ಸಿಂಧೂ ಶ್ರೀನಿವಾಸಮೂರ್ತಿ: ಕನ್ನಡ ಸಿನಿಮಾಕ್ಕೆ ದಕ್ಕಿದ ಮತ್ತೊಬ್ಬ ಮಹಿಳಾ ನಿರ್ದೇಶಕಿ
x

ಸಿಂಧೂ ಶ್ರೀನಿವಾಸಮೂರ್ತಿ: ಕನ್ನಡ ಸಿನಿಮಾಕ್ಕೆ ದಕ್ಕಿದ ಮತ್ತೊಬ್ಬ ಮಹಿಳಾ ನಿರ್ದೇಶಕಿ

ಕೆಲವರು ಮಾತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿ, ಇತಿಹಾಸದಲ್ಲಿ ದಾಖಲಾಗಿದ್ದಾರೆ. ಇನ್ನುಳಿದವರು ಲೆಕ್ಕಕ್ಕಿದ್ದಾರೆ, ಆದರೆ ಆಟಕ್ಕಿಲ್ಲ ಎನ್ನುವ ಹಾಗಾಗಿದೆ.


ಮುಂದಿನ ಮಾರ್ಚ್‌ ತಿಂಗಳಿಗೆ ಕನ್ನಡ ಚಿತ್ರರಂಗಕ್ಕೆ ತೊಂಭತ್ತರ ಹರೆಯ. ಈ ಒಂಭತ್ತು ದಶಕದಲ್ಲಿ ಸಾವಿರಾರು ಪುರುಷ ನಿರ್ದೇಶಕರು ಬಂದಿದ್ದಾರೆ. ಅವರು ಬಂದಂತೆಯೇ ಕಾಣೆಯಾಗಿದ್ದಾರೆ. ಈ ಪೈಕಿ ಕೆಲವರು ಮಾತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿ, ಇತಿಹಾಸದಲ್ಲಿ ದಾಖಲಾಗಿದ್ದಾರೆ. ಇನ್ನುಳಿದವರು ಲೆಕ್ಕಕ್ಕಿದ್ದಾರೆ, ಆದರೆ ಆಟಕ್ಕಿಲ್ಲ ಎನ್ನುವ ಹಾಗಾಗಿದೆ.

ಆದರೆ ಈ ತೊಂಭತ್ತು ವರ್ಷದಲ್ಲಿ ಬಂದು ಹೋಗಿರುವ ಮಹಿಳಾ ನಿರ್ದೇಶಕಿಯರು ಬೆರಳೆಣಿಕೆಯಷ್ಟು ಮಾತ್ರ. ಹಾಗೆ ಬಂದಿರುವ ಮಹಿಳಾ ನಿರ್ದೇಶಕಿಯರ ಪಟ್ಟಿ ಮಾಡಿದರೆ ಮೊದಲಿಗೆ ಎದ್ದು ಕಾಣುವ ಹೆಸರು ಪ್ರೇಮಾ ಕಾರಂತ ಅವರದು. ನಂತರ ಈ ಸಾಲಿಗೆ ಸೇರಿದವರು, ಖ್ಯಾತ ನಟಿ ಆರತಿ, ಕವಿತಾ ಲಂಕೇಶ್‌, ರೂಪ ಅಯ್ಯರ್, ಸುಮನಾ ಕಿತ್ತೂರು, ಪ್ರಿಯಾ ಹಾಸನ್, ವಿಜಯಲಕ್ಷ್ಮಿ ಸಿಂಗ್, ಪೂರ್ಣಿಮಾ ಮೋಹನ್, ಪ್ರಿಯಾ ಬೆಳ್ಳಿಯಪ್ಪ, ರೂಪಾರಾವ್ ಹಾಗೂ ಚಂಪಾಶೆಟ್ಟಿ. ಈಗ ಈ ಸಾಲಿಗೆ ಸಿಂಧೂ ಶ್ರೀನಿವಾಸಮೂರ್ತಿ ಎಂಬ ಹೊಸ ಪ್ರತಿಭೆಯೊಂದು ಸೇರ್ಪಡೆಯಾಗಿದೆ.

