
ಮಾರುತ ಸಿನಿಮಾ
'ಮಾರುತ' ಬಿರುಗಾಳಿ: ದುನಿಯಾ ವಿಜಯ್, ಶ್ರೇಯಸ್ ಮಂಜು ಚಿತ್ರದ ಟ್ರೈಲರ್ ರಿಲೀಸ್, ನಿರೀಕ್ಷೆ ದುಪ್ಪಟ್ಟು
ಈ ಸಿನಿಮಾದ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಡಾ. ಕೆ. ಮಂಜು ಮತ್ತು ರಮೇಶ್ ಯಾದವ್ ಅವರು ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಬಹುನಿರೀಕ್ಷಿತ 'ಮಾರುತ' ಸಿನಿಮಾದ ಬಿರುಗಾಳಿ ಇದೀಗ ಟ್ರೈಲರ್ ಮೂಲಕ ಆರಂಭವಾಗಿದೆ. 'ದುನಿಯಾ' ವಿಜಯ್ ಮತ್ತು ಯುವನಟ ಶ್ರೇಯಸ್ ಮಂಜು ಮೊದಲ ಬಾರಿಗೆ ತೆರೆಹಂಚಿಕೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಗಮನ ಸೆಳೆದಿದ್ದ 'ಮಾರುತ', ಅಕ್ಟೋಬರ್ 31 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಟ್ರೈಲರ್‌ನಲ್ಲಿ ದುನಿಯಾ ವಿಜಯ್ ಅವರ ಪಾತ್ರವನ್ನು ನಿಗೂಢವಾಗಿಟ್ಟಿರುವುದು ಪ್ರಮುಖ ಹೈಲೈಟ್. ಅವರ ಪಾತ್ರದ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದೆ, ಕೇವಲ ನೋಟದಲ್ಲೇ ರೋಮಾಂಚನ ಸೃಷ್ಟಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಆಕ್ಷನ್ ಮತ್ತು ಭಾವನಾತ್ಮಕ ಸನ್ನಿವೇಶಗಳು ಸಮನಾಗಿರಲಿವೆ ಎಂಬ ಮುನ್ಸೂಚನೆಯನ್ನು ಟ್ರೈಲರ್ ನೀಡಿದೆ.
ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಾ. ಕೆ. ಮಂಜು ಮತ್ತು ರಮೇಶ್ ಯಾದವ್ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಬೃಂದಾ ಆಚಾರ್ಯ ಮತ್ತು ನಿಶ್ವಿಕಾ ನಾಯ್ಡು ನಾಯಕಿಯರಾಗಿ ಮಿಂಚಿದ್ದರೆ, ಹಾಸ್ಯ ದಿಗ್ಗಜ ಸಾಧು ಕೋಕಿಲ, ರಂಗಾಯಣ ರಘು, ಹಿರಿಯ ನಟಿ ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ ಹಾಗೂ ಚಿತ್ರಾ ಶೆಣೈ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಡಾ. ಎಸ್. ನಾರಾಯಣ್ ಅವರ ನಿರ್ದೇಶನದ ಜೊತೆಗೆ ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿದೆ. ಈಗಾಗಲೇ ಬಿಡುಗಡೆಯಾಗಿರುವ 'ಚಂಡ ಮಾರುತ' ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ ಮತ್ತು ಶಿವಪ್ರಸಾದ್ ಯಾದವ್ ಅವರ ಸಂಕಲನ ಚಿತ್ರಕ್ಕಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'U/A' ಪ್ರಮಾಣಪತ್ರ ಪಡೆದಿರುವ 'ಮಾರುತ', ಅಕ್ಟೋಬರ್ ಅಂತ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಸಿದ್ಧವಾಗಿದೆ.