
ಅನ್ಯ ಭಾಷೆಯ ನಾಮಫಲಕ ತೆರವಿಗೆ ತುಳು ಭಾಷಿಕರ ವಿರೋಧ
ರಾಜ್ಯದಲ್ಲಿ ಶೇ.60 ರಷ್ಟು ಇರುವ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ಕರಾವಳಿ ಭಾಗದಲ್ಲಿ ಆಕ್ಷೇಪ
ಮಂಗಳೂರು: ರಾಜ್ಯದಲ್ಲಿ ಶೇ.60 ರಷ್ಟು ಇರುವ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ಕರಾವಳಿ ಭಾಗದಲ್ಲಿ ವಿರೋಧ ವ್ಯಕ್ತವಾಗಿದ್ದು, ತುಳು ಭಾಷೆ ಹೋರಾಟಗಾರರು ಯಾವುದೇ ಬೋರ್ಡ್ಗೆ ಕೈ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.
ಬೋರ್ಡ್ಗಳನ್ನು ಒಡೆಯುವುದು ಒಂದು ದಂಧೆಯಾಗಿದೆ. ಬೋರ್ಡ್ ಮಾಡುವ ಅಂಗಡಿಗಳಿಂದ ಇವರಿಗೆ ಫಂಡಿಂಗ್ ಆಗುತ್ತಿದೆ. ತುಳುವರು ಯಾವತ್ತು ಭಾಷೆಗಳ ವಿರೋಧಿಗಳಲ್ಲ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಆಗಬೇಕೆಂದು ಎರಡು ವರ್ಷಗಳಿಂದ ಕೇಳುತ್ತಿದ್ದೇವೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಎಲ್ಲಾ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ ತುಳು ಬಾಕಿ ಉಳಿದಿದೆ. ಇದರ ಬಗ್ಗೆ ನಮಗೆ ಬಹಳ ನೋವಿದೆ ಎಂದು ತುಳು ಹೋರಾಟಗಾರ ರೋಷನ್ ರೇನಾಲ್ಡ್ ಹೇಳಿದ್ದಾರೆ.
ಪ್ರೀತಿಯಿಂದ ಬಳಸಬೇಕೆ ಹೊರತು ಒತ್ತಾಯದ ಹೇರಿಕೆ ಆಗಬಾರದು. ತುಳುನಾಡಿನಲ್ಲಿ ಎಲ್ಲಿಯೂ ಸಹ ಯಾವುದೇ ಬೋರ್ಡ್ಗೆ ಕೈ ಹಾಕಿದರೆ ಇದನ್ನು ಖಂಡಿಸುತ್ತೇವೆ. ಕೊರೊನಾ ಬಳಿಕ ವ್ಯಾಪಾರಿಗಳು ಕಷ್ಟದಲ್ಲಿರುವಾಗ ಇವರ್ಯಾರು ಬಂದಿಲ್ಲ. ಈಗ ಬೋರ್ಡ್ ಒಡೆದು ಹಾಕಿ ನಷ್ಟ ಮಾಡಬಾರದು. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂರಿಸಂ ಇದೆ. ಇಲ್ಲಿಗೆ ವಿದೇಶ, ನೆರೆ ರಾಜ್ಯದಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆಲ್ಲಾ ತೊಂದರೆ ಆಗುತ್ತದೆ ಎಂದರು.
ತುಳು ಲಿಪಿಯ ಬೋರ್ಡ್ ತೆಗೆದಿರುವ ಮಾಹಿತಿ ಈವರೆಗೂ ಬಂದಿಲ್ಲ. ತುಳು ಲಿಪಿಯ ಬೋರ್ಡ್ ಮುಟ್ಟಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.