
‘UI’ ಜೊತೆಗೆ ಯಾವುದೇ ಕ್ಲಾಶ್ ಇಲ್ಲ; ಆ ಚಿತ್ರದ ಬಗ್ಗೆ ನಾವು ಹೆದರಬೇಕು ಎಂದ ಸುದೀಪ್
‘ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಚಿತ್ರರಂಗಕ್ಕೆ ಅನುಕೂಲವೇ ಆಗುತ್ತದೆ. ಇದರಲ್ಲಿ ಕ್ಲಾಶ್ ಏನೂ ಇಲ್ಲ’
‘ಒಂದಕ್ಕಿಂತ ಹೆಚ್ಚು ದೊಡ್ಡ ಚಿತ್ರಗಳು ಬಂದರೆ ಚಿತ್ರರಂಗಕ್ಕೆ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಚಿತ್ರರಂಗಕ್ಕೆ ಅನುಕೂಲವೇ ಆಗುತ್ತದೆ. ಇದರಲ್ಲಿ ಕ್ಲಾಶ್ ಏನೂ ಇಲ್ಲ’
ಹಾಗಂತ ಹೇಳಿದ್ದು ಸುದೀಪ್. ಇದೇ ಡಿಸೆಂಬರ್ 20ರಂದು ಉಪೇಂದ್ರ ಅಭಿನಯದ ‘ಯುಐ’ ಚಿತ್ರ ಬಿಡುಗಡೆ ಆಗುತ್ತಿದೆ. ಅದಾಗಿ ಐದು ದಿನಗಳ ನಂತರ, ಅಂದರೆ ಡಿ. 25ರಂದು ಕ್ರಿಸ್ಮಸ್ ಪ್ರಯುಕ್ತ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಯಾಗುತ್ತಿದೆ.
ಒಂದು ತಿಂಗಳ ಕಾಲ ಯಾವುದೇ ಸ್ಟಾರ್ ಚಿತ್ರದ ಬಿಡುಗಡೆ ಇರಲಿಲ್ಲ. ಮುಂದಿನ ವರ್ಷದ ಒಂದೆರಡು ತಿಂಗಳು ಸಹ ಇರುವುದಿಲ್ಲ. ಹೀಗಿರುವಾಗ, ವರ್ಷಾಂತ್ಯಕ್ಕೆ ಐದು ದಿನಗಳ ಅಂತರದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದರೆ, ಎರಡೂ ಚಿತ್ರಗಳಿಗೆ ಸಮಸ್ಯೆ ಆಗುತ್ತದೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಸುದೀಪ್ ಅಭಿನಯದ ಚಿತ್ರ ಸಾಕಷ್ಟು ತಡವಾಗಿದೆ. ಇನ್ನೂ ಕೆಲವು ದಿನಗಳ ಕಾಲ ತಡವಾಗಿದ್ದರೆ, ಚಿತ್ರಕ್ಕೂ ಅನುಕೂಲವಾಗುತ್ತಿತ್ತು, ಪ್ರೇಕ್ಷಕರು ಸಹ ಚಿತ್ರಮಂದಿರಕ್ಕೆ ಬರುವಂತಾಗುತ್ತಿತ್ತು ಎಂಬ ಮಾತಿದೆ.
ಈ ಕುರಿತು ಭಾನುವಾರ ರಾತ್ರಿ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ಡಿ. 25ರಂದು ಚಿತ್ರ ಬಿಡುಗಡೆ ಆಗುತ್ತಿರುವುದಕ್ಕೆ ಪ್ರಮುಖ ಕಾರಣ ಅದು ರಜೆಯ ಸೀಸನ್. ವರ್ಷಾಂತ್ಯಕ್ಕೆ ಕ್ರಿಸ್ಮಸ್ ರಜೆ ಇದೆ. ಹಾಗಾಗಿ, ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಅನುಕೂಲವಾಗಬಹುದು ಎಂಬ ಕಾರಣಕ್ಕೆ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಆಗಸ್ಟ್ ತಿಂಗಳಲ್ಲೇ ‘ಮ್ಯಾಕ್ಸ್’ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಚಿತ್ರದ ಕೆಲಸಗಳು ಮುಗಿಯದ ಕಾರಣ ಒಂದು ತಿಂಗಳು ಮುಂದಕ್ಕೆ ಹೋಗುವ ಪರಿಸ್ಥಿತಿ ಇತ್ತು. ಒಂದು ತಿಂಗಳ ಬದಲು, ಕ್ರಿಸ್ಮಸ್ ರಜೆಯ ಸಂದರ್ಭಧಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರಿಗೆ ಇತ್ತು. ಅದರಂತೆ ಡಿಸೆಂಬರ್ 25ರಂದು ಚಿತ್ರ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.
‘UI’ ಜೊತಗಿನ ಕ್ಲಾಶ್ ಕುರಿತು ಮಾತನಾಡಿದ ಸುದೀಪ್, ‘ಇದರಿಂದ ಯಾವುದೇ ಕ್ಲಾಶ್ ಇಲ್ಲ. ಇದರಿಂದ ಉಪೇಂದ್ರ ಅವರ ತಂಡಕ್ಕೆ ಯಾವುದೇ ತೊಂದರೆ ಇಲ್ಲ. ಅದು ದೊಡ್ಡ ಸಿನಿಮಾ. ಆ ಚಿತ್ರದ ಬಗ್ಗೆ ನಾವು ಹೆದರಬೇಕು. ನಮ್ಮ ಚಿತ್ರ ಬಿಡುಗಡೆ ಆಗತ್ತಿರುವ ಬಗ್ಗೆ ಅವರೇ ತಲೆ ಕೆಡಿಸಿಕೊಂಡಿಲ್ಲ. ನಾವ್ಯಾಕೆ ಡಿಸೆಂಬರ್ 25ರಂದು ಬರುತ್ತಿದ್ದೇವೆ ಎಂದು ಅವರಿಗೂ ಗೊತ್ತಿದೆ. ಉಪೇಂದ್ರ ಅವರ ಕೊಡುಗೆ ದೊಡ್ಡದು. ಅವರಿಂದ ಎಷ್ಟೋ ವಿಷಯಗಳಿಂದ ಕಲಿತಿದ್ದೇವೆ. ಅವರು ನಮ್ಮ ಗುರುವಿದ್ದಂತೆ. ಅವರು ಮೊದಲು ಬರುತ್ತಿದ್ದಾರೆ. ಅವರ ಶಿಷ್ಯನಾಗಿ ನಾನು ಐದು ದಿನಗಳ ನಂತರ ಬರುತ್ತಿದ್ದೇನೆ’ ಎಂದರು.
ಸುದೀಪ್ ಪೂರ್ಣಪ್ರಮಾಣವಾಗಿ ನಾಯಕನಾಗಿ ಅಭಿನಯಿಸಿರುವ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳಾಗಿವೆ. ಈ ಕುರಿತು ಮಾತನಾಡಿದ ಅವರು, ‘ಕ್ರಿಕೆಟ್, ‘ಬಿಗ್ ಬಾಸ್’ ಮತ್ತಿತರ ಕಾರಣಗಳಿಂದ ಇತ್ತೀಚೆಗೆ ಚಿತ್ರಗಳು ನಿಧಾನವಾಗುತ್ತಿವೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಯಾವತ್ತೂ ಹೀಗಿ ಗ್ಯಾಪ್ ಆಗಿರಲಿಲ್ಲ. ನನಗೆ ಪ್ರತಿ ದಿನ ಕೆಲಸ ಮಾಡಬೇಕೆಂಬ ಆಸೆ ಇದೆ. ಆದರೆ, ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಿರುತ್ತಾರೆ. ಎಲ್ಲಿ ಸಿಕ್ಕರೂ ಚಿತ್ರದ ಬಗ್ಗೆ ಕೇಳುತ್ತಿರುತ್ತಾರೆ. ಅವರಿಗೆ ನಾನು ಸದಾ ಚಿರಋಣಿ. ನನಗೆ ಸಿನಿಮಾ ಮಾಡೋದಕ್ಕೆ ಅವರು ತೋರಿಸುವ ಪ್ರೀತಿಯೇ ಸ್ಫೂರ್ತಿ’ ಎಂದರು.
‘ಮ್ಯಾಕ್ಸ್’ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದು, ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ‘ಉಗ್ರಂ’ ಮಂಜು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.