
ಜುಗಾರಿ ಕ್ರಾಸ್
ತೇಜಸ್ವಿಯ 'ಜುಗಾರಿ ಕ್ರಾಸ್' ಮತ್ತೆ ತೆರೆಗೆ: ಕುತೂಹಲ ಮೂಡಿಸಿದ ಹೊಸ ಪೋಸ್ಟರ್!
'ಜುಗಾರಿ ಕ್ರಾಸ್' ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಗ್ರಾಮೀಣ ಸೊಗಡಿನ ಜೊತೆಗೆ ರಹಸ್ಯಮಯ ಆಖ್ಯಾನವನ್ನು ಸೂಚಿಸುತ್ತದೆ. ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ "ಜುಗಾರಿ ಕ್ರಾಸ್" ಮತ್ತೊಮ್ಮೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಮತ್ತು 'ಕರಾವಳಿ' ಖ್ಯಾತಿಯ ನಿರ್ದೇಶಕ ಗುರುದತ್ತ ಗಾಣಿಗ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದು, ತೇಜಸ್ವಿಯವರ 87ನೇ ಜನ್ಮದಿನದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಹೊಸದಾಗಿ ಬಿಡುಗಡೆಯಾಗಿರುವ ಪೋಸ್ಟರ್, ಉರಿಯುತ್ತಿರುವ ನೂರು ರೂಪಾಯಿ ನೋಟಿನ ಕಂತೆ, ತಲೆಬುರುಡೆಗಳು ಮತ್ತು ರಕ್ತಸಿಕ್ತ ಕೈಯನ್ನು ತೋರಿಸುವ ಮೂಲಕ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಇದು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ್ದು, ಗ್ರಾಮೀಣ ಸೊಗಡಿನ ಜೊತೆಗೆ ರಹಸ್ಯಮಯ ಆಖ್ಯಾನವನ್ನು ಸೂಚಿಸುತ್ತದೆ. ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇನ್ನು 15 ದಿನಗಳಲ್ಲಿ ಚಿತ್ರದ ತಾರಾಗಣ ಮತ್ತು ಇತರ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಈ ಹಿಂದೆ 2019ರಲ್ಲಿ, ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದೇ ಕಾದಂಬರಿಯನ್ನು ಚಿರಂಜೀವಿ ಸರ್ಜಾ ನಾಯಕತ್ವದಲ್ಲಿ ಚಲನಚಿತ್ರವಾಗಿ ತೆರೆಗೆ ತಂದಿದ್ದರು. ಇದೀಗ ಗುರುದತ್ತ ಗಾಣಿಗ ಅವರ ಹೊಸ ಆವೃತ್ತಿಯು ವಿಭಿನ್ನ ದೃಶ್ಯಾವಳಿ ಮತ್ತು ನಿರೂಪಣೆಯೊಂದಿಗೆ ಬರಲಿದೆ ಎಂಬ ನಿರೀಕ್ಷೆ ಚಿತ್ರರಸಿಕರಲ್ಲಿದೆ. ಪಶ್ಚಿಮ ಘಟ್ಟಗಳ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯು, ವನ್ಯಜೀವಿಗಳ ಕಳ್ಳಸಾಗಣೆ ಮತ್ತು ಭೂಗತ ಚಟುವಟಿಕೆಗಳ ಸುತ್ತ ಸುತ್ತುತ್ತದೆ.
ತೇಜಸ್ವಿಯವರ 'ಅಬಚೂರಿನ ಪೋಸ್ಟ್ ಆಫೀಸ್', 'ತಬರನ ಕಥೆ', 'ಕಿರುಗೂರಿನ ಗಯ್ಯಾಳಿಗಳು' ಮತ್ತು 'ಡೇರ್‌ಡೆವಿಲ್ ಮುಸ್ತಾಫಾ'ದಂತಹ ಕೃತಿಗಳು ಈಗಾಗಲೇ ಯಶಸ್ವಿ ಚಲನಚಿತ್ರಗಳಾಗಿವೆ. ಈ ಸಾಲಿಗೆ ಈಗ 'ಜುಗಾರಿ ಕ್ರಾಸ್'ನ ಹೊಸ ರೂಪ ಸೇರ್ಪಡೆಯಾಗುತ್ತಿದ್ದು, ಕನ್ನಡ ಸಿನಿರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.