
ಉದಯನಿಧಿ ದುಬೈನಲ್ಲಿ ನನಗಾಗಿ ಮನೆ ಖರೀದಿಸಿಲ್ಲ: ನಟಿ ನಿವೇತಾ ಪೇತುರಾಜ್
ಉದಯನಿಧಿ ತಮಗೋಸ್ಕರ ಅದ್ಧೂರಿ ಮನೆ ಖರೀದಿಸಿಕೊಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ನಟಿ ನಿವೇತಾ ಪೇತುರಾಜ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ನಿವೇತಾ ಅವರು ಮಂಗಳವಾರ (ಮಾರ್ಚ್ 5) ʻಸುಳ್ಳು ಸುದ್ದಿʼ ಯಿಂದ ತಾವು ಕೆಲವು ದಿನಗಳಿಂದ ʻತೀವ್ರವಾದ ಒತ್ತಡದಲ್ಲಿದ್ದೇನೆʼ ಎಂದು ಹೇಳಿದ್ದಾರೆ.
ರಾಜ್ಯ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರು ನಿವೇತಾ ಅವರಿಗೆ ದುಬೈನಲ್ಲಿ ಮನೆ ಖರೀದಿಸಿ ಕೊಟ್ಟಿದ್ದಾರೆ ಎಂದು ಯೂಟ್ಯೂಬರ್ 'ಸವುಕ್ಕು' ಶಂಕರ್ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
ಸರ್ಟಿಫೈಡ್ ಕಾರ್ ರೇಸರ್ ಆಗಿರುವ ನಿವೇತಾ ಅವರ ಕಾರಣದಿಂದಾಗಿ ಚೆನ್ನೈ ಫಾರ್ಮುಲಾ 4 ನೈಟ್ ರೇಸ್ ಅನ್ನು ಆಯೋಜಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವರದಿಯಾಗಿದೆ. ʻಚೆನ್ನೈನಲ್ಲಿ ಇಂತಹ ರೇಸ್ ನಡೆಯುತ್ತಿದೆ ಎಂದು ತನಗೆ ತಿಳಿದಿರಲಿಲ್ಲ́ ಎಂದು ನಿವೇತಾ ಹೇಳಿದ್ದಾರೆ.
ಎಕ್ಸ್ ನಲ್ಲಿ ನಿವೇತಾ ಬರಹ: 'ಟಿಕ್ ಟಿಕ್ ಟಿಕ್', 'ಸಂಗತಮಿಜಾನ್', 'ಒರು ನಾಲ್ ಕೂತು' ಮುಂತಾದ ಚಲನಚಿತ್ರಗಳಲ್ಲಿ ನಟಿಸಿರುವ ನಿವೇತಾ ಯಾವುದೇ ಹೆಸರನ್ನು ಹೇಳದೆ, ʻಇತ್ತೀಚೆಗೆ ನನ್ನ ಮೇಲೆ ಅದ್ದೂರಿಯಾಗಿ ಹಣ ಖರ್ಚು ಮಾಡಲಾಗಿದೆ ಎಂಬ ಸುದ್ದಿ ಹರಡಿದೆ. ನಾನು ಮೌನವಾಗಿರುತ್ತೇನೆ. ಏಕೆಂದರೆ, ಬುದ್ದಿಹೀನರಂತೆ ಮಾತನಾಡಿ ಹುಡುಗಿಯೊಬ್ಬಳ ಜೀವನವನ್ನು ಹಾಳುಮಾಡುವ ಮೊದಲು ಮಾಹಿತಿಯನ್ನು ಪರಿಶೀಲಿಸುವ ಮಾನವೀಯತೆಯನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆʼ.
ʻ ಕೆಲವು ದಿನಗಳಿಂದ ನನ್ನ ಕುಟುಂಬ ಮತ್ತು ನಾನು ತೀವ್ರ ಒತ್ತಡದಲ್ಲಿದ್ದೇವೆ. ನಾನು ಗೌರವಾನ್ವಿತ ಕುಟುಂಬದಿಂದ ಬಂದವಳು. 16 ವರ್ಷದಿಂದ ಆರ್ಥಿಕವಾಗಿ ಸ್ವತಂತ್ರ ಮತ್ತು ಸ್ಥಿರವಾಗಿದ್ದೇನೆ. ನಾವು 20 ವರ್ಷಗಳಿಂದ ದುಬೈನಲ್ಲಿದ್ದೇವೆ, ʼ ಎಂದು ಬರೆದಿದ್ದಾರೆ.
ʼಸಿನಿಮಾ ಇಂಡಸ್ಟ್ರಿಯಲ್ಲೂಅವಕಾಶ ನೀಡುವಂತೆ ಯಾವುದೇ ನಿರ್ಮಾಪಕ ಅಥವಾ ನಿರ್ದೇಶಕ ಅಥವಾ ನಾಯಕನನ್ನು ಕೇಳಿಲ್ಲ. ನಾನು 20 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದೇನೆʼ ಎಂದಿದ್ದಾರೆ.
ಕಾನೂನು ಕ್ರಮ ಕೈಗೊಳ್ಳುವುದಿಲ್ಲ: ʻನನ್ನ ಕುರಿತ ಯಾವುದೇ ಮಾಹಿತಿ ನಿಜವಲ್ಲ. 2002 ರಿಂದ ದುಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಿಮ್ಮ ಕುಟುಂಬದ ಯಾವುದೇ ಮಹಿಳೆಯಂತೆ ನಾನು ಕೂಡ ಗೌರವಯುತ ಮತ್ತು ಶಾಂತಿಯುತ ಜೀವನವನ್ನು ಬಯಸುತ್ತೇನೆ. ಪತ್ರಕರ್ತರು ಸುದ್ದಿಯನ್ನು ಪ್ರಕಟಿಸುವ ಮೊದಲು ಪರಿಶೀಲಿಸಿ ಎಂದು ವಿನಂತಿಸುತ್ತೇನೆ. ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುವುದಿಲ್ಲʼ ಎಂದು ಹೇಳಿದ್ದಾರೆ.