
'ಪರಾಶಕ್ತಿ' ಚಿತ್ರಕ್ಕೆ UA 16+ ಸರ್ಟಿಫಿಕೇಟ್: ನಾಳೆಯೇ ಅದ್ಧೂರಿ ರಿಲೀಸ್
'ಪರಾಶಕ್ತಿ' ಸಿನಿಮಾ ಸೆನ್ಸಾರ್ ಹಂತ ದಾಟಿ ಸಂಕ್ರಾಂತಿ ಹಬ್ಬದ ರೇಸ್‌ಗೆ ಪ್ರವೇಶಿಸಿರುವುದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ.
ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಮತ್ತು ಆತಂಕ ಮೂಡಿಸಿದ್ದ ಶಿವಕಾರ್ತಿಕೇಯನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪರಾಶಕ್ತಿ' ಕೊನೆಗೂ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಪಡೆದುಕೊಂಡಿದೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ UA 16+ ಪ್ರಮಾಣಪತ್ರವನ್ನು ನೀಡಿದ್ದು, ಜನವರಿ 10 ರಂದು ಸಿನಿಮಾ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.
ಸಿನಿಮಾದಲ್ಲಿನ ಕೆಲವು ರಾಜಕೀಯ ದೃಶ್ಯಗಳ ಕಾರಣದಿಂದಾಗಿ ಸೆನ್ಸಾರ್ ಪ್ರಕ್ರಿಯೆ ತಡವಾಗಿತ್ತು. ಇದರಿಂದಾಗಿ ಮೊದಲೇ ನಿಗದಿಯಾಗಿದ್ದ ಬಿಡುಗಡೆ ದಿನಾಂಕಕ್ಕೆ ಕುತ್ತು ಬರಬಹುದು ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಇದೇ ಕಾರಣಕ್ಕೆ ಆನ್‌ಲೈನ್ ಟಿಕೆಟ್ ಬುಕಿಂಗ್ ಕೂಡ ವಿಳಂಬವಾಗಿತ್ತು. ಈಗಾಗಲೇ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಕೂಡ ಸೆನ್ಸಾರ್ ಮತ್ತು ಕಾನೂನು ಹೋರಾಟದಲ್ಲಿ ಸಿಲುಕಿ ಬಿಡುಗಡೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, 'ಪರಾಶಕ್ತಿ' ಕೂಡ ಸಂಕ್ರಾಂತಿ ರೇಸ್‌ನಿಂದ ಹಿಂದೆ ಸರಿಯುತ್ತದೆಯೇ ಎಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಚಿತ್ರತಂಡ ಅಧಿಕೃತವಾಗಿ ಬಿಡುಗಡೆಯನ್ನು ಖಚಿತಪಡಿಸಿದೆ.
ಸುಧಾ ಕೊಂಗರ ನಿರ್ದೇಶನದ ಈ ಚಿತ್ರವು 1960ರ ದಶಕದ ಐತಿಹಾಸಿಕ ರಾಜಕೀಯ ಘಟನೆಗಳನ್ನು ಆಧರಿಸಿದ ಸಾಹಸ ಪ್ರಧಾನ ಸಿನಿಮಾ ಇದಾಗಿದೆ. ಚಿತ್ರದ ಒಟ್ಟು ಅವಧಿ 2 ಗಂಟೆ 42 ನಿಮಿಷಗಳಿದ್ದು, ಇದರಲ್ಲಿ ಶ್ರೀಲೀಲಾ, ರವಿ ಮೋಹನ್ ಮತ್ತು ಅಥರ್ವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಕಥೆಯನ್ನು ಮೊದಲು ನಟ ಸೂರ್ಯ ಅವರಿಗಾಗಿ ಸಿದ್ಧಪಡಿಸಲಾಗಿತ್ತು, ಆದರೆ ನಂತರ ಶಿವಕಾರ್ತಿಕೇಯನ್ ಈ ಚಿತ್ರದ ಭಾಗವಾದರು.
ಸೆನ್ಸಾರ್ ಮಂಡಳಿಯ ನಿರ್ಧಾರದ ಬಗ್ಗೆ ಮಾತನಾಡಿದ್ದ ನಿರ್ದೇಶಕಿ ಸುಧಾ ಕೊಂಗರ, "ಸೆನ್ಸಾರ್ ಮಂಡಳಿಯ ಪ್ರಶ್ನೆಗಳು ಮತ್ತು ಅವರ ಕಾಳಜಿಗಳು ನ್ಯಾಯಯುತವಾಗಿದ್ದವು. ಸಿನಿಮಾ ತನ್ನ ಮೂಲ ಆಶಯವನ್ನು ಕಳೆದುಕೊಳ್ಳದಂತೆ ಅವರು ನೀಡಿದ ಸಲಹೆಗಳು ಸಮಂಜಸವಾಗಿದ್ದವು" ಎಂದು ಮಂಡಳಿಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಈ ಚಿತ್ರದ ಬಿಡುಗಡೆ ವಿಳಂಬದ ಬಗ್ಗೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಹಬ್ಬದ ಸೀಸನ್‌ನಲ್ಲಿ ಇಂತಹ ದೊಡ್ಡ ಸಿನಿಮಾಗಳ ಬಿಡುಗಡೆ ವಿಳಂಬವಾದರೆ ಅದು ಚಿತ್ರರಂಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಸದ್ಯಕ್ಕೆ 'ಪರಾಶಕ್ತಿ' ಸಂಕಷ್ಟದಿಂದ ಪಾರಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.

