
ʼಘೂಸ್ಖೋರ್ ಪಂಡತ್ʼ ಸದ್ದು: ಗದ್ದಲಕೋರರ ಜಿದ್ದು –ಪ್ರಜಾಪ್ರಭುತ್ವಕ್ಕೆ ಅಗ್ನಿ ಪರೀಕ್ಷೆ
ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ವಿವಾದ ಸೃಷ್ಟಿಸಿದಾಗ ಸುಪ್ರೀಂಕೋರ್ಟ್ ಅನುಸರಿಸಿದ್ದು 'ಎಸ್. ರಂಗರಾಜನ್' ತೀರ್ಪನ್ನು. ಈಗ "ಘೂಸ್ಖೋರ್ ಪಂಡತ್" ಸದ್ದು ಮಾಡುತ್ತಿದೆ.
ಅದು ಆರಂಭವಾಗಿದ್ದು ಹೆಸರಿಗೆ ಸಂಬಂಧಿಸಿದ ಆಕ್ಷೇಪಣೆಗಳ ಮೂಲಕ. ಅದೀಗ ದೊಡ್ಡ ಕಾನೂನು ಸಮರಕ್ಕೆ ನಾಂದಿ ಹಾಡಿದೆ. ಈಗ ಅದು ಮೂರು ಬಹುಮುಖ್ಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ; ಕಲಾತ್ಮಕ ಅಭಿವ್ಯಕ್ತಿಯ ಮಿತಿಗಳು, ಒಂದು ಸಮುದಾಯದ ಘನತೆಯನ್ನು ಗೌರವಿಸುವುದು ಮತ್ತು ಬಹುತ್ವದ ಸಮಾಜದಲ್ಲಿ ಯಾವುದು ʼಅಪಮಾನಕಾರಿʼ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸಬೇಕೇ ಎಂಬುದು.
ನೀರಜ್ ಪಾಂಡೆ ಅವರ ʼಫ್ರೈಡೆ ಸ್ಟೋರಿ ಟೆಲ್ಲರ್ಸ್-ಎಲ್.ಎಲ್.ಪಿʼ ನಿರ್ಮಾಣ ಮಾಡಿದ ಮತ್ತು ಮನೋಜ್ ಬಾಜಪೇಯಿ ನಟಿಸಿರುವ ಈ ಚಿತ್ರವು ʼಪಂಡತ್ʼ ಎಂಬ ಅಡ್ಡ ಹೆಸರು ಹೊಂದಿರುವ ಅಜಯ್ ದೀಕ್ಷಿತ್ ಎಂಬ ಭ್ರಷ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆಯಲಾದ ಒಂದು ರಾತ್ರಿಯಲ್ಲಿ ಮುಗಿದು ಹೋಗುವ ಥ್ರಿಲ್ಲರ್ ಕಥೆ.
ಹಿಂದಿಯ ʼಘೂಸ್ಖೋರ್ʼ ಎಂದರೆ ಲಂಚವನ್ನು ಸೂಚಿಸುವ ಪದವಾಗಿದೆ. ಸಾಂಸ್ಕೃತಿಕವಾಗಿ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದ ʼಪಂಡಿತ್ʼ ಎಂಬ ಪದದ ಆಡುಭಾಷೆಯ ರೂಪವಾದ ʼಪಂಡತ್ʼ ಎರಡನ್ನೂ ಒಟ್ಟಾಗಿ ಬಳಸಿದ ಕಾರಣಕ್ಕೆ ವಿವಾದ ತಲೆಎತ್ತಿದೆ. ಹೀಗೆ ಮಾಡಿರುವ ಸಂಯೋಜನೆಯು ಒಂದು ಸಾಮಾಜಿಕ ಸಮುದಾಯಕ್ಕೆ ನೈತಿಕ ಭ್ರಷ್ಟತೆಯನ್ನು ಆರೋಪಿಸುತ್ತದೆ ಎಂಬುದು ವಿಮರ್ಶಕರ ವಾದ.
ಆದರೆ ಚಲನಚಿತ್ರ ನಿರ್ಮಾಪಕರು ಈ ವಾದವನ್ನು ತಳ್ಳಿಹಾಕುತ್ತಾರೆ. ಈ ಪಾತ್ರವು ಕಾಲ್ಪನಿಕ ಮತ್ತು ವೈಯಕ್ತಿಕವಾದುದು, ಇದು ಯಾವುದೇ ಜಾತಿ ಅಥವಾ ಸಮುದಾಯದ ಬಗ್ಗೆ ಪ್ರಾತಿನಿಧಿಕವಾದ ಹಕ್ಕನ್ನು ಹೊಂದಿಲ್ಲ ಎಂಬುದು ಅವರು ಮಂಡಿಸುವ ಸಮರ್ಥನೆ.
