
'ದಿ ಬೆಂಗಾಲ್ ಫೈಲ್ಸ್'
'ದಿ ಬೆಂಗಾಲ್ ಫೈಲ್ಸ್' ಬಿಡುಗಡೆ: ಬಂಗಾಳದಲ್ಲಿ 'ದಿಗ್ಬಂಧನ'; ರಾಷ್ಟ್ರಪತಿಗೆ ನಿರ್ಮಾಪಕಿಯ ಪತ್ರ!
ದಿ ಬೆಂಗಾಲ್ ಫೈಲ್ಸ್ ಎಂಬ ಹೊಸ ಸಿನಿಮಾ ಬಿಗುಗಡೆಯಾಗಿದ್ದು, ಚಿತ್ರವು 1946ರ ಭಯಾನಕ ಹತ್ಯಾಕಾಂಡವಾದ ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್ ಕುರಿತಾಗಿದೆ.
'ದಿ ತಾಷ್ಕೆಂಟ್ ಫೈಲ್ಸ್' ಮತ್ತು 'ದಿ ಕಾಶ್ಮೀರ್ ಫೈಲ್ಸ್' ಮೂಲಕ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ 'ಫೈಲ್ಸ್' ಸರಣಿಯ ಮೂರನೇ ಚಿತ್ರ 'ದಿ ಬೆಂಗಾಲ್ ಫೈಲ್ಸ್' ನೊಂದಿಗೆ ಮತ್ತೆ ಬಂದಿದ್ದಾರೆ. ಶುಕ್ರವಾರ ದೇಶಾದ್ಯಂತ ತೆರೆಕಂಡ ಈ ಚಿತ್ರವು, ಬಿಡುಗಡೆಗೂ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ತೀವ್ರ ವಿವಾದದ ಕೇಂದ್ರಬಿಂದುವಾಗಿದೆ. ಚಿತ್ರ ಪ್ರದರ್ಶನಕ್ಕೆ ರಾಜ್ಯದಲ್ಲಿ 'ಅಘೋಷಿತ ನಿಷೇಧ' ಹೇರಲಾಗಿದ್ದು, ಈ ರಾಜಕೀಯ ಹಗ್ಗಜಗ್ಗಾಟ ಇದೀಗ ರಾಷ್ಟ್ರಪತಿ ಅಂಗಳ ತಲುಪಿದೆ.
ಕರಾಳ ಸತ್ಯದ ಅನಾವರಣ ಎಂದ ಚಿತ್ರ ತಂಡ
'ದಿ ಬೆಂಗಾಲ್ ಫೈಲ್ಸ್' ಚಿತ್ರವು ಭಾರತದ ಇತಿಹಾಸದ ಒಂದು ಮರೆತುಹೋದ, ರಕ್ತಸಿಕ್ತ ಅಧ್ಯಾಯವನ್ನು ತೆರೆದಿಡುತ್ತದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. 1946ರ ಆಗಸ್ಟ್ 16ರ 'ಗ್ರೇಟ್ ಕಲ್ಕತ್ತಾ ಕಿಲ್ಲಿಂಗ್' ಮತ್ತು ನಂತರದ ನೊವಾಖಾಲಿ ಹತ್ಯಾಕಾಂಡದ ಭಯಾನಕತೆಯನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಮುಸ್ಲಿಂ ಲೀಗ್‌ನ 'ಡೈರೆಕ್ಟ್ ಆಕ್ಷನ್ ಡೇ' ಕರೆಯಿಂದಾಗಿ ನಡೆದ ಆ ಹಿಂಸಾಚಾರದಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರು, ಇದು ಅಂತಿಮವಾಗಿ ದೇಶದ ವಿಭಜನೆಗೆ ನಾಂದಿ ಹಾಡಿತು ಎಂದಿದ್ದಾರೆ.
ಈ ಸೂಕ್ಷ್ಮ ಮತ್ತು ನೋವಿನ ಕಥಾನಕವನ್ನು ವಿವೇಕ್ ಅಗ್ನಿಹೋತ್ರಿ ತಮ್ಮದೇ ಆದ ನಿರೂಪಣೆಯಲ್ಲಿ ತೆರೆಗೆ ತಂದಿದ್ದು, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಅವರಂತಹ ಘಟಾನುಘಟಿ ಕಲಾವಿದರು ಚಿತ್ರಕ್ಕೆ ಜೀವ ತುಂಬಿದ್ದಾರೆ.
ಬಂಗಾಳದಲ್ಲಿ ತೀವ್ರ ವಿರೋಧ: 'ಅಘೋಷಿತ ನಿಷೇಧ'ದ ಆರೋಪ
ಚಿತ್ರದ ಟ್ರೇಲರ್ ಬಿಡುಗಡೆಯಿಂದಲೇ ಪಶ್ಚಿಮ ಬಂಗಾಳದಲ್ಲಿ ವಿರೋಧದ ಅಲೆಗಳು ಏಳಲಾರಂಭಿಸಿದ್ದವು. ಮಲ್ಟಿಪ್ಲೆಕ್ಸ್‌ಗಳು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಾಗ, ಹೋಟೆಲ್‌ನಲ್ಲಿ ಟ್ರೇಲರ್ ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಚಿತ್ರವು ದೇಶಾದ್ಯಂತ ಬಿಡುಗಡೆಯಾಗಿದ್ದರೂ, ಪಶ್ಚಿಮ ಬಂಗಾಳದ ಒಂದೇ ಒಂದು ಚಿತ್ರಮಂದಿರದಲ್ಲೂ ಪ್ರದರ್ಶನಗೊಳ್ಳುತ್ತಿಲ್ಲ. ಯಾವುದೇ ಅಧಿಕೃತ ನಿಷೇಧವಿಲ್ಲದಿದ್ದರೂ, ಆಡಳಿತ ಪಕ್ಷದ ಒತ್ತಡದಿಂದಾಗಿ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನಕ್ಕೆ ಹೆದರುತ್ತಿದ್ದಾರೆ ಎಂದು ಚಿತ್ರತಂಡ ಗಂಭೀರ ಆರೋಪ ಮಾಡಿದೆ. ಇದು 'ಅಘೋಷಿತ ನಿಷೇಧ' ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ.
ರಾಷ್ಟ್ರಪತಿಗೆ ನಿರ್ಮಾಪಕಿಯ ಮೊರೆ: ಕಲೆಗೆ ಜಾಗ ಕೊಡಿ
ಈ ಬೆಳವಣಿಗೆಯಿಂದ ನೊಂದಿರುವ ನಿರ್ಮಾಪಕಿ ಮತ್ತು ನಟಿ ಪಲ್ಲವಿ ಜೋಶಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾವನಾತ್ಮಕ ಪತ್ರ ಬರೆದು, ನ್ಯಾಯ ಕೊಡಿ ಎಂದು ಮನವಿ ಮಾಡಿದ್ದಾರೆ. "ಸರ್ಕಾರದ ಬೆದರಿಕೆಗೆ ಹೆದರಿ ಚಿತ್ರಮಂದಿರಗಳು ನಮ್ಮ ಸಿನಿಮಾವನ್ನು ಪ್ರದರ್ಶಿಸುತ್ತಿಲ್ಲ.
ಇದು ಸತ್ಯವನ್ನು ಹತ್ತಿಕ್ಕುವ ಪ್ರಯತ್ನ. ನಾವು ನಿಮ್ಮಿಂದ ಯಾವುದೇ ಸಹಾಯ ಕೇಳುತ್ತಿಲ್ಲ, ಬದಲಿಗೆ ಕಲೆಗೆ ಜಾಗ ಕೇಳುತ್ತಿದ್ದೇವೆ. ನೀವು ನಮ್ಮ ಕೊನೆಯ ಭರವಸೆ. ದಯವಿಟ್ಟು ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿ ಮತ್ತು 'ದಿ ಬೆಂಗಾಲ್ ಫೈಲ್ಸ್' ಬಂಗಾಳದಲ್ಲಿ ಶಾಂತಿಯುತವಾಗಿ ಬಿಡುಗಡೆಯಾಗಲು ಅವಕಾಶ ಮಾಡಿಕೊಡಿ" ಎಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.