
ತೆರೆಮೇಲೆ ಬರಲಿದೆ ‘ಚಿ: ಸೌಜನ್ಯ’: ನಿರ್ದೇಶನಕ್ಕೆ ಇಳಿದ ನಟಿ ಹರ್ಷಿಕಾ ಪೂಣಚ್ಛ
ಅಂದಹಾಗೆ ಹರ್ಷಿಕಾ ಪೂಣಚ್ಚ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾಗೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ಲೈನ್ ಕೊಡಲಾಗಿದೆ.
ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ನಿರ್ದೇಶನಕ್ಕೆ ಇಳಿದಿದ್ದಾರೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಹರ್ಷಿಕಾ ಸೇರ್ಪಡೆಯಾಗಲಿದ್ದಾರೆ.
ಅಂದಹಾಗೆ ಹರ್ಷಿಕಾ ಪೂಣಚ್ಚ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾಗೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ಲೈನ್ ಕೊಡಲಾಗಿದೆ. ದೇಶದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣುಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸಲಿದ್ದಾರೆ.
ಈ ಸಿನಿಮಾದ ಟೈಟಲ್ ಪೋಸ್ಟರ್ ಬಹಳಷ್ಟು ಗಮನಸೆಳೆಯುತ್ತಿದೆ ಹಾಗೂ ಚರ್ಚೆಗೂ ಗ್ರಾಸವಾಗಿದೆ. ಅನಾವರಣಗೊಂಡಿರುವ ಪೋಸ್ಟರ್‌ನಲ್ಲಿ ಬಾಲಕಿಯೊಬ್ಬಳು ಭಯದಿಂದ ಕೂಗುತ್ತಾ ನಿಂತಿದ್ದಾಳೆ. ಆಕೆಯ ಮುಖದ ಮೇಲೆ ಉಗುರಿನಿಂದ ಆದ ಗಾಯಗಳು ಇವೆ. ಅವಳ ಹಿಂದೆ ಒಂದಷ್ಟು ಪುರುಷರು ದಾಳಿಗೆ ಸಿದ್ಧರಾದಂತೆ ನಿಂತಿದ್ದಾರೆ. ದೇವಸ್ಥಾನದ ಕಳಶ ಇದೆ. ಒಂದಷ್ಟು ಮಂದಿ ತುಟಿಯ ಮೇಲೆ ಕೈ ಬೆರಳು ಇಟ್ಟು ಸುಮ್ಮನಿರುವಂತೆ ತೋರಿಸುತ್ತಿದ್ದಾರೆ. ಆದರೆ ಇದೊಂದು ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಎಂದು ಹರ್ಷಿಕಾ ಸ್ಪಷ್ಟವಾಗಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸದ್ಯ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ನಡೆಯಲಿದೆ. ಪ್ರಮುಖ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುಧೀ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. ಭುವನ್ ಪೊನ್ನಣ್ಣ , ಮಧು ಕಂಸಾಳೆ ಫಿಲಂಸ್ ಬ್ಯಾನರ್ ಹಾಗು ಗಣೇಶ್ ಮಹಾದೇವ್ ಅವರ ನೇತೃತ್ವದಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳಲಿದೆ.
ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಭುವನ್ ಪೊನ್ನಣ್ಣ, ಭಾರತದಲ್ಲಿ ಸರಾಸರಿ ದಿನಕ್ಕೆ ನೂರು ಮಹಿಳೆಯರಂತೆ ಪ್ರತಿವರ್ಷ ಮೂವತ್ತಾರು ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಈ ಅತ್ಯಾಚಾರಗಳ ಬಗ್ಗೆ ಕೇಸ್ ದಾಖಲಾಗುತ್ತದೆ. ವಿಚಾರಣೆ ನಡೆಯುತ್ತದೆ. ಆದರೆ ಆ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿರುವುದು ತೀರ ಕಡಿಮೆ. ನಾನು ಹಾಗೂ ಹರ್ಷಿಕಾ ಅವರು ಕೂಡ ಇಂತಹ ಘಟನೆ ಬಗ್ಗೆ ನಮಗೆ ತಿಳಿದಾಗ ಆ ಸ್ಥಳಕ್ಕೆ ಹೋಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿದ್ದೇವೆ. ಈ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸಿನಿಮಾ ಉತ್ತಮವಾದ ಮಾಧ್ಯಮ ಅನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಸಮಾಜಕ್ಕೆ ಉತ್ತಮ ಸಂದೇಶವಿರುವ ಈ ಚಿತ್ರವನ್ನು ನಾನು ಹಾಗೂ ಮಧು ಮರಿಸ್ವಾಮಿ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದೇವೆ. ಈ ಕಥೆಯನ್ನು ಕಿಶೋರ್ ಅವರ ಬಳಿ ಹೇಳಿದಾಗ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು ಎಂದು ಭುವನ್ ಪೊನ್ನಣ್ಣ ತಿಳಿಸಿದರು.

ಇಷ್ಟು ದಿನ ನಟಿಯಾಗಿ ಗುರುತಿಸಿಕೊಂಡಿದ್ದೆ. ಚಿತ್ರವನ್ನು ನಿರ್ಮಾಣ ಮಾಡಬೇಕು ಎಂಬ ಹಂಬಲವಿತ್ತು. ಆದರೆ ನಿರ್ದೇಶನ ಮಾಡುತ್ತೀನಿ ಎಂದು ಅಂದುಕೊಂಡಿರಲಿಲ್ಲ. ಹೆಣ್ಣುಮಕ್ಕಳ ಶೋಷಣೆಯ ಬಗ್ಗೆ ನಾನು ಹಾಗೂ ಭುವನ್ ಸಾಕಷ್ಟು ಹೋರಾಟ ಮಾಡಿದ್ದೇವೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಮಾಡಬೇಕೆಂದು ಆಸೆಯಿತ್ತು. ಹಾಗಾಗಿ ನನ್ನ ಪತಿ ಭುವನ್ ಮತ್ತು ನಿರ್ಮಾಪಕ ಮಧು ಮರಿಸ್ವಾಮಿ ಅವರು ಹೆಣ್ಣುಮಕ್ಕಳ ನೋವು ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಜಾಸ್ತಿ ಗೊತ್ತಿರುತ್ತದೆ. ಹಾಗಾಗಿ ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಎಂದರು. ಇದು ಯಾವುದೇ ಒಂದು ಘಟನೆಯ ಕುರಿತಾದ ಚಿತ್ರವಲ್ಲ. ದೇಶದಲ್ಲಿ ನಡೆದಿರುವ ಇಂತಹ ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಚಿತ್ರ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ ಅಷ್ಟೇ. ಈ ಚಿತ್ರದ ಕಥೆ ಮಾಡಿಕೊಂಡ ತಕ್ಷಣ ಪ್ರಮುಖಪಾತ್ರಕ್ಕೆ ನಮಗೆ ತಕ್ಷಣ ಅನಿಸಿದ್ದು ಕಿಶೋರ್ ಅವರು. ಕಥೆ ಕೇಳಿದ ತಕ್ಷಣ ನಟಿಸಲು ಕಿಶೋರ್ ಅವರು ಒಪ್ಪಿಕೊಂಡರು. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದು ಹರ್ಷಿಕಾ ಪೂಣಚ್ಚ ಅವರು ತಿಳಿಸಿದರು.

ನಾವು ದೇಶದಲ್ಲಿ ಇಂತಹ ಎಷ್ಟೇ ಘಟನೆಗಳು ನಡೆದರೂ ನಮ್ಮ ಮನೆಯದಲ್ಲ ಎನ್ನುವ ರೀತಿಯಲ್ಲಿ ಇರುತ್ತೇವೆ. ಆದರೆ ಆಕೆ ಕೂಡ ಒಬ್ಬರ ಮಗಳು, ಒಬ್ಬರ ಸಹೋದರಿ ಆಗಿರುತ್ತಾರೆ. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಇನ್ನೂ ಇಂತಹ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಅದು ಬೇಗ ಜನರಿಗೆ ತಲುಪುತ್ತದೆ. ಇಂತಹ ವಿಷಯವನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಹಾಗೂ ಮೊದಲ ಬಾರಿಯ ನಿರ್ದೇಶನಕ್ಕೆ ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತು ಆರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟ ಕಿಶೋರ್ ತಿಳಿಸಿದರು.