ನಾಳೆ ʼದ ಜಡ್ಜ್‌ಮೆಂಟ್‌ʼ ಡೇʼ..| ಮತ್ತೆ ಕರಿಕೋಟು ಧರಿಸಿ ನ್ಯಾಯಾಲಯದ ಕದತಟ್ಟಿದ ರವಿಚಂದ್ರನ್‌
x

ನಾಳೆ ʼದ ಜಡ್ಜ್‌ಮೆಂಟ್‌ʼ ಡೇʼ..| ಮತ್ತೆ ಕರಿಕೋಟು ಧರಿಸಿ ನ್ಯಾಯಾಲಯದ ಕದತಟ್ಟಿದ ರವಿಚಂದ್ರನ್‌

ಈ ಚಿತ್ರದ ಪ್ರತಿಪಾತ್ರವೂ ತನ್ನ ತೂಕವನ್ನು ಕಾಯ್ದುಕೊಳ್ಳುತ್ತದೆ. ʼಯುದ್ಧಕಾಂಡʼ ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಂಡಿದ್ದ ರವಿಚಂದ್ರನ್‌ ಬಹಳ ವರ್ಷಗಳ ನಂತರ ಕರಿಕೋಟು ಧರಿಸಿ, ನ್ಯಾಯಾಲಯದ ಅಂಗಳದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದಾರೆ” ಎನ್ನುತ್ತಾರೆ ನಿರ್ದೇಶಕ ಗುರುರಾಜ ಕುಲಕರ್ಣಿ.


ಕಳೆದ ಕೆಲವು ದಿನಗಳಿಂದ ಕಾದುಗಾರಾದ ಮಣ್ಣೊಡಲಿನ ಬೀಜಕ್ಕೆ ಜೀವಧಾತು ತುಂಬುವಂತೆ ಮಳೆ-ಕರ್ನಾಟಕದ ಇಳೆಗೆ ತಂಪೆರೆಯುತ್ತಿದೆ. ಇದೇ ಸಂದರ್ಭದಲ್ಲಿ, ಕನ್ನಡದ ಪ್ರೇಕ್ಷಕರಿಗಾಗಿ ಕಾದುಗಾರಾಗಿರುವ ಕರ್ನಾಟಕ ಚಿತ್ರಮಂದಿರಗಳಿಗೆ ತಂಪರೆಯುವ ʻಸಾಧ್ಯತೆʼ ಇರುವ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ ʼದ ಜಡ್ಜ್ಮೆಂಟ್‌ʼ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ನಿರ್ದೇಶಕ ಗುರುರಾಜ್‌ ಕುಲಕರ್ಣಿ ʼಲೀಗಲ್‌-ಥ್ರಿಲ್ಲರ್‌ʼ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ʼದ ಜಡ್ಜ್ಮೆಂಟ್‌ʼನ ಟ್ರೇಲರ್‌ ಕೂಡ ಬಿಡುಗಡೆಯಾಗಿದೆ. ಈ ಟ್ರೇಲರ್‌ ಪ್ರೇಕ್ಷಕರ ಕುತೂಹಲವನ್ನು ಕೆಣಕಿರುವುದಂತೂ ಖಂಡಿತ. ಸದ್ಯ ಸಮಾಜದಲ್ಲಿ ಚರ್ಚೆಯಾಗುತ್ತಿರುವ, ಸಿಡಿ, ಪೆನ್ಡ್ರೈವ್‌, ಹೆಣ್ಣಿನ ಮೇಲಿನ ಅತ್ಯಾಚಾರ, ಸಾಕ್ಷಿ ಕೊಲೆ… ಮುಂತಾದ ಶಬ್ಗಗಳೂ ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದು, “ಪ್ರತಿಯೊಬ್ಬ ನಾಗರಿಕನ ಗೌರವ ಹಕ್ಕು ಕಾಪಾಡುವುದೇ ನ್ಯಾಯ... “ “ಕೋರ್ಟ್‌ ನಲ್ಲಿ ಭೇಟಿಯಾಗುತ್ತೇನೆ”, “ಕೆಲವೊಮ್ಮೆ ಕಾನೂನನ್ನು ಎತ್ತಿ ಹಿಡಿಯುವ ನ್ಯಾಯಾಲಯ, ನ್ಯಾಯವನ್ನು ಎತ್ತಿಹಿಡಿಯುವ ವೇದಿಕೆಯಾಗದಿರಬಹುದೆಂಬ” ಎಂಬ ನಿರಾಶೆಯ ಮಾತುಗಳು, ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಬಹುದೆಂಬುದು ಒಂದು ನಂಬಿಕೆ.

ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಕ್ಕಾಗಿ ಹೋರಾಟ

ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟವಿದು ಎನ್ನುವುದು ನಿರ್ದೇಶಕರ ಸಮರ್ಥನೆ. ಈ ಚಿತ್ರದಲ್ಲಿ, ಖ್ಯಾತ ನಟರಾದ ವಿ. ರವಿಚಂದ್ರನ್‌, ಚಾಕಲೇಟ್‌ ಹೀರೋ ದಿಗಂತ್‌ ಮಂಚಾಲೆ ಇದ್ದಾರೆ. ಇವರೊಂದಿಗೆ ತಮ್ಮ ಆಕರ್ಷಕ ಕಣ್ಣುಗಳಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆಯುವ ಲಕ್ಷಿಗೋಪಾಲಸ್ವಾಮಿ, ಮೇಘನಾ ಗಾಂವ್ಕರ್‌, ಸಂಜಯ್‌ ಶಾಸ್ತ್ರಿ, ರಂಗಾಯಣ ರಘು, ರೇಖಾ ಕೂಡ್ಲಗಿ, ಧನ್ಯಾ, ನಟ, ನಿರ್ದೇಶಕ ನಾಗಾಭರಣ, ಪ್ರಕಾಶ್‌ ಬೆಳವಾಡಿ, ಕೃಷ್ಣಾ ಹೆಬ್ಬಾಳೆ, ಜಗದೀಶ್‌ ಮಲ್ನಾಡ್‌, ರವಿಶಂಕರ್‌ ಗೌಡ, ಸೀತಾಕೋಟೆ ಮುಂತಾದ ನುರಿತ ಕಲಾವಿದರ ದಂಡೇ ಇದೆ.

ಈ ಚಿತ್ರದ ಪ್ರತಿಪಾತ್ರವೂ ತನ್ನ ತೂಕವನ್ನು ಕಾಯ್ದುಕೊಳ್ಳುತ್ತದೆ. ʼಯುದ್ಧಕಾಂಡʼ ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಂಡಿದ್ದ ರವಿಚಂದ್ರನ್‌ ಬಹಳ ವರ್ಷಗಳ ನಂತರ ಕರಿಕೋಟು ಧರಿಸಿ, ನ್ಯಾಯಾಲಯದ ಅಂಗಳದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಲಿದ್ದಾರೆ” ಎನ್ನುತ್ತಾರೆ ನಿರ್ದೇಶಕ ಗುರುರಾಜ ಕುಲಕರ್ಣಿ.

ನ್ಯಾಯಾಲಯದಂಗಳದ ನಾಟಕ

ಇತ್ತೀಚೆಗೆ ದೇಶದಲ್ಲಿ ಬಿಡುಗಡೆಯಾಗುತಿರುವ ಚಿತ್ರಗಳ ಸರಣಿಯನ್ನು ಗಮನಿಸಿದರೆ, ʼನ್ಯಾಯಾಲಯ ನಾಟಕʼ (Courtroom drama) ಹೆಚ್ಚುತ್ತಿರುವಂತೆ ಕಾಣುತ್ತದೆ. ಒಮ್ಮೆ ಕರಿಕೋಟು ಬಿಚ್ಚಿಟ್ಟಿದ್ದ ಹಿರಿಯ ಸ್ಟಾರ್‌ ಕಲಾವಿದರು ಮತ್ತೆ ಕರಿಕಕೋಟು ಧರಿಸಿ, ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಕ್ಕಾಗಿ ಸೆಣೆಸಾಡುವ ಚಿತ್ರಗಳು ಕಾಣಿಸುತ್ತಿವೆ. ಇತ್ತೀಚೆಗೆ ಮಲೆಯಾಳಂ ಚಿತ್ರರಂಗದಲ್ಲಿ ಬಿಡುಗಡೆಯಾದ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ʼಜನ ಗಣ ಮನʼ, ʼನಾ ದಾನ್‌ ಕೇಸ್‌ ಕೋಡುʼ, ʼ ಮುಕುಂದನ್‌ ಉನ್ನಿʼ, ʼವಾಶಿʼ ʻಸೌದಿ ವಿಳಕ್ಕುʼ ಚಿತ್ರಗಳನ್ನು ಪ್ರೇಕ್ಷಕರು ಎದೆಗಪ್ಪಿ ಮುದ್ದಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮೋಹನ್‌ ಲಾಲ್‌ ನಿರ್ದೇಶನದ ʻನೆರುʼ ಚಿತ್ರವಂತೂ, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದೆ. ಕಣ್ಣುಕಾಣಿಸದ ಹುಡುಗಿಯೊಬ್ಬಳ ಮೇಲೆ ಶ್ರೀಮಂತನ ಪುತ್ರನೊಬ್ಬ ನಡೆಸುವ ಅತ್ಯಾಚಾರ, ಅದರ ವಿರುದ್ಧ ಮಲೆತು ನ್ಯಾಯಕ್ಕಾಗಿ ಹಂಬಲಿಸಿ ನಿಲ್ಲುವ ಆ ಹುಡುಗಿ, ನ್ಯಾಯಾಲಯದಿಂದ ದೂರವಿದ್ದ ವಕೀಲನೊಬ್ಬ (ಮೋಹನ್‌ ಲಾಲ್) ‌ ಆ ಹುಡುಗಿಗಾಗಿ ಮತ್ತೆ ಕರಿಕೋಟು ಧರಿಸಿ, ದೇಶದ ಖ್ಯಾತ ವಕೀಲನೊಬ್ಬನೆದರು ಸೆಣೆಸಿ, ಕೊನೆಗೆ ಆ ಹುಡುಗಿಗೆ ನ್ಯಾಯ ಕೊಡಿಸುವ ಈ ಕಥನ, ಯಾವ ಪ್ರೇಕ್ಷಕನಿಗೆ ತಾನೆ ಮೆಚ್ಚಿಗೆಯಾಗದು ಹೇಳಿ?

