
ಬಿಗ್‌ಬಾಸ್ ಸ್ಪರ್ಧಿಗಳಾದ ಗಿಲ್ಲಿನಟ, ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿಗೌಡ
Big Boss Kannada -12 Finale| ಮುಂಚೂಣಿ ಸ್ಪರ್ಧಿಗೆ 37 ಕೋಟಿ ವೋಟ್; ಬಿಗ್‌ಬಾಸ್ ಕಿರೀಟ ಗಿಲ್ಲಿಗೋ, ರಕ್ಷಿತಾಗೋ?
ವಿಭಿನ್ನ ವ್ಯಕ್ತಿತ್ವ, ನೇರ ನಿಲುವು ಹಾಗೂ ಸ್ಪಷ್ಟ ಅಭಿಪ್ರಾಯಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಗಿಲ್ಲಿ ನಟ ಈ ಬಾರಿಯ ಬಿಗ್‌ಬಾಸ್ ವಿನ್ನರ್ ಆಗಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ಬಿಗ್‌ಬಾಸ್ ಕನ್ನಡ ಸೀಸನ್-12ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅಭ್ಯರ್ಥಿ 37 ಕೋಟಿ ಮತಗಳನ್ನು ಪಡೆದಿರುವುದು ರಿವೀಲ್ ಆದ ಕೂಡಲೇ ಗೆಲ್ಲುವ ಅಭ್ಯರ್ಥಿ ಯಾರೆಂಬುದು ತೀವ್ರ ಕುತೂಹಲ ಮೂಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಜೋರಾಗಿದ್ದು, ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿನ ಕುರಿತು ಅಭಿಮಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.
ಪ್ರತಿ ಬಾರಿಗಿಂತ ಈ ಬಾರಿ ಬಿಗ್‌ಬಾಸ್ ಸ್ಫರ್ಧಿಗಳ ಪರವಾಗಿ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿ, ಮತ ಹಾಕುವಂತೆ ಮನವಿ ಮಾಡಿದ್ದಾರೆ. ಭಾನುವಾರ(ಜ.18) ಸಂಜೆಯಿಂದ ಆರಂಭವಾಗಿರುವ ಫಿನಾಲೆಗೂ ಮುನ್ನವೇ ಅಭಿಮಾನಿಗಳಲ್ಲಿ ಬಿಗ್‌ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.
ಪ್ರಸಕ್ತ ಸೀಸನ್‌ನಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿರುವ ವಿಭಿನ್ನ ವ್ಯಕ್ತಿತ್ವ, ನೇರ ನಿಲುವು ಹಾಗೂ ಸ್ಪಷ್ಟ ಅಭಿಪ್ರಾಯಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಗಿಲ್ಲಿ ನಟನೇ ಗೆಲುವು ಸಾಧಿಸಲಿದ್ದು, 37 ಕೋಟಿ ಮತಗಳು ಗಿಲ್ಲಿಗೆ ಬಂದಿವೆ ಎಂದು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು ಅಶ್ವಿನಿಗೌಡ ಅವರೇ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎನ್ನುತ್ತಿದ್ದಾರೆ. ಮಂಗಳೂರಿನ ರಕ್ಷಿತಾ ಶೆಟ್ಟಿ ಅವರು ಪ್ರಥಮ ರನ್ನರ್‌ಅಪ್ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಅಭಿಮಾನಿಗಳ ಸಂಘಟಿತ ಬೆಂಬಲ
ಶೋ ಹಲವು ಹಂತಗಳಲ್ಲಿ ಗಿಲ್ಲಿ ನಟ ಕಠಿಣ ಟೀಕೆ, ಪ್ರಶ್ನೆಗಳು ಹಾಗೂ ಒತ್ತಡಗಳನ್ನು ಎದುರಿಸಿದರೂ ಜನಬೆಂಬಲ ಮಾತ್ರ ಕಡಿಮೆಯಾಗಲಿಲ್ಲ. ಇತರ ಸ್ಪರ್ಧಿಗಳಿಗಿಂತ ಅವರಿಗೆ ಹೆಚ್ಚು ಕಟ್ಟುನಿಟ್ಟಿನ ವರ್ತನೆ ತೋರಲಾಗಿದೆ ಎಂಬ ಭಾವನೆ ಕೆಲ ವೀಕ್ಷಕರಲ್ಲಿ ಮೂಡಿದೆ. ಅದು ಅಭಿಮಾನಿಗಳ ಬೆಂಬಲವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು. ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ನಟರ ಪರ ಭಾರೀ ಅಭಿಯಾನ ನಡೆದಿದ್ದು, ಟ್ರೆಂಡ್‌ಗಳು, ವಿಡಿಯೋಗಳು, ಪೋಸ್ಟ್‌ಗಳ ಮೂಲಕ ಅಭಿಮಾನಿಗಳು ಮತದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ನಿರೂಪಕರ ಪಾತ್ರದ ಬಗ್ಗೆ ಚರ್ಚೆ
ಈ ಸೀಸನ್‌ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರ ಕೆಲ ಕಠಿಣ ಟಿಪ್ಪಣಿಗಳು ಮತ್ತು ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ. ಅವು ಕಾರ್ಯಕ್ರಮದ ಸ್ವರೂಪದ ಭಾಗವೆಂದು ನಿರ್ಮಾಪಕರು ಸ್ಪಷ್ಟಪಡಿಸಿದರೂ, ಕೆಲ ವೀಕ್ಷಕರು ಗಿಲ್ಲಿ ನಟರನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಈ ಎಲ್ಲಾ ಸಂದರ್ಭಗಳು ಗಿಲ್ಲಿ ನಟರ ವಿರುದ್ಧವಾಗುವ ಬದಲು ಸಾರ್ವಜನಿಕ ಬೆಂಬಲವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ ಎಂಬ ಅಭಿಪ್ರಾಯ ಅಭಿಮಾನಿಗಳ ವಲಯದಲ್ಲಿ ವ್ಯಕ್ತವಾಗಿದೆ.
ಈ ಮಧ್ಯೆ ನಟ ದರ್ಶನ್ ಅಭಿಮಾನಿಗಳು ಕೂಡ ಗಿಲ್ಲಿ ನಟನ ಪರ ಮತ ಹಾಕಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವಂತೆ ಅಭಿಮಾನಿಗಳೇ ಪ್ರಚಾರ ಮಾಡಿದ್ದರು ಎನ್ನಲಾಗಿದೆ. ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ಗಿಲ್ಲಿ ನಟ ಉತ್ತಮ ಅಭಿನಯ ಮಾಡಿದ್ದರು. ಹಾಗಾಗಿ ಅವರ ಗೆಲುವಿಗೆ ಹೆಚ್ಚು ಮತ ಹಾಕುವಂತೆ ದರ್ಶನ್ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು. ಪ್ರತಿಯೊಬ್ಬರು ಗಿಲ್ಲಿ ನಟನನ್ನು ಬೆಂಬಲಿಸಿದ್ದರು ಎಂಬ ಚರ್ಚೆಗಳು ನಡೆಯುತ್ತಿವೆ.
ನೈಜತೆಯೇ ಗೆಲುವಿನ ಶಕ್ತಿ
ಆಟದ ತಂತ್ರಗಳಿಗಿಂತ ನೈಜತೆ, ಭಾವನಾತ್ಮಕ ಸ್ಪಷ್ಟತೆ ಹಾಗೂ ನೇರ ನಡೆಗೈದು ಗಿಲ್ಲಿ ನಟ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಅತಿಯಾದ ನಾಟಕೀಯತೆಯಿಲ್ಲದೆ ತಮ್ಮದೇ ಶೈಲಿಯಲ್ಲಿ ಮುಂದುವರೆದ ಅವರ ಪ್ರಯಾಣ ಜನರಿಗೆ ಹೆಚ್ಚು ಹತ್ತಿರವಾಗಿದೆ. ಆದ್ದರಿಂದ ಗಿಲ್ಲಿಯೇ ಗೆಲುವು ಸಾಧಿಸಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನೂ ಮುಂದುವರಿದು ಗಿಲ್ಲೆಯೇ ವಿನ್ನರ್ ಎಂದು ʼಎಕ್ಸ್ʼನಲ್ಲಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ಪ್ರೇಕ್ಷಕರ ಸಂದೇಶ
ಗೆಲ್ಲುವ ಅಭ್ಯರ್ಥಿಗೆ ಬಂದಿರುವ ಮತಗಳು ,ರಿಯಾಲಿಟಿ ಶೋಗಳಲ್ಲಿ ಅಂತಿಮ ತೀರ್ಮಾನ ಪ್ರೇಕ್ಷಕರ ಕೈಯಲ್ಲೇ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಥನ, ಟೀಕೆ ಅಥವಾ ಒತ್ತಡಗಳಿಗಿಂತ ಜನಮನವೇ ಶಕ್ತಿಶಾಲಿ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ.

