ಏಪ್ರಿಲ್‌ನಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಾಧ್ಯತೆ
2018ರಿಂದ ಬಾಕಿ ಇರುವ ಐದು ವರ್ಷಗಳ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ ಮತ್ತು ಪ್ರದಾನಕ್ಕೆ ಕಾಲಕೂಡಿ ಬಂದಂತೆ ಕಾಣುತ್ತಿದೆ. ಮೂರು ವರ್ಷಗಳ (2019, 2020, 2021) ಪ್ರಶಸ್ತಿಗಳ ಆಯ್ಕೆ ಸಮಿತಿಗಳ ರಚನೆಯಾಗಿದೆ. ಎಲ್ಲವೂ ಸರಿಯಾದರೆ ಏಪ್ರಿಲ್ ೨೪, ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಪ್ರಶಸ್ತಿಗಳು ವಿತರಣೆಯಾಗುವ ಸಾಧ್ಯತೆಗಳಿವೆ
ಕಳೆದ ಐದು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಕಲಾವಿದರು ತಂತ್ರಜ್ಞರು, ನಿರ್ದೇಶರಿಗೊಂದು ಸಿಹಿ ಸುದ್ದಿ ಇದೆ. ಮೂರು ವರ್ಷಗಳ ಸಿನಿಮಾವನ್ನು ನೋಡಿ ಪ್ರಶಸ್ತಿಗಳಿಗಾಗಿ ಅರ್ಹರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ 2019, 2020 ಮತ್ತು 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಆಯ್ಕೆ ಮಾಡಲು ಸಮಿತಿಗಳನ್ನು ರಚಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರೂ ಸ್ಭೆರಿದಂತೆ ಸಿನಿಮಾ, ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ತಜ್ಞರಾಗಿರುವವರನ್ನು ಗುರುತಿಸಿ, ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಯೂ ಎಂಟು ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ಒಬ್ಬರು ಸದಸ್ಯರಾಗಿದ್ದು, ಇನ್ನು ಏಳು ಮಂದಿ ಸದಸ್ಯರಾಗಿರುತ್ತಾರೆ. ಪ್ರತಿ ಸಮಿತಿಯಲ್ಲಿಯೂ ಎಂಟನೇ ಸದಸ್ಯರಾಗಿ ವಾರ್ತಾ ಇಲಾಖೆಯ ಆಯುಕ್ತರಿರುತ್ತಾರೆ.
2019ನೇ ಸಾಲಿನ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ಚಲನಚಿತ್ರ ನಿರ್ದೇಶಕ ನಂಜುಂಡೇಗೌಡರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. 2020ನೇ ಸಾಲಿನ ಆಯ್ಕೆ ಸಮಿತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ರಾಮದಾಸ ನಾಯ್ಡು ಅಧ್ಯಕ್ಷರು. 2021ನೇ ಸಾಲಿಗೆ ಚಲನಚಿತ್ರ ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಸದಾಶಿವ ಶೆಣೈ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕಳೆದ ಐದು ವರ್ಷಗಳಿಂದ ಪ್ರಶಸ್ತಿಗಳಿಗೆ ಸೂಕ್ತರನ್ನು ಗುರುತಿಸದಿರುವುದು ಹಾಗೂ ಈಗಾಗಲೇ ಪ್ರಶಸ್ತಿ ಪಡೆದವರಿಗೆ ಪ್ರಶಸ್ತಿ ಪ್ರದಾನ ಮಾಡದಿರುವುದು ಸಿನಿಮಾ ರಂಗದಲ್ಲಿ ಸಾಕಷ್ಟು ಅತೃಪ್ತಿ ಹುಟ್ಟು ಹಾಕಿತ್ತು. ದ ಫೆಡರಲ್-ಕರ್ನಾಟಕ ಕೂಡ ಈ ಕುರಿತು ವಿಸ್ತೃತ ವರದಿ ಪ್ರಕಟಿಸಿತ್ತು. ಸಿನಿಮಾ ರಂಗದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಆದಾಯವಿದ್ದರೂ, ಚಿತ್ರರಂಗದ ಸಮಸ್ಯೆಗಳಿಗೆ ಇತ್ತೀಚಿನ ಎಲ್ಲ ಸರ್ಕಾರಗಳೂ ಗಮನಹರಿಸದೆ ಇರುವುದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2017ರಲ್ಲಿ ನೀಡಿದ್ದೇ ಅಂತಿಮ ಪ್ರಶಸ್ತಿಯಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರವಾಗಲಿ, ಅದನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವಾಗಲಿ ಚಲನಚಿತ್ರ ರಂಗದ ಸಮಸ್ಯೆಗಳಿಗೆ ಸ್ಪಂದಿಸಲೇ ಇಲ್ಲ. ಪ್ರಶಸ್ತಿಗಳಿಗೆ ಸಮಿತಿಗಳನ್ನು ರಚಿಸುವುದೇ ಆಗಲಿ, ಸಮಿತಿಗಳು ಪ್ರಕಟಿಸಿದ ಪ್ರಶಸ್ತಿಗಳನ್ನು ಪ್ರಧಾನ ಮಾಡುವ ಬಗ್ಗೆಗಾಗಲಿ ಗಮನ ಹರಿಸಲೇ ಇಲ್ಲ. ಮತ್ತೆ ಪ್ರಶಸ್ತಿಗೆ ಸಮಿತಿಗಳನ್ನು ಆಯ್ಕೆ ಮಾಡಲು ಸಮಿತಿಗಳನ್ನು ರಚಿಸಲು ಮತ್ತು ಪ್ರಶಸ್ತಿ ಪ್ರದಾನ ಮಾಡಲು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು ಎನ್ನುತ್ತಾರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಂ ಎನ್ ಸುರೇಶ್.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕನ್ನಡ ಚಲನಚಿತ್ರ ರಂಗದ ಎಲ್ಲ ಅಂಗ ಸಂಸ್ಥೆಗಳ ಅಧ್ಯಕರೂ ಪದಾದಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಸಿನಿಮಾ ರಂಗದ ಸಮಸ್ಯೆಗಳನ್ನು ಚರ್ಚಿಸಿದ ಪರಿಣಾಮವಾಗಿ ಈಗ ಪ್ರಶಸ್ತಿ ಸಮಿತಿಗಳು ತಮ್ಮ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿವೆ. ಕನ್ನಡ ಚಿತ್ರರಂಗ ಒಮ್ಮೆ ನೆಮ್ಮದಿ ಕಂಡಿದೆ. ಆದರೆ ಏಪ್ರಿಲ್ 24ರೊಳಗೆ ಈ ಸಮಿತಿಗಳು ಚಿತ್ರಗಳನ್ನು ನೋಡಿ ಪ್ರಶಸ್ತಿಗಳನ್ನು ಪ್ರಕಟಿಸದಿದ್ದಲ್ಲಿ, ಮತ್ತೆ ಸಮಸ್ಯೆಯಾಗಲಿದೆ. ಆಗ 2018ರ ಸಾಲಿನ ಪ್ರಶಸ್ತಿಯನ್ನು ಮಾತ್ರ ಪ್ರದಾನ ಮಾಡಬಹುದು.
ಇಲ್ಲಿ ಏಪ್ರಿಲ್ 24ರೊಳಗೆ ಎಂದು ಕಾಲ ನಿಗದಿ ಮಾಡಲು ಕಾರಣವಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ (2013-2018) ಪ್ರತಿವರ್ಷ ಕನ್ನಡ ವರನಟ ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದು ಪ್ರಶಸ್ತಿ ಪ್ರದಾನ ಮಾಡುವುದಾಗಿ ಘೋಷಿಸಿತ್ತು. 2017ರಲ್ಲಿ ಪ್ರಶಸ್ತಿಯನ್ನು ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದೆ ಪ್ರದಾನ ಮಾಡಲಾಗಿತ್ತು. ಹಾಗಾಗಿ ಈ ವರ್ಷ ಕೂಡ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಮಾಡುವ ಎಲ್ಲ ಸಾಧ್ಯತೆಗಳಿವೆ ಎಂದು ವಾರ್ತಾ ಇಲಾಖೆಯ ಮೂಲಗಳು ʼದ ಫೆಡರಲ್ʼ ಗೆ ತಿಳಿಸಿವೆ.
ಆದರೆ ಈಗಿರುವ ಆತಂಕವೆಂದರೆ 2024 ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವ್ಯದರಿಂದ ಸರ್ಕಾರ ಇತ್ತ ಗಮನಹರಿಸುವುದೇ ಎಂಬ ಅನುಮಾನವೂ ಚಿತ್ರರಂಗವನ್ನು ಕಾಡುತ್ತಿದೆ. ಫೆಬ್ರುವರಿ ಕೊನೆಯ ವಾರದಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದಲ್ಲಿ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವುದು ಕಷ್ಟವಾಗಬಹುದು ಎಂಬುದು ಸರ್ಕಾರಿ ಅಧಿಕಾರಿಗಳ ಅನಿಸಿಕೆ. ಆದರೆ 2018ರ ಪ್ರಶಸ್ತಿ ಪ್ರದಾನ ಮಾಡಲಡ್ಡಿ ಇಲ್ಲ. ಅಷ್ಟಾದರೂ ಸಾಕು ಎಂಬುದು ಪ್ರಶಸ್ತಿ ಪುರಸ್ಕೃತರೊಬ್ಬರ ನೋವಿನ ಮಾತುಗಳು.