ಇಷ್ಟಾಗುತ್ತಲೇ ಕಾನೂನು ಕ್ರಮಗಳು ವೇಗ ಪಡೆದುಕೊಂಡವು. ಲಕ್ನೋದಲ್ಲಿ ಒಂದು ಎಫ್.ಐ.ಆರ್. ದಾಖಲಾಯಿತು. ಚಿತ್ರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಮತ್ತು ದ್ವೇಷವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿರುವ ಈ ದೂರು, ಈ ಕೃತ್ಯಗಳನ್ನು ದಂಡಿಸುವ ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳನ್ನು ಉಲ್ಲೇಖಿಸಿದೆ. ಇದರ ಜೊತೆಯಲ್ಲಿಯೇ ದೆಹಲಿ ಹೈಕೋರ್ಟ್-ನಲ್ಲಿ ಹೂಡಲಾಗಿರುವ ದಾವೆಯಲ್ಲಿ ಸಂವಿಧಾನದ ಅಡಿಯಲ್ಲಿ ಸಮಾನತೆ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸಲಾಗಿದೆ ಮತ್ತು ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿಕೊಂಡಿದೆ. ಅದೇ ರೀತಿ ಅಭಿವ್ಯಕ್ತಿ ಸ್ವಾತಂತ್ರ್ಯವು ಕೆಲವು ಸಮಂಜಸವಾದ ಮಿತಿಗಳಿಗೆ ಒಳಪಟ್ಟಿರುತ್ತದೆ ಎಂಬುದರ ಕಡೆಗೂ ಒತ್ತು ನೀಡಲಾಗಿದೆ.
ಈ ವಿವಾದದ ಕೇಂದ್ರಬಿಂದುವು ನಮಗೆಲ್ಲ ಪರಿಚಿತವಾಗಿರುವ ಸಾಂವಿಧಾನಿಕ ಸಂದಿಗ್ಧತೆಯನ್ನು ಒಳಗೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇರುವ ಪ್ರಜಾಸತ್ತಾತ್ಮಕ ಬದ್ಧತೆಗೆ ಧಕ್ಕೆ ತರದ ರೀತಿಯಲ್ಲಿ ಆಕ್ಷೇಪಾರ್ಹ ಅಥವಾ ಅಶಾಂತಿಗೆ ದಾರಿಮಾಡಿಕೊಡುವ ಅಭಿವ್ಯಕ್ತಿಯನ್ನು ನಿಯಂತ್ರಿಸಲು ಸರ್ಕಾರ ಯಾವ ಹಂತದ ವರೆಗೆ ಕ್ರಮ ಕೈಗೊಳ್ಳಬಹುದು ಎಂಬುದೇ ಪ್ರಶ್ನೆಯಾಗಿದೆ.
ಕೋರ್ಟ್-ಗಳಿಗೆ ದಿಕ್ಸೂಚಿಯಾದ ಸಿದ್ಧಾಂತ
ಕೇವಲ ಅಸಮಾಧಾನ ಅಥವಾ ವಿರೋಧವನ್ನು ಉಂಟುಮಾಡುತ್ತದೆ ಎಂಬ ಕಾರಣಕ್ಕೆ ಅಭಿವ್ಯಕ್ತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಭಾರತೀಯ ಸಾಂವಿಧಾನಿಕ ಕಾನೂನು ಬಹಳ ಹಿಂದಿನಿಂದಲೂ ಮಾನ್ಯಮಾಡಿದೆ. ಯಾವುದೇ ನಿರ್ಬಂಧಗಳನ್ನು ವಿಧಿಸುವ ಸಂದರ್ಭದಲ್ಲಿ ಅವು ಕೇವಲ ಊಹಾತ್ಮಕ ಅಥವಾ ವೈಯಕ್ತಿಕ ಆಕ್ಷೇಪಣೆಗಳಾಗಿರದೆ ಸಾರ್ವಜನಿಕ ಸುವ್ಯವಸ್ಥೆಗೆ ಎದುರಾಗುವ ಸ್ಪಷ್ಟ ಮತ್ತು ತಕ್ಷಣದ ಅಪಾಯದಿಂದ ಸಮರ್ಥಿಸಲ್ಪಡಬೇಕು ಎಂಬುದನ್ನು ನ್ಯಾಯಾಲಯಗಳು ಮತ್ತೆ ಮತ್ತೆ ಪ್ರತಿಪಾದಿಸಿವೆ.
