ಮಲೆನಾಡಿನ ಮಳೆಯಲ್ಲಿ ಅರಳಿದ ಶೈಲಳ ಕಥೆ; ಮೋಡ, ಮಳೆ ಮತ್ತು ಶೈಲ ಚಿತ್ರದ ಟೀಸರ್ ಬಿಡುಗಡೆ!
x

ಮೋಡ, ಮಳೆ ಮತ್ತು ಶೈಲ

ಮಲೆನಾಡಿನ ಮಳೆಯಲ್ಲಿ ಅರಳಿದ 'ಶೈಲ'ಳ ಕಥೆ; 'ಮೋಡ, ಮಳೆ ಮತ್ತು ಶೈಲ' ಚಿತ್ರದ ಟೀಸರ್ ಬಿಡುಗಡೆ!

'ತಿಮ್ಮನ ಮೊಟ್ಟೆಗಳು' ಸಿನಿಮಾದ ನಿರ್ದೇಶಕ ರಕ್ಷಿತ ತೀರ್ಥಹಳ್ಳಿ ಹಾಗೂ ನಿರ್ಮಾಪಕ ಆದರ್ಶ ಅಯ್ಯಂಗಾರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಿದ್ದಾರೆ.


Click the Play button to hear this message in audio format

'ತಿಮ್ಮನ ಮೊಟ್ಟೆಗಳು' ಖ್ಯಾತಿಯ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರ ಹೊಸ ಸಿನಿಮಾ 'ಮೋಡ, ಮಳೆ ಮತ್ತು ಶೈಲ'ದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸಂಪೂರ್ಣವಾಗಿ ಮಳೆಯಲ್ಲೇ, ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿ ಚಿತ್ರೀಕರಣಗೊಂಡಿರುವ ಈ ಡ್ರಾಮಾ ಥ್ರಿಲ್ಲರ್ ಸಿನಿಮಾ, ಮಲೆನಾಡಿನ ಒಂಟಿ ಹೆಣ್ಣಿನ ಬದುಕಿನ ಸುತ್ತ ಹೆಣೆದ ಕಥೆಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ.

ಶ್ರೀಕೃಷ್ಣಾ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಾಪಕ ಆದರ್ಶ ಅಯ್ಯಂಗಾರ್ ನಿರ್ಮಿಸಿರುವ ಈ ಚಿತ್ರದಲ್ಲಿ, ರಂಗಭೂಮಿ ಹಿನ್ನೆಲೆಯ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ 'ಶೈಲ' ಎಂಬ ಮುಖ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯ, ಉತ್ಪಲ್ ಗೌಡ, ರಾಘು ರಾಮನಕೊಪ್ಪ, ಬಲರಾಜ್ ವಾಡಿ, ಅಶ್ವಿನ್ ಹಾಸನ ಸೇರಿದಂತೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ.

ಮಳೆಯೇ ಇಲ್ಲಿ ಪ್ರಮುಖ ಪಾತ್ರ!

ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ, "ನಾನು 2012-13ರ ಕಾಲಘಟ್ಟದಲ್ಲಿ ನೋಡಿದ ಮತ್ತು ಕೇಳಿದ ನೈಜ ಘಟನೆಗಳನ್ನು ಆಧರಿಸಿ ಈ ಕಥೆ ಹೆಣೆದಿದ್ದೇನೆ. ಇದು ವಿಷಯಾಧಾರಿತ ಚಿತ್ರಗಳಿಗಿಂತ ಭಿನ್ನವಾಗಿ, 'ಶೈಲ' ಎಂಬ ಪಾತ್ರದ ಮೂಲಕ ಭಾವನಾತ್ಮಕ ಪಯಣವನ್ನು ಹೇಳುವ ಪ್ರಯತ್ನ. ತೀರ್ಥಹಳ್ಳಿ ಮತ್ತು ಕುಂದಾಪುರದ ಗಡಿಭಾಗಗಳಲ್ಲಿ, ನಿರಂತರ ಮಳೆಯಲ್ಲಿಯೇ ಸಿಂಕ್ ಸೌಂಡ್‌ನೊಂದಿಗೆ ಚಿತ್ರೀಕರಣ ನಡೆಸಿರುವುದು ದೊಡ್ಡ ಸವಾಲಾಗಿತ್ತು. ಇದು ಕಲಾವಿದರ ಸಿನಿಮಾ, ಎಲ್ಲರೂ ಅತ್ಯುತ್ತಮ ಅಭಿನಯ ನೀಡಿದ್ದಾರೆ" ಎಂದು ಚಿತ್ರದ ಹಿಂದಿನ ಶ್ರಮವನ್ನು ಹಂಚಿಕೊಂಡರು.

'ಶೈಲ' ಪಾತ್ರ ನನ್ನ ವೃತ್ತಿ ಬದುಕಿಗೆ ಸ್ಪೆಷಲ್ ಎಂದ ಅಕ್ಷತಾ

ನಾಯಕಿ ಅಕ್ಷತಾ ಪಾಂಡವಪುರ, "ನಾನಿಲ್ಲಿ ಮಲೆನಾಡಿನ ಒಂಟಿ ಹೆಣ್ಣು 'ಶೈಲ'ಳಾಗಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರ ನನ್ನ ವೃತ್ತಿಜೀವನದಲ್ಲಿ ಅತ್ಯಂತ ವಿಶೇಷವಾದದ್ದು. ಇಂತಹ ಅವಕಾಶ ಮತ್ತೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮಳೆಯನ್ನು ಒಂದು ಪ್ರಮುಖ ಪಾತ್ರವಾಗಿ ನಿರ್ದೇಶಕರು ತೋರಿಸಿದ್ದಾರೆ. ಸಿನಿಮಾ ನೋಡಲು ನಾನೇ ಕಾತುರದಿಂದ ಕಾಯುತ್ತಿದ್ದೇನೆ" ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.

'ಹೊಂಬಣ್ಣ', 'ಎಂಥಾ ಕಥೆ ಮಾರಾಯ' ಮತ್ತು 'ತಿಮ್ಮನ ಮೊಟ್ಟೆಗಳು' ಚಿತ್ರಗಳ ನಂತರ ರಕ್ಷಿತ್ ಅವರ ನಾಲ್ಕನೇ ನಿರ್ದೇಶನದ ಈ ಚಿತ್ರ, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಬಿಡುಗಡೆಯಾದ ಟೀಸರ್, ಮಲೆನಾಡಿನ ದೃಶ್ಯ ವೈಭವ, ಪಾತ್ರಗಳ ತೀವ್ರತೆ ಮತ್ತು ನಿಗೂಢ ಕಥೆಯ ಸುಳಿವು ನೀಡುವ ಮೂಲಕ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.

Read More
Next Story