‘UI’ ಮತ್ತು ‘ಮ್ಯಾಕ್ಸ್’ ಭಯ; 2025ಕ್ಕೆ ಮುಂದೂಡಲ್ಪಟ್ಟ ಹಲವು ಚಿತ್ರಗಳು
ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನ ಮೂರನೇ ಮತ್ತು ನಾಲ್ಕನೆಯ ಶುಕ್ರವಾರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದ ಹಲವ ಚಿತ್ರಗಳು, ಇದೀಗ ಮುಂದಿನ ವರ್ಷಕ್ಕೆ ಮುಂದೂಲ್ಪಟ್ಟಿವೆ.
ವರ್ಷ ಮುಗಿಯುವುದಕ್ಕೆ ಇನ್ನು 20 ದಿನಗಳು ಮಾತ್ರ ಇವೆ. 2024 ಕೊನೆಯಾಗುವಷ್ಟರಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಅಂದುಕೊಂಡವರಿಗೆ ದೊಡ್ಡ ನಿರಾಸೆ ಕಾಡಿದೆ. ಅದಕ್ಕೆ ಕಾರಣ, ಉಪೇಂದ್ರ ನಿರ್ದೇಶನದ ‘UI’ ಮತ್ತು ಸುದೀಪ್ ಅಭಿನಯದ ‘ಮ್ಯಾಕ್ಸ್’. ಈ ಎರಡು ಚಿತ್ರಗಳು ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿರುವ ಹಿನ್ನೆಲೆಯಲ್ಲಿ. ಡಿಸೆಂಬರ್‌ನ ಮೂರನೇ ಮತ್ತು ನಾಲ್ಕನೆಯ ಶುಕ್ರವಾರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದ ಹಲವ ಚಿತ್ರಗಳು, ಇದೀಗ ಮುಂದಿನ ವರ್ಷಕ್ಕೆ ಮುಂದೂಲ್ಪಟ್ಟಿವೆ.
2024ರ ಕೊನೆಯ ವಾರ ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಆದರೆ, ‘UI’ ಮತ್ತು ‘ಮ್ಯಾಕ್ಸ್’ ಚಿತ್ರದ ಭಯದಿಂದಾಗಿ, ಆ ಚಿತ್ರಗಳೆಲ್ಲವೂ ಮುಂದಿನ ವರ್ಷದಲ್ಲಿ ಬಿಡುಗಡೆಯಾಗುತ್ತಿವೆ. ಹಾಗಂತ, ದೊಡ್ಡ ಚಿತ್ರಗಳ ಭಯ ಅಥವಾ ಒತ್ತಡದಿಂದಾಗಿ ಚಿತ್ರ ಮುಂದೂಡುತ್ತಿರುವುದಾಗಿ ಯಾರೂ ಹೇಳದಿದ್ದರೂ, ಬೇರೆ ನೆಪಗಳನ್ನು ಒಡ್ಡಿ ಹಲವರು ತಮ್ಮ ಚಿತ್ರಗಳನ್ನು ಮುಂದೂಡುತ್ತಿದ್ದಾರೆ.
ಮೊದಲು ಕ್ರಿಸ್ಮಸ್‍ಗೆ ಇದ್ದಿದ್ದು ಒಂದೇ ಚಿತ್ರ
ಕ್ರಿಸ್ಮಸ್ ವೇಳೆಗೆ ‘ಡೆವಿಲ್’ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ದರ್ಶನ್, ಕೆಲವು ತಿಂಗಳುಗಳ ಹಿಂದೆಯೇ ಹೇಳಿದ್ದರು. ಹಾಗೆಯೇ, ಡಿಸೆಂಬರ್‌ನಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ‘ಜೋಗಿ’ ಪ್ರೇಮ್ ಸಹ ಹೇಳಿಕೊಂಡಿದ್ದರು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರಿಂದ, ‘ಡೆವಿಲ್’ ಚಿತ್ರದ ಚಿತ್ರೀಕರಣ ನಿಂತು ಹೋಗಿದೆ. ಹಾಗೆಯೇ, ‘ಕೆಡಿ – ದಿ ಡೆವಿಲ್’ ಚಿತ್ರದ ಚಿತ್ರೀಕರಣ ಇನ್ನೂ ಮುಗಿಯದ ಕಾರಣ ಆ ಚಿತ್ರವೇನಿದ್ದರೂ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಯಾವಾಗ, ವರ್ಷದ ಕೊನೆಯಲ್ಲಿ ಯಾವ ದೊಡ್ಡ ಚಿತ್ರವೂ ಬಿಡುಗಡೆಯಾಗುವುದಿಲ್ಲ ಎಂಬುದು ಸ್ಪಷ್ಟವಾಯಿತೋ, ಆಗ ಒಂದಿಷ್ಟು ಜನ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದರು. ರಜೆಯ ಸಂದರ್ಭದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಮುಂದಾದರು.
ಡಿ. 27ಕ್ಕೆ ಎಂಟು ಚಿತ್ರಗಳು ಕ್ಯೂನಲ್ಲಿ
ಇದರಿಂದಾಗಿ ಡಿ. 27ರಂದು ಬಿಡುಗಡೆಯಾಗುವುದಕ್ಕೆ ರಾಜವರ್ಧನ್ ಅಭಿನಯದ ‘ಗಜರಾಮ, ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’, ನಾಗಭೂಷಣ್ ಅಭಿನಯದ ‘ವಿದ್ಯಾಪತಿ’, ಶರಣ್ ಅಭಿನಯದ ‘ಛೂ ಮಂಥರ್’, ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’, ಜೆಪಿ ಅಭಿನಯದ ‘ಭಗೀರಥ’, ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’, ‘ಪಾರು ಪಾರ್ವತಿ’ ಮುಂತಾದ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಆಯಾ ಚಿತ್ರತಂಡಗಳು ಸಿದ್ಧತೆ ನಡೆಸಿದವು. ‘ಗಜರಾಮ’, ‘ಭಗೀರಥ’, ‘ರುದ್ರ ಗರುಡ ಪುರಾಣ’ ಮುಂತಾದ ಚಿತ್ರತಂಡಗಳು ಬಿಡುಗಡೆಯ ದಿನಾಂಕವನ್ನೂ ಘೋಷಿಸಿದವು. ಇನ್ನೂ ಕೆಲವರು ಸಮಯ ನೋಡಿಕೊಂಡು ಮುಂದುವರೆಯುವುದಕ್ಕಾಗಿ ಕಾದರು.
ಬೇಗ ಮಾಯವಾಗುವ ಭಯದಲ್ಲಿ ಮುಂದೂಡಿಕೆ
ಹೀಗಿರುವಾಗಲೇ, ‘UI’ ಚಿತ್ರದ ಬಿಡುಡೆ ಡಿ. 20ಕ್ಕೆ ಘೋಷಣೆಯಾಯಿತು. ಅದಾಗಿ ಒಂದು ವಾರಕ್ಕೆ ತಮ್ಮ ಚಿತ್ರಗಳ ಬಿಡುಗಡೆಯಾಗಿದ್ದರಿಂದ ಬೇರೆ ಚಿತ್ರತಂಡಗಳು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಯಾವಾಗ ಡಿ 25ರಂದು ಚಿತ್ರ ಬಿಡುಗಡೆ ಮಾಡುವುದಾಗಿ ‘ಮ್ಯಾಕ್ಸ್’ ತಂಡ ಘೋಷಿಸಿತೋ, ಅಲ್ಲಿಗೆ ಎಲ್ಲರ ಯೋಚನೆ ತಲೆ ಕೆಳಗಾದವು. ಎರಡು ದಿನಗಳ ಅಂತರದಲ್ಲಿ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾದರೆ, ಆಗ ಬಹುತೇಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಬಂದು ಬಹಳ ಬೇಗ ಮಾಯವಾಗಬೇಕಾಗುತ್ತದೆ ಎಂಬ ಭಯಕ್ಕೆ ಹೆದರಿ, ಬಹುತೇಕ ಚಿತ್ರಗಳು ಮುಂದಕ್ಕೆ ಹೋಗಿವೆ.
ಈ ಎರಡು ಚಿತ್ರಗಳು ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿರುವ ಹಿನ್ನೆಲೆಯಲ್ಲಿ. ಡಿಸೆಂಬರ್‌ನ ಮೂರನೇ ಮತ್ತು ನಾಲ್ಕನೆಯ ಶುಕ್ರವಾರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದ ಹಲವ ಚಿತ್ರಗಳು, ಇದೀಗ ಮುಂದಿನ ವರ್ಷಕ್ಕೆ ಮುಂದೂಲ್ಪಟ್ಟಿವೆ.ಡಿಸೆಂಬರ್ರ್ನದ ಜನವರಿಗೆ ಚಿತ್ರಗಳ ಮುಂದೂಡಿಕೆ
ಈಗಾಗಲೇ ‘ರುದ್ರ ಗರುಡ ಪುರಾಣ’ ಚಿತ್ರವನ್ನು ಜನವರಿ 24ಕ್ಕೆ ಮುಂದೂಡಲಾಗಿದೆ, ಶರಣ್ ಅಭಿನಯದ ‘ಛೂ ಮಂತರ್’ ಚಿತ್ರವನ್ನು ಜನವರಿ 10ಕ್ಕೆ ಮುಂದೂಡಲಾಗಿದೆ. ರಾಜವರ್ಧನ್ ಅಭಿನಯದ ‘ಗಜರಾಮ’, ಗುರುನಂದನ್ ಅಭಿನಯದ ‘ರಾಜು ಜೇಮ್ಸ್ ಬಾಂಡ್’, ‘ಭಗೀರಥ’ ಮತ್ತು ‘ಪಾರು ಪಾರ್ವತಿ’ ಚಿತ್ರಗಳು ಮುಂದಕ್ಕೆ ಹೋಗಿರುವ ಸುದ್ದಿ ಇದೆ. ‘ರಾಕ್ಷಸ’ ಮತ್ತು ‘ವಿದ್ಯಾಪತಿ’ ಚಿತ್ರಗಳ ಬಿಡುಗಡೆ ದಿನಾಂಕವನ್ನು ಮೊದಲು ಘೋಷಿಸದ ಕಾರಣ ಯಾವುದೇ ಸಮಸ್ಯೆ ಇಲ್ಲ.
‘UI’ ಮತ್ತು ‘ಮ್ಯಾಕ್ಸ್’ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತದೆ ಎಂದು ಸುದ್ದಿಯಾದಾಗ, ಇದು ಕ್ಲಾಶ್ ಅಲ್ಲ, ಎರಡು ದೊಡ್ಡ ಚಿತ್ರಗಳ ಬಿಡುಗಡೆಯಿಂದ ಎರಡೂ ಚಿತ್ರಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದೆಲ್ಲಾ ಉಪೇಂದ್ರ ಮತ್ತು ಸುದೀಪ್ ಇಬ್ಬರೂ ಹೇಳಿಕೊಂಡಿದ್ದರು. ಎರಡೂ ಚಿತ್ರಗಳಿಗೆ ಪರಸ್ಪರ ಸಮಸ್ಯೆ ಇರದಿರಬಹುದು. ಆದರೆ, ಬೇರೆ ಚಿತ್ರಗಳಿಗೆ ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಅವೆಲ್ಲಾ ಚಿತ್ರಗಳು ಮುಂದಿನ ವರ್ಷಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.