2015ರ ಶ್ರೇಯಾ ಸಿಂಘಾಲ್ ವಿರುದ್ಧದ ಭಾರತ ಸರ್ಕಾರದ ಪ್ರಕರಣದಲ್ಲಿ, ವಾಕ್-ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು ಬಹಳ ಕಟ್ಟುನಿಟ್ಟಾದ ಮಿತಿಯಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿತ್ತು. ಪ್ರಬಲ ಅಭಿವ್ಯಕ್ತಿ ಮತ್ತು ಸಾಮುದಾಯಿಕ ಆಕ್ಷೇಪಣೆಗಳ ನಡುವಿನ ಸಂಘರ್ಷಗಳನ್ನು ಎದುರಿಸುವ ಸಂದರ್ಭಗಳಲ್ಲೆಲ್ಲ ನ್ಯಾಯಾಲಯಗಳಿಗೆ ಇಂದಿಗೂ ಈ ಸಿದ್ಧಾಂತವೇ ದಾರಿದೀಪವಾಗಿದೆ.
ಕಲಾತ್ಮಕವಾಗಿರುವ ಕೃತಿಗಳನ್ನು ಸಂಭವನೀಯ ಪ್ರತಿಕ್ರಿಯೆಗಳ ಆಧಾರದ ಮೇಲೆ ಪ್ರಶ್ನಿಸಲು ಮುಂದಾದಾಗ ಈ ಸಿದ್ಧಾಂತವು ವಿಶೇಷ ಬಲವನ್ನು ಪಡೆದುಕೊಳ್ಳುತ್ತದೆ. ನ್ಯಾಯಾಂಗದ ಪೂರ್ವನಿದರ್ಶನಗಳು ಕೂಡ ಪ್ರತಿಕೂಲ ಪ್ರತಿಕ್ರಿಯೆಗಳನ್ನು ತಡೆಯುವ ಮುನ್ನೆಚ್ಚರಿಕೆಯ ಕ್ರಮವಾಗಿ ಅಭಿವ್ಯಕ್ತಿಯನ್ನು ಹತ್ತಿಕ್ಕಬಾರದು ಎಂಬ ನಿಲುವನ್ನು ಹೊಂದಿವೆ. ಅದಕ್ಕೆ ಬದಲಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜೊತೆಗೆ ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಅವು ಒತ್ತಿ ಹೇಳಿವೆ.
ಈ ನ್ಯಾಯಶಾಸ್ತ್ರದಿಂದ ಹೊರಹೊಮ್ಮುವ ಮಾನದಂಡವು ಬಹಳ ಬೇಗ ನೊಂದುಕೊಳ್ಳುವ ವೀಕ್ಷಕನ ದೃಷ್ಟಿಕೋನದ್ದಲ್ಲ. ಬದಲಾಗಿ ಪ್ರಚೋದನಕಾರಿ ಆಲೋಚನೆಗಳಿಗೆ ಮುಖಾಮುಖಿಯಾಗುವ ಸಾಮರ್ಥ್ಯವನ್ನು ಹೊಂದಿರುವ ಸಮಾಜದ ವಿವೇಚನಾಶೀಲ ಮತ್ತು ಸಹನಶೀಲ ಸದಸ್ಯನ ದೃಷ್ಟಿಕೋನದ್ದಾಗಿರುತ್ತದೆ.
