‘ಸು ಫ್ರಮ್‍ ಸೋ’ ಚಿತ್ರದಿಂದ ಮತ್ತೆ ಮುನ್ನಲೆಗೆ ಬಂದ ಪೇಯ್ಡ್ ಪ್ರೀಮಿಯರ್ ಟ್ರೆಂಡ್‍
x

‘ಸು ಫ್ರಮ್‍ ಸೋ’ ಚಿತ್ರದಿಂದ ಮತ್ತೆ ಮುನ್ನಲೆಗೆ ಬಂದ ಪೇಯ್ಡ್ ಪ್ರೀಮಿಯರ್ ಟ್ರೆಂಡ್‍

‘ಸು ಫ್ರಮ್‍ ಸೋ’ ಗೆಲುವಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಪಾತ್ರ ವಹಿಸಿತು ಎಂದು ನಟ-ನಿರ್ದೇಶಕ ಜೆ.ಪಿ. ತುಮಿನಾಡು ಸಹ ಹೇಳಿಕೊಂಡಿದ್ದಾರೆ. ಬಾಯ್ಮಾತಿನ ಪ್ರಚಾರ ಹೆಚ್ಚಾಯಿತು ಎನ್ನುತ್ತಾರೆ.


‘ಸು ಫ್ರಮ್‍ ಸೋ’ ಚಿತ್ರದ ಯಶಸ್ಸಿಗೆ ಕಾರಣವೇನು? ಚಿತ್ರ ಚೆನ್ನಾಗಿರುವುದರ ಜೊತೆಗೆ, ಅದರ ಗೆಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಪೇಯ್ಡ್ ಪ್ರೀಮಿಯರ್ ಶೋಗಳು.

ಚಿತ್ರವು ಜುಲೈ 25ರಂದು ರಾಜ್ಯಾದ್ಯಾಂತ ಬಿಡುಗಡೆಯಾಯಿತು. ಅದಕ್ಕೂ ಕೆಲವು ದಿನಗಳ ಮೊದಲೇ ಚಿತ್ರವನ್ನು ಬೆಂಗಳೂರು, ಮಂಗಳೂರು, ಶಿವಮೊಗ್ಗ ಮುಂತಾದ ನಗರಗಳಲ್ಲಿ ಪ್ರದರ್ಶಿಸಲಾಗಿತ್ತು. ಆ ಪ್ರದರ್ಶನಗಳಲ್ಲಿ ಹಲವರು ಚಿತ್ರವನ್ನು ನೋಡಿ ಮೆಚ್ಚಿದ್ದರು. ಚಿತ್ರ ನೋಡಿದವರು ಅದನ್ನು ಇನ್ನಷ್ಟು ಜನರಿಗೆ ಹೇಳಿದರು. ಈ ಬಾಯ್ಮಾತಿನ ಪ್ರಚಾರ ಚಿತ್ರಕ್ಕೆ ಎಷ್ಟು ಸಹಾಯವಾಯಿತು ಎಂದರೆ, ಎರಡನೇ ದಿನದಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಚಿತ್ರದ ಪ್ರದರ್ಶನಗಳ ಸಂಖ್ಯೆ ಹೆಚ್ಚಾಯಿತು. ಅಲ್ಲಿಂದ ಚಿತ್ರದ ದಿಕ್ಕೇ ಬದಲಾಯಿತು. ಕೆಲವೇ ಕೋಟಿಗಳ ಲೆಕ್ಕದಲ್ಲಿ ತಯಾರಾದ ಚಿತ್ರವು ಈಗ 100 ಕೋಟಿ ರೂ. ಕ್ಲಬ್‍ ಸೇರುವುದರ ಜೊತೆಗೆ ಬ್ಲಾಕ್‍ಬಸ್ಟರ್ ಹಿಟ್‍ ಎಂದನಿಸಿಕೊಂಡಿದೆ.

