನಿಯ ಪಾತ್ರವನ್ನು ಯಾವ ಸ್ಟಾರ್ ಗೂ ಕಡಿಮೆ ಇಲ್ಲದಂತೆ ತೋರಿಸಿದ್ದಾರೆ. ಹಳ್ಳಿ ಹುಡುಗನ ಪಾತ್ರವಾದರೂ ತನ್ನ ಸ್ಟೈಲ್, ಡೈಲಾಗ್ ನಿಂದಲೇ ಸಿಳ್ಳೆಗಿಟ್ಟಿಸುವಂತೆ ಮಾಡಿದ್ದಾರೆ.

ಪರದೆ ಮೇಲಿನ ಸ್ಟಾರ್ ಇಮೇಜ್ ಗೆ ಪರವಶನಾಗಿ ಥಿಯೇಟರ್ ಮುಂದೆ ಕಟೌಟ್ ಹಾಕಿ ಜೈಕಾರ ಹೇಳುವವನು ಅಭಿಮಾನಿ.‌ ಇಲ್ಲಿಯ ಅಭಿಮಾನಿ ಕೂಡ ಇಂಥ ಹುಚ್ಚಾಟಗಳಿಂದ ವಿಮುಕ್ತನಾಗಿರುವವನು ಖಂಡಿತ ಅಲ್ಲ. ಆದರೆ ತನ್ನ ಅಭಿಮಾನದ ಸ್ಟಾರ್ ಮೊದಲ ಬಾರಿ ನೇರವಾಗಿ ಎದುರಾದಾಗ ಮಾಡಬಹುದಾದ ಸಾಮಾನ್ಯ ವರ್ತನೆಯನ್ನು ಅರ್ಥ ಮಾಡಿಕೊಂಡಂತಿಲ್ಲ. ಅಭಿಮಾನಿಯ ಪಾಲಿನ ದೇವರಾದ ಸ್ಟಾರ್ ಎದುರಾದಾಗ ಮೊದಲು ಕಾಲು ಹಿಡಿಯುತ್ತಾನೆ‌ ಎನ್ನುವುದನ್ನು ಬೇಕೆಂದಲೇ ಮರೆತಿದ್ದಾನೆ. ಉಪೇಂದ್ರ ಅವರೆದುರು ರಾಮ್ ಪೋತಿನೇನಿ ಇಮೇಜ್ ತಗ್ಗಬಾರದು ಎನ್ನುವ ಕಾರಣಕ್ಕಾಗಿಯೇ ಇಂಥದೊಂದು ದೃಶ್ಯವನ್ನು ತೆಗೆದಿಲ್ಲ ಎನ್ನುವುದನ್ನು ಎಂಥವರೂ ಅರ್ಥಮಾಡಿಕೊಳ್ಳಬಹುದು. ಪ್ರಚಾರದ ಸಂದರ್ಭದಲ್ಲಿ ಕನ್ನಡದ ಅಭಿಮಾನಿಗಳಿಗಾಗಿ "ಆ ರೀತಿ, ಈ ರೀತಿ" ಬದಲಾವಣೆ ಮಾಡಿದ್ದಾಗಿ‌ ಕೊಚ್ಚಿಕೊಳ್ಳುವ ಈ ಸಿನಿಮಾದ ಮಂದಿ ಕನ್ನಡದ ರಿಯಲ್ ಸ್ಟಾರ್ ಇಮೇಜ್ ಗೆ ತಕ್ಕ‌ಹಾಗೆ ಇಡಬಹುದಾದ ದೃಶ್ಯವನ್ನೇ ಇಡುವ ಮನಸು ಮಾಡಿಲ್ಲ.

