ಪಾಡ್‌ಕಾಸ್ಟ್ ಮೂಲಕ ಕೊಲೆ ರಹಸ್ಯ : ಒಟಿಟಿ ವೀಕ್ಷಕರಿಗೆ ಕಿಕ್ ನೀಡಿದ ಥ್ರಿಲ್ಲರ್
x

ಮನಸೆಳೆಯುವ ಕಥಾಹಂದರ ಹೊಂದಿರುವ ಈ ಚಿತ್ರವು ಹೈದರಾಬಾದ್‌ನ ಆಧುನಿಕ ಪರಿಸರದಲ್ಲಿ ಸಾಗುತ್ತದೆ.

ಪಾಡ್‌ಕಾಸ್ಟ್ ಮೂಲಕ ಕೊಲೆ ರಹಸ್ಯ : ಒಟಿಟಿ ವೀಕ್ಷಕರಿಗೆ ಕಿಕ್ ನೀಡಿದ ಥ್ರಿಲ್ಲರ್

ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಕರಾಳ ಮುಖವನ್ನು 'ಚೀಕಟಿಲೋ' ಅನಾವರಣಗೊಳಿಸುತ್ತದೆ.


Click the Play button to hear this message in audio format

ಖ್ಯಾತ ನಟಿ ಶೋಭಿತಾ ಧುಲಿಪಾಲ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ 'ಚೀಕಟಿಲೋ' ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳು ಮತ್ತು ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನ ಚಿಂತನೆಗಳ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಸಿನಿಮಾ, ಪ್ರಸ್ತುತ ಒಟಿಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ.

ಶರಣ್ ಕೊಪ್ಪಿಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಶೋಭಿತಾ ಧುಲಿಪಾಲ ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸಂಧ್ಯಾ ಪಾತ್ರಕ್ಕೆ ಅವರು ತುಂಬಿರುವ ಜೀವ ಚಿತ್ರದ ಅತಿ ದೊಡ್ಡ ಪ್ಲಸ್ ಪಾಯಿಂಟ್. ಇವರ ಜೊತೆಗೆ ಆಮನಿ, ಈಶಾ ಚಾವ್ಲಾ ಮತ್ತು ಮಧು ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿರುವ ಕೆಲವು ಹಾರರ್ ದೃಶ್ಯಗಳು ಮತ್ತು ಸಸ್ಪೆನ್ಸ್ ಕ್ಷಣಗಳು ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡುತ್ತವೆ.

ಕಥೆಯೇನು?

ಹೈದರಾಬಾದ್‌ನ ಆಧುನಿಕ ನಗರದ ಹಿನ್ನೆಲೆಯಲ್ಲಿ ಈ ಕಥೆ ಸಾಗುತ್ತದೆ. ಚಿತ್ರದ ನಾಯಕಿ ಸಂಧ್ಯಾ ಒಬ್ಬ ಪ್ರತಿಭಾವಂತ ಕ್ರಿಮಿನಾಲಜಿ ಪದವೀಧರೆ. ಗ್ಲಾಮರಸ್ ಟಿವಿ ನಿರೂಪಕಿಯ ಕೆಲಸವನ್ನು ತ್ಯಜಿಸಿ, ಸಮಾಜದಲ್ಲಿ ನ್ಯಾಯ ಸಿಗದವರ ಪರವಾಗಿ ಧ್ವನಿ ಎತ್ತಲು ಅವಳು ತನ್ನದೇ ಆದ ಒಂದು ಯೂಟ್ಯೂಬ್ ಪಾಡ್‌ಕಾಸ್ಟ್ ಆರಂಭಿಸುತ್ತಾಳೆ.

ಅವಳ ಮನೆಯ ಹತ್ತಿರವೇ ತನ್ನ ಹಳೆಯ ಇಂಟರ್ನ್ ಮತ್ತು ಆಪ್ತ ಸಹೋದ್ಯೋಗಿಯೊಬ್ಬಳ ಭೀಕರ ಕೊಲೆಯಾದಾಗ ಸಂಧ್ಯಾಳ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಈ ಕೊಲೆಯ ತನಿಖೆಯನ್ನು ಸ್ವತಃ ಕೈಗೆತ್ತಿಕೊಳ್ಳುವ ಸಂಧ್ಯಾ, ಇದು ಕೇವಲ ಒಂದು ಆಕಸ್ಮಿಕ ಕೊಲೆಯಲ್ಲ ಬದಲಿಗೆ ಸರಣಿ ಹಂತಕನೊಬ್ಬನ ಕ್ರೂರ ಕೃತ್ಯ ಎಂದು ಪತ್ತೆಹಚ್ಚುತ್ತಾಳೆ. ಹಂತಕನು ಪ್ರತಿ ಬಾರಿ ಕೊಲೆ ಮಾಡಿದ ಸ್ಥಳದಲ್ಲಿ ಮಲ್ಲಿಗೆ ಹೂವುಗಳನ್ನು ಬಿಟ್ಟು ಹೋಗುವ ವಿಚಿತ್ರ ಹವ್ಯಾಸ ಹೊಂದಿರುತ್ತಾನೆ. ತನಿಖೆ ಮುಂದುವರಿದಂತೆ ಗೋದಾವರಿ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಇಂತಹ ಅನೇಕ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬರುತ್ತದೆ.

ಚಿತ್ರದ ಅತಿದೊಡ್ಡ ತಿರುವು ಎಂದರೆ ಸಂಧ್ಯಾ ಹುಡುಕುತ್ತಿದ್ದ ಹಂತಕ ಮತ್ಯಾರೋ ಅಲ್ಲ, ಆಕೆಯ ಮಾವ ರಾಮು ಆನಂದ್ ಓಜೇಟಿ ಎಂಬ ಸತ್ಯ ಬಯಲಾಗುವುದು. ರಾಮು ಬಾಲ್ಯದಲ್ಲಿ ತನ್ನ ಅತ್ತೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾನೆ. ಆ ನೋವು ಅವನ ಮನಸ್ಸಿನಲ್ಲಿ ಮಹಿಳೆಯರ ಮೇಲೆ ತೀವ್ರ ದ್ವೇಷ ಹುಟ್ಟಿಸಿರುತ್ತದೆ. ಮಲ್ಲಿಗೆ ಹೂವು ಮುಡಿಯುವ ಅಥವಾ ಕಾಲಿಗೆ ಗೆಜ್ಜೆ ಕಟ್ಟಿ ನೃತ್ಯ ಮಾಡುವ ಮಹಿಳೆಯರನ್ನು ಕಂಡರೆ ಆತನಿಗೆ ತನ್ನ ಅತ್ತೆಯ ನೆನಪಾಗಿ ವಿಕೃತಿಯನ್ನು ಮೆರೆಯುತ್ತಿರುತ್ತಾನೆ. ತನ್ನ ಕೃತ್ಯದ ಬಗ್ಗೆ ಅರಿವಾದ ಪತ್ನಿ ಪದ್ಮಾಳನ್ನು ಸಹ ಆತ ಹತ್ಯೆ ಮಾಡುತ್ತಾನೆ. ಆದರೆ ಪದ್ಮಾ ಸಾಯುವ ಮುನ್ನ ಸಂಧ್ಯಾಗೆ ಹಂತಕನ ಬಗ್ಗೆ ಸುಳಿವು ನೀಡಲು ರಷ್ಯನ್ ಗೊಂಬೆಯೊಳಗೆ ಕೆಲವು ಸಾಕ್ಷ್ಯಗಳನ್ನು ಅಡಗಿಸಿಟ್ಟಿರುತ್ತಾಳೆ. ಇದರ ವಿರುದ್ಧ ಸಂಧ್ಯಾ ಹೇಗೆ ಹೋರಾಡುತ್ತಾಳೆ ಎನ್ನುವುದೇ ಸಿನಿಮಾದ ಕಥೆ.

'ಚೀಕಟಿಲೋ' ಟ್ರೇಲರ್‌

ಈ ಹಾದಿಯಲ್ಲಿ ಅವಳು ಪೊಲೀಸ್ ಇನ್ಸ್‌ಪೆಕ್ಟರ್ ರಾಜೀವ್ ಜೊತೆ ಸೇರಿ ಹಂತಕನ ಹುಡುಕಾಟ ಆರಂಭಿಸುತ್ತಾಳೆ. ಕೇವಲ ಒಂದು ಕೊಲೆಯ ತನಿಖೆಯಾಗಿ ಆರಂಭವಾದ ಈ ಪ್ರಕರಣ, ನಂತರ ನಗರದಲ್ಲಿ ಅಡಗಿರುವ ಅನೇಕ ಕರಾಳ ರಹಸ್ಯಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ತನ್ನ ಗೆಳತಿಗೆ ನ್ಯಾಯ ಕೊಡಿಸಲು ಮತ್ತು ಇತರ ಮಹಿಳೆಯರ ಸುರಕ್ಷತೆಗಾಗಿ ತನ್ನ ಪಾಡ್‌ಕಾಸ್ಟ್ ಅನ್ನೇ ಆಯುಧವನ್ನಾಗಿ ಮಾಡಿಕೊಳ್ಳುವ ಸಂಧ್ಯಾ, ಅಪರಾಧಿಯನ್ನು ಹೇಗೆ ಹಿಡಿಯುತ್ತಾಳೆ ಎಂಬುದೇ ಈ ಸಿನಿಮಾದ ಹೂರಣ.


Read More
Next Story