ನಮ್ಮಲ್ಲಿ ಕಲಾವಿದರು ಇಲ್ಲ, ಒಳ್ಳೆಯ ಚಿತ್ರಗಳಿಲ್ಲ ಅನ್ನೋದು ಸುಳ್ಳು: ಸುದೀಪ್‍
x
ಸುದೀಪ್‌ ನಡೆಸಿದ ಪತ್ರಿಕಾಗೋಷ್ಠಿ

ನಮ್ಮಲ್ಲಿ ಕಲಾವಿದರು ಇಲ್ಲ, ಒಳ್ಳೆಯ ಚಿತ್ರಗಳಿಲ್ಲ ಅನ್ನೋದು ಸುಳ್ಳು: ಸುದೀಪ್‍

ಡಿಕೆಶಿ ಅವರ ʼಬೋಲ್ಟ್‌ ನಟ್‌ʼ ಹೇಳಿಕೆಲ್ಲಿ ಅವರ ತಪ್ಪಿಲ್ಲ. "ಇದೆಲ್ಲಾ ಸಾಧು ಕೋಕಿಲ ಅವರ ಕಿತಾಪತಿ. ಚಿತ್ರರಂಗದವರು ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಬೇಸರದಲ್ಲಿ ಅವರು ಮಾತನಾಡಿದ್ದರು," ಎಂದು ಸುದೀಪ್‌ ಹೇಳಿದ್ದಾರೆ.


Click the Play button to hear this message in audio format

‘ನಮ್ಮಲ್ಲಿ ಕಲಾವಿದರಿಲ್ಲ, ಸಿನಿಮಾಗಳು ಓಡುತ್ತಿಲ್ಲ ಎಂಬುದು ಸುಳ್ಳು. ಇಲ್ಲಿ ಸಾಕಷ್ಟು ಒಳ್ಳೆಯ ಕಲಾವಿದರಿದ್ದಾರೆ. ಕೆಲವು ಸಂದರ್ಶನಗಳಲ್ಲಿ ಯಾರಿದ್ದಾರೆ ಇಲ್ಲಿ ಹೀರೋಗಳು ಯಾರಿದ್ದಾರೆ ಎಂದು ಕೆಲವರು ಕೇಳುತ್ತಿರುತ್ತಾರೆ. ಯಾವರ್ಥದಲ್ಲಿ ಹೀಗೆ ಮಾತಾಡುತ್ತಿದ್ದಾರೆ ಗೊತ್ತಿಲ್ಲ. ರಿಷಭ್, ಧ್ರುವ, ಗಣೇಶ್‍, ‘ದುನಿಯಾ’ ವಿಜಯ್‍ ಇವರೆಲ್ಲಾ ಹೀರೋಗಳಲ್ವಾ? ಶಿವಣ್ಣ, ಉಪೇಂದ್ರ, ರಕ್ಷಿತ್‍ ಎಷ್ಟು ಜನ ಇದ್ದಾರೆ ಇಲ್ಲಿ. ಯಶ್‍ ಇಂದು ಎಲ್ಲಿಗೋ ಹೋಗಿ ತಲುಪಿದ್ದಾರೆ. ಇಷ್ಟು ಕಲಾವಿದರಿರುವ ಚಿತ್ರರಂಗ ನಮ್ಮದು. ಮಾತಾಡೋಕೆ ಬರುತ್ತದೆ ಎಂದು ಯಾರ್ಯಾರಿಗೋ ನೋವು ಮಾಡೋದಲ್ಲ’ ಎಂದು ಸುದೀಪ್‍ ಹೇಳಿದ್ದಾರೆ.

ಸುದೀಪ್‍ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಳೆದ ವರ್ಷದ ಹುಟ್ಟುಹಬ್ಬಕ್ಕೂ ಮೊದಲು ಒಂದು ಪತ್ರಿಕಾಗೋಷ್ಠಿ ಆಯೋಜಿಸಿ, ಅದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ಈ ವರ್ಷವೂ ಅದು ಮುಂದುವರೆಯಿತು. ನಂದಿ ಲಿಂಕ್ ಗ್ರೌಂಡ್‌ನಲ್ಲಿ ಇತ್ತೀಚೆಗೆ ಸುದೀಪ್‍ ಪತ್ರಿಕಾಗೋಷ್ಠಿ ಮಾಡಿ, ಅಲ್ಲಿ ತಮ್ಮ ಹೊಸ ಚಿತ್ರದ ಬಗ್ಗೆ, ಚಿತ್ರರಂಗದ ಪರಿಸ್ಥಿತಿಯ ಬಗ್ಗೆ, ದರ್ಶನ್‍ ಬಗ್ಗೆ ಸೇರಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.


‘45’ ಚಿತ್ರಕ್ಕೆ ಹೆದರಿ ನಾನು ಹಿಂದೆ ಸರಿಯುವುದಿಲ್ಲ: ಸುದೀಪ್

ಸುದೀಪ್‍ ಅವರ ಹೊಸ ಚಿತ್ರ ‘ಮಾರ್ಕ್’, ಡಿ. 25ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ವಿಶೇಷವೆಂದರೆ, ಅದೇ ದಿನ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಅಭಿನಯದ ‘45’ ಚಿತ್ರ ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳು ಒಂದೇ ದಿನ ಕ್ಲಾಶ್‍ ಆಗುತ್ತಿರುವ ಕುರಿತು ಮಾತನಾಡಿರುವ ಸುದೀಪ್‍, ‘ಜನ ಯಾವತ್ತೂ ಕನ್ಫ್ಯೂಸ್‍ ಆಗಿಲ್ಲ. ಯಾವ ಚಿತ್ರ ನೋಡಬೇಕು ಎಂದು ಅವರು ಮೊದಲೇ ನಿರ್ಧರಿಸುತ್ತಾರೆ ಎಂದರು.


ದಿನಕ್ಕೆ ನಾಲ್ಕು ಪ್ರದರ್ಶನಗಳಿರುತ್ತವೆ. ನಾಲ್ಕೂ ಪ್ರದರ್ಶನಗಳಲ್ಲಿ ಒಂದೇ ಚಿತ್ರ ನೋಡುವುದಕ್ಕೆ ಸಾಧ್ಯವಿಲ್ಲ. ಎರಡು ಚಿತ್ರಗಳನ್ನು ನೋಡಬಹುದು. ಅವರಿಗೆ ಯಾವುದೇ ಗೊಂದಲವಿಲ್ಲ. ಅನಾವಶ್ಯಕವಾಗಿ ನಾನು ಯಾರಿಗೆ ಸವಾಲು ಹಾಕುವುದಿಲ್ಲ. ನಾನು ಪವರ್‌ಫುಲ್‌ ಎಂದು ತೋರಿಸಿಕೊಳ್ಳುವುದಿಲ್ಲ. ಯಾರು ಸಿನಿಮಾ ಮಾಡುತ್ತಿದ್ದಾರೋ, ಅವರ ಮೇಲೆ ಅಪಾರವಾದ ಗೌರವವಿದೆ. ಹಾಗಂತ ನಾನು ನನ್ನ ಕೆಲಸಗಳನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ನನ್ನ ಸಿನಿಮಾ ಓಡಲಿಲ್ಲ ಎಂದರೆ ಹಾಳಾಗುವುದು ನನ್ನ ಸಿನಿಮಾ ನಿರ್ಮಾಪಕ ಮಾತ್ರ. ನನ್ನ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಮೇಲೆ ಆಸೆ ಇಟ್ಟುಕೊಂಡಿರುತ್ತಾರೆ. ಡಿ. 25ರಂದು ಬಿಡುಗಡೆ ಮಾಡುವುದಾಗಿ ಮೊದಲೇ ಹೇಳಿದ್ದೆ. ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ಮೇಲಾಗಿ ಅರ್ಜುನ್‍ ಜನ್ಯ ನಮ್ಮ ಹುಡುಗ. ಅವರಿಗೆ ಯಾಕೆ ಸವಾಲು ಹಾಕಲಿ? ನನ್ನ ಸಿನಿಮಾ ಸುಪೀರಿಯರ್ ಎಂದು ಹೇಳುತ್ತಿಲ್ಲ ಆ ಚಿತ್ರದಲ್ಲಿರುವವರು ದಿಗ್ಗಜರು. ಹಾಗಂತ ನಾನು ನನ್ನ ಚಿತ್ರವನ್ನು ಕೀಳಾಗಿ ನೋಡುವುದಕ್ಕೆ ಅಥವಾ ಹೆದರಿಕೊಂಡು ಹಿಂದೆ ಸರಿಯುವುದಕ್ಕೆ ಇಷ್ಟಪಡುವುದಿಲ್ಲ. ಅವರೂ ನನ್ನ ಚಿತ್ರದ ಬಗ್ಗೆ ಹೆದರಬೇಕಿಲ್ಲ. ನಾವಿಬ್ಬರೂ ಒಟ್ಟಿಗೆ ಬಿಡುಗಡೆ ಮಾಡಬಹುದು’ ಎಂದರು.


‘ಸು ಫ್ರಮ್‍ ಸೋ: ಸಿನಿಮಾಗಳು ಓಡುತ್ತಿಲ್ಲ ಎನ್ನುವವರಿಗೆ ಒಳ್ಳೆಯ ಪಾಠ

‘ಸು ಫ್ರಮ್‍ ಸೋ’ ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ ಸುದೀಪ್‍, ಆ ತರಹ ಚಿತ್ರಗಳು ಗೆಲ್ಲುತ್ತಿರಬೇಕು ಎಂದರು. ‘ಚಿತ್ರಗಳು ಗೆದ್ದರಷ್ಟೇ ಚಿತ್ರರಂಗಕ್ಕೆ ಒಳ್ಳೆಯದಾಗುವುದು. ಇಲ್ಲಿ ಕಲಾವಿದರಿಲ್ಲ, ಸಿನಿಮಾಗಳು ಓಡುತ್ತಿಲ್ಲ ಎಂದು ಕೊರಗುವವರಿಗೆ ಇದೊಂದು ಒಳ್ಳೆಯ ಪಾಠ. ಇಲ್ಲಿ ಸಾಕಷ್ಟು ಒಳ್ಳೆಯ ಕಲಾವಿದರಿದ್ದಾರೆ. ಹಲವು ಕಲಾವಿದರಿರುವ ಚಿತ್ರರಂಗ ನಮ್ಮದು. ‘ಸು ಫ್ರಮ್‍ ಸೋ’ದಿಂದ ಮತ್ತಷ್ಟು ಹೀರೋಗಳು ಹುಟ್ಟಿಕೊಳ್ಳುತ್ತಾರೆ. ಅದೊಂದು ಯಶಸ್ಸು ಎಷ್ಟು ಜನರಿಗೆ ಧೈರ್ಯ ಕೊಟ್ಟಿದೆ. ನಾವು ಯಾಕೆ ದೇವಸ್ಥಾನಕ್ಕೆ ಹೋಗುತ್ತೇವೆ? ಅಲ್ಲಿಗೆ ಹೋಗಿ ಬಂದರೆ, ಒಂದು ವಿಶ್ವಾಸ ಮೂಡುತ್ತದೆ. ಏನೋ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬರುತ್ತದೆ. ಯಾವುದೇ ಹೊಸ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡರೂ, ಅದೊಂದು ದೇವಸ್ಥಾನವಿದ್ದಂತೆ’ ಎಂದರು.


ಡಿ.ಕೆ ಸಾಹೇಬ್ರ ತಪ್ಪಿಲ್ಲ; ಇದೆಲ್ಲಾ ಸಾಧು ಕೋಕಿಲ ಕಿತಾಪತಿ ಎಂದು ಸುದೀಪ್

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲಿ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಕುರಿತು ಮಾತನಾಡಿರುವ ಸುದೀಪ್‍, ‘ಇದೆಲ್ಲಾ ಸಾಧು ಕೋಕಿಲ (ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ) ಅವರ ಕಿತಾಪತಿ. ಇದರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ. ಚಿತ್ರರಂಗದವರು ಚಿತ್ರರಂಗದ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಬೇಸರದಲ್ಲಿ ಅವರು ಮಾತನಾಡಿದ್ದರು. ಆದರೆ, ಎಲ್ಲರನ್ನೂ ಒಟ್ಟಿಗೆ ಕರೆದರೆ, ಸಂಭಾಳಿಸುವುದು ಹೇಗೆ? ಸೆಕ್ಯುರಿಟಿ ಕೊಡುವುದು ಹೇಗೆ? ಎಂದು ಬಹಳಷ್ಟು ಜನರನ್ನು ಸಾಧು ಕರೆದಿರಲಿಲ್ಲ. ಅದನ್ನ ಮೊದಲೇ ಅವರಿಗೆ ಹೇಳಬೇಕಿತ್ತು. ಅಲ್ಲಿ ಬಂದು ಮಾತನಾಡಿದಾಗ ಸೈಲೆಂಟ್‌ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ. ಇದರಲ್ಲಿ ಸಾಧು ಅವರದ್ದೂ ತಪ್ಪಿಲ್ಲ ಎಂದ ಸುದೀಪ್‍, ‘ಅವರು ಯಾವಾಗಲೂ ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದರೆ, ಅದು ಗಂಭೀರವಾಯ್ತು’ ಎಂದು ಹೇಳಿದರು.

ಸೂರ್ಯ, ಚಂದ್ರ (ದರ್ಶನ್‌, ಕಿಚ್ಚ) ಎರಡೂ ಅದರ ಜಾಗದಲ್ಲಿ ಇದ್ದರೆ ಚೆನ್ನ

ಡಿಸೆಂಬರ್ ತಿಂಗಳಲ್ಲಿ ದರ್ಶನ್‍ ಅಭಿನಯದ ‘ದಿ ಡೆವಿಲ್‍’ ಚಿತ್ರ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ, ದರ್ಶನ್‍ ಅವರ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ‘ಯಾವುದೇ ಚಿತ್ರವಾದರೂ ಚೆನ್ನಾಗಿ ಓಡಬೇಕು. ನಾನು ಕಳೆದ ಬಾರಿಯೇ ಹೇಳಿದ್ದೆ. ಅವರಿಗೆ ಅವರದ್ದೇ ಆದ ನೋವು ಇರುತ್ತದೆ. ಈ ವಿಷಯದಲ್ಲಿ ನಾವು ಮಾತನಾಡುವುದು ತಪ್ಪಾಗುತ್ತದೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡುತ್ತಿದ್ದಾರೆ. ಅದಕ್ಕೂ ನಾವು ಅಡ್ಡ ಬರಬಾರದು. ತಪ್ಪು-ಸರಿ ಅಲ್ಲಿ ನಿರ್ಧಾರವಾಗುತ್ತದೆ. ಯಾರೂ ಕೈಕಟ್ಟಿಕೊಂಡು ಸುಮ್ಮನೇ ಕುಳಿತಿರುವುದಿಲ್ಲ. ಆದರೆ, ಕೆಲವೊಂದು ವಿಷಯಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಏಕೆಂದರೆ, ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ. ಎರಡನೆಯದು, ಅದರಿಂದ ಅಂತರ ಜಾಸ್ತಿಯಾಗುತ್ತದೆ. ನಾವು ಯಾರದ್ದೋ ಮಾತು ಕೇಳಿ ದೂರಾಗಿಲ್ಲ. ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ. ನಾವಿಬ್ಬರು ಯಾಕೆ ಮಾತಾಡುವುದಿಲ್ಲ ಎಂದರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದರೆ, ನಮಗೆ ಗೊತ್ತಿರುತ್ತದೆ. ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ. ಸೂರ್ಯ, ಚಂದ್ರ ಎರಡೂ ಅದರ ಜಾಗದಲ್ಲಿ ಇದ್ದರೆ ಚೆನ್ನ’ ಎಂದರು.


ಸುದೀಪ್‍ ಯಾಕೆ ಪೌರಾಣಿಕ ಚಿತ್ರಗಳಲ್ಲಿ ನಟಿಸಿಲ್ಲ?

ಸುದೀಪ್‍ ಇದುವರೆಗೂ ಹಲವು ಜಾನರ್‍ನ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಪೌರಾಣಿಕ ಚಿತ್ರದಲ್ಲೂ ನಟಿಸಿಲ್ಲ. ಇಷ್ಟಕ್ಕೂ ಯಾಕೆ ಅವರು ಪೌರಾಣಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡುವ ಅವರು, ‘ಪೌರಾಣಿಕ ಚಿತ್ರಗಳೆಂದರೆ ಕುದುರೆ ಸವಾರಿ ಮಾಡಬೇಕು. ಆದರೆ, ನನಗೆ ಒಮ್ಮೆ ಕೆಟ್ಟ ಅನುಭವವಾಗಿದ್ದರಿಂದ ಕುದುರೆ ಸವಾರಿ ಮಾಡುವುದಿಲ್ಲ. ಹಿಂದೊಮ್ಮೆ ನನಗೆ ಪೌರಾಣಿಕ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿತ್ತು. ಪಾತ್ರಕ್ಕಾಗಿ ಕುದುರೆ ಸವಾರಿ ಅಭ್ಯಾಸ ಮಾಡಿದ್ದೆ. ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತ ಗೊತ್ತಾಗ್ಲಿಲ್ಲ. 20 ಮೀಟರ್ ದೂರ ಎಳಕೊಂಡು ಹೋಗಿ ಬಿಟ್ಟಿತ್ತು. ಅಂದು ತುಂಬಾ ಭಯವಾಗಿತ್ತು. ಯಾವುದೇ ವಾಹನ ಓಡಿಸಿದರೂ, ಮೊದಲು ಬ್ರೇಕ್‍ ಮತ್ತು ಹ್ಯಾಂಡಲ್‍ ಎಲ್ಲಿದೆ ಎಂದು ಗೊತ್ತಿರಬೇಕು. ಆದರೆ, ಕುದುರೆಯಲ್ಲಿ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ’ ಎಂದರು.

Read More
Next Story