ನೂರನೇ ಸಿನಿಮಾ‌ ಮಾಡುತ್ತಿರುವ ಸ್ಟಾರ್ ನಾಯಕನ ಚಿತ್ರ ಮೂರು ಕೋಟಿ ಕೊರತೆಯಿಂದ ಸ್ಥಗಿತಗೊಂಡರೆ ಆ ಸುದ್ದಿಯನ್ನು ಅಡಗಿಸಲು ಸ್ಟಾರ್ ಮಾತ್ರವಲ್ಲ, ಇಡೀ ಇಂಡಸ್ಟ್ರಿಯೇ ಸಹಕಾರ ನೀಡುತ್ತದೆ. ಅಂಥದ್ದರಲ್ಲಿ ಮೂರು ಕೋಟಿ ಕೊರತೆಯಾದ ವಿಚಾರವನ್ನು ಇಲ್ಲಿ ನಾಯಕನೇ ಟಾಮ್ ಟಾಮ್ ಮಾಡುತ್ತಾ ಊರೂರು ತಿರುಗುತ್ತಾನೆ. ಒಂದಿಡೀ ಊರಿನ ಜನತೆಯ ಮುಂದೆ ಅಭಿಮಾನಿಯಲ್ಲಿ ಹೇಳಿಕೊಳ್ಳುತ್ತಾನೆ. ಇವೆಲ್ಲವೂ ಕೂಡ ರಾಮ್ ಪೋತಿನೇನಿ ಪಾತ್ರದ ಬಿಲ್ಡಪ್ ಗೆಂದೇ ಕಟ್ಟಲಾದ ದೃಶ್ಯಗಳಾಗಿವೆ. ಇನ್ನಷ್ಟು ಮುಂದೆ ಹೋಗಿ ತನಗೆ ಈ ಸಹಾಯ ಮಾಡಿದ ಅಭಿಮಾನಿಯ ಕಾಲಿಗೆ ಸ್ಟಾರ್ ಬೀಳುವ ದೃಶ್ಯವೊಂದನ್ನು ಮಾತ್ರ ತೆಗೆಸಿಲ್ಲ ಎನ್ನುವುದೇ ಉಪ್ಪಿಯ ಮಾಸ್ ಅಭಿಮಾನಿಗಳ ಪಾಲಿನ ಅದೃಷ್ಟ ಎನ್ನಬಹುದು.

ಕಲಾವಿದರ ನಟನೆ ಹೇಗಿದೆ?

ಕೆಲವೇ ದೃಶ್ಯಗಳಲ್ಲಿ ಬಂದು ಹೋದರೂ ಕೂಡ ಉಪೇಂದ್ರ ನೀಡಿರುವ ನಟನೆ ಮನಮುಟ್ಟುತ್ತದೆ. ಹಳ್ಳಿ ಹುಡುಗನಾಗಿ, ಪ್ರೇಮಿಯಾಗಿ ರಾಮ್ ಪೋತಿನೇನಿ ಕೂಡ ಮನಗೆಲ್ಲುತ್ತಾರೆ. ರಾಮ್ ಪೋತಿನೇನಿ ಪ್ರೇಯಸಿ ಪಾತ್ರದಲ್ಲಿ ಭಾಗ್ಯಶ್ರೀ ಬೋರ್ಸೆ ಒಂದೆಡೆ ಗ್ರಾಮೀಣ ಸುಂದರಿ. ಅದೇ ಸಂದರ್ಭದಲ್ಲಿ ನಾಯಕನ ತುಟಿಗೆ ಮೈಚಳಿ ಬಿಟ್ಟು ಮುತ್ತಿಡುವ ಮೋಹಕ ನಾರಿ.

ಸಾಗರ್ ತಂದೆಯಾಗಿ ರಾವ್ ರಮೇಶ್ ಎಂದಿನಂತೆ ಪಾತ್ರಕ್ಕೆ ತಕ್ಕ ನಟನೆ ನೀಡಿದ್ದಾರೆ. ಪುತ್ರ ವಾತ್ಸಲ್ಯ ತುಂಬಿದ ಹಳ್ಳಿಯ ವ್ಯಕ್ತಿಯಾಗಿದ್ದಾರೆ. ತಾಯಿಯಾಗಿ ತುಳಸಿ ಶಿವಮಣಿ ಮಾತೃಭಾವಗಳಿಗೆ ಕನ್ನಡಿ ಹಿಡಿದಿದ್ದಾರೆ. ನಾಯಕಿಯ ತಂದೆಯಾಗಿ ಮುರಳಿಶರ್ಮ ರಾಮ್ ಪೋತಿನೇನಿ ಬಿಲ್ಡಪ್ ಮುಂದೆ ಸೊರಗಿದ್ದಾರೆ.

