
'ತಿಥಿ' ಚಿತ್ರದ ಜೋಡಿ ಇನ್ನು ನೆನಪು: 'ಗಡ್ಡಪ್ಪ'ನ ಬೆನ್ನಲ್ಲೇ 'ಸೆಂಚುರಿ ಗೌಡ' ವಿಧಿವಶ
'ತಿಥಿ' ಸಿನಿಮಾ ಖ್ಯಾತಿಯ ಸೆಂಚುರಿ ಗೌಡ (ಸಿಂಗ್ರಿಗೌಡ) ಜನವರಿ 4ರಂದು ನಿಧನರಾಗಿದ್ದಾರೆ. ನವೆಂಬರ್‌ನಲ್ಲಿ ಗಡ್ಡಪ್ಪ (ಚನ್ನೇಗೌಡ) ಮೃತಪಟ್ಟ ಬೆನ್ನಲ್ಲೇ ಈ ಘಟನೆ ನಡೆದಿದ್ದು, ತಿಥಿ ಚಿತ್ರದ ಅಪ್ರತಿಮ ಜೋಡಿ ಈಗ ನೆನಪು ಮಾತ್ರ.
ಕನ್ನಡ ಚಿತ್ರರಂಗದ ಮೈಲಿಗಲ್ಲು ಎನಿಸಿಕೊಂಡ 'ತಿಥಿ' ಸಿನಿಮಾದ ಹಿರಿಯ ಕಲಾವಿದರು ಈಗ ಇತಿಹಾಸದ ಪುಟ ಸೇರಿದ್ದಾರೆ. ಗಡ್ಡಪ್ಪ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಚನ್ನೇಗೌಡರು ಎರಡು ತಿಂಗಳ ಹಿಂದೆಯಷ್ಟೇ ನಿಧನರಾದ ಬೆನ್ನಲ್ಲೇ, ಈಗ ಸೆಂಚುರಿ ಗೌಡ ಪಾತ್ರಧಾರಿ ಸಿಂಗ್ರಿಗೌಡರು ಕೂಡ ಇಹಲೋಕ ತ್ಯಜಿಸಿದ್ದಾರೆ.
ಶತಾಯುಷಿ ಸಿಂಗ್ರಿಗೌಡರ (ಸೆಂಚುರಿ ಗೌಡ) ಹಿನ್ನೆಲೆ
ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲಿನವರಾದ ಸಿಂಗ್ರಿಗೌಡರು (100+ ವರ್ಷ), ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಜನವರಿ 4ರ ರಾತ್ರಿ ಅವರು ಕೊನೆಯುಸಿರೆಳಿದ್ದಾರೆ.
ಸಿಂಗ್ರಿಗೌಡರ ಅಣ್ಣನ ತಿಥಿ ಕಾರ್ಯಕ್ಕೆ ಬಂದಿದ್ದ ನಿರ್ದೇಶಕರು ಇವರನ್ನು ಕಂಡು 'ಸೆಂಚುರಿ ಗೌಡ' ಪಾತ್ರಕ್ಕೆ ಆಯ್ಕೆ ಮಾಡಿದ್ದರು. 'ತಿಥಿ' ಸಿನಿಮಾಗೆ ಇವರಿಗೆ 20 ಸಾವಿರ ರೂ. ಸಂಭಾವನೆ ನೀಡಲಾಗಿತ್ತು. ಆ ಸಿನಿಮಾ ಹಿಟ್ ಆದ ಮೇಲೆ ಅನೇಕರು ಅವರ ಊರಿಗೆ ಬಂದು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿದರೂ, ಕೆಲವು ಚಿತ್ರತಂಡಗಳು ಹಣ ನೀಡದೆ ಅವರಿಗೆ ವಂಚಿಸಿದ್ದವು ಎಂಬ ನೋವು ಅವರಿಗಿತ್ತು.
ಗಡ್ಡಪ್ಪನ ಅಗಲಿಕೆ
ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದವರಾದ ಚನ್ನೇಗೌಡ (ಗಡ್ಡಪ್ಪ) ಅವರು 2025ರ ನವೆಂಬರ್ 12ರಂದು ನಿಧನ ಹೊಂದಿದ್ದರು. ಇವರು ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆ ಹಾಗೂ ಉಬ್ಬಸದಿಂದ ಬಳಲುತ್ತಿದ್ದರು. ಬಡತನದ ಕಾರಣ ಚಿಕಿತ್ಸೆಗೂ ಪರದಾಡಿದ್ದ ಅವರು, ವಯೋಸಹಜ ಕಾಯಿಲೆಗಳಿಗೆ ಶರಣಾಗಿದ್ದರು.