‘ಸು ಫ್ರಮ್‍ ಸೋ’ ಗೆಲುವಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಮಹತ್ವದ ಪಾತ್ರ ವಹಿಸಿತು ಎಂದು ನಟ-ನಿರ್ದೇಶಕ ಜೆ.ಪಿ. ತುಮಿನಾಡು ಸಹ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಈ ಚಿತ್ರ ನೋಡಿ ಖುಷಿಯಾಗಿದ್ದ ರಾಜ್‍ ಶೆಟ್ಟಿ, ನಾವು ಪ್ರಮೋಟ್‍ ಮಾಡುವುದಲ್ಲ, ಜನ ಪ್ರಮೋಟ್‌ ಮಾಡಬೇಕು ಎಂದು ನಾಲ್ಕು ಪ್ರೀಮಿಯರ್ ಶೋಗಳನ್ನು ಪ್ಲಾನ್‍ ಮಾಡಿಕೊಟ್ಟರು. ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಮಾಡಿದೆವು. ಪ್ರೀಮಿಯರ್ ಶೋಗಳಲ್ಲಿ ಜನ ನೋಡಿ ಬಾಯ್ಮಾತಿನ ಪ್ರಚಾರ ಹೆಚ್ಚಾಯಿತು. ಈ ಕ್ರೆಡಿಟ್‍ ರಾಜ್‍ ಬಿ. ಶೆಟ್ಟಿ ಅವರಿಗೆ ಸಲ್ಲಬೇಕು’ ಎನ್ನುತ್ತಾರೆ.

‘ಸು ಫ್ರಮ್‍ ಸೋ’ ನಂತರ ‘ರಿಪ್ಪನ್‍ ಸ್ವಾಮಿ’

‘ಸು ಫ್ರಮ್‍ ಸೋ’ದಿಂದ ಕ್ರಮೇಣ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಮಾಡುವ ಟ್ರೆಂಡ್‍ ಹೆಚ್ಚಾಗುತ್ತಿದೆ. ಆ ಚಿತ್ರದ ನಂತರ ಇದೀಗ ವಿಜಯ್‍ ರಾಘವೇಂದ್ರ ಅಭಿನಯದ ‘ರಿಪ್ಪನ್‍ ಸ್ವಾಮಿ’ ಚಿತ್ರದ ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಶುರುವಾಗಿದೆ. ಚಿತ್ರವು ಆಗಸ್ಟ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲೇ ಚಿತ್ರದ ಏಳು ಪ್ರದರ್ಶನಗಳಾಗಿವೆ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಚಿತ್ರವನ್ನು ನೋಡಿದ್ದಾರೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಈ ಬಾಯ್ಮಾತಿನ ಪ್ರಚಾರದಿಂದ ಚಿತ್ರಕ್ಕೆ ಎಷ್ಟು ಸಹಾಯವಾಗಲಿದೆ ಎಂದು ಚಿತ್ರ ಬಿಡುಗಡೆಯ ನಂತರ ನೋಡಬೇಕಿದೆ.

ಆರಕ್ಕೂ ಹೆಚ್ಚು ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನ

ಈ ಕುರಿತು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡುವ ಚಿತ್ರದ ನಿರ್ದೇಶಕ ಕಿಶೋರ್ ಮೂಡಿಬಿದ್ರೆ, "ಆಗಸ್ಟ್ 22ರಂದು ಮೈಸೂರಿನಲ್ಲಿ ಮೊದಲ ಪ್ರದರ್ಶನವಾಯಿತು. ನಂತರದ ದಿನಗಳಲ್ಲಿ ಮಣಿಪಾಲ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು ಮುಂತಾದ ಕಡೆ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸಿದ್ದೇವೆ. ಬೆಂಗಳೂರು ಒಂದರಲ್ಲೇ ಹಲವು ಮಾಲ್‍ಗಳಾಗಿವೆ. ಬಹುತೇಕ ಪ್ರದರ್ಶನಗಳು ಹೌಸ್‍ಫುಲ್‍ ಆಗಿವೆ. ಚಿತ್ರಕ್ಕೆ 200 ರೂ.ವರೆಗೂ ಟಿಕೆಟ್‍ ಇಟ್ಟಿದ್ದೇವೆ. ಎಲ್ಲ ಟಿಕೆಟ್‍ಗಳೂ ಬುಕ್‍ ಮೈ ಶೋ ಮೂಲಕವೇ ಮಾರಾಟವಾಗಿವೆ. ಚಿತ್ರವನ್ನು ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಒಂದೊಳ್ಳೆಯ ಥ್ರಿಲ್ಲರ್‍ ಎಂದಿದ್ದಾರೆ. ವಿಜಯ್‍ ರಾಘವೇಂದ್ರ ಅಭಿನಯದ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೇಕ್ಷಕರು ಬರುತ್ತಾರೆ ಎಂಬ ವಿಶ್ವಾಸ ಹೆಚ್ಚಾಗಿದೆ," ಎನ್ನುತ್ತಾರೆ.