"ಘೂಸ್ಖೋರ್ ಪಂಡತ್" ವಿವಾದವು ಸಮುದಾಯ ಅಥವಾ ಗುಂಪು ನಿಂದನೆಯ ಬಗೆಗೆ ಇತ್ಯರ್ಥವಾದ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
ಭಾರತದ ಕಾನೂನು ಬೃಹತ್ ಮತ್ತು ಅನಿರ್ದಿಷ್ಟ ಸಮುದಾಯಗಳ ಪರವಾಗಿ ಸಲ್ಲಿಕೆ ಮಾಡಲಾದ ಮಾನನಷ್ಟ ಹಕ್ಕುಗಳನ್ನು ಅಷ್ಟು ಸಲೀಸಾಗಿ ಮಾನ್ಯ ಮಾಡುವುದಿಲ್ಲ. ಯಾವುದೇ ದುರುದ್ದೇಶವಿಲ್ಲದ ದುಡುಕಿನಿಂದ ನೀಡಿದ ಹೇಳಿಕೆಯನ್ನು ಒಳಗೊಂಡ ಒಂದು ವೈಯಕ್ತಿಕ ಕಾಲ್ಪನಿಕ ಪಾತ್ರದ ಚಿತ್ರಣವು ಹೇಗೆ ಇಡೀ ಸಮುದಾಯದ ಘನತೆಗೆ ಕುಂದುತರುತ್ತದೆ ಎಂಬುದನ್ನು ಸಾಬೀತುಪಡಿಸುವುದು ಇಲ್ಲಿರುವ ಕಾನೂನಾತ್ಮಕ ಸವಾಲಾಗಿದೆ.
ಭಾವನೆಗಳಿಗೆ ಪೆಟ್ಟು ಬಿದ್ದಿರುವುದನ್ನೇ 'ಹಾನಿ' ಎಂದು ಅಂದುಕೊಂಡರೆ, ಜನರ ವೈಯಕ್ತಿಕ ಬೇಸರವು ಕಲಾವಿದರ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಅಸ್ತ್ರವಾಗಿ ಬಿಡುತ್ತದೆ.
ಇಲ್ಲಿನ ನಿಯಂತ್ರಣದ ಹಿನ್ನೆಲೆಯು ಮತ್ತೊಂದು ಹಂತದ ಸಂಕೀರ್ಣತೆಯನ್ನು ಸೇರ್ಪಡೆ ಮಾಡುತ್ತದೆ. ಚಿತ್ರ ಬಿಡುಗಡೆಗೆ ಮೊದಲೇ ಪ್ರಮಾಣೀಕರಣಕ್ಕೆ ಒಳಪಡುವ ಚಿತ್ರಮಂದಿರಗಳ ಚಲನಚಿತ್ರಗಳಿಗಿಂತ ಭಿನ್ನವಾಗಿ ಸ್ಟ್ರೀಮಿಂಗ್ ವಿಷಯ (ಓಟಿಟಿ ವಿಷಯ) ವನ್ನು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಈ ನಿಯಮಗಳು ಬಿಡುಗಡೆಗೆ ಮುಂಚಿನ ಪರಿಶೀಲನೆಗಿಂತ ಮಿಗಿಲಾಗಿ ಬಿಡುಗಡೆ ನಂತರದ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿರುತ್ತದೆ.
ಇದು ಸಾಮಾಜಿಕ ಸಂವೇದನೆಗಳಿಗೆ ಸ್ಪಂದಿಸದೇ ಇರುವ ವ್ಯವಸ್ಥೆ ಎಂದು ವಿಮರ್ಶಕರು ಬಣ್ಣಿಸಿದರೆ, ಡಿಜಿಟಲ್ ಕ್ಷೇತ್ರದಲ್ಲಿ ಬಿಡುಗಡೆಗೆ ಮೊದಲೇ ನಿಯಂತ್ರಣ ಹೇರುವುದು ಸ್ಟ್ರೀಮಿಂಗ್ ಪ್ಲಾಟ್-ಫಾರ್ಮ್-ಗಳು ಸೃಷ್ಟಿಸಿರುವ ಸೃಜನಶೀಲ ವಾತಾವರಣವನ್ನೇ ಮೂಲಭೂತವಾಗಿ ಬದಲಾಯಿಸಿ ಬಿಡುತ್ತದೆ ಎಂದು ಸಮರ್ಥಕರು ವಾದಿಸುತ್ತಾರೆ,
ಈ ಕ್ಷೇತ್ರದಲ್ಲಿನ ಹಿಂದಿನ ವಿವಾದಗಳು ಸಾಂವಿಧಾನಿಕ ರಕ್ಷಣೆಗಳ ಅಸಮರ್ಪಕ ಅನ್ವಯವನ್ನು ಎತ್ತಿ ತೋರಿಸುತ್ತವೆ. ಕೆಲವು ನಿರ್ಮಾಣಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನ್ಯಾಯಾಂಗದ ಒತ್ತಾಯದಿಂದ ರಕ್ಷಿಸಲಾಗಿದೆ. ಇನ್ನು ಕೆಲವು ಕಾನೂನು ಒತ್ತಡ ಮತ್ತು ಸಾರ್ವಜನಿಕ ಆಕ್ರೋಶದ ನಂತರ ಬದಲಾವಣೆಗೆ ಒಳಗಾಗಿವೆ ಅಥವಾ ಹಿಂದಕ್ಕೆ ಪಡೆಯಲಾಗಿವೆ. ಇಲ್ಲಿ ಲಭ್ಯವಾದ ಫಲಿತಾಂಶಗಳು ಸ್ಥಿರವಾದ ಕಾನೂನು ಮಾನದಂಡಗಳಿಗಿಂತ ಹೆಚ್ಚಾಗಿ ಅಂದಿನ ರಾಜಕೀಯ ವಾತಾವರಣ ಮತ್ತು ಭಾವನೆಗಳನ್ನು ಆಧರಿಸಿದ ನಿರ್ಬಂಧಗಳ ವಿಸ್ತಾರವಾದ ವ್ಯಾಖ್ಯಾನಗಳನ್ನು ವಿರೋಧಿಸುವ ನ್ಯಾಯಾಯಗಳ ಇಚ್ಛಾಶಕ್ತಿಯನ್ನು ಅವಲಂಬಿಸಿವೆ.
