Samantha-Naga Chaitanya divorce remark| ಕ್ಷಮೆ ಯಾಚಿಸಿದ ತೆಲಂಗಾಣ ಸಚಿವೆ
x

Samantha-Naga Chaitanya divorce remark| ಕ್ಷಮೆ ಯಾಚಿಸಿದ ತೆಲಂಗಾಣ ಸಚಿವೆ


ನಟಿ ಸಮಂತಾ ಪ್ರಭು ಮತ್ತು ನಾಗಚೈತನ್ಯ ಅವರ ವಿಚ್ಛೇದನದಲ್ಲಿ ಭಾರತ ರಕ್ಷಣಾ ಸಮಿತಿ (ಬಿಆರ್‌ಎಸ್) ನಾಯಕ ಕೆ.ಟಿ. ರಾಮರಾವ್ ಪಾಲ್ಗೊಳ್ಳುವಿಕೆ ಕುರಿತು ಹೇಳಿಕೆ ನೀಡಿ ಭಾರೀ ವಿವಾದ ಹುಟ್ಟುಹಾಕಿದ್ದ ತೆಲಂಗಾಣ ಸಚಿವ ಕೊಂಡ ಸುರೇಖಾ ಅವರು ಕ್ಷಮೆಯಾಚಿಸಿದ್ದಾರೆ.

ಹೇಳಿಕೆ ಹಿಂಪಡೆಯಬೇಕು ಅಥವಾ ಕಾನೂನು ಕ್ರಮ ಎದುರಿಸಬೇಕು ಎಂದು ಕೆ ಟಿ ಆರ್‌ ಅವರು ಸಚಿವರಿಗೆ ನೋಟಿಸ್ ಕಳುಹಿಸಿದ್ದರು. ಆನಂತರ ಸುರೇಖಾ ಅವರು ಕ್ಷಮೆಯಾಚಿಸಿ, ಸರಣಿ ಟ್ವೀಟ್‌ ಮಾಡಿದ್ದಾರೆ.

ಕ್ಷಮೆಯಾಚನೆ: ಕೆಟಿಆರ್ ಅವರು ಮಹಿಳೆಯರನ್ನು ಕೀಳಾಗಿ ಪರಿಗಣಿಸುವುದನ್ನು ಪ್ರಶ್ನಿಸುವುದು ತಮ್ಮ ಉದ್ದೇಶವಾಗಿತ್ತೇ ಹೊರತು ಸಮಂತಾ ಅವರ ಭಾವನೆಗಳನ್ನು ನೋಯಿಸುವುದು ಅಥವಾ ಅವರ ಕುಟುಂಬವನ್ನು ಅವಮಾನಿಸುವುದಲ್ಲ ಎಂದು ಹೇಳಿದ್ದಾರೆ.

ʻನಾನು ಬೇರೆಯವರ ವೈಯಕ್ತಿಕ ಸಮಸ್ಯೆಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ; ನಿಮ್ಮ ವಿಷಯದಲ್ಲಿ ನಾನು ಅದನ್ನು ಮಾಡಿಲ್ಲ. ಅದು ನನ್ನ ರೀತಿ ಅಥವಾ ಉದ್ದೇಶವಲ್ಲ. ನಾನು ಯಾವತ್ತೂ ಗಡಿ ಮೀರಿಲ್ಲ ಅಥವಾ ಆಧಾರರಹಿತ ಆರೋಪ ಮಾಡಿಲ್ಲ. ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ವೃತ್ತಿಯ ಘನತೆಯನ್ನು ಎತ್ತಿಹಿಡಿಯಲು ಶ್ರಮಿಸುತ್ತೇನೆ,ʼ ಎಂದು ಸಚಿವೆ ಬರೆದಿದ್ದಾರೆ.

ಸುರೇಖಾ ಆರೋಪವೇನು?: ಕೊಂಡಾ ಸುರೇಖಾ ಅವರ ವಿಡಿಯೋ ಮಂಗಳವಾರ ವೈರಲ್ ಆಗಿದ್ದು, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರ ಕೆ.ಟಿ. ರಾಮರಾವ್ ಅವರಿಂದ ಅನೇಕ ನಟಿಯರು ಚಲನಚಿತ್ರ ಕ್ಷೇತ್ರ ತೊರೆದು ಮದುವೆಯಾಗುತ್ತಿದ್ದಾರೆ. ರಾಮರಾವ್‌ ಅವರು ಮಾದಕ ದ್ರವ್ಯ ಸೇವನೆ ವ್ಯಸನಕ್ಕೆ ಒಳಗಾದ ನಂತರ ಚಿತ್ರರಂಗದ ವ್ಯಕ್ತಿಗಳನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರ ಒಡೆತನದ ಎನ್ ಕನ್ವೆನ್ಷನ್‌ ನ ಭಾಗದ ಉರುಳಿಸುವಿಕೆಗೆ ಸಂಬಂಧಿಸಿದಂತೆ, ನಾಗಾರ್ಜುನ ಅವರು ಸಮಂತಾ ಅವರನ್ನು ಕೆಟಿಆರ್‌ ಬಳಿ ಹೋಗಲು ಬಲವಂತಪಡಿಸಿದರು. ಸಮಂತಾ ಇದಕ್ಕೆ ಸಮ್ಮತಿಸಲಿಲ್ಲ; ಇದು ವಿಚ್ಛೇದನಕ್ಕೆ ಕಾರಣವಾಯಿತು. ಇಡೀ ಉದ್ಯಮಕ್ಕೆ ಈ ಬಗ್ಗೆ ಗೊತ್ತಿದೆ ಎಂದು ಸುರೇಖಾ ಹೇಳಿದ್ದರು.

ಮಾದಕ ದ್ರವ್ಯ ಪ್ರಕರಣಗಳಿಂದಾಗಿ ಇತರ ಎರಡರಿಂದ ಮೂವರು ನಟಿಯರು ಬೇಗ ಮದುವೆಯಾಗಿದ್ದಾರೆ. ರಾಮರಾವ್‌ ಫೋನ್‌ ಕದ್ದಾಲಿಕೆ ಮಾಡಿದರು, ಅದನ್ನು ಬಳಸಿಕೊಂಡು ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದರು.

ಕೋಲಾಹಲ: ಕೆಟಿಆರ್ ಆರೋಪಗಳನ್ನು ʻಆಧಾರರಹಿತ ಮತ್ತು ದುರುದ್ದೇಶಪೂರಿತʼ ಎಂದು ಹೇಳಿದ್ದರು. ನಾಗಚೈತನ್ಯ, ಸಮಂತಾ, ಜೂನಿಯರ್‌ ಎನ್‌ಟಿಆರ್, ನಾಗಾರ್ಜುನ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಚಿವೆ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮನ್ನು ರಾಜಕೀಯ ಕಲಹಕ್ಕೆ ಬಳಸಿಕೊಳ್ಳಬಾರದು ಎಂದು ಸಮಂತಾ ಇನ್ಸ್ಟಾದಲ್ಲಿ ಬರೆದಿದ್ದಾರೆ. ʻಮಹಿಳೆಯಾಗಿರುವುದು, ಮನೆಯಿಂದ ಹೊರಬಂದು ಕೆಲಸ ಮಾಡುವುದು, ಮಹಿಳೆಯರನ್ನುಗೊಂಬೆಗಳಂತೆ ಪರಿಗಣಿಸುವ ಉದ್ಯಮದಲ್ಲಿ ಬದುಕಲು, ಪ್ರೀತಿಯಲ್ಲಿ ಬೀಳಲು ಮತ್ತು ಪ್ರೀತಿಯಿಂದ ಹೊರಗುಳಿಯಲು, ಹೋರಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ. ಈ ಪ್ರಯಾಣ ನನ್ನನ್ನು ಏನಾಗಿ ಪರಿವರ್ತಿಸಿದೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ; ದಯವಿಟ್ಟು ಅದನ್ನು ಕ್ಷುಲ್ಲಕಗೊಳಿಸಬೇಡಿ ,ʼ ಎಂದು ಹೇಳಿದ್ದಾರೆ.

ವಿಚ್ಛೇದನ ವೈಯಕ್ತಿಕ ವಿಷಯ. ಸಚಿವರಾದ ನಿಮ್ಮ ಮಾತು ಘನತೆ ಹೊಂದಿಬೇಕು. ವ್ಯಕ್ತಿಗಳ ಗೌಪ್ಯತೆ ಬಗ್ಗೆ ಜವಾಬ್ದಾರಿಯುತ ಮತ್ತು ಗೌರವದಿಂದ ವರ್ತಿಸಬೇಕೆಂದು ಕೋರುತ್ತೇನೆ ಎಂದು ಹೇಳಿದ್ದರು.

ಜೂನಿಯರ್ ಎನ್‌ಟಿಆರ್‌ ಬೆಂಬಲ: ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರು ಸುರೇಖಾ ಅವರ ಆಧಾರರಹಿತ ಹೇಳಿಕೆಗಳಿಗೆ ಅವರನ್ನು ತರಾಟೆಗೆ ತೆಗೆದುಕೊಂಡರು. ವೈಯಕ್ತಿಕ ವಿಷಯವನ್ನು ರಾಜಕೀಯಕ್ಕೆ ಎಳೆಯುವುದು ನೀಚತನ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಘನತೆ ಹಾಗೂ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ನಾಗಾರ್ಜುನ ಖಂಡನೆ: ʻಸಿನಿಮಾ ತಾರೆಯರನ್ನು ವಿರೋಧಿಗಳನ್ನು ಟೀಕಿಸಲು ಬಳಸಿಕೊಳ್ಳಬೇಡಿ.ಜನರ ಗೌಪ್ಯತೆಯನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾದ ನೀವು ನಮ್ಮ ಕುಟುಂಬದ ಮೇಲೆ ಮಾಡಿರುವ ಆರೋಪ ಸಂಪೂರ್ಣ ಅಪ್ರಸ್ತುತ ಮತ್ತು ಸುಳ್ಳು. ತಕ್ಷಣ ನಿಮ್ಮ ಹೇಳಿಕೆ ಹಿಂತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ಪೋದರು.

ನಾಗಚೈತನ್ಯ ಮತ್ತು ಸಮಂತಾ 2021 ರಲ್ಲಿ ವಿಚ್ಛೇದನ ಹೊಂದಿದ್ದಾರೆ. ನಾಗಚೈತನ್ಯ ಆಗಸ್ಟ್‌ನಲ್ಲಿ ನಟ ಶೋಭಿತಾ ಧೂಲಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Read More
Next Story