ಕನ್ನಡ ಚಿತ್ರದಲ್ಲಿ ʼನ್ಯಾಯವೇ ದೇವರುʼ

ಹಾಗೆಂದು ಕನ್ನಡ ಚಿತ್ರರಂಗದಲ್ಲಿ ನ್ಯಾಯಾಲಯದಂಗಳದ ನಾಟಕ ತೆರೆಕಂಡೇ ಇಲ್ಲ ಎಂದು ಅರ್ಥವಲ್ಲ. ಕನ್ನಡ ಚಿತ್ರರಂಗದ ತೊಂಭತ್ತು ವರ್ಷದ ಇತಿಹಾಸದಲ್ಲಿ ಇಣುಕಿದರೆ, ಅರವತ್ತರ ದಶಕದಲ್ಲಿ ಬಿಡುಗಡೆಯಾದ ಜಿ.ವಿ. ಐಯ್ಯರ್‌ ನಿರ್ದೇಶನದ ʻಲಾಯರ್‌ ಮಗಳುʼ ಚಿತ್ರದಿಂದ ಹಿಡಿದು, ಡಾ ರಾಜ್‌ ಕುಮಾರ್‌, ವಿಷ್ಣುವರ್ಧನ್‌, ರವಿಚಂದ್ರನ್‌, ಮುಂತಾದವರು ಅಭಿನಯಿಸಿದ ʻಚಲಿಸುವ ಮೋಡಗಳುʼ, ʻಯುದ್ಧ ಕಾಂಡʼ, ʻಬ್ರಹ್ಮ ವಿಷ್ಣು ಮಹೇಶ್ವರʼ, ʻಕೆರಳಿದ ಸಿಂಹʼ, ʼಸಿಂಹ ಘರ್ಜನೆ, ʻನ್ಯಾಯವೇ ದೇವರುʼ, ʻಸಂಶಯ ಫಲʼ, ʻʼಸಿಂಹಜೋಡಿʼ, ʻಧೃವತಾರೆʼ, ʻಆದಿತ್ಯʼ, ʻನನ್ನವನುʼ, ʻಪ್ರಿನ್ಸ್‌ʼ ʻಮಂಜುನಾಥ BA LLB, ʻಸವಾಲ್‌ʼ ಚಿತ್ರಗಳು ಸೇರಿದಂತೆ ಸುಮಾರು ಇಪ್ಪತ್ತು ಚಿತ್ರಗಳು ಇದುವರೆಗೆ ಬಿಡುಗಡೆಯಾಗಿವೆ.

ಕನ್ನಡಿಗರ ಅಭಿಮಾನ

ಕನ್ನಡ ಚಿತ್ರರಂಗದಲ್ಲಿ ಒಂದು ನಂಬಿಕೆ ಇದೆ. ಕೆಲವು ಪಾತ್ರಗಳಿಗೆ ಪರಭಾಷಾ ನಟರನ್ನು ಕರೆತಂದರೆ, ಚಿತ್ರ ಯಶಸ್ವಿ. ಈ ನಂಬಿಕೆಯನ್ನು ಸುಳ್ಳು ಮಾಡಲು ಹೊರಟಿರುವುದು ʼದ ಜಡ್ಜ್ಮೆಂಟ್‌ʼ. “ಈ ಚಿತ್ರದಲ್ಲಿ ತಂತ್ರಜ್ಞರಿಂದ ಹಿಡಿದು ಎಲ್ಲ ಕಲಾವಿದರೂ ಕನ್ನಡದವರೇ” ಎನ್ನುತ್ತಾರೆ ಗುರುರಾಜ ಕುಲಕರ್ಣಿ.

ಚಿತ್ರ ಕುರಿತು ಗುರುರಾಜ ಕುಲಕರ್ಣಿ ಏನು ಹೇಳುತ್ತಾರೆ. ಕೇಳೋಣ ಬನ್ನಿ. “ಈ ಚಿತ್ರದಲ್ಲಿ ಮುಖ್ಯವಾಗಿ ಎರಡು ಪಾತ್ರಗಳ ನಡುವೆ ಇರುವ ತಾಕಲಾಟ ಪ್ರೇಕ್ಷಕರಿಗೆ ಮೆಚ್ಚಿಗೆಯಾಗಬಹುದು. ರವಿಚಂದ್ರನ್‌ ಪಾತ್ರ, ಮತ್ತು ದಿಗಂತ್‌ ಪಾತ್ರ ಅಕಸ್ಮಿಕವಾಗಿ ನಡೆಯುವ ಘಟನೆಯೊಂದರಿಂದ ಮುಖಾಮುಖಿಯಾಗುತ್ತವೆ. ಇದು ಅವರಿಬ್ಬರ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ಇಡೀ ನ್ಯಾಯಾಂಗದ ಬಗ್ಗೆ ಈ ಚಿತ್ರದಲ್ಲಿ ಒಂದು ವಿಮರ್ಶಾತ್ಮಕ ನೋಟವಿದೆ. ಒಬ್ಬ ನಿಷ್ಠಾವಂತ ವಕೀಲ ಜಾತಿ, ಕುಲ, ಗೋತ್ರ, ಅಂತಸ್ತು, ಅಧಿಕಾರ ಮೀರಿ ನ್ಯಾಯಕ್ಕಾಗಿ ಹೋರಾಡುತ್ತಾನೆ ಎಂದು ಹೇಳುವುದು ನನ್ನ ಉದ್ದೇಶ”.

ಈ ಚಿತ್ರಕ್ಕೆ ಸತ್ಯ ಘಟನೆಗಳ ಹಿನ್ನೆಲೆ ಇದೆಯೇ? ಎಂದ್ ಪ್ರಶ್ನಿಸಿದರೆ. “ಕೆಲವು ನೈಜ ಘಟನೆಗಳನ್ನು ಬಳಸಿ, ಕಾಲ್ಪನಿಕ ಕಥೆ ಹೆಣೆದಿದ್ದೇವೆ” ಎಂದು ಕುಲಕರ್ಣಿ ಜಾಣತನದ ಉತ್ತರ ನೀಡುತ್ತಾರೆ. ಈ ಚಿತ್ರಕ್ಕಾಗಿ ಕುಲಕರ್ಣಿ ಸಾಕಷ್ಟು ಸಂಶೋಧನೆ ಮಾಡಿದ್ದಾರಂತೆ. ಈ ಚಿತ್ರದ ಬರಹಗಾರ ವಾಸುದೇವ ಮೂರ್ತಿ ನ್ಯಾಷನಲ್‌ ಲಾ ಕಾಲೇಜಿನಲ್ಲಿ ತರಬೇತಿ ಪಡೆದವರೆಂದರೆ, ನ್ಯಾಯಾಂಗದ ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿಯೇ ಹೆಣೆದಿದ್ದಾರೆ ಎಂದು ಭಾವಿಸಬಹುದು. ಹಿರಿಯ ಕ್ರಿಮಿನಲ್‌ ವಕೀಲರ ನೆರವೂ ಚಿತ್ರಕಥೆಗೆ ದೊರೆತಿದೆ ಎನ್ನುತ್ತಾರೆ, ಕುಲಕರ್ಣಿ.

ಕನ್ನಡಿಗರು ಕನ್ನಡ ಸಿನಿಮಾ ಕೈ ಬಿಟ್ಟರೇ?

ಇಷ್ಟೆಲ್ಲ ಈ ಚಿತ್ರದ ಬಗ್ಗೆ ಏಕೆ ಹೇಳಬೇಕಾಯಿತೆಂದರೆ; ಕನ್ನಡ ಚಿತ್ರರಂಗ ಇಂದು ಆತಂಕದ ಸ್ಥಿತಿಯಲ್ಲಿದೆ. ಕನ್ನಡ ಚಿತ್ರಗಳು ಚಿತ್ರಮಂದಿರದಲ್ಲಿ ನಿಲ್ಲದೆ, ಚಿತ್ರಮಂದಿರಗಳು ಅಸ್ತಿತ್ವಕ್ಕಾಗಿ ಬಾಗಿಲು ಹಾಕಬೇಕಾದಂಥ ಸ್ಥಿತಿ ಎದುರಾಗಿದೆ. ಪ್ರೇಕ್ಷರೇಕೆ ಚಿತ್ರಮಂದಿರಕ್ಕೆ ಬರುತ್ತಿಲ್ಲ? ಎಂಬ ಪ್ರಶ್ನೆ ಗಾಢವಾಗಿ ಕಾಡುತ್ತಿದೆ. ಕನ್ನಡಿಗರು ಕನ್ನಡ ಸಿನಿಮಾ ಕೈಬಿಟ್ಟರೇ? ಎಂದು ಯೋಚಿಸುವಂಥ ಸಂದರ್ಭ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ʼದ ಜಡ್ಜ್ಮೆಂಟ್‌ʼ. ನಂಥ ಅಚ್ಚ ಕನ್ನಡ ಚಿತ್ರ ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಎಳೆದು ತರಲಿದೆಯೇ? ಈ ಪ್ರಶ್ನೆಗೆ ಶುಕ್ರವಾರ ಉತ್ತರ ದೊರೆಯಲಿದೆ.

Read More
Next Story