ಅಸಮತೋಲಿತ ವಿಧಾನ
ಹಿಂದಿನ ವಿವಾದಗಳು ನ್ಯಾಯಾಂಗದ ಅಸಮತೋಲಿತ ವಿಧಾನವನ್ನು ವಿವರಿಸುತ್ತವೆ. ಪದ್ಮಾವತ್ ಚಿತ್ರದ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರಕ್ಷಿಸಿತ್ತು. ರಾಜ್ಯಗಳು ಪ್ರಮಾಣೀಕರಿಸಿದ ಚಲನಚಿತ್ರಗಳನ್ನು ಹತ್ತಿಕ್ಕುವ ಬದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅದು ಒತ್ತಿ ಹೇಳಿತ್ತು. ಆದರೆ ʼತಾಂಡವ್ʼ ವಿಚಾರದಲ್ಲಿ ವ್ಯತಿರಿಕ್ತವಾದ ತೀರ್ಪು ಬಂತು. ಹಾಗಾಗಿ ಕ್ಷಮೆಯಾಚನೆ ಮತ್ತು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವುದಕ್ಕೆ ಸಾಕ್ಷಿಯಾಯಿತು. ಅದೇ ರೀತಿ, ʼಮಿರ್ಜಾಪುರʼ ವಿರುದ್ಧದ ನಡಾವಳಿಗಳನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿತು. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಯಾವುದೇ ಉದ್ದೇಶಪೂರ್ವಕ ಸಂಚು ಅದರಲ್ಲಿ ಒಳಗೊಂಡಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿತು.
ನ್ಯಾಯಾಲಯದ ತೀರ್ಪುಗಳು ಹೆಚ್ಚಾಗಿ ನ್ಯಾಯಾಧೀಶರು ಈ ಕೆಳಗಿನ ಎರಡು ವಿಷಯಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ: ವಿಧಿ 19(1)(a): ನಿಮ್ಮ ಮನಸ್ಸಿನಲ್ಲಿರುವುದನ್ನು ಮುಕ್ತವಾಗಿ ಹೇಳುವ ಅಥವಾ ಕಲೆಯ ಮೂಲಕ ವ್ಯಕ್ತಪಡಿಸುವ ಹಕ್ಕು (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ). ವಿಧಿ 19(2): ಸಾರ್ವಜನಿಕ ಶಾಂತಿ ಅಥವಾ ನೈತಿಕತೆಗೆ ಧಕ್ಕೆಯಾದಾಗ ಸರ್ಕಾರವು ಹೇರಬಹುದಾದ ನಿರ್ಬಂಧಗಳು. ಯಾರೋ ಒಬ್ಬರಿಗೆ ಅಥವಾ ಒಂದು ಗುಂಪಿಗೆ ಸಿನಿಮಾ ನೋಡಿ "ನೋವಾಯಿತು" ಅಥವಾ "ಭಾವನೆಗೆ ಧಕ್ಕೆಯಾಯಿತು" ಎಂಬ ಕಾರಣಕ್ಕಾಗಿಯೇ ಒಂದು ಕೃತಿಯನ್ನು ನಿಷೇಧಿಸಬಾರದು ಎಂಬುದು ಇಲ್ಲಿನ ಮುಖ್ಯ ಅಂಶ.
