
ಏಪ್ರಿಲ್ 18ರಂದು ‘ವೀರ ಚಂದ್ರಹಾಸ’ ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ಯಕ್ಷಗಾನ; ಏಪ್ರಿಲ್ 18ರಂದು ‘ವೀರ ಚಂದ್ರಹಾಸ’ ಬಿಡುಗಡೆ
ಯಕ್ಷಗಾನ ಪ್ರಸಂಗ, ಕಲಾವಿದರು, ವೇಷಭೂಷಣವನ್ನೇ ಸಂಪೂರ್ಣವಾಗಿ ಇಟ್ಟುಕೊಂಡು, ‘ವೀರ ಚಂದ್ರಹಾಸ’ ಎಂಬ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಕೆಲವು ಸಿನಿಮಾಗಳಲ್ಲಿ ಯಕ್ಷಗಾನದ ನೃತ್ಯ ಮತ್ತು ಕಲಾವಿದರನ್ನು ಈ ಹಿಂದೆ ಬಳಸಿಕೊಂಡಿರುವುದನ್ನು ನೋಡಿದ್ದೇವೆ. ಆದರೆ, ಯಕ್ಷಗಾನವನ್ನೇ ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ಇದೀಗ ಭಾರತೀಯ ಚಿತ್ರರಂಗದಲ್ಲೇ ಮೊದಲ ಎಂಬಂತೆ ಯಕ್ಷಗಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಚಿತ್ರವೊಂದನ್ನು ನಿರ್ಮಿಸಲಾಗಿದೆ. ಅದೇ ‘ವೀರ ಚಂದ್ರಹಾಸ’.
ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿರುವವರು ಸಂಗೀತ ನಿರ್ದೇಶಕ ರವಿ ಬಸ್ರೂರು. ಈ ಹಿಂದೆ ‘ಕಟಕ’, ‘ಗಿರ್ಮಿಟ್’, ‘ಕಡಲ್’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವಿ ಬಸ್ರೂರು, ಇದೀಗ ಹೊಸ ಪ್ರಯೋಗ ಮಾಡಿದ್ದಾರೆ. ಯಕ್ಷಗಾನ ಪ್ರಸಂಗ, ಕಲಾವಿದರು, ವೇಷಭೂಷಣವನ್ನೇ ಸಂಪೂರ್ಣವಾಗಿ ಇಟ್ಟುಕೊಂಡು, ‘ವೀರ ಚಂದ್ರಹಾಸ’ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ.
12 ವರ್ಷಗಳ ಕನಸು ಇದೀಗ ನನಸಾಗಿದೆ
‘ವೀರ ಚಂದ್ರಹಾಸ’ ಚಿತ್ರ ಮಾಡಬೇಕು ಎಂಬುದು ರವಿ ಬಸ್ರೂರು ಅವರ 12 ವರ್ಷಗಳ ಕನಸಂತೆ. ಈ ಕುರಿತು ಮಾತನಾಡಿದ ಅವರು ''ಕರಾವಳಿ ಕರ್ನಾಟಕದ ವಿಶೇಷ ಕಲೆ ಯಕ್ಷಗಾನ ಎಲ್ಲರಿಗೂ ತಿಳಿಯುವಂತಾಗಬೇಕು ಮತ್ತು ಪ್ರಪಂಚ ಇದರ ಬಗ್ಗೆ ಗಮನಹರಿಸುವಂತಾಗಬೇಕು ಎಂಬ ಕಾರಣಕ್ಕೆ ಚಿತ್ರ ಮಾಡಿದೆ. ಯಕ್ಷಗಾನದಲ್ಲಿ ವಿಷಯಗಳ ಭಂಡಾರವೇ ಇದೆ. ಈ ಚಿತ್ರ ನಿರ್ಮಾಣ 12 ವರ್ಷಗಳ ಆಸೆಯಾಗಿತ್ತು ಹಾಗೂ ಅದೀಗ ಕೈಗೂಡಿದೆ. ಚಿತ್ರದಲ್ಲಿ ಸಾಕಷ್ಟು ಯಕ್ಷಗಾನ ಕಲಾವಿದರು ನಟಿಸಿದ್ದಾರೆ. ಈ ಪ್ರಸಂಗದ ಅವಧಿ ಐದು ತಾಸು. ಅದರ ಆಯ್ದ ಕೆಲವು ಮುಖ್ಯ ಭಾಗಗಳನ್ನಷ್ಟೇ ಬಳಸಿಕೊಂಡಿದ್ದು. ಎರಡೂವರೆ ಗಂಟೆಗೆ ಇಳಿಸಿದ್ದೇವೆ. ಸಿನಿಮಾ ವೇಗಕ್ಕೆ ಯಕ್ಷಗಾನ ಅಳವಡಿಸಿಕೊಂಡಿದ್ದೇವೆ,'' ಎಂದು ಹೇಳಿದ್ದಾರೆ.
ಭಿಕ್ಷುಕನೊಬ್ಬ ರಾಜನಾದ ಕಥೆ ಇದು
ಪುರಾಣದ ಕಥೆಯಾದರೂ ಚಿತ್ರದಲ್ಲಿ ಸಾಕಷ್ಟು ಕಮರ್ಷಿಯಲ್ ಅಂಶಗಳಿವೆ ಎನ್ನುವ ಅವರು, ‘ಆ ಕಾಲದಲ್ಲೂ ಯುದ್ಧಗಳು ನಡೆಯುತ್ತಿದ್ದವು. ದ್ವೇಷ, ಸಾವು, ನೋವು ಎಲ್ಲವೂ ಇತ್ತು. ಎಲ್ಲಾ ಕಮರ್ಷಿಯಲ್ ಅಂಶಗಳು ಈ ಕಥೆಯಲ್ಲಿದೆ. ಒಬ್ಬ ಭಿಕ್ಷುಕ ಒಂದು ರಾಜ್ಯದ ದೊರೆ ಆಗುತ್ತಾನೆ ಎನ್ನುವುದು ಸಾಮಾನ್ಯ ಮಾತಲ್ಲ. ಅದು ಹೇಗೆ ಸಾಧ್ಯವಾಯಿತು ಎನ್ನುವುದೇ ಚಿತ್ರ. ಚಂದ್ರಹಾಸ, ಕುಂತಳ ದೇಶದ ರಾಜ. ಅವರ ಕಥೆಯೇ ವಿಚಿತ್ರವಾದ ಕಥೆ. ಒಬ್ಬ ಭಿಕ್ಷುಕ ರಾಜನಾದ ಕಥೆ ಅದು. ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನಿಗೆ ಸೈನ್ಯ ಬೇಕಾದಾಗ ಕೃಷ್ಣ, ಚಂದ್ರಹಾಸನನ್ನು ಪರಿಚಯ ಮಾಡಿಸುತ್ತಾರೆ. ಅಕ್ಷೋಹಿಣಿ ಸೈನ್ಯದ ಲೆಕ್ಕ ಇಲ್ಲದ ಒಬ್ಬ ರಾಜ. ಮಹಾಭಾರತ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ, ತನ್ನ ದೊಡ್ಡ ಸೈನ್ಯವನ್ನು ಕೊಟ್ಟಿದ್ದ. ಈ ಎಲ್ಲಾ ವಿಷಯಗಳನ್ನಿಟ್ಟುಕೊಂಡು ಚಿತ್ರ ಮಾಡಿದ್ದೇವೆ’ ಎನ್ನುತ್ತಾರೆ.
ಚಿಕಿತ್ಸೆಯ ನಡುವೆಯೂ ಶಿವರಾಜಕುಮಾರ್ ನಟನೆ
ಈ ಚಿತ್ರದಲ್ಲಿ ಶಿವರಾಜಕುಮಾರ್ ತೊಡಗಿಸಿಕೊಂಡಿರುವುದರ ಕುರಿತು ಮಾತನಾಡುವ ರವಿ, ‘ಇಂಥದ್ದೊಂದು ಸಿನಿಮಾಗಳನ್ನು ಜನರಿಗೆ ಮುಟ್ಟಿಸಬೇಕು ಎಂದರೆ ಜನಪ್ರಿಯ ನಟನೇ ಬೇಕಾಗುತ್ತದೆ. ಶಿವರಾಜಕುಮಾರ್ ಅವರನ್ನು ಈ ಪಾತ್ರ ಮಾಡುವುದಕ್ಕೆ ಕೇಳಿದೆವು. ಅವರು ಶೋ ರೀಲ್ ನೋಡಿ ಬಹಳ ಇಷ್ಟಪಟ್ಟು ನಟಿಸಿದರು. ಪಾತ್ರವನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡು, ನಿಭಾಯಿಸಿದರು. ಆ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿತ್ತು. ಬರೀ ಜ್ಯೂಸ್ ಕುಡಿದುಕೊಂಡೇ ಚಿತ್ರೀಕರಣದಲ್ಲಿ ಭಾಗವಹಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ.
‘ವೀರ ಚಂದ್ರಹಾಸ’ ಚಿತ್ರದಲ್ಲಿ 450ಕ್ಕೂ ಹೆಚ್ಚು ನಿಜ ಯಕ್ಷಗಾನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಈ ಚಿತ್ರವನ್ನು ಓಂಕಾರ್ ಮೂವೀಸ್ ಬ್ಯಾನರ್ ಅಡಿ ಎನ್.ಎಸ್. ರಾಜಕುಮಾರ್ ನಿರ್ಮಿಸಿದ್ದು, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ರವೀಂದ್ರ ದೇವಾಡಿಗ, ಶೀತಲ್ ಶೆಟ್ಟಿ, ಉದಯ್ ಕಡಬಾಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.