ಮಹಿಳೆಯರದೇ ಚಿತ್ರ

’ಆಚಾರ್ ಅಂಡ್ ಕೋ’ ಸಿಂಧೂ ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಈಗ ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹಾಗೆ ನೋಡಿದರೆ, ’ಆಚಾರ್ ಅಂಡ್ ಕೋ’ ಒಂದು ರೀತಿಯಲ್ಲಿ ಮಹಿಳೆಯರದೇ ಚಿತ್ರ. ಈ ಚಿತ್ರದ ಪ್ರಮುಖ ವಿಭಾಗಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವುದು. ಈ ಚಿತ್ರವನ್ನು ನಿರ್ಮಿಸಿದವರು ಪಿಆರ್‌ಕೆ ನಿರ್ಮಾಣ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್‌ಕುಮಾರ್. ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ. ಬಿಂದೂಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶಕಿ. ಇಂಚರಾ ಸುರೇಶ್ ವಸ್ತ್ರ ವಿನ್ಯಾಸಕಿ. ಶಬ್ದ ಗ್ರಹಣ ನಿರ್ವಹಣೆ ಹೇಮಾ ಸುವರ್ಣ ಅವರದು. ಈ ಹಿಂದೆ ಈ ರೀತಿ ಮಹಿಳಾ ಪ್ರಾಧಾನ್ಯ ಚಿತ್ರವಾಗಿದ್ದು ’ರಿಂಗ್ ರೋಡ್ ಶುಭಾ’ ಎನ್ನುವ ಕನ್ನಡ ಚಿತ್ರ. ಇದರ ನಿರ್ದೇಶಕಿಯಾಗಿದ್ದವರು ಪ್ರಿಯಾ ಬೆಳ್ಳಿಯಪ್ಪ.

ಅರವತ್ತರ ದಶಕದ ಕಥೆ

ಅರವತ್ತರ ದಶಕದ ಸಾಮಾಜಿಕ ಬದುಕಿನ ಒಂದು ತುಂಬು ಕುಟುಂಬದ ದಿನನಿತ್ಯದ ಕಥೆಯೇ ’ಆಚಾರ್ ಅಂಡ್ ಕೋ’ ಚಿತ್ರದ ಕಥೆ. ಒಂದು ಅವಿಭಕ್ತ ಕುಟುಂಬದಲ್ಲಿ ಹೆಚ್ಚೂ ಕಡಿಮೆ ಇಂದಿಗೂ ಕಾಣುವ ಚಿತ್ರವನ್ನು, ಅರವತ್ತರ ದಶಕದ ಚೌಕಟ್ಟಿನಲ್ಲಿ (ಫ್ರೇಮ್‌ನಲ್ಲಿ) ನೋಡಿದ ಅನುಭವವನ್ನು ಈ ಚಿತ್ರ ನೀಡುತ್ತದೆ. ಇಂಥ ಒಂದು ಕುಟುಂಬ ತನ್ನ ಕನಸುಗಳನ್ನು ಬೆನ್ನು ಹತ್ತುವ ಹಾದಿಯಲ್ಲಿ ಹೇಗೆ ಎಂಥ ಸವಾಲುಗಳನ್ನು ಎದುರಿಸುತ್ತದೆ? ಹಾಗೂ ಸಂಪ್ರದಾಯದ ಚೌಕಟ್ಟು ದಾಟದೆಯೇ ಆಧುನಿಕ ಜಗತ್ತಿನ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತದೆ ಎಂಬ ಕಥೆಯನ್ನು ಕೆ. ಬಾಲಚಂದರ್ ಅವರ ’ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಂತೆ, ಭಾವಾತಿರೇಕಕ್ಕೆ ಸಿಕ್ಕಿಸದೆ, ’ಆಚಾರ್ ಅಂಡ್ ಕೋ’ ಲವಲವಿಕೆಯಿಂದ ಹೇಳುತ್ತದೆ. ಭಾವುಕತೆಯಷ್ಟೇ ನವಿರು ಹಾಸ್ಯ, ಆಸಕ್ತಿಯುಕ್ತ ಸನ್ನಿವೇಶಗಳ ಬೆರಕೆಯ ಹದ ಈ ಚಿತ್ರದ ಗುಣಾತ್ಮಕ ಅಂಶವೆಂದರೂ ತಪ್ಪೇನಿಲ್ಲ. ನಿರ್ದೇಶನದೊಂದಿಗೆ ಸಿಂಧೂ ಶ್ರೀನಿವಾಸಮೂರ್ತಿ ಕನ್ನನ್ ಗಿಲ್ ಜೊತೆಯಾಗಿ ಕಥೆ-ಚಿತ್ರಕಥೆಯನ್ನೂ ಬರೆದಿರುವುದು, ರಂಗಭೂಮಿಯ ಹಲವು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿರುವುದು, ಚಿತ್ರದ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವುದು, ಜೊತೆಗೆ ಎಲ್ಲದರಲ್ಲೂ ಸಮತೋಲನ ಕಾಯ್ದುಕೊಂಡಿರುವುದು ಪ್ರೇಕ್ಷಕರ ಹಾಗೂ ಚಿತ್ರ ವಿಮರ್ಶಕರ ಮೆಚ್ಚಿಗೆಗಳಿಸುತ್ತದೆ. ಕಥೆ ಹೇಳುವ ವಿಶಿಷ್ಟ ಕಲೆಯಿಂದಾಗಿ ’ಆಚಾರ್ ಅಂಡ್ ಕೋ’ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮಾದರಿಯೊಂದನ್ನು ಸೃಷ್ಟಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