ಈ ವಿವಾದವನ್ನು ಹೊರತುಪಡಿಸಿ, "ಘೂಸ್ಖೋರ್ ಪಂಡತ್" ಪ್ರಕರಣವು ಡಿಜಿಟಲ್ ಮಾಧ್ಯಮದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಚಿತ್ರದ ಶೀರ್ಷಿಕೆ ಅಥವಾ ಪಾತ್ರಗಳ ಹೆಸರುಗಳ ಸಾಂಕೇತಿಕ ಅರ್ಥಗಳಿಗೆ ಸಂಬಂಧಿಸಿದಂತೆ ಒಂದು ವೇಳೆ ನ್ಯಾಯಾಲಯಗಳು ಒಟಿಟಿ ಪ್ಲಾಟ್ಫಾರ್ಮ್ಗಳನ್ನು ಜವಾಬ್ದಾರರನ್ನಾಗಿ ಮಾಡಿದರೆ, ಆಗ ಸ್ಟ್ರೀಮಿಂಗ್ ಸಂಸ್ಥೆಗಳು ಸ್ಥಳೀಯ ಭಾವನೆಗಳಿಗೆ ತಕ್ಕಂತೆ ತಮ್ಮ ಪ್ರತಿಯೊಂದು ಕಥೆಯನ್ನು ಬಿಡುಗಡೆಗೂ ಮುನ್ನವೇ ಕಟ್ಟುನಿಟ್ಟಾದ ತಪಾಸಣೆಗೆ ಒಳಪಡಿಸುವ ಅನಿವಾರ್ಯತೆ ಬಂದುಬಿಡಬಹುದು.
ಇಂತಹ ಬದಲಾವಣೆಯು ಜಾಗತಿಕವಾಗಿ ಏಕರೂಪದ ಕಾರ್ಯಕ್ರಮಗಳನ್ನು ನೀಡುವ ವ್ಯವಸ್ಥೆಗೆ ಅಡ್ಡಿಯಾಗಬಹುದು. ಅಲ್ಲದೆ, ಕಾನೂನು ಸಂಘರ್ಷದ ಅಪಾಯವನ್ನು ತಪ್ಪಿಸಲು ಚಿತ್ರ ನಿರ್ಮಾಪಕರು ತಾವಾಗಿಯೇ ತಮ್ಮ ಸೃಜನಶೀಲತೆಗೆ ಕತ್ತರಿ ಹಾಕಿಕೊಳ್ಳುವ (Self-censorship) ಪ್ರವೃತ್ತಿಗೆ ಇದು ಪ್ರೇರಣೆ ನೀಡಬಹುದು.
ಗದ್ದಲಕೋರರ ನಿರ್ಬಂಧ (Heckler's Veto)
ಈ ಪ್ರಕರಣವು "ಹೆಕ್ಲರ್ಸ್ ವೀಟೋ" ಎಂಬ ಪರಿಕಲ್ಪನೆಯ ಬಗ್ಗೆಯೂ ನಾವು ಯೋಚಿಸುವಂತೆ ಮಾಡುತ್ತದೆ. ಪ್ರತಿಭಟನೆ ಅಥವಾ ಅಶಾಂತಿಯ ಬೆದರಿಕೆಯನ್ನೇ ಅಸ್ತ್ರವಾಗಿ ಬಳಸಿ, ಒಬ್ಬರ ಅಭಿವ್ಯಕ್ತಿ ಅಥವಾ ಮಾತನ್ನು ಹತ್ತಿಕ್ಕುವುದನ್ನು ಇದು ಸೂಚಿಸುತ್ತದೆ. ಅಂದರೆ, ಗದ್ದಲ ಮಾಡುವವರ ಅಥವಾ ವಿರೋಧಿಸುವವರ ಒತ್ತಡಕ್ಕೆ ಮಣಿದು ಕಲೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಎಂದರ್ಥ.
ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಸಾಂವಿಧಾನಿಕ ಪ್ರಜಾಪ್ರಭುತ್ವಗಳು ಇಂತಹ ತರ್ಕಗಳನ್ನು (ವಿರೋಧಕ್ಕೆ ಮಣಿಯುವುದನ್ನು) ವಿರೋಧಿಸುತ್ತಾ ಬಂದಿವೆ. ಏಕೆಂದರೆ, ಇಂತಹ ಒತ್ತಡಗಳಿಗೆ ಮಣಿಯುವುದು ಅಸಹಿಷ್ಣುತೆಯನ್ನು ಪೋಷಿಸಿದಂತಾಗುತ್ತದೆ ಮತ್ತು ಕಾನೂನಿನ ಅಧಿಕಾರವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ನ್ಯಾಯಾಲಯಗಳ ಕೆಲಸವು ಸಾರ್ವಜನಿಕರ ಸಿಟ್ಟಿನ ತೀವ್ರತೆಯನ್ನು ಅಳೆಯುವುದಲ್ಲ; ಬದಲಾಗಿ, ಆಕ್ಷೇಪಾರ್ಹ ಅಭಿವ್ಯಕ್ತಿಯು ನಿಜವಾಗಿಯೂ ತಕ್ಷಣದ ಅಪಾಯವನ್ನು ತಂದೊಡ್ಡುತ್ತದೆಯೇ ಮತ್ತು ಅದು ನಿರ್ಬಂಧವನ್ನು ವಿಧಿಸಲು ಅರ್ಹವಾಗಿದೆಯೇ ಎಂದು ಪರಿಶೀಲಿಸುವುದಾಗಿದೆ.
ಪ್ರಮುಖ ನ್ಯಾಯಾಂಗ ಉದಾಹರಣೆಗಳು- ಎಸ್. ರಂಗರಾಜನ್ ವಿರುದ್ಧ ಪಿ. ಜಗಜೀವನ್ ರಾಮ್ (1989): ಜಾತಿ ಆಧಾರಿತ ಮೀಸಲಾತಿಯ ಕುರಿತಾದ ಚಲನಚಿತ್ರವೊಂದಕ್ಕೆ ನೀಡಲಾಗಿದ್ದ 'U' ಪ್ರಮಾಣಪತ್ರವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಆ ತೀರ್ಪನ್ನು ಬದಲಿಸಿ ಪ್ರಮಾಣಪತ್ರವನ್ನು ಮರುಸ್ಥಾಪಿಸಿತು. "ಪ್ರತಿಭಟನೆ ಮತ್ತು ಹಿಂಸಾಚಾರದ ಬೆದರಿಕೆಯ ಕಾರಣಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಹೇಳಿದ ನ್ಯಾಯಾಲಯವು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ನಿರ್ದೇಶಿಸಿತು.
ಇತ್ತೀಚಿನ ವಿದ್ಯಮಾನಗಳು: ಅಂದಿನಿಂದ, ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುತ್ತಾ ಬಂದಿರುವ ಪ್ರಕಾರ, ಯಾವುದೇ ಭಾಷಣ ಅಥವಾ ಅಭಿವ್ಯಕ್ತಿಯನ್ನು ಅತೀ ಶೀಘ್ರವಾಗಿ ಅಸುರಕ್ಷಿತ ಭಾವನೆಗೆ ಒಳಗಾಗುವವರ ದೃಷ್ಟಿಕೋನದಿಂದ ನೋಡಬಾರದು; ಬದಲಾಗಿ ಒಬ್ಬ ವಿವೇಚನಾಶೀಲ ಮತ್ತು ಸ್ಥಿರಮನಸ್ಸಿನ ವ್ಯಕ್ತಿಯ ದೃಷ್ಟಿಕೋನದಿಂದ ಮೌಲ್ಯಮಾಪನ ಮಾಡಬೇಕು. ಇತ್ತೀಚೆಗೆ ಕರ್ನಾಟಕದಲ್ಲಿ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರದ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸುವಾಗಲೂ ಸುಪ್ರೀಂ ಕೋರ್ಟ್ ಇದೇ 'ಎಸ್. ರಂಗರಾಜನ್' ತೀರ್ಪನ್ನು ಅನುಸರಿಸಿತು. (ಆದಾಗ್ಯೂ, ವಿತರಕರು ನಂತರ ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡದೇ ಇರಲು ನಿರ್ಧರಿಸಿದರು.)
