
ರಾಜಕಾರಣಿ ಎ.ವಿ. ರಾಜು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ತ್ರಿಶಾ
ದಕ್ಷಿಣದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಎಐಎಡಿಎಂಕೆ ಪಕ್ಷದ ಎ.ವಿ. ರಾಜು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ದಕ್ಷಿಣದ ಖ್ಯಾತ ನಟಿ ತ್ರಿಶಾ ಕೃಷ್ಣನ್, ಎಐಎಡಿಎಂಕೆ ಮಾಜಿ ಕಾರ್ಯಾಧ್ಯಕ್ಷ ಎ.ವಿ. ರಾಜು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಐದು ಲಕ್ಷಕ್ಕೂ ಹೆಚ್ಚು ಪ್ರತಿಗಳ ಪ್ರಸಾರವಿರುವ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆ ಮತ್ತು ತಮಿಳು ದೈನಿಕದಲ್ಲಿ ಕ್ಷಮಾಪಣೆಯನ್ನು ಪ್ರಕಟಿಸುವಂತೆ ಆಕೆಯ ವಕೀಲರು ರಾಜು ಅವರಿಗೆ ನೋಟಿಸಿನಲ್ಲಿ ತಿಳಿಸಿದ್ದಾರೆ.
ಎ.ವಿ. ರಾಜು ಅವರ ಸೇಲಂ ವಿಳಾಸಕ್ಕೆ ಕಳಿಸಿದ ನೋಟೀಸ್‌ನಲ್ಲಿ ತ್ರಿಶಾ ʻಮಾನಹಾನಿʼ ಮತ್ತು ʻಮಾನಸಿಕ ಹಿಂಸೆʼ ಕ್ಕೆ ಪರಿಹಾರ ಕೋರಿದ್ದಾರೆ. ಆದರೆ, ಅವರು ಬೇಡಿಕೆ ಇಟ್ಟಿರುವ ಮೊತ್ತವನ್ನು ಮಸುಕುಗೊಳಿಸಲಾಗಿದ್ದು, ನೋಟಿಸ್ ಬಂದ ನಾಲ್ಕು ದಿನಗಳಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಏನಿದು ಆರೋಪ?:
ಇತ್ತೀಚೆಗೆ ವಜಾಗೊಂಡ ಸೇಲಂ ವೆಸ್ಟ್ ಯೂನಿಯನ್ ಕಾರ್ಯದರ್ಶಿ ರಾಜು ಅವರು ತ್ರಿಷಾ ವಿರುದ್ಧ ಅಸಹ್ಯಕರ ಟೀಕೆ ಮಾಡಿದ್ದಾರೆ. ವಿಡಿಯೋ ಸಂದರ್ಶನವೊಂದರಲ್ಲಿ ಸೇಲಂ ಪಶ್ಚಿಮ ಶಾಸಕ ಜಿ. ವೆಂಕಟಾಚಲಂ ಅವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿದ್ದು, ಅದು ವೈರಲ್ ಆಗಿತ್ತು. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದ ತ್ರಿಶಾ, ʻಗಮನವನ್ನು ಸೆಳೆಯಲು ಯಾವುದೇ ಮಟ್ಟಕ್ಕೆ ಇಳಿಯುವ ಕೀಳು ಮತ್ತು ತಿರಸ್ಕಾರದ ಮನುಷ್ಯರನ್ನು ಪದೇ ಪದೇ ನೋಡುವುದು ಅಸಹ್ಯಕರ. ಖಚಿತವಾಗಿ ಅಗತ್ಯ ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕಾನೂನು ಪ್ರಕಾರ ಮಾಡಬೇಕಿರುವುದನ್ನು ಮಾಡಲಾಗುತ್ತದೆʼ ಎಂದು ಬರೆದಿದ್ದರು.
ಮಹಿಳೆಯರು ಸಾಫ್ಟ್ ಟಾರ್ಗೆಟ್:
ಸಾಮಾಜಿಕ ಮಾಧ್ಯಮ ಬಳಕೆದಾರರು ರಾಜು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ರಾಜಕಾರಣಿಗಳು ʻಮಹಿಳೆಯರನ್ನು ಸಾಫ್ಟ್ ಟಾರ್ಗೆಟ್ ಆಗಿʼ ಬಳಸುವುದನ್ನು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ʻವರದಿಗಾರರು ಕೂವತ್ತೂರ್ ರೆಸಾರ್ಟ್ ಹೊರಗೆ ನಿಂತಿದ್ದರು. ಯಾರ ಗಮನಕ್ಕೂ ಬಾರದಂತೆ ಪ್ರಸಿದ್ಧ ನಟಿಯನ್ನುಕರೆತರುವುದು ಹೇಗೆ ಸಾಧ್ಯ? ಇಂತಹ ಆಧಾರರಹಿತ ಆರೋಪಗಳು ವ್ಯಕ್ತಿಯ ಘನತೆಯನ್ನು ಹಾಳುಮಾಡಬಹುದು ಮತ್ತು ಅಪಾರ ದುಃಖಕ್ಕೆ ಕಾರಣವಾಗಬಹುದುʼ ಎಂದು ಬರೆದಿದ್ದರು.
ನಟ ಮತ್ತು ನಿರ್ದೇಶಕ ಚೇರನ್, ಯಾವುದೇ ಪುರಾವೆಗಳಿಲ್ಲದೆ ವದಂತಿ ಹರಡಿದ ಎ.ವಿ. ರಾಜು ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಹಿಂದೆ ನಟ ಮನ್ಸೂರ್ ಖಾನ್ ಅವರು 'ಲಿಯೋ' ಸಿನೆಮಾದಲ್ಲಿ ಅತ್ಯಾಚಾರ ಅಥವಾ ಮಲಗುವ ಕೋಣೆ ದೃಶ್ಯವನ್ನು ಮಾಡಲು ಸಾಧ್ಯವಾಗದಿದ್ದಕ್ಕಾಗಿ ವಿಷಾದಿಸುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ಎಲ್ಲ ಆರೋಪ ತೆಗೆದುಹಾಕಿ: ವಿವಿಧ ಮಾಧ್ಯಮಗಳಲ್ಲಿ (ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ) ಕಾಣಿಸಿಕೊಂಡಿರುವ ತನ್ನ ವಿರುದ್ಧದ ಎಲ್ಲಾ ಹೇಳಿಕೆಗಳನ್ನು ತೆಗೆದುಹಾಕಬೇಕೆಂದು ನೋಟಿಸ್‌ನಲ್ಲಿ ಕೇಳಿದ್ದಾರೆ. ಇಲ್ಲವಾದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.