
ಉಪೇಂದ್ರ
ಸೂಪರ್‌ಸ್ಟಾರ್ ಉಪೇಂದ್ರ ನಟನೆಯ 'ಉಪೇಂದ್ರ' ಚಿತ್ರ ತೆಲುಗಿನಲ್ಲಿ ಮರು ಬಿಡುಗಡೆ
'ಪುಷ್ಪ', 'ಪುಷ್ಪ- 2' ಸೇರಿದಂತೆ ಹಲವು ಬೃಹತ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇದೀಗ 'ಉಪೇಂದ್ರ' ಸಿನಿಮಾವನ್ನು ತೆಲುಗಿನಲ್ಲಿ ಅದ್ಧೂರಿಯಾಗಿ ಮರು ಬಿಡುಗಡೆ ಮಾಡುತ್ತಿದೆ.
ನಟ ಮತ್ತು ನಿರ್ದೇಶಕರಾದ ಸೂಪರ್‌ಸ್ಟಾರ್ ಉಪೇಂದ್ರ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳಿನಲ್ಲಿಯೂ ನಟನಾಗಿ ಅವರು ಜನಪ್ರಿಯರು. ಆದರೆ, ನಿರ್ದೇಶಕನಾಗಿ ಉಪೇಂದ್ರ ಅವರು ನೀಡಿದ ಕೆಲವು ಕಲ್ಟ್ ಸಿನಿಮಾಗಳು ಅವರ ವಿಶಿಷ್ಟ ಶೈಲಿಯನ್ನು ಇಂದಿಗೂ ಸಾರುತ್ತವೆ.
ಉಪೇಂದ್ರ ಅವರ ಹಳೆಯ ಸಿನಿಮಾಗಳು ಆಗಾಗ್ಗೆ ಕನ್ನಡದಲ್ಲಿ ಮರುಬಿಡುಗಡೆ ಆಗುತ್ತಿವೆ. 'ಓಂ' ಸಿನಿಮಾ ದಾಖಲೆ ಪ್ರಮಾಣದಲ್ಲಿ ಮರುಬಿಡುಗಡೆ ಕಂಡಿದೆ. ಇತ್ತೀಚೆಗೆ 'ಎ' ಸಿನಿಮಾ ಕೂಡ ಭರ್ಜರಿಯಾಗಿ ರೀ-ರಿಲೀಸ್ ಆಗಿತ್ತು. ಈಗ, ಅವರ ಮತ್ತೊಂದು ಕಲ್ಟ್ ಕ್ಲಾಸಿಕ್ ಚಿತ್ರ 'ಉಪೇಂದ್ರ' ಸಿನಿಮಾ ಮರುಬಿಡುಗಡೆಗೆ ಸಿದ್ಧವಾಗಿದೆ. ಆದರೆ ಈ ಬಾರಿ ಕನ್ನಡದಲ್ಲಿ ಅಲ್ಲ, ಬದಲಿಗೆ ತೆಲುಗಿನಲ್ಲಿ.
ಮೈತ್ರಿ ಮೂವಿ ಮೇಕರ್ಸ್‌ನಿಂದ ಭರ್ಜರಿ ರೀ-ರಿಲೀಸ್
'ಪುಷ್ಪ', 'ಪುಷ್ಪ 2' ಸೇರಿದಂತೆ ಹಲವು ಬೃಹತ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇದೀಗ 'ಉಪೇಂದ್ರ' ಸಿನಿಮಾವನ್ನು ತೆಲುಗಿನಲ್ಲಿ ಅದ್ಧೂರಿಯಾಗಿ ಮರುಬಿಡುಗಡೆ ಮಾಡುತ್ತಿದೆ.
ಉಪೇಂದ್ರ ಅವರ ಸಿನಿಮಾಗಳು ತೆಲುಗಿನಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ಹಲವು ಸ್ಟಾರ್ ನಟರೇ ಅವರಿಗೆ ಫ್ಯಾನ್ಸ್ ಆಗಿದ್ದಾರೆ. ಹಿಂದೆ ಅವರ ಸಿನಿಮಾಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಗೊಂಡಿದ್ದವು ಮತ್ತು ಕಲ್ಟ್ ಕ್ಲಾಸಿಕ್‌ಗಳಾಗಿ ಮೆಚ್ಚುಗೆ ಪಡೆದಿದ್ದವು.
ನಾಳೆ (ಅ.11) ಬಿಡುಗಡೆ
ಶನಿವಾರ (ಅ.11) ರಂದು 'ಉಪೇಂದ್ರ' ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹಲವು ಪ್ರಮುಖ ನಗರಗಳಲ್ಲಿ ತೆರೆ ಕಾಣಲಿದೆ. ಹೈದರಾಬಾದ್‌ನ ಮುಖ್ಯ ಥಿಯೇಟರ್‌ಗಳಲ್ಲಿ ಒಂದಾದ ಸಂಧ್ಯಾ ಸೇರಿದಂತೆ ವಿಶಾಖಪಟ್ಟಣಂ ಮತ್ತು ಇತರೆ ಪ್ರಮುಖ ಕೇಂದ್ರಗಳಲ್ಲಿ ಈ ಸಿನಿಮಾ ಮರುಬಿಡುಗಡೆ ಆಗುತ್ತಿದೆ ಎಂದು ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
1999 ರಲ್ಲಿ ಬಿಡುಗಡೆಗೊಂಡ 'ಉಪೇಂದ್ರ' ಸಿನಿಮಾ ಒಂದು ವಿಭಿನ್ನವಾದ ಕಥಾಹಂದರವನ್ನು ಹೊಂದಿತ್ತು. ಸ್ವತಃ ಉಪೇಂದ್ರ ಅವರೇ 'ನಾನು' ಎಂಬ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ರವೀನಾ ಟಂಡನ್, ದಾಮಿನಿ ಮತ್ತು ಪ್ರೇಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ಗುರುಕಿರಣ್ ಅವರು ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು ಮತ್ತು ಅವರ ಎಲ್ಲಾ ಹಾಡುಗಳು ಬ್ಲಾಕ್‌ಬಸ್ಟರ್ ಆಗಿದ್ದವು. ಇತ್ತೀಚೆಗೆ ‘ಏನಿಲ್ಲ, ಏನಿಲ್ಲ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿ ಟ್ರೆಂಡ್ ಆಗಿತ್ತು.