ಸಿನಿ ಪ್ರೇಮಿಗಳಿಗೆ ಸಿಹಿ ಸುದ್ದಿ- ʻಕಪಾಲಿʼಗೆ  ತೆಲುಗು ನಟ ಮಹೇಶ್‌ ಬಾಬು ಮರುಜೀವ
x

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಗಾಂಧಿನಗರದ ಹೃದಯಭಾಗದಲ್ಲಿದ್ದ, ಏಷ್ಯಾದ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ 'ಕಪಾಲಿ' ಈಗ ಹೊಸ ರೂಪದಲ್ಲಿ ಮರುಜನ್ಮ ಪಡೆದಿದೆ.

ಸಿನಿ ಪ್ರೇಮಿಗಳಿಗೆ ಸಿಹಿ ಸುದ್ದಿ- ʻಕಪಾಲಿʼಗೆ ತೆಲುಗು ನಟ ಮಹೇಶ್‌ ಬಾಬು ಮರುಜೀವ

ಈ ಮಲ್ಟಿಪ್ಲೆಕ್ಸ್ ಒಟ್ಟು 9 ಪರದೆಗಳನ್ನು ಹೊಂದಿದ್ದು, ಪ್ರೇಕ್ಷಕರಿಗೆ ಏಕಕಾಲದಲ್ಲಿ ವಿವಿಧ ಸಿನಿಮಾಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುತ್ತದೆ.


Click the Play button to hear this message in audio format

ಬೆಂಗಳೂರಿನ ಮೆಜೆಸ್ಟಿಕ್ ಎಂದರೆ ಅದು ಕೇವಲ ಜನಸಂದಣಿಯ ಪ್ರದೇಶವಲ್ಲ, ಅದು ಕನ್ನಡ ಚಿತ್ರರಂಗದ ನಾಡಿಮಿಡಿತ ಗಾಂಧಿನಗರದ ಹೃದಯ ಭಾಗ. ಅಲ್ಲೇ ಇದ್ದ ಪ್ರಖ್ಯಾತ ಸಿನಿಮಾ ಮಂದಿರ ʼಕಪಾಲಿʼ.

ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌, ಶಂಕರ್‌ ನಾಗ್‌ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಖ್ಯಾತನಾಮರ ಚಿತ್ರಗಳು ಈ ಸಿನಿಮಾ ಮಂದಿರದಲ್ಲಿ ಪ್ರದರ್ಶನವಾದರೆ ಮಾತ್ರ ಯಶಸ್ಸು ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ, ಏಷ್ಯಾದಲ್ಲೇ ಅತಿದೊಡ್ಡ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ಕಪಾಲಿ’ ಥಿಯೇಟರ್ ನೆಲಸಮವಾದಾಗ ಕೋಟ್ಯಂತರ ಸಿನಿಮಾ ಪ್ರೇಮಿಗಳ ಮನಸ್ಸು ಭಾರವಾಗಿತ್ತು.

ಚಿತ್ರಪ್ರಿಯರು ನಿರಾಶರಾಗಬೇಕಿಲ್ಲ! ಈಗ ಅದೇ 'ಕಪಾಲಿ' ಈಗ ಹೊಸ ರೂಪದಲ್ಲಿ ಮರುಜನ್ಮ ಪಡೆದಿದೆ.

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್‌ಬಾಬು ಒಡೆತನದ ಪ್ರಸಿದ್ಧ ‘ಎಎಂಬಿ ಸಿನಿಮಾಸ್’ ಈಗ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಭವ್ಯವಾಗಿ ತಲೆಎತ್ತಿದೆ. `ಎಎಂಬಿ ಸಿನಿಮಾಸ್ ಕಪಾಲಿ’ ಎನ್ನುವ ಹೆಸರಿನಲ್ಲಿ ಈ ಮಲ್ಟಿಪ್ಲೆಕ್ಸ್ ಕಾರ್ಯ ಆರಂಭಿಸಿದೆ. ಇದು ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಇಂದು ಚಿತ್ರಮಂದಿರವಾಗಿದ್ದು 9 ಸ್ಕ್ರೀನ್‌ಗಳು ಇದರಲ್ಲಿ ಇದೆ. ಸ್ಕ್ರೀನ್‌ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟ ಹೊಂದಿದ್ದು ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರ ವೀಕ್ಷಣೆ ಅನುಭವ ನೀಡುತ್ತದೆ.

ಕನ್ನಡ ಚಿತ್ರಪ್ರಿಯರ ಹಳೆಯ ನೆನಪು - ಕಪಾಲಿ!

ಕಪಾಲಿ ಚಿತ್ರಮಂದಿರ ಉದ್ಘಾಟಿಸಿದ್ದು ಮೊರಾರ್ಜಿ ದೇಸಾಯಿ

ಬೆಂಗಳೂರಿನ ಗಾಂಧಿನಗರದ ಹಳೆಯ ನೆನಪುಗಳ ಕೊಂಡಿಯೊಂದು 2020ರಲ್ಲಿ ಕಳಚಿಹೋಗಿತ್ತು! ಸುಮಾರು ಅರ್ಧ ಶತಮಾನದ ಕಾಲ ಚಿತ್ರಪ್ರೇಮಿಗಳ ಶಿಳ್ಳೆ-ಚಪ್ಪಾಳೆಗಳಿಗೆ ಸಾಕ್ಷಿಯಾಗಿದ್ದ, ಏಷ್ಯಾದಲ್ಲೇ ಮೊದಲ ಬಾರಿಗೆ ‘ಸಿನೆರಾಮ್‌’ ತಂತ್ರಜ್ಞಾನ ಪರಿಚಯಿಸಿದ ಹೆಮ್ಮೆಯ ‘ಕಪಾಲಿ’ ಚಿತ್ರಮಂದಿರ ನೆಲಸಮವಾಗಿತ್ತು. ದಾಸಪ್ಪ ಸಹೋದರರ ಮಾಲೀಕತ್ವದಲ್ಲಿದ್ದ ಈ ಐತಿಹಾಸಿಕ ಚಿತ್ರಮಂದರಿವನ್ನು ಬೆಳಗಾವಿಯ ಉದ್ಯಮಿಯೊಬ್ಬರು ಖರೀದಿಸಿದ್ದರು.

1968ರಲ್ಲಿ ಸುಬೇದಾರ್‌ ಛತ್ರಂ ರಸ್ತೆಯ 44,184 ಚದರ ಅಡಿ ವಿಸ್ತಾರವಾದ ಜಾಗದಲ್ಲಿ ನಿರ್ಮಾಣವಾದ ಈ ಚಿತ್ರಮಂದಿರವನ್ನು ಅಂದಿನ ಹಣಕಾಸು ಸಚಿವ , ಮಾಜಿ ಪ್ರಧಾನಿ ದಿ. ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ್ದರು.

ಒಟ್ಟು 1,465 ಆಸನಗಳ ಸಾಮರ್ಥ್ಯ ಹೊಂದಿದ್ದ ಈ ಥಿಯೇಟರ್, ಭಾರತದಲ್ಲೇ ಮೊದಲ ಬಾರಿಗೆ ಮೂರು ಪ್ರೊಜೆಕ್ಟರ್‌ಗಳನ್ನು ಬಳಸುವ ‘ಸಿನೆರಾಮಾ’ ತಂತ್ರಜ್ಞಾನವನ್ನು ಪರಿಚಯಿಸಿತ್ತು ವರನಟ ಡಾ. ರಾಜ್‌ಕುಮಾರ್‌ ಅವರ ‘ಮಣ್ಣಿನ ಮಗ’ ಚಿತ್ರ ಶತದಿನೋತ್ಸವದ ಶುಭಾರಂಭ ಕಂಡಿತ್ತು. ಡಾ. ರಾಜ್‌ ಅವರ ‘ಹಾಲು ಜೇನು’ ಚಿತ್ರ ಬಿಡುಗಡೆಯಾದಾಗ ಅವರ 58 ಅಡಿ ಎತ್ತರದ ಬೃಹತ್ ಕಟೌಟ್ ಇಲ್ಲಿ ರಾರಾಜಿಸಿತ್ತು. ಅದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ದೊಡ್ಡ ಕಟೌಟ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು.

ಶಿವರಾಜ್‌ ಕುಮಾರ್‌ ಅವರ ‘ಓಂ’ ಚಿತ್ರ ಇದೇ ಕಪಾಲಿಯಲ್ಲಿ ಸಂಚಲನ ಸೃಷ್ಟಿಸಿತ್ತು ಓಂ ಬರೋಬ್ಬರಿ 30 ಬಾರಿ ಇದೇ ಚಿತ್ರಮಂದರಿದಲ್ಲಿ ಮರು-ಬಿಡುಗಡೆಯಾಗಿ ದಾಖಲೆ ಬರೆಯಿತು. ಪ್ರತಿ ಬಾರಿ ಬಿಡುಗಡೆಯಾದಾಗಲೂ ಕಪಾಲಿ ಹಬ್ಬದಂತೆಯೇ ಕಂಗೊಳಿಸುತ್ತಿತ್ತು.

ಕಾಲ ಬದಲಾದಂತೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಬೇಡಿಕೆ ಕಡಿಮೆಯಾಗಿ ಮಲ್ಟಿಪ್ಲೆಕ್ಸ್ ಸಂಸ್ಕೃತಿ ಬೆಳೆಯತೊಡಗಿತು. ಈ ಬದಲಾವಣೆಗೆ ಸಿಲುಕಿದ ಕಪಾಲಿ, 2017ರ ಅಕ್ಟೋಬರ್‌ನಲ್ಲಿ ‘ಹುಲಿರಾಯ’ ಚಿತ್ರದ ಪ್ರದರ್ಶನದೊಂದಿಗೆ ತನ್ನ 49 ವರ್ಷಗಳ ಸುದೀರ್ಘ ಪಯಣವನ್ನು ಅಂತ್ಯಗೊಳಿಸಿತ್ತು. ಚಿತ್ರಮಂದಿರ ನೆಲಸಮಗೊಂಡಾಗ ಸಿನಿಮಾ ಪ್ರೇಮಿಗಳಲ್ಲಿ ನೋವು ಮತ್ತು ಅಲ್ಲಿ ಮುಂದೆ ಏನಾಗಬಹುದು ಎಂಬ ಕುತೂಹಲ ಮನೆಮಾಡಿತ್ತು. ಈಗ ಅದೇ ಜಾಗದಲ್ಲಿ ಭವ್ಯವಾದ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದೆ.

ಈಗ ಇದೇ ಜಾಗದಲ್ಲಿ...

...ಹೊಸ ಸಿನಿಮಾ ಮಂದಿರವೊಂದು ತೆಲುಗು ಚಿತ್ರನಟ ಮಹೇಶ್‌ ಒಡೆತನದಲ್ಲಿ ʼಎಎಂಬಿ ಸಿನಿಮಾಸ್ ಕಪಾಲಿʼ ಹೆಸರಿನಲ್ಲಿ ತಲೆಯಿತ್ತಿದೆ.

ಮುಂಬರುವ ದಿನಗಳಲ್ಲಿ ಕರ್ನಾಟಕದ ಇತರೆ ಭಾಗಗಳಲ್ಲೂ ಎಎಂಬಿ ಸಿನಿಮಾಸ್ ತೆರೆಯುವ ಯೋಜನೆ ಇದೆ ಎಂದು ಎಎಂಬಿ ಸಿನಿಮಾಸ್ ನ ಎಂ.ಡಿ ಭರತ್ ನಾರಂಗ್ ತಿಳಿಸಿದರು.

ವಿಶೇಷವಾಗಿ ಎಲ್ಲಾ ಸ್ಕ್ರೀನ್ ಗಳಲ್ಲಿ ಅತ್ಯುತ್ತಮ ಬಣ್ಣ ಹಾಗೂ ದೃಶ್ಯ ಸ್ಪಷ್ಟತೆಗಾಗಿ ಬಾರ್ಕೋ ಲೇಸರ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನು "ಎಎಂಬಿ ಸಿನಿಮಾಸ್‌"ನಲ್ಲಿ ಬಳಸಲಾಗಿದೆ. ಇನ್ನು ಸ್ಕ್ರೀನ್ 6 ಎಲ್ಲಕ್ಕಿಂತ ವಿಶೇಷವಾಗಿದ್ದು, ಇದು ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಪರದೆಯಾಗಿದೆ.

ಕಪಾಲಿ - ತೆಲುಗು ಚಿತ್ರನಟ ಮಹೇಶ್‌ ಬಾಬು ಒಡೆತನದಲ್ಲಿ ಹೊಸ ರೂಪದೊಂದಿಗೆ

ಇದು ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಮತ್ತು ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ. ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು ‘ಎಂ-ಲೌಂಜ್’ ಎಂಬ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಆಹಾರ ಮತ್ತು ಪಾನೀಯ ಚಲನಚಿತ್ರ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ.

ಆಹಾರ ಮತ್ತು ಪಾನೀಯ ಚಲನಚಿತ್ರ ವೀಕ್ಷಕರಿಗಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇಲ್ಲಿದೆ.

ಇಲ್ಲಿನ ಟಿಕೆಟ್ ದರದ ಕುರಿತು ನೋಡುವುದಾದರೆ ಅಷ್ಟೇನು ದುಬಾರಿ ಅಲ್ಲದೆ ಎಲ್ಲರಿಗೂ ಅನುಕೂಲವಾಗುವ ದರದಲ್ಲಿರುತ್ತದೆ. ಸರ್ಕಾರದ ನಿಯಮಾವಳಿಯಂತೆ ಬೆಳಿಗ್ಗೆ ಆರು ಗಂಟೆಯಿಂದ ಪ್ರಥಮ ಪ್ರದರ್ಶನ ಪ್ರಾರಂಭವಾಗುತ್ತದೆ ಮತ್ತು ಕಡೆಯ ಪ್ರದರ್ಶನ ರಾತ್ರಿ 10.30ಕ್ಕೆ ಇರುತ್ತದೆ. ಅದರ ನಡುವೆ ಐದು, ಆರು ಪ್ರದರ್ಶನಗಳನ್ನು ನೀಡಲು ಯೋಜಿಸಲಾಗುತ್ತದೆ. ಇಲ್ಲಿ ಲೈವ್ ಕಿಚನ್ ತೆರೆಯಲಾಗಿದ್ದು ಪ್ರೇಕ್ಷಕರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ಪೂರೈಸುವ ಉದ್ದೇಶವಿದೆ.

ಮುಂಬರುವ ದಿನಗಳಲ್ಲಿ ಕರ್ನಾಟಕದ ಇತರೆ ಭಾಗಗಳಲ್ಲೂ ಎಎಂಬಿ ಸಿನಿಮಾಸ್ ತೆರೆಯುವ ಯೋಜನೆ ಇದೆ. ಬಹಳ ಹಿಂದಿನಿಂದ ಎಎಂಬಿ ಸಿನಿಮಾಸ್' ಹಾಗೂ ಕ್ಯೂಬ್ ನಡುವೆ ಒಪ್ಪಂದವಿದೆ ಎಂದು ಎಎಂಬಿ ಸಿನಿಮಾಸ್" ನ ಎಂ.ಡಿ ಭರತ್ ನಾರಂಗ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಾಲ್ಬಿ ಲ್ಯಾಬೋರೇಟರಿಸ್ ನ ಸಮೀರ್ ಸೇಠ್ ಹಾಗೂ ಆರ್ಕಿಟೆಕ್ಚರ್ ಈರಣ್ಣ ಯೆಕೆಬೋಟೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Read More
Next Story