ಚಿತ್ರದ ಮೇಕಿಂಗ್ ಹೇಗಿದೆ?

2002ರ ಕಾಲಘಟ್ಟದಲ್ಲಿ ನಡೆಯುವ ಕಥೆಗೆ ಪೂರಕವಾದ ದೃಶ್ಯಗಳನ್ನೇ ಚಿತ್ರದಲ್ಲಿ ತೋರಿಸಲಾಗಿದೆ. ಎಲ್ಲಿಯೂ ಮೊಬೈಲ್ ಫೋನ್ ಬಳಕೆ ಮಾಡಿಲ್ಲ.

ಅಂದಿನ‌ ಕಾಲದ ಸಿಂಗಲ್ ಥಿಯೇಟರ್ ಸೌಂದರ್ಯ, ಅದರ ಮಾಲಕನ ದರ್ಪ, ಥಿಯೇಟರ್ ಮಾಲಕನ ಮಗಳ ಪ್ರೇಮ ಎಲ್ಲವೂ ಕಣ್ಣಿಗೆ ರಾಚುವಂತಿದೆ. ತೊಂಬತ್ತರ ದಶಕದ ಅಭಿಮಾನಿಯ ಅಭಿಮಾನ, ಆಡಿಯೋ ಕ್ಯಾಸೆಟ್ ಸಂಗ್ರಹ ಮೊದಲಾದವುಗಳನ್ನು ನೈಜವಾಗಿ ತೋರಿಸಲಾಗಿದೆ. ವಿವೇಕ್ ಮೆರ್ವಿನ್ ಸಂಗೀತದಲ್ಲಿ ಹಾಡುಗಳು ಆಕರ್ಷಕವಾಗಿ ಮೂಡಿ ಬಂದಿವೆ.‌ ಆದರೆ ರಾಮ್ ಪೋತಿನೇನಿಗೆ ನೀಡಲಾಗಿರುವ ಥೀಮ್ ಮ್ಯೂಸಿಕ್ ನಲ್ಲಿ ತಮಿಳಿನ 'ಮಾಸ್ಟರ್' ಚಿತ್ರದಲ್ಲಿ ಅನಿರುದ್ಧ್ ನೀಡಿದ 'ವಾತಿ ಕಮಿಂಗ್' ಛಾಯೆ ಕಾಣುತ್ತದೆ. ಸೂರ್ಯ ಮತ್ತು ಸಾಗರ ಎಂದಿಗೂ ಸಂಗಮಿಸುವುದಿಲ್ಲ.‌ ಆದರೆ ಸಂಗಮಿಸಿದಂತೆ ಕಾಣುವ ದೃಶ್ಯವೇ ಸುಂದರ ಎನ್ನುವ ಸಂಭಾಷಣೆಗಳು ದೃಶ್ಯಗಳನ್ನು ಇನ್ನಷ್ಟು ಅದ್ಭುತಗೊಳಿಸಿವೆ.

ಇಷ್ಟಕ್ಕೂ‌ ಈ ಕಥೆಯಲ್ಲಿ ಆರಂಭದಿಂದಲೂ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವಂಥ ತಿರುವುಗಳೇನೂ ಇಲ್ಲ. ಆದರೂ ಏನೋ ಇದೆ ಎಂದು ನೋಡಿಸಿಕೊಂಡು ಹೋಗುವಂತೆ ಮಾಡಿರುವುದು ಚಿತ್ರದ ಮೇಕಿಂಗ್ ಹೊರತು ಬೇರೇನಲ್ಲ.

Read More
Next Story