ಸೃಜನಶೀಲ ಸ್ವಾತಂತ್ರ್ಯ-ಸಂವಿಧಾನದ ಬದ್ಧತೆ
ಪ್ರಸ್ತುತ, ನೆಟ್ಫ್ಲಿಕ್ಸ್ ಚಿತ್ರದ ಪ್ರಚಾರ ಸಾಮಗ್ರಿಗಳನ್ನು ಹಿಂತೆಗೆದುಕೊಂಡಿದೆ. ಚಿತ್ರದ ಬಿಡುಗಡೆ ಅನಿಶ್ಚಿತವಾಗಿದೆ. ಈ ವಿವಾದವು ನ್ಯಾಯಾಂಗದ ಸ್ಪಷ್ಟೀಕರಣದ ಮೂಲಕವೋ, ಸ್ವಯಂಪ್ರೇರಿತ ಬದಲಾವಣೆಯ ಮೂಲಕವೋ ಅಥವಾ ಅಂತಿಮವಾಗಿ ದೊರೆಯುವ ಅನುಮತಿಯ ಮೂಲಕವೋ ಇತ್ಯರ್ಥವಾಗಬಹುದು. ಆದರೆ ಇದರ ಮಹತ್ವವು ಕೇವಲ ಈ ಒಂದು ಚಿತ್ರಕ್ಕೆ ಸೀಮಿತವಾಗಿಲ್ಲ. ಚಲನಚಿತ್ರ ತಯಾರಕರು ತಮ್ಮ ಸೃಜನಶೀಲತೆಯ ಅಪಾಯಗಳನ್ನು ಹೇಗೆ ಅಳೆಯುತ್ತಾರೆ, ಒಟಿಟಿ ಪ್ಲಾಟ್ಫಾರ್ಮ್ಗಳು ನಿಯಮಗಳನ್ನು ಹೇಗೆ ಪಾಲಿಸುತ್ತವೆ ಮತ್ತು ನ್ಯಾಯಾಲಯಗಳು 'ಸ್ವಾತಂತ್ರ್ಯ' ಮತ್ತು 'ನಿರ್ಬಂಧ'ಗಳ ನಡುವಿನ ಗರೆಯನ್ನು ಹೇಗೆ ಗುರುತಿಸುತ್ತವೆ ಎಂಬುದನ್ನು ಇದು ನಿರ್ಧರಿಸಲಿದೆ.
ಅಂತಿಮವಾಗಿ, ಈ ಘಟನೆಯು ಭಾರತೀಯ ವಾಕ್-ಸ್ವಾತಂತ್ರ್ಯದ ನ್ಯಾಯಶಾಸ್ತ್ರದಲ್ಲಿ ನಡೆಯುತ್ತಿರುವ ಬದಲಾವಣೆಗೆ ಕನ್ನಡಿ ಹಿಡಿಯುತ್ತದೆ. ಸಂವಿಧಾನದ ಮೇಲಿನ ಬದ್ಧತೆಯ ನಿಜವಾದ ಪರೀಕ್ಷೆಯು ಕೇವಲ ಎಲ್ಲರಿಗೂ ಸಮ್ಮತವಾದ ವಿಚಾರಗಳನ್ನು ರಕ್ಷಿಸುವುದರಲ್ಲಿ ಇಲ್ಲ; ಬದಲಾಗಿ, ಪ್ರಚಲಿತದಲ್ಲಿರುವ ಸಂವೇದನೆಗಳನ್ನು ಕಲಕುವ ಅಥವಾ ಪ್ರಶ್ನಿಸುವ ಅಭಿವ್ಯಕ್ತಿಯನ್ನು ರಕ್ಷಿಸುವುದರಲ್ಲಿ ಇದೆ.
ಒಂದು ವೇಳೆ ಈ ಕಾನೂನು ಚೌಕಟ್ಟನ್ನು ಸ್ಥಿರತೆ ಮತ್ತು ಸಂಯಮದಿಂದ ಅನ್ವಯಿಸಿದರೆ, ಅದು ಒಂದು ಮೂಲಭೂತ ತತ್ವವನ್ನು ಮರುಸ್ಥಾಪಿಸುತ್ತದೆ: ಒಂದು ಸಾಂವಿಧಾನಿಕ ಗಣರಾಜ್ಯದಲ್ಲಿ, ಅಭಿವ್ಯಕ್ತಿಯ ಅವಕಾಶವನ್ನು ಅತಿ ಹೆಚ್ಚು ಸದ್ದು ಮಾಡುವ ಅಥವಾ ಅತಿ ಹೆಚ್ಚು ನೊಂದವರ ಧ್ವನಿಗಳು ನಿರ್ಧರಿಸಬಾರದು; ಬದಲಾಗಿ ಕಾನೂನು, ತರ್ಕ ಮತ್ತು ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವ ಸಾಮೂಹಿಕ ಸಹಿಷ್ಣುತೆಯು ನಿರ್ಧರಿಸಬೇಕು.

