ವಾರ್ನರ್ ಅಷ್ಟೇ; ಇನ್ನೇನಿದ್ದರೂ ‘UI’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ …
x

ವಾರ್ನರ್ ಅಷ್ಟೇ; ಇನ್ನೇನಿದ್ದರೂ ‘UI’ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ …


ಉಪೇಂದ್ರ ಅಭಿನಯದ ‘UI’ ಚಿತ್ರವು ಡಿ. 20ರಂದು ಪ್ಯಾನ್‍ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಬೇರೆ ರಾಜ್ಯಗಳ ಮತ್ತು ಭಾಷೆಗಳ ಪ್ರೇಕ್ಷಕರ ವಲಯದಲ್ಲೂ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ. ಅದಕ್ಕೆ ಪೂರಕವಾಗಿ ಸೋಮವಾರ ಬೆಳಿಗ್ಗೆ, ಚಿತ್ರದ ವಾರ್ನರ್‍ ಬಿಡುಗಡೆಯಾಗಿದೆ. ಇದರಲ್ಲಿ ಚಿತ್ರದಲ್ಲೇನಿದೆ ಎಂಬ ವಿಷಯನ್ನು ಉಪೇಂದ್ರ ಬಿಟ್ಟುಕೊಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ . ‘ಸೂಪರ್‍’ ಚಿತ್ರದಲ್ಲಿ ಉಪೇಂದ್ರ 2030ರಲ್ಲಿ ಹೇಗಿರುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದರು. ಈಗ ‘UI’ನಲ್ಲಿ ಅವರು 2040ರಲ್ಲಿ ಪರಿಸ್ಥಿತಿ ಏನಾಗಬಹುದು ಎಂದು ತೋರಿಸುವ ಯತ್ನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಚಿತ್ರದ ಮೂಲಕ 2040ರ ಹೊತ್ತಿಗೆ ಏನಾಗಬಹುದು ಎಂದು ಸಾಂಕೇತಿಕವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇಡೀ ಚಿತ್ರದಲ್ಲಿ ರೂಪಕಗಳು ಜಾಸ್ತಿ ಇರುತ್ತವೆ. ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ಅದರ ಜೊತೆಗೆ ಹಲವು ವಿಷಯಗಳನ್ನ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದರು.

ವಾರ್ನರ್ ಏನೋ ಆಯ್ತು, ಚಿತ್ರದ ಟ್ರೇಲರ್‍ ಯಾವಾಗ ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಉತ್ತರಿಸುವ ಉಪೇಂದ್ರ, ಟ್ರೇಲರ್ ತೋರಿಸುವುದಿಲ್ಲ, ಇನ್ನೇನಿದ್ದರೂ ಚಿತ್ರಮಂದಿರದಲ್ಲೇ ನೋಡಿ ಎನ್ನುತ್ತಾರೆ. ‘ನನಗೆ ಚಿತ್ರ ಬಿಡುಗಡೆಗೂ ಮೊದಲು ಚಿತ್ರದ ಯಾವ ದೃಶ್ಯವನ್ನೂ ತೋರಿಸಬಾರದು ಎಂದಾಸೆ. ಆದರೆ, ಪ್ರೇಕ್ಷಕರಿಗೆ ಚಿತ್ರವನ್ನು ಮುಟ್ಟಿಸುವ ನಿಟ್ಟಿನಲ್ಲಿ ಅದು ಸಹಜ. ನಿರ್ದೇಶಕನಾಗಿ, ಮುಂದಿನ ಚಿತ್ರದಲ್ಲಿ ಒಂದು ಸಣ್ಣ ತುಣುಕು ಸಹ ತೋರಿಸದೆ, ಹಿಟ್ ಮಾಡಿ ತೋರಿಸಬೇಕು ಎಂಬುದು ನನ್ನಾಸೆ. ಎಲ್ಲರೂ ಟೀಸರ್‍, ಟ್ರೇಲರ್ ತೋರಿಸಿ ಇದೊಂದು ಟ್ರೆಂಡ್‍ ಆಗಿದೆ. ಅದು ಸರಿಯೋ, ತಪ್ಪೋ ಗೊತ್ತಿಲ್ಲ. ಅದನ್ನು ಒಡೆದೂ ಬೇರೇನೋ ಮಾಡಬಹುದು. ಇಲ್ಲಿ ಹಲವು ವಿಷಯಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಕೆಲವು ವಿಷಯಗಳನ್ನು ಮಾತ್ರ ತೋರಿಸಿದ್ದೇವೆ. ಇನ್ನೇನೂ ತೋರಿಸುವುದಿಲ್ಲ. ಎಲ್ಲವನ್ನೂ ಸಿನಿಮಾದಲ್ಲೇ ನೋಡಿ’ ಎಂದರು.

‘UI’ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್‍ ಎಂಟರ್‍ಟೈನರ್ಸ್‍ ಸಂಸ್ಥೆಗಳಡಿ ಜಿ. ಮನೋಹರನ್‍ ಮತ್ತು ಶ್ರೀಕಾಂತ್‍ ಕೆ.ಪಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಉಪೇಂದ್ರ ಅವರೇ ಹೊತ್ತಿದ್ದು, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

Read More
Next Story