ಕೊಂಚ ಪೇಲವ

ಹಾಗೆಂದ ಮಾತ್ರಕ್ಕೆ ’ಆಚಾರ್ ಅಂಡ್ ಕೋ’ ಕೊರತೆಯೇ ಇಲ್ಲದ ’ಕ್ಲಾಸಿಕ್’ ಚಿತ್ರವೆಂದು ಹೇಳುವಂತಿಲ್ಲ. ನಿರ್ದೇಶಕಿ ಈ ಚಿತ್ರದ ದೃಶ್ಯ ಹಾಗೂ ಕಥನ ಸಾಧ್ಯತೆಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ, ’ಆಚಾರ್ ಅಂಡ್ ಕೋ’ ಚಿತ್ರವನ್ನು ಇನ್ನೂ ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗಬಹುದಿತ್ತು. ಚಿತ್ರವನ್ನು ಕೇವಲ ಕುಟುಂಬದ ಜಂಜಾಟಕ್ಕೆ ಸೀಮಿತಗೊಳಿಸುವ ಬದಲಾಗಿ, ದೃಷ್ಟಿಯನ್ನು ಕೊಂಚ ವಿಶಾಲವಾಗಿಸಿ, ಅರವತ್ತರ ದಶಕದ ಸಾಮಾಜಿಕ, ಆರ್ಥಿಕ ಬದಲಾವಣೆಯನ್ನು ಸೂಕ್ಷ್ಮವಾಗಿ ಹಿನ್ನೆಲೆಯಲ್ಲಿ ಸೂಚಿಸಿದ್ದರೂ, ಈ ಚಿತ್ರ ಕನ್ನಡ ಸಿನಿಮಾದಲ್ಲಿ ಒಂದು ಪ್ರಾತಿನಿಧಿಕ ಸ್ಥಾನ ಪಡೆಯಬಹುದಿತ್ತು. ಈ ಚಿತ್ರದಲ್ಲಿ ಅಂದಿನ ಹಾಗೂ ಇಂದಿನ ಕುಟುಂಬ ವ್ಯವಸ್ಥೆ ಒಳಗಿನ ಕೌಟುಂಬಿಕ ಹಿಂಸೆ (ಡೊಮೆಸ್ಟಿಕ್ ಅಬ್ಯೂಸ್), ಪಿತೃ ಪ್ರಧಾನ ಸಮಾಜದ ನೋಟವಿದ್ದರೂ, ಧಾರಾವಾಹಿಯ ಗುಣವನ್ನು ಆಹ್ವಾನಿಸಿಕೊಂಡಂತೆ ಭಾಸವಾಗುವ ’ಆಚಾರ್ ಅಂಡ್ ಕೋ’ ನಿಂತಲ್ಲಿಯೇ ನಿಂತು ಸುತ್ತುತ್ತಾ, ಜಗತ್ತನ್ನು ತನ್ನೊಳಗೆ ಆಹ್ವಾನಿಸಿಕೊಂಡಂತೆ ಕಂಡು, ಆರಂಭವಾಗಿ ಸ್ವಲ್ಪ ಹೊತ್ತಿನಲ್ಲಿ ನಿರ್ದೇಶಕಿ ಕಥನ ಕ್ರಿಯೆಯ ಮೇಲೆ ಹಿಡಿತ ಕಳೆದುಕೊಂಡ ಭಾವ ಕಾಡಿ, ಚಿತ್ರ ಪೇಲವ ಎನ್ನಿಸುತ್ತದೆ. ಆದರೆ ಮುಕ್ತ ಅಂತ್ಯದ ಚಿತ್ರವೆಂಬಂತೆ ಭಾಸವಾಗಿ ’ಆಚಾರ್ ಅಂಡ್ ಕೋ’ ಚಿತ್ರದ ಉತ್ತರ ಭಾಗ (ಸೀಕ್ವೆಲ್) ನಿರೀಕ್ಷೆಯ ಭಾವವನ್ನು ಹುಟ್ಟಿಸುತ್ತದೆ.

ಪುನೀತ್ ಚಿತ್ರ ಒಪ್ಪಿದ ಕಥೆ

ಆದರೆ, ಒಂದು ಸಂಗತಿಯಂತೂ ನಿಚ್ಛಳ. ತಮ್ಮ ರಂಗಭೂಮಿ ಹಿನ್ನೆಲೆಯ ಅನುಭವದಿಂದಲೋ ಅಥವ ಸ್ವ-ಪ್ರತಿಭೆಯಿಂದಲೋ ಸಿಂಧೂ ಶ್ರೀನಿವಾಸಮೂರ್ತಿ ಈ ಚಿತ್ರದ ಮೂಲಕ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಈಕೆಗೆ ದೊರೆತಿರುವ ಈ ಕಾಲದ ತಂತ್ರಜ್ಞಾನದ ನೆರವೂ ಯಶಸ್ಸಿನ ಒಂದು ಭಾಗವೆನ್ನಬೇಕು. ಇದಕ್ಕೆ ನಿದರ್ಶನವೆಂದರೆ ಪಿಆರ್‌ಕೆ ನಿರ್ಮಾಣ ಸಂಸ್ಥೆಯ ಪುನೀತ್ ರಾಜ್‌ಕುಮಾರ್ (ಆಗ ಪುನೀತ್ ನಮ್ಮೊಂದಿಗಿದ್ದರು) ಅವರನ್ನು ’ಆಚಾರ್ ಅಂಡ್ ಕೋ’ ನಿರ್ಮಿಸಲು ಸಿಂಧೂ ಒಪ್ಪಿಸಿದ ರೀತಿ: ಪಿಆರ್‌ಕೆ ಸಂಸ್ಥೆಯ ’ಫ್ರೆಂಚ್ ಬಿರಿಯಾನಿ’ ಚಿತ್ರದಲ್ಲಿ ಕೆಲಸ ಮಾಡುವಾಗ, ಪುನೀತ್ ಮತ್ತು ಅಶ್ವಿನಿ ಅವರಿಗೆ ’ಆಚಾರ್ ಅಂಡ್ ಕೋ’ ಚಿತ್ರದ ಕಥೆಯನ್ನು ಸ್ಥೂಲವಾಗಿ ಹೇಳಿದ್ದೆ. ಅವರು ಕಥೆಯನ್ನು ಮೆಚ್ಚಿಕೊಂಡರು. ನಂತರ ಈ ಕಥೆಯನ್ನು ನನ್ನ ಸ್ವಂತ ಖರ್ಚಿನಲ್ಲಿ, ನನ್ನ ಗೆಳೆಯರ ಸಹಕಾರದೊಂದಿಗೆ ಆರು ನಿಮಿಷಗಳ ಒಂದು ವಿಷ್ಯುಯಲ್ ಕ್ಯಾಪ್ಸೂಲ್ ಮಾಡಿ ತೋರಿಸಿದೆ. ಆಗ ಅವರಿಗೆ ಚಿತ್ರದ ಗಟ್ಟಿತನ ಹಾಗೂ ಹೊಸತನದ ಅರಿವಾಯಿತು. ನನ್ನ ಮುಂದಿನ ಹಾದಿ ಸುಗಮವಾಯಿತು.

ವಸ್ತುವಿನ ಆಯ್ಕೆ

ವಸ್ತುವಿನ ಆಯ್ಕೆ ಹಾಗೂ ಅದರ ನಿರ್ವಹಣೆಯ ಬಗೆಗೂ ಸಿಂಧೂ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ನಾವು ಆಯ್ಕೆ ಮಾಡಿಕೊಳ್ಳುವ ವಸ್ತು ಗಟ್ಟಿಯಾಗಿದ್ದು, ಹಲವು ಪದರಗಳುಳ್ಳದ್ದಾದ್ದರೆ ನಿರ್ದೇಶಿಸುವ ಚಿತ್ರ ತಾನೇತಾನಾಗಿ ಸಾಂದ್ರತೆ ಪಡೆದುಕೊಳ್ಳುತ್ತದೆ. ವಸ್ತುವಿನಲ್ಲಿ ಗಟ್ಟಿ ತನವಿಲ್ಲದಿದ್ದರೆ, ದೃಶ್ಯ ಸಾಧ್ಯತೆಗಳು ಕುಗ್ಗುತ್ತದೆ. ವಸ್ತು ಒಂದರ್ಥದಲ್ಲಿ ಸಮಾಜವನ್ನು ಇಡೀಯಾಗಿ ಪ್ರತಿನಿಧಿಸುವ, ಅವುಗಳನ್ನು ಸೂಕ್ಷ್ಮವಾಗಿ ದೃಶ್ಯಗಳ ಮೂಲಕ ಪ್ರಕಟಿಸುವ ಸಾಧ್ಯತೆಯನ್ನು ಹೊಂದಿರಬೇಕು. ಇದರ ಜೊತೆಗೆ ಸೂಕ್ಷ್ಮವಾಗಿಯಾದರೂ ತನ್ನ ನಿಲುವು ಪ್ರಕಟಿಸುವಂತಿರಬೇಕು. ನನ್ನ ಅನಿಸಿಕೆಯಂತೆ ’ಆಚಾರ್ ಅಂಡ್ ಕೋ’ ಈ ಸಾಧ್ಯತೆಗಳನ್ನೆಲ್ಲ ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಂಡಿದೆ. ಆಗಿನ ಕಾಲ ಮತ್ತು ಕಾಲದ ರೀತಿ ರಿವಾಜು ಮೌಲ್ಯಗಳು ಹೇಗಿದ್ದವೋ ಹಾಗೆಯೇ ಚಿತ್ರಿಸುವ ಪ್ರಾಮಾಣಿಕ ಪ್ರಯತ್ನ ನನ್ನದು? .

ಯಶಸ್ಸು ತಂಡದ್ದು

’ಆಚಾರ್ ಅಂಡ್ ಕೋ’ ಚಿತ್ರದ ಯಶಸ್ಸನ್ನು ಇಡೀ ತಂಡದ್ದೆಂದು ವಿನಯದಿಂದಲೇ ಹೇಳುವ ಸಿಂಧೂ ಅರವತ್ತರ ದಶಕದ ಬದುಕಿನ ರೀತಿ, ಮೌಲ್ಯಗಳ ಹಿನ್ನೆಲೆಯಲ್ಲಿ ಈ ಕಾಲದ ಸಮಸ್ಯೆಗಳನ್ನು ನೋಡುವ ಪ್ರಯತ್ನ ನಮ್ಮ ತಂಡದ್ದಾಗಿತ್ತು, ಎನ್ನುತ್ತಾರೆ. ತಮ್ಮ ಚೊಚ್ಚಲ ಚಿತ್ರದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರಂಥವರ ನೆರವು ಸಿಕ್ಕ ