
ಡಾರ್ಲಿಂಗ್ ಕೃಷ್ಣ ಅಭಿನಯದ 'ಬ್ರ್ಯಾಟ್' ಚಿತ್ರದ 'ಗಂಗಿ ಗಂಗಿ' ಹಾಡು ಬಿಡುಗಡೆಯಾಗಿದೆ.
ಡಾರ್ಲಿಂಗ್ ಕೃಷ್ಣ ಅಭಿನಯದ 'ಬ್ರ್ಯಾಟ್' ಚಿತ್ರದ 'ಗಂಗಿ ಗಂಗಿ' ಹಾಡು ಬಿಡುಗಡೆ
ʻಗಂಗಿ ಗಂಗಿ' ಎಂಬ ಶೀರ್ಷಿಕೆಯ ಈ ಹಾಡನ್ನು ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು.
ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ʻಬ್ರ್ಯಾಟ್ʼನ ಎರಡನೇ ಹಾಡು ಬಿಡುಗಡೆಯಾಗಿದೆ.
ʻಗಂಗಿ ಗಂಗಿ' ಎಂಬ ಶೀರ್ಷಿಕೆಯ ಹಾಡನ್ನು ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು.
ಉತ್ತರ ಕರ್ನಾಟಕ ಜಿಲ್ಲೆಯ ಬಾಳು ಬೆಳಗುಂದಿ ಅವರು ಈ ಹಾಡನ್ನು ಬರೆದು ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅನೈರಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಳು ಬೆಳಗುಂದಿ ಅವರ ವಿಶಿಷ್ಟ ಗಾಯನ ಮತ್ತು ಸಾಹಿತ್ಯಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹಾಡು ಬಿಡುಗಡೆ ಬಳಿಕ ಮಾತನಾಡಿದ ಗಾಯಕ ಬಾಳು ಬೆಳಗುಂದಿ, ತಾನು ಕುರಿಗಾಹಿಯಾಗಿದ್ದ ಸಂದರ್ಭದಲ್ಲಿ ಜನಪದ ಗೀತೆಗಳನ್ನು ರಚಿಸಿ ಹಾಡುತ್ತಿದ್ದೆ. 'ಸರಿಗಮಪ' ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರು ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡುವುದಾಗಿ ಹೇಳಿದ್ದರು. ಅದಕ್ಕೆ 'ಬ್ರ್ಯಾಟ್' ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು.
ನಿರ್ದೇಶಕ ಶಶಾಂಕ್ ಮಾತನಾಡಿ, 'ಬ್ರ್ಯಾಟ್' ಎಂದರೆ ತರ್ಲೆ ಹುಡುಗ ಅಥವಾ ದಾರಿ ತಪ್ಪಿದ ಮಗ ಎಂದು ಅರ್ಥ. ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು, ತಂದೆ-ಮಗನ ಸಂಬಂಧದ ಕುರಿತೂ ಇದೆ. ಇದು ನೋಡುಗರಿಗೆ ಸಂಪೂರ್ಣ ಮನರಂಜನೆ ನೀಡಲಿದೆ ಎಂದರು. ಚಿತ್ರದ 'ನಾನೇ ನೀನಂತೆ' ಹಾಡು ಈಗಾಗಲೇ ಕೋಟ್ಯಾಂತ ವೀಕ್ಷಣೆ ಗಳಿಸಿ ಜನಪ್ರಿಯವಾಗಿದೆ. ನವೆಂಬರ್ 14 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ, ಈ ಹಾಡಿಗೆ ನೃತ್ಯ ಮಾಡಲು ನಿರ್ದೇಶಕ ಶಶಾಂಕ್ ಕಾರಣ. ನನ್ನ ಪಾತ್ರದ ಲುಕ್ ಕೂಡ ಹೊಸದಾಗಿದೆ. ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರ ಸಿನಿಮಾ ಪ್ರೀತಿಯಿಂದ ಹಾಡು ಅದ್ದೂರಿಯಾಗಿ ಮೂಡಿಬಂದಿದೆ. ಬಾಳು ಬೆಳಗುಂದಿ ಅವರ ಸಾಹಿತ್ಯ ಮತ್ತು ಗಾಯನ, ಅರ್ಜುನ್ ಜನ್ಯ ಅವರ ಸಂಗೀತ ಸೊಗಸಾಗಿದೆ ಎಂದು ಹೇಳಿದರು.
ನಿರ್ಮಾಪಕ ಮಂಜುನಾಥ್ ಕಂದಕೂರ್, ಶಶಾಂಕ್ ಅವರ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್‌ನಲ್ಲಿ ಬಂದಿರುವ ಈ ಚಿತ್ರ ಸೂಪರ್ ಹಿಟ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ನಾಯಕಿ ಮನಿಶಾ ಕಂದಕೂರ್ ಮಾತನಾಡಿ, ಇದು ನನ್ನ ಮೊದಲ ಕನ್ನಡ ಚಿತ್ರ. ಇದರಲ್ಲಿ ಮಧ್ಯಮವರ್ಗದ ಹುಡುಗಿ ಪಾತ್ರ ನಿರ್ವಹಿಸಿದ್ದೇನೆ. ಚಿತ್ರದಲ್ಲಿ ನನ್ನ ಹೆಸರು ಸಹ ಮನಿಷಾ. 'ಗಂಗಿ ಗಂಗಿ' ಹಾಡು ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.
ಡ್ಯಾಗನ್ ಮಂಜು, ವೈದ್ಯರಾದ ರಾಮಚಂದ್ರ ಮತ್ತು ಬದರಿನಾಥ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 'ಬ್ರ್ಯಾಟ್' ಚಿತ್ರದ ಹಾಡುಗಳನ್ನು ಆನಂದ್ ಆಡಿಯೋ ಸಂಸ್ಥೆ ಬಿಡುಗಡೆ ಮಾಡಿದೆ.