
ಸುನೀಲ್ ಶೆಟ್ಟಿ
ರೂಪೇಶ್ ಶೆಟ್ಟಿ ನಿರ್ದೇಶನದ 'ಜೈ' ಚಿತ್ರದ ಟ್ರೇಲರ್ ಬಿಡುಗಡೆ: ಸುನೀಲ್ ಶೆಟ್ಟಿ ಭಾಗಿ
ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ. ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳುನಾಡಿನ ಸಂಸ್ಕೃತಿ ಪರಿಚಯವಾಗಿದೆ. ನಾನು ಕರ್ನಾಟಕದ ಒಂದು ಭಾಗ. ನನ್ನ ಸಹೋದರ ಕೂಡಾ ಬೆಂಗಳೂರಿನಲ್ಲೇ ಇರುವುದು ಎಂದು ನಟ ಸುನೀಲ್ ಶೆಟ್ಟಿ ತಿಳಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಿರ್ದೇಶನದ ಹಾಗೂ ನಟನೆ ಬಹುನಿರೀಕ್ಷಿತ ಚಿತ್ರ 'ಜೈ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ಲಾಂಚ್ ಕಾರ್ಯಕ್ರಮ ಬೆಂಗಳೂರಿನ ಮಾಲ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕುಮ್ಕಳ, ನಟಿ, ನಿರೂಪಕಿ ಅನುಶ್ರೀ ಸೇರಿದಂತೆ ಹಲವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ - ನಟ ರೂಪೇಶ್ ಶೆಟ್ಟಿ ಮಾತನಾಡಿ, ''ಇಂದು ಬಹಳ ಖುಷಿಯಾಗುತ್ತಿದೆ. ತುಳು ಭಾಷೆಯಲ್ಲಿ ಸಣ್ಣದಾಗಿ ಮಾಡಬೇಕು ಎಂದು ಶುರು ಮಾಡಿದ ಸಿನಿಮಾವಿದು. ಆದರೆ ವಿದೇಶದಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ನಮ್ಮ ಈ ತುಳು ಚಿತ್ರವು ಕನ್ನಡ ಹಾಗೂ ತುಳು ಸಿನಿಮಾವಾಗಿ ಬದಲಾಗಿದೆ. ಅದಕ್ಕೆ ಕಾರಣ ಸುನೀಲ್ ಶೆಟ್ಟಿ ಅಣ್ಣ. ಅಣ್ಣನಿಗೆ ನಾವ್ಯಾರು ಎಂದೇ ಗೊತ್ತಿರಲಿಲ್ಲ. ನಿರ್ಮಾಪಕರ ಕಡೆಯಿಂದ ಭೇಟಿಯಾಗಿ ಮನವಿ ಮಾಡಿಕೊಂಡೆವು. ನಿಮ್ಮ ಬೆಂಬಲ ಸಿಕ್ಕಿದ್ರೆ, ನಮ್ಮ ಸಿನಿಮಾ ದೊಡ್ಡ ಮಟ್ಟ ತಲುಪುತ್ತದೆ ಎಂದು ತಿಳಿಸಿದೆವು. ಅವರು ಒಪ್ಪಿಕೊಂಡರು. ಸಿನಿಮಾ ಮುಗಿಸಿ ಹೋಗಿ ಬಿಡಬಹುದಿತ್ತು. ಆದರೆ, ಪ್ರಚಾರಕ್ಕೂ ನಮ್ಮ ಜೊತೆ ನಿಂತಿದ್ದಾರೆ. ಸಿನಿಮಾ ರಿಲೀಸ್ಗೂ ಬರುತ್ತೇನೆ ಎಂದು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವ ನಟ ಸುನೀಲ್ ಶೆಟ್ಟಿ, ಟ್ರೇಲರ್ ಲಾಂಚ್ ಬಳಿಕ ಕನ್ನಡದಲ್ಲೇ ಮಾತು ಶುರು ಮಾಡಿದರು. ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ಆದರೆ ಅರ್ಥ ಆಗುತ್ತದೆ. ನಾನು ಹುಟ್ಟಿದ್ದು ತುಳುನಾಡಲ್ಲಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದೊಂದು ತುಳು ಸಿನಿಮಾ ಅನ್ನುವುದು ಹೆಮ್ಮೆ. ರೂಪೇಶ್ ಶೆಟ್ಟಿ ನನ್ನ ತಮ್ಮನಂತೆ. ನಾನು ತುಳು ಸಿನಿಮಾಗೆ ತುಂಬಾ ಸಪೋರ್ಟ್ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ. ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳುನಾಡಿನ ಸಂಸ್ಕೃತಿ ಪರಿಚಯವಾಗಿದೆ. ನಾನು ಕರ್ನಾಟಕದ ಒಂದು ಭಾಗ. ನನ್ನ ಸಹೋದರ ಕೂಡಾ ಬೆಂಗಳೂರಿನಲ್ಲೇ ಇರುವುದು. ಬೆಂಗಳೂರು ಒಂದು ಗ್ರೀನ್ ಸಿಟಿ. ನನ್ನ ಬಾಲ್ಯದ ದಿನಗಳು ನೆನಪಾಗುತ್ತವೆ. ಬೆಂಗಳೂರಿಗರನ್ನು ನೋಡಿ ತುಂಬಾ ಖುಷಿಯಾಗುತ್ತಿದೆ. ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್ಕುಮಾರ್ ಸರ್ ನೆನಪಾಗುತ್ತಾರೆ ಎಂದು ಅವರು ತಿಳಿಸಿದರು.
ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ಮುಂಬೈ. ನನಗಿನ್ನೂ ಕೇವಲ 65 ವರ್ಷ. ನಾನು ಇಷ್ಟೊಂದು ಸುಂದರವಾಗಿ ಕಾಣಲು ಕಾರಣವೊಂದಿದೆ. ಅದುವೇ ನಮ್ಮ ತುಳುನಾಡು, ನಮ್ಮ ಮೀನು, ನಮ್ಮ ಸಂಸ್ಕೃತಿ, ನಮ್ಮ ಬೊಂಡ, ನಮ್ಮ ಮಂಗಳೂರು ಊಟವೇ ನನ್ನನ್ನು ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದೆ. ನಾನು ಈಗಲೂ ನಮ್ಮ ಸಂಸ್ಕೃತಿ, ಆಚಾರ, ಪರಂಪರೆಗಳನ್ನು ಪಾಲಿಸುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ರೂಪೇಶ್ ಶೆಟ್ಟಿ ಅವರಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದು, ಇದೇ ನವೆಂಬರ್ 14,ರಂದು ಸಿನಿಮಾ ಬಿಡುಗಡೆಯಾಗಲಿದೆ. ಆರ್.ಎಸ್.ಸಿನಿಮಾಸ್, ಶೂಲಿನ್ ಫಿಲ್ಮ್ಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿ ಚಿತ್ರತಂಡದ ಭಾಗವಾಗಿದ್ದಾರೆ.

