ತುಳುನಾಡು ಕರ್ನಾಟಕದಲ್ಲೇ ಇದೆ, ನಮ್ಮನ್ನು ಹೊರಗಿನವರನ್ನಾಗಿ ಮಾಡಬೇಡಿ: ನಟ ಸುದೀಪ್
ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ.
ನಟ ಕಿಚ್ಚ ಸುದೀಪ್ ಅವರು ಸೋಮವಾರ ಗೆಳೆಯನ ರೆಸ್ಟೋರೆಂಟ್ನ ಉದ್ಘಾಟನೆಗೆ ಮಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ‘ಯಕ್ಷ ಧ್ರುವ ಪಟ್ಲ ಫೌಂಡೇಶನ್’ ಆಯೋಜಿಸಿದ್ದ ‘ಯಕ್ಷ ಧ್ರುವ ಪಟ್ಲ ಸಂಭ್ರಮ 2024’ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸುದೀಪ್ ಅವರ ತಾಯಿ ಮಂಗಳೂರಿನವರು. ಹೀಗಾಗಿ, ಅವರಿಗೆ ಮಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಊರಿನ ಬಗ್ಗೆ ಸುದೀಪ್ ಅವರು ಮಾತನಾಡಿದ್ದಾರೆ.
ʻʻಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ. ಕರ್ನಾಟಕ ನಮ್ಮ ಹೃದಯದಲ್ಲಿದೆ. ನಮ್ಮ ತಂದೆಗೆ ಇಡೀ ಕರ್ನಾಟಕದಲ್ಲಿ ಮಂಗಳೂರಿನ ಹುಡುಗಿ ಇಷ್ಟ ಆಯ್ತʼ’. ʻʻಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ ಬಗ್ಗೆ ಗೊತ್ತಿರೋದು ಎಂದರೆ ಅವರು ಸ್ವಾಭಿಮಾನಿಗಳು. ಬಹಳ ಸುಲಭವಾಗಿ ಯಾರನ್ನೂ ಇಷ್ಟಪಡಲ್ಲ. ಅಂಥಹುದರಲ್ಲಿ ಮನಸ್ಸಲ್ಲಿ ನನಗೆ ಸಣ್ಣ ಜಾಗ ಕೊಟ್ಟಿದ್ದೀರಿ. ಅದು ಪೀಠಕ್ಕಿಂತ ದೊಡ್ಡದು. ನಿಮ್ಮ ಗೌರವ ಸ್ವೀಕರಿಸಿಲ್ಲ ಎಂದುಕೊಳ್ಳಬೇಡಿ. ಅದನ್ನು ಸ್ವೀಕರಿಸಿದ್ರೆ ನಾನು ಅದಕ್ಕಾಗಿಯೇ ಬಂದೆ ಎಂದುಕೊಳ್ಳುತ್ತಾರೆ. ನಾನು ಬಂದಿದ್ದು ನನ್ನ ಸ್ನೇಹಿತರಿಗೆ’ ಎಂದರು ಸುದೀಪ್.
‘ನನ್ನ ತಾಯಿ ತುಳು ಚೆನ್ನಾಗಿ ಮಾತಾಡ್ತಾರೆ. ನನಗೆ ಜಾಸ್ತಿ ತುಳು ಬರಲ್ಲ. ಕನ್ನಡ ಚಿತ್ರರಂಗಕ್ಕೆ ನಿಮ್ಮವರು ತುಂಬಾ ಜನ ಬಂದಿದ್ದಾರೆ. ಇದರಿಂದ ಕನ್ನಡ ಯಾವುದು, ತುಳು ಯಾವುದು ಅನ್ನೋದು ತಿಳಿಯುತ್ತಿಲ್ಲ’ ಎಂದು ಹಾಸ್ಯ ಮಾಡಿದರು. ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಬಂದು ಉತ್ತಮ ಸಿನಿಮಾ ನೀಡುತ್ತಿರುವವರ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದರು.
ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಿನಿಮಾದ ಶೂಟಿಂಗ್ ಚೆನ್ನೈ ಸಮೀಪ ನಡೆದಿದೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ವರ್ಷವೇ ಅವರ ಈ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ.