
ರಾಜ್ಯ ಪ್ರಶಸ್ತಿ | ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ತುಳುವಿನ ʼಜೀಟಿಗೆʼ
2022 ರಲ್ಲಿ ಪ್ರಕಟಗೊಂಡಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಅದರ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ ‘ಜೀಟಿಗೆ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ತುಳು ಚಿತ್ರ ‘ಜೀಟಿಗೆ’ ಸಿನಿಮಾ 2020 ರ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರಿಂದಾಗಿ ಈ ತುಳು ಸಿನಿಮಾ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಂತಾಗಿದೆ.
2022 ರಲ್ಲಿ ಪ್ರಕಟಗೊಂಡಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ತುಳುನಾಡಿನ ದೈವಾರಾಧನೆ ಮತ್ತು ಅದರ ಕಟ್ಟುಪಾಡುಗಳನ್ನು ಬಿಂಬಿಸುವ ಕಲಾತ್ಮಕ ಚಿತ್ರ ‘ಜೀಟಿಗೆ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಖ್ಯಾತ ಮಲಯಾಳಂ ಚಿತ್ರ ನಿರ್ದೇಶಕ ಜಯರಾಜ್ ಗರಡಿಯಲ್ಲಿ ಪಳಗಿದ ಸಂತೋಷ್ ಮಾಡ ನಿರ್ದೇಶನದ ತುಳು ಸಿನಿಮಾ- ಜೀಟಿಗೆ ಯ ನಿರ್ಮಾಣ ಮಾಡಿರುವುದು ಅರುಣ್ ರೈ ತೋಡಾರ್.
ದೈವದ ನರ್ತನ ಸೇವೆ ಮಾಡುತ್ತ ಬಂದ ತನಿಯಪ್ಪ, ತನ್ನ ಮಗನಿಗೆ ಈ ಚಾಕರಿ ಬೇಡ ಎಂದು ವಿದ್ಯಾಭ್ಯಾಸ ಕೊಡಿಸಿ ವಿದೇಶಕ್ಕೆ ಕಳುಹಿಸುವುದು, ಗುತ್ತಿನ ಮನೆಯಲ್ಲಿ ದೈವಕ್ಕೆ ಕೋಲ ಕಟ್ಟುವುದಿಲ್ಲ ಎನ್ನುವುದು, ಮಗನ ಮದುವೆ ಮುರಿದು ಬೀಳುವುದು, ಬಾಲ್ಯದ ನೆನಪುಗಳ ಜತೆ ಒಂಟಿ ವೇದನೆ, ಜತೆಗೆ ಕರೊನಾ ರೋಗ ಜನರ ಜೀವನದ ಮೇಲೆ ಬೀರುವ ಪರಿಣಾಮ, ತಳಮಳವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ತುಳು ಕಲಾವಿದರಾದ ಕುಸಲ್ದರಸೆ ಖ್ಯಾತಿಯ ನವೀನ್ ಡಿ. ಪಡೀಲ್, ಖ್ಯಾತ ರಂಗಕರ್ಮಿ, ಸಿನಿಮಾ ನಟ ಜೆ.ಪಿ. ತೂಮಿನಾಡ್, ರೂಪಾ ವರ್ಕಾಡಿ, ಚೇತನ್ ರೈ ಮಾಣಿ, ಅರುಣ್ ರೈ, ಶಶಿರಾಜ್ ಕಾವೂರು, ಸತ್ಯಜೀವನ್ ಸೋಮೇಶ್ವರ ಮೊದಲಾದವರು ಚಿತ್ರದಲ್ಲಿದ್ದಾರೆ.
ಶಶಿರಾಜ್ ಕಾವೂರು ಚಿತ್ರಕತೆ- ಸಂಭಾಷಣೆ ಬರೆದಿದ್ದು, ಉನ್ನಿ ಮಾಡವುರ್ ಕ್ಯಾಮರಾದಲ್ಲಿ ಕರಾವಳಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಖ್ಯಾತ ಸಾಹಿತಿ ದಿ. ಅಮೃತ ಸೋಮೇಶ್ವರ ಅವರ ಸಾಹಿತ್ಯ, ಸ್ಯಾಕ್ಸೋಫೋನ್ ಜಯರಾಮ್ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ. ಈಗ ರಾಜ್ಯ ಸರ್ಕಾರ ಪ್ರಕಟಿಸುವ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ ʼಜೀಟಿಗೆʼ ಮೂಡಿಬಂದಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಎಸ್. ಲಿಂಗದೇವರು ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿಯು 2020ನೇ ಸಾಲಿನಲ್ಲಿ ಒಟ್ಟು 66 ಚಿತ್ರಗಳನ್ನು ವೀಕ್ಷಿಸಿ, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಬಿ.ಎಸ್. ಲಿಂಗದೇವರು ಜೊತೆಗೆ ಪದ್ಮಾ ಶಿವಮೊಗ್ಗ, ಉಮೇಶ್ ನಾಯಕ್, ಡಿ.ಆರ್. ಸಂಪತ್, ಪದ್ಮಾ ವಾಸಂತಿ, ಮಂಜುನಾಥ್ ಆರ್, ಐವಾನ್ ಡಿ ಸಿಲ್ವಾ ಮತ್ತು ಗುರುರಾಜ್ ಅಲ್ಲದೆ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರು ನವೀನ್ ಆರ್.ಸಿ ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.