
ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ 'ರಾಕ್ಷಸ' ಫೆಬ್ರವರಿ 20 ರಿಂದ ಜೀ5 ನಲ್ಲಿ ಪ್ರಸಾರವಾಗಲಿದೆ.
Raakshasa Trailer| ಮಲಪ್ರಭಾ ನದಿ ತೀರದ ನಿಗೂಢ ಸಾವುಗಳ ಬೆನ್ನತ್ತಿದ ವಿಜಯ್ ರಾಘವೇಂದ್ರ
ನಟ ವಿಜಯ್ ರಾಘವೇಂದ್ರ ಅವರ ಚೊಚ್ಚಲ ವೆಬ್ ಸರಣಿ 'ರಾಕ್ಷಸ' ಫೆಬ್ರವರಿ 20 ರಿಂದ ಜೀ5 ನಲ್ಲಿ ಪ್ರಸಾರವಾಗಲಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ.
ಸ್ಯಾಂಡಲ್‌ವುಡ್ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಇದೀಗ ಡಿಜಿಟಲ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ನಟನೆಯ ಚೊಚ್ಚಲ ವೆಬ್ ಸರಣಿ 'ರಾಕ್ಷಸ' ಈಗ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಇದರ ಟ್ರೈಲರ್ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮತ್ತು ಭೀತಿಯನ್ನು ಮೂಡಿಸಿದೆ.
ಏನಿದೆ ಈ 'ರಾಕ್ಷಸ'ನ ಕಥೆಯಲ್ಲಿ?
ಉತ್ತರ ಕರ್ನಾಟಕದ ಗ್ರಾಮೀಣ ಭಾಗದ, ಅದರಲ್ಲೂ ಮಲಪ್ರಭಾ ನದಿಯ ದಂಡೆಯ ಹಿನ್ನೆಲೆಯಲ್ಲಿ ಈ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಸಾಗುತ್ತದೆ. ಸವದತ್ತಿಯ ಯಲ್ಲಮ್ಮನ ಗುಡಿಯ ಸಮೀಪ ಸರಣಿ ಮೊಸಳೆ ದಾಳಿಗಳು ನಡೆಯುತ್ತಿರುತ್ತವೆ. ಆದರೆ, ಈ ಸಾವುಗಳು ಕೇವಲ ಪ್ರಾಣಿ ದಾಳಿಯೇ ಅಥವಾ ಇದರ ಹಿಂದೆ ಯಾವುದಾದರೂ ಭಯಾನಕ ಸಂಚಿದೆಯೇ? ಎಂಬ ಪ್ರಶ್ನೆಯ ಸುತ್ತ ಈ ಏಳು ಸಂಚಿಕೆಗಳ ಸರಣಿ ಹೆಣೆಯಲ್ಪಟ್ಟಿದೆ ಎಂಬುವುದು ಟ್ರೇಲರ್‌ನಲ್ಲಿ ಕಂಡುರುತ್ತದೆ.
ರಾಕ್ಷಸ ಟ್ರೇಲರ್ ಇಲ್ಲಿದೆ
ಈ ಸರಣಿಯಲ್ಲಿ ವಿಜಯ್ ರಾಘವೇಂದ್ರ ಅವರು ಸಬ್-ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಗೂಢ ಸಾವುಗಳ ತನಿಖೆಗೆ ಇಳಿಯುತ್ತಾರೆ. ವೈಜ್ಞಾನಿಕ ಸತ್ಯ ಮತ್ತು ಜಾನಪದ ನಂಬಿಕೆಗಳ ನಡುವೆ ಸಿಲುಕುವ ಹನುಮಪ್ಪ, ಸಮಾಜದ ಭಯ ಮತ್ತು ತನ್ನೊಳಗಿನ ದ್ವಂದ್ವಗಳ ನಡುವೆ ಸತ್ಯವನ್ನು ಹುಡುಕುವ ರೋಚಕ ಪಯಣವೇ ಈ 'ರಾಕ್ಷಸ'.
ಈ ಸಿನಿಮಾವನ್ನು 'ಚೌಕ' ಚಿತ್ರದ ಮೂಲಕ ವಿಜಯ್ ಅವರಿಗೆ ದೊಡ್ಡ ಯಶಸ್ಸು ನೀಡಿದ್ದ ತರುಣ್ ಕಿಶೋರ್ ಸುಧೀರ್, 'ತರುಣ್ ಕಿಶೋರ್ ಕ್ರಿಯೇಟಿವ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಸುಹಾನ್ ಪ್ರಸಾದ್ ನಿರ್ದೇಶನ ಇರುವ ಈ ಸರಣಿಯಲ್ಲಿ ವಿಜಯ್ ರಾಘವೇಂದ್ರ ಅವರೊಂದಿಗೆ ಮಯೂರಿ, ಅವಿನಾಶ್, ಮಾಳವಿಕಾ, ಅಪ್ಪಣ್ಣ ಹಾಗೂ ಅಭಿಜಿತ್ ಅವರಂತಹ ದೊಡ್ಡ ತಾರಾಬಳಗವೇ ಇವೆ.
ವಿಶೇಷತೆಗಳೇನು?
ಸಿನಿಮಾಗೂ ಮತ್ತು ವೆಬ್ ಸೀರೀಸ್‌ಗೂ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿರುವ ವಿಜಯ್ ರಾಘವೇಂದ್ರ, "ಡಿಜಿಟಲ್ ವೇದಿಕೆಯಲ್ಲಿ ಕಥೆಯನ್ನು ವಿಸ್ತಾರವಾಗಿ ಹೇಳಲು ಹೆಚ್ಚಿನ ಅವಕಾಶವಿರುತ್ತದೆ. ಈ ಸರಣಿಗಾಗಿ ಅವರು ವಿಶೇಷವಾಗಿ ಹುಬ್ಬಳ್ಳಿ ಶೈಲಿಯ ಕನ್ನಡವನ್ನು ಕಲಿತು ಮಾತನಾಡಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ. ರಾಕ್ಷಸ ಅಷ್ಟು ಸುಲಭವಾಗಿ ಬಿಟ್ಟುಕೊಡುವ ಕಥೆಯಲ್ಲ. ಹನುಮಪ್ಪನ ಪಾತ್ರವು ಕರ್ತವ್ಯ ಮತ್ತು ನಂಬಿಕೆಯ ನಡುವೆ ಹೋರಾಡುವ ಮನುಷ್ಯನ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ ಎಂದು ಇತ್ತೀಚೆಗೆ ನಡೆದ ಟ್ರೇಲರ್ ಲಾಚ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಮೈನಡುಗಿಸುವ ತನಿಖಾ ಕ್ರೈಂ ಥ್ರಿಲ್ಲರ್ ಇದೇ ಫೆಬ್ರವರಿ 20ರಿಂದ ಜೀ5 (Zee5) ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ.