‘ಕಾಂತಾರ’ ಚಿತ್ರದಿಂದ ಶುರುವಾಯಿತು ಈ ಟ್ರೆಂಡ್

‘ಸು ಫ್ರಮ್‍ ಸೋ’ ನಂತರ ಕನ್ನಡದಲ್ಲಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ. ಆ ಚಿತ್ರದ ನಂತರ ‘ರಿಪ್ಪನ್‍ ಸ್ವಾಮಿ’ ಚಿತ್ರದ ಪ್ರದರ್ಶನಗಳಾದವು. ಇದರ ನಂತರ ’31 ಡೇಸ್‍’, ‘ಏಳುಮಲೆ’ ಮುಂತಾದ ಚಿತ್ರಗಳ ಪೇಯ್ಡ್ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂಥದ್ದೊಂದು ಪೇಯ್ಡ್ ಪ್ರೀಮಿಯರ್‍ ಪರಿಕಲ್ಪನೆ ಮೊದಲು ಪ್ರಾರಂಭವಾಗಿದ್ದು ‘ಕಾಂತಾರ’ ಚಿತ್ರದಿಂದ. ಚಿತ್ರವು 2022ರ ಸೆಪ್ಟೆಂಬರ್‍ 30ರಂದು ಬಿಡುಗಡೆಯಾಯಿತು. ಅದಕ್ಕೂ ಮೊದಲೇ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ 50ಕ್ಕೂ ಹೆಚ್ಚು ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸಲಾಯಿತು. ಬರೀ ರಾಜ್ಯವಷ್ಟೇ ಅಲ್ಲ, ಚೆನ್ನೈ, ಹೈದರಾಬಾದ್‍, ಮುಂಬೈ, ಪೂಣೆ ಮುಂತಾದ ನಗರಗಳಲ್ಲೂ ಒಂದು ದಿನ ಮುಂಚೆಯೇ ಚಿತ್ರವನ್ನು ನೋಡಿ ಮೆಚ್ಚಿದ್ದರು. ಆ ಮೆಚ್ಚುಗೆ ಬಾಯ್ಮಾತಿನ ರೂಪದಲ್ಲಿ ಹೆಚ್ಚಿನ ಜನರಿಗೆ ತಲುಪಿ ಚಿತ್ರ ಯಶಸ್ವಿಯಾಯಿತು.

‘ಕಾಂತಾರ’ ನಂತರ ಹಲವು ಚಿತ್ರಗಳು ಅದೇ ಹಾದಿಯಲ್ಲಿ

ಈ ಚಿತ್ರದ ನಂತರ ಹಲವು ಚಿತ್ರಗಳು, ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟವು. ‘ಡೇರ್ ಡೆವಿಲ್‍ ಮುಸ್ತಾಫ’ ಚಿತ್ರಕ್ಕೆ ಬೆಂಗಳೂರಿನ ಒರಾಯನ್‍ ಮಾಲ್‍ನ ಪಿವಿಆರ್ ಸಿನಿಮಾಸ್‍ನಲ್ಲಿ, ಮೈಸೂರಿನ ಡಿಆರ್‍ಸಿ ಸಿನಿಮಾಸ್‍ ಮತ್ತು ಶಿವಮೊಗ್ಗದ ಭಾರತ್‍ ಸಿನಿಮಾಸ್‍ನಲ್ಲಿ ಒಂದು ರೂ. ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಿತ್ತು. ಇದಲ್ಲದೆ, ಅಧ್ಯಾಪಕರಿಗೆಂದು ಬೆಂಗಳೂರಿನ ಒರಾಯನ್‍ ಮಾಲ್‍ನಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿತಿತ್ತು. ಈ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಅಧ್ಯಾಪಕರು ಚಿತ್ರವನ್ನು ನೋಡಿದರು. ಈ ಪ್ರೀಮಿಯರ್ ಪ್ರದರ್ಶನಗಳಿಗೂ ಮೆಚ್ಚುಗೆ ವ್ಯಕ್ತವಾದವು. ಸಾಮಾನ್ಯವಾಗಿ ಪೇಯ್ಡ್ ಪ್ರೀಮಿಯರ್‍ ಶೋಗಳನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಆಯೋಜಿಸಲಾಗುತ್ತದೆ. ಅದನ್ನು ಏಕಪರದೆಯ ಚಿತ್ರಮಂದಿರಗಳಿಗೆ ತಂದೆ ಹಗ್ಗಳಿಕೆ ಧನಂಜಯ್‍ ನಿರ್ಮಾಣದ ಮತ್ತು ಅಭಿನಯದ ‘ಹೆಡ್ ಬುಷ್‍’ ಚಿತ್ರಕ್ಕೆ ಸಲ್ಲುತ್ತದೆ. ಮಲ್ಟಿಪ್ಲೆಕ್ಸ್ಗಳ ಜೊತೆಗೆ ಬೆಂಗಳೂರಿನ ವೀರೇಶ್‍ ಮತ್ತು ಪ್ರಸನ್ನ, ದಾವಣಗೆರೆಯ ಅಶೋಕ ಚಿತ್ರಮಂದಿರಗಳಲ್ಲಿ ಈ ಚಿತ್ರದ ಪ್ರೀಮಿಯರ್‍ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.

ಚಿತ್ರದ ಗೆಲುವಿಗೆ ಬೇರೆ ಕಾರಣಗಳಿವೆ …

ಕಳೆದ ಒಂದು ವರ್ಷದಿಂದ ಈ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳ ಸಂಖ್ಯೆ ಕುಗ್ಗಿತ್ತು. ಅದಕ್ಕೆ ಕಾರಣ, ಒಂದಿಷ್ಟು ಚಿತ್ರತಂಡಗಳು ಇದೇ ರೀತಿ ಮಾಡಿ, ಚಿತ್ರ ಚೆನ್ನಾಗಿರದೆ ಜನ ನಂಬಿಕೆ ಕಳೆದುಕೊಂಡಿದ್ದರು. ಈಗ ‘ಸು ಫ್ರಮ್ ಸೋ’ ಚಿತ್ರದ ಮೂಲಕ ಪೇಯ್ಡ್ ಪ್ರೀಮಿಯರ್ ಪರಿಕಲ್ಪನೆ ಮತ್ತೆ ಮುನ್ನಲೆಗೆ ಬಂದಿದೆ. ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಆಯೋಜಿಸಿದರೆ, ಜನ ಅಲ್ಲಿ ಚಿತ್ರ ನೋಡಿದರೆ, ಚಿತ್ರ ಗೆಲ್ಲುತ್ತದೆ ಎಂಬರ್ಥವಲ್ಲ. ಚಿತ್ರ ಗೆಲ್ಲಬೇಕೆಂದರೆ ಪ್ರಮುಖವಾಗಿ ಚೆನ್ನಾಗಿರಬೇಕು. ಚಿತ್ರ ಚೆನ್ನಾಗಿದ್ದಾಗಲಷ್ಟೇ ಮತ್ತು ಅದು ಮನಸ್ಸಿಗೆ ಹಿಡಿಸಿದಾಗಲಷ್ಟೇ ಜನ ಅದನ್ನು ಇನ್ನೊಬ್ಬರಿಗೆ ಹೇಳುತ್ತಾರೆ, ಅದರ ಬಗ್ಗೆ ಪ್ರಚಾರ ಮಾಡುತ್ತಾರೆ. ಇಲ್ಲವಾದರೆ ಚಿತ್ರದ ಬಗ್ಗೆ ಮಾತನಾಡುವುದಿಲ್ಲ. ಹಾಗಾಗಿ, ಬರೀ ಪೇಯ್ಡ್ ಪ್ರಮೋಷನ್‍ ಮಾಡಿದರೆ ಸಾಲದು, ಚಿತ್ರವೂ ಚೆನ್ನಾಗಿರಬೇಕು.

ಇದೊಂದು ಪ್ರಚಾರದ ತಂತ್ರ …

ಹಾಗೆ ನೋಡಿದರೆ, ಅದು ಸಹ ಒಂದು ಪ್ರಚಾರವೇ ಎನ್ನುತ್ತಾರೆ ಕಿಶೋರ್ ಮೂಡುಬಿದ್ರೆ. "ಮೊದಲು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆಸಬೇಕು. ಸುಮ್ಮನೆ ಪೇಯ್ಡ್ ಪ್ರೀಮಿಯರ್ ಅಂತ ಮಾಡುವುದಕ್ಕಾಗುವುದಿಲ್ಲ. ಅದಕ್ಕೂ ಸಾಕಷ್ಟು ಪ್ರಚಾರ ಮಾಡಬೇಕು. ಚೆನ್ನಾಗಿ ಪ್ರಚಾರ ಮಾಡಿದರೆ ಮತ್ತು ಜನರಿಗೆ ಚಿತ್ರದ ಬಗ್ಗೆ ಆಸಕ್ತಿ ಇದ್ದರೆ ಟಿಕೆಟ್‍ ಖರೀದಿಸುತ್ತಾರೆ. ಹಾಗೆ ಟಿಕೇಟ್‍ ಖರೀದಿಸಿದ ಮೇಲೆ ಚಿತ್ರ ಚೆನ್ನಾಗಿ ಮೂಡಿಬಂದಿರಬೇಕು. ಚೆನ್ನಾಗಿ ಮೂಡಿಬಂದರೆ ಮಾತ್ರ ಮಾತನಾಡುತ್ತಾರೆ. ಆ ನಂತರ ಮತ್ತೆ ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸಬೇಕು. ಅದು ತಲುಪಿದಾಗ ಮಾತ್ರ ಜನ ದೊಡ್ಡ ಸಂಖ್ಯೆಯಲ್ಲಿ ಬಂದು ಚಿತ್ರ ಗೆಲ್ಲಿಸುತ್ತಾರೆ," ಎನ್ನುತ್ತಾರೆ.

ಒಟ್ಟಾರೆ, ಪೇಯ್ಡ್ ಪ್ರೀಮಿಯರ್ ಎನ್ನವುದು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್‍ ಆಗಿದೆ. ಟ್ರೆಂಡ್‍ ಆಗಿದೆ ಎನ್ನುವ ಕಾರಣಕ್ಕೆ, ನಾಳೆ ಬಹಳಷ್ಟು ಚಿತ್ರತಂಡಗಳು ಇದೇ ರೀತಿ ಪೇಯ್ಡ್ ಪ್ರದರ್ಶನಗಳನ್ನು ಆಯೋಜಿಸಿ, ಚಿತ್ರ ಚೆನ್ನಾಗಿಲ್ಲ ಎಂದರೆ ಜನ ಇದರ ಬಗ್ಗೆ ನಂಬಿಕೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಹಿಂದೆಯೂ ಒಮ್ಮೆ ಈ ರೀತಿ ಆಗಿದ್ದಿದೆ. ಹಾಗಾಗಿ, ಜನ ನಂಬಿಕೆ ಕಳೆದುಕೊಳ್ಳದಂತೆ ಮಾಡುವ ಜವಾಬ್ದಾರಿ ಚಿತ್ರರಂಗದ ಮೇಲಿದೆ.

Read More
Next Story