
‘777 ಚಾರ್ಲಿ’
ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ: ಆಯ್ಕೆಯೇನೋ ಆಯಿತು … ಕೊಡೋದು ಯಾವಾಗ?
2024ರ ಸಾಲಿಗೆ ಮಾತ್ರ ಮಿಕ್ಕೆಲ್ಲಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ‘ಪುಷ್ಪ 2’ ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅಷ್ಟೇ ಅಲ್ಲ, ಪ್ರಶಸ್ತಿಯ ಹೆಸರು ನಂದಿಯಿಂದ ಗದ್ದರ್ ತೆಲಂಗಾಣ ಫಿಲ್ಮ್ ಅವಾರ್ಡ್ಸ್ ಎಂದು ಬದಲಾಯಿಸಲಾಗಿದೆ.
2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ ಅದರ ಆದೇಶವಾಗಿ ಒಂದು ವಾರದ ನಂತರ, ಕೊನೆಗೂ ಶುಕ್ರವಾರ ಆಗಿದೆ. ಕೆ.ಎಂ. ರಘು ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದರೆ, ‘777 ಚಾರ್ಲಿ’ ಮತ್ತು ‘ಮ್ಯೂಟ್’ ಎಂಬ ಚಿತ್ರಗಳ ನಟನೆಗಾಗಿ ರಕ್ಷಿತ್ ಶೆಟ್ಟಿ ಮತ್ತು ಅರ್ಚನಾ ಜೋಯಿಸ್, ಅತ್ಯುತ್ತಮ ನಟ-ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಪ್ರಜ್ವಲ್ ದೇವರಾಜ್ - ಅಕ್ಷತಾ ಪಾಂಡವಪುರ ಮತ್ತು ಸುದೀಪ್ - ಅನುಪಮಾ ಗೌಡ ಕ್ರಮವಾಗಿ 2020 ಮತ್ತು 2019ನೇ ಸಾಲಿನ ಅತ್ಯುತ್ತಮ ನಟ-ನಟಿಯಾಗಿದ್ದರು. ಮೂರು ವರ್ಷಗಳ ಪ್ರಶಸ್ತಿ ಘೋಷಣೆಯಾಗಿದ್ದರೂ, ಪ್ರಶಸ್ತಿ ವಿತರಣೆ ಮಾತ್ರ ಆಗುತ್ತಿಲ್ಲ. ಆದರೆ, ಈ ಪ್ರಶಸ್ತಿಗಳ ವಿತರಣೆ ಯಾವಾಗ? ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಸಹಾಯಧನಗಳನ್ನು ಸರಿಯಾದ ಸಮಯಕ್ಕೆ ನೀಡಲಾಗುತ್ತಿಲ್ಲ ಎಂಬ ಕೂಗು ಹೆಚ್ಚಾದಾಗ, 2024ರ ಜನವರಿ 30ರಂದು ಸರ್ಕಾರವು 2019, 20, 21 ಮತ್ತು 22ನೇ ಸಾಲಿನ ನಾಲ್ಕು ವರ್ಷಗಳ ಸಹಾಯಧನ ಆಯ್ಕೆ ಸಮಿತಿಗಳನ್ನು, 2019, 20 ಮತ್ತು 21ನೇ ಸಾಲಿನ ಮೂರು ವರ್ಷಗಳ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗಳನ್ನು ರಚಿಸಿತ್ತು. ಈ ಪೈಕಿ 2019 ಮತ್ತು 20ನೇ ಸಾಲಿನ ಸಹಾಯಧನ ಮತ್ತು 2019, 20, 21ನೇ ಸಾಲಿನ ಪ್ರಶಸ್ತಿಗಳು ಪ್ರಕಟಣೆಯಾಗಿವೆ. 2021ನೇ ಸಾಲಿನ ಸಹಾಯಧನ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆಮಾಡಿದ್ದು, ಅವುಗಳ ಆದೇಶ ಆಗಬೇಕು ಎನ್ನುತ್ತಿವೆ ಮೂಲಗಳು. 2022ರ ಸಾಲಿನ ಸಹಾಯಧನ ಆಯ್ಕೆ ಸಮಿತಿ ರಚನೆ ಮಾತ್ರ ಆಗಿದ್ದು ಚಿತ್ರಗಳನ್ನು ಆಹ್ವಾನಿಸಿಲ್ಲ.
2017ರ ಸಾಲಿನ ಪ್ರಶಸ್ತಿಗಳು 2018ರಲ್ಲಿ ಘೋಷಣೆಯಾಗಿ, ಅದನ್ನು 2022ರಲ್ಲಿ ಪ್ರದಾನ ಮಾಡಲಾಯಿತು. ಇನ್ನು, 2018ರ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆಯಾಗಿದ್ದರೂ ಇದುವರೆಗೂ ಕೊಟ್ಟಿಲ್ಲ. ಅದರ ಜೊತೆಗೆ ಈ ಮೂರು ವರ್ಷದ ಪ್ರಶಸ್ತಿಗಳು ಸೇರಿ ಒಟ್ಟು ನಾಲ್ಕು ವರ್ಷದ ಪ್ರಶಸ್ತಿಗಳನ್ನು ನೀಡಬೇಕಿದೆ. ಪ್ರಶಸ್ತಿ ಪ್ರದಾನ ಸಮಾರಂಭವೂ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಬೆಂಗಳೂರಿನಲ್ಲೇ ನಡೆದಿದೆ. ಅದು ಬೆಂಗಳೂರಿಗೆ ಸೀಮಿತವಾಗಬಾರದು ಎಂಬ ಕಾರಣಕ್ಕೆ ಮೈಸೂರು, ಬೆಳಗಾವಿ ಮುಂತಾದ ಕಡೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿಲು ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ ಇದೆಯಾದರೂ, ಅದು ಯಾವಾಗ ಎಂಬುದು ಇನ್ನೂ ಗೊತ್ತಿಲ್ಲ.
ಅಷ್ಟೇ ಅಲ್ಲ, ಸದ್ಯದಲ್ಲೇ ಆಗಬಹುದು ಎಂಬ ನಿರೀಕ್ಷೆಯೂ ಇಲ್ಲ. ಏಕೆಂದರೆ, ಇನ್ನು ಕೆಲವು ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ಆಯ್ಕೆ ಸಮಿತಿಗಳೇನೋ ಅತ್ಯುತಮ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರಗಳನ್ನು ಆಯ್ಕೆ ಮಾಡಿವೆ. ಅದರ ಜೊತೆಗೆ ಚಿತ್ರರಂಗದಲ್ಲಿ ಜೀವಮಾನ ಸಾಧನೆಗೆ ನೀಡುವ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕಿದೆ. ಈ ಮೂರು ಪ್ರಶಸ್ತಿಗಳಿಗೆಂದೇ ಪ್ರತ್ಯೇಕ ಆಯ್ಕೆ ಸಮಿತಿಗಳಿರುತ್ತವೆ. ಆ ನಿಟ್ಟಿನಲ್ಲಿ 2019-20-21 ಈ ಮೂರು ವರ್ಷಗಳಿಗೆ ಸರ್ಕಾರ ಮೊದಲು ಮೂರು ಆಯ್ಕೆ ಸಮಿತಿಗಳನ್ನು ಆಯ್ಕೆ ಮಾಡಬೇಕು. ಆ ಸಮಿತಿಗಳು ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಇದರ ಜೊತೆಗೆ ಪ್ರತೀ ವರ್ಷ, ಸಿನಿಮಾಗೆ ಸಂಬಂಧಿಸಿದ ಅತ್ಯುತ್ತಮ ಕೃತಿಯನ್ನು ಆಯ್ಕೆ ಮಾಡಲು ಪ್ರತ್ಯೇಕ ಸಮಿತಿ; ಅದಕ್ಕೆ ಮೂರು ಸಮಿತಿಗಳನ್ನು ರಚಿಸಿ, ಅವು ಅತ್ಯುತ್ತಮ ಕೃತಿ ಪ್ರಶಸ್ತಿ ನೀಡಬೇಕು. ಹಾಗೆಯೇ ಕಿರುಚಿತ್ರಗಳ ಆಯ್ಕೆಗೂ ಸಮಿತಿಗಳಾಗಬೇಕು. ಇದೆಲ್ಲಾ ಸಂಪೂರ್ಣವಾಗಿ ಮುಗಿದು, ಅಂತಿಮವಾಗಿ ಪ್ರಶಸ್ತಿ ಪ್ರದಾನಕ್ಕೆ ಎಷ್ಟು ಸಮಯವಾಗುತ್ತದೋ ಗೊತ್ತಿಲ್ಲ. ಇವೆಲ್ಲವೂ 2021ರವರೆಗೆ ಮಾತ್ರ. ಅದಾದ ಮೇಲೆ 2022, 23 ಮತ್ತು 24ನೇ ಸಾಲಿನ ಮೂರು ಪ್ರಶಸ್ತಿಗಳಿವೆ. ಈ ವರ್ಷ ಮುಗಿಯಲು ಇನ್ನು ಎರಡೂ ಮುಕ್ಕಾಲು ತಿಂಗಳುಗಳಿವೆ. ಅದಾದ ಮೇಲೆ ಈ ಮೂರು ವರ್ಷಗಳ ಸಾಲಿಗೆ 2025 ಸಹ ಸೇರಿಕೊಳ್ಳುತ್ತದೆ.
ಪ್ರಶಸ್ತಿ ಆಯ್ಕೆ ಮತ್ತು ವಿತರಣೆ ವಿಳಂಬ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲೂ ಇವೆ. ಆಂಧ್ರ ಸರ್ಕಾರ ಸಿನಿಮಾ ಸಾಧಕರಿಗೆ ಪ್ರತೀ ವರ್ಷ ನಂದಿ ಪ್ರಶಸ್ತಿ ನೀಡಿ ಗೌರವಿಸುತ್ತಿತ್ತು. 2014ನಲ್ಲಿ ಪ್ರಶಸ್ತಿ ಕೊಟ್ಟಿದ್ದು ಬಿಟ್ಟರೆ, ಆ ನಂತರ ಪ್ರಶಸ್ತಿಯನ್ನೇ ಕೊಟ್ಟಿರಲಿಲ್ಲ. ಆಂಧ್ರಪ್ರದೇಶ – ತೆಲಂಗಾಣ ವಿಭಜನೆ ಇದಕ್ಕೆ ಕಾರಣ ಎನ್ನಲಾಗಿದೆ. ಈ ವರ್ಷದ ಜೂನ್ ತಿಂಗಳಲ್ಲಿ 2024ನೇ ಸಾಲಿನ ಪ್ರಶಸ್ತಿಗಳನ್ನು ನೀಡಲಾಗಿದೆ. ಇನ್ನು, 2014ರಿಂದ 2023ರವರೆಗೆ ಪ್ರತೀ ವರ್ಷ ಅತ್ಯುತ್ತಮ ನಟ, ನಟಿ, ಚಿತ್ರ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಬೇಕಿತ್ತು. ಆದರೆ, ಮಿಕ್ಕೆಲ್ಲಾ ಪ್ರಶಸ್ತಿಗಳನ್ನು ಮೊಟಕುಗೊಳಿಸಿ, 10 ವರ್ಷಗಳಿಗೆ ಕೇವಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಮಾತ್ರ ನೀಡಲಾಯಿತು. 2024ರ ಸಾಲಿಗೆ ಮಾತ್ರ ಮಿಕ್ಕೆಲ್ಲಾ ಪ್ರಶಸ್ತಿಗಳನ್ನು ವಿತರಿಸಲಾಯಿತು. ‘ಪುಷ್ಪ 2’ ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಅಷ್ಟೇ ಅಲ್ಲ, ಪ್ರಶಸ್ತಿಯ ಹೆಸರು ನಂದಿಯಿಂದ ಗದ್ದರ್ ತೆಲಂಗಾಣ ಫಿಲ್ಮ್ ಅವಾರ್ಡ್ಸ್ ಎಂದು ಬದಲಾಯಿಸಲಾಗಿದೆ.
ಇನ್ನು, ತಮಿಳು ನಾಡಿನಲ್ಲೂ 2014ರ ನಂತರ ತಮಿಳು ನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸರಿಯಾಗಿ ಕೊಟ್ಟಿಲ್ಲ. 2015ರ ಪ್ರಶಸ್ತಿಗಳನ್ನು 2024ರಲ್ಲಿ ಘೋಷಿಸಿ, ನೀಡಲಾಯಿತು. ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಸಿನಿಮಾಗೆ ನಿರಂತರ ಪ್ರಶಸ್ತಿ ಮತ್ತು ಪ್ರೋತ್ಸಾಹ ನೀಡುತ್ತಿರುವ ಏಕೈಕ ರಾಜ್ಯವೆಂದರೆ ಅದು ಕೇರಳ. ಎರಡು ವರ್ಷಗಳ Backlog ಇದ್ದರೂ 2024ರವರೆಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇನ್ನು, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಕೋವಿಡ್‍ನಿಂದಾಗಿ ಒಂದು ವರ್ಷ ವಿಳಂಬವಾಗಿದ್ದು, 2024ರ ಸಾಲಿನ ಪ್ರಶಸ್ತಿಯನ್ನು ಮಾತ್ರ ನೀಡಬೇಕಿದೆ. ಕರ್ನಾಟಕದಲ್ಲಿ ಆಯ್ಕೆಯೇನೋ ಮುಗಿದಿದೆ, ವಿತರಣೆ ಯಾವಾಗ?