ʻಫ್ರಾಡ್‍ ಋಷಿʼ ಸಿನಿಮಾದ ಎರಡನೇ ಹಾಡು ಬಿಡುಗಡೆ
x

ಫ್ರಾಡ್‍ ಋಷಿ

ʻಫ್ರಾಡ್‍ ಋಷಿʼ ಸಿನಿಮಾದ ಎರಡನೇ ಹಾಡು ಬಿಡುಗಡೆ

ನಮ್ ಋಷಿ ಬರೆದು ಶ್ರೀಗುರು ಸಂಗೀತ ನೀಡಿರುವ ಹಾಗೂ ಸೋಮಶೇಖರ್ ಅವರು ಹಾಡಿರುವ ಈ ಹಾಡನ್ನು ನಿರ್ಮಾಪಕ ಕೆ.ಮಂಜು ಬಿಡುಗಡೆ ಮಾಡಿದರು. ನಮ್ ಋಷಿ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.


'ಒಳಿತು ಮಾಡು ಮನುಸ' ಎಂಬ ಸೂಪರ್‌ಹಿಟ್ ಹಾಡಿನ ಮೂಲಕ ಕನ್ನಡಿಗರ ಮನಗೆದ್ದ 'ನಮ್ ಋಷಿ' ಈಗ ನಿರ್ಮಾಣ, ನಿರ್ದೇಶನ ಮತ್ತು ನಟನೆಯ ಮೂಲಕ 'ಫ್ರಾಡ್ ಋಷಿ'ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಎರಡನೇ ಹಾಡು 'ಇವನೇ ಇವನೇ ಫ್ರಾಡು ಋಷಿ' ಯನ್ನು ಖ್ಯಾತ ನಿರ್ಮಾಪಕ ಕೆ. ಮಂಜು ಅವರು ಬಿಡುಗಡೆ ಮಾಡಿದ್ದು, ಹಾಡು 'ನಮ್ ಋಷಿ' ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಸದ್ದು ಮಾಡುತ್ತಿದೆ.

ಸಿನಿಮಾ ಮಾಡಲು ದುಡ್ಡಿಗಿಂತ, ಒಬ್ಬರನ್ನೊಬ್ಬರು ಪ್ರೀತಿಸುವ, ಬೆಂಬಲಿಸುವ ಒಳ್ಳೆಯ ತಂಡ ಮುಖ್ಯ" ಎನ್ನುವ ನಮ್ ಋಷಿ, ಈ ಚಿತ್ರವನ್ನು ಪ್ಯಾಶನ್ ಇರುವ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಕಡಿಮೆ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. "ನಾನು ಕಲಾವಿದರಿಗೆ ದುಡ್ಡು ಕೊಟ್ಟು ನಟಿಸು ಎನ್ನುವುದಿಲ್ಲ. ಚಿತ್ರರಂಗದ ಮೇಲೆ ಪ್ರೀತಿ ಇರುವವರಿಗೆ ಹಣ ಮುಖ್ಯವಾಗುವುದಿಲ್ಲ, ಅವರ ಸಹಕಾರವೇ ದೊಡ್ಡದು. ಅಂಥವರನ್ನೇ ಸೇರಿಸಿ ಈ ಸಿನಿಮಾ ಮಾಡುತ್ತಿದ್ದೇನೆ," ಎಂದು ಅವರು ತಮ್ಮ ವಿಭಿನ್ನ ನಿಲುವನ್ನು ಸ್ಪಷ್ಟಪಡಿಸಿದರು.

ಧೈರ್ಯದ ಕಥೆ, ನಾಲ್ವರು ನಾಯಕಿಯರು!

ಈ ಚಿತ್ರದ ಕಥೆ ಇದುವರೆಗೂ ಯಾರೂ ಮುಟ್ಟದ, ಹೇಳಲು ಹೆದರುವಂತಹ ಸೂಕ್ಷ್ಮ ವಿಷಯವನ್ನು ಒಳಗೊಂಡಿದೆಯಂತೆ. "ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಯಾಕೆ ಎಂದು ತಿಳಿಯಲು ಸಿನಿಮಾ ನೋಡಬೇಕು. ಬೇರೆಯವರನ್ನು 'ಫ್ರಾಡ್' ಎನ್ನುವ ಬದಲು, ನಮ್ಮನ್ನು ನಾವೇ 'ಫ್ರಾಡ್' ಎಂದು ಕರೆದುಕೊಂಡರೆ ಯಾರೂ ಪ್ರಶ್ನಿಸುವುದಿಲ್ಲ. ಅದಕ್ಕಾಗಿಯೇ ಈ ಶೀರ್ಷಿಕೆ ಇಟ್ಟಿದ್ದೇನೆ. ಇದರಲ್ಲಿ ಒಂದು ಉತ್ತಮ ಸಂದೇಶವಿದೆ," ಎಂದು ಋಷಿ ಕುತೂಹಲ ಮೂಡಿಸಿದ್ದಾರೆ.

ಅಕ್ಟೋಬರ್ 10ರಿಂದ ಚಿತ್ರೀಕರಣ ಆರಂಭವಾಗಲಿದ್ದು, ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಶಂಕರ್ ಅವರ ಛಾಯಾಗ್ರಹಣ ಮತ್ತು ಶ್ರೀಗುರು ಅವರ ಸಂಗೀತವಿದೆ. ಚಿತ್ರೀಕರಣಕ್ಕೂ ಮುನ್ನವೇ ಬಿಡುಗಡೆಯಾಗಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 'ಫ್ರಾಡ್ ಋಷಿ' ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

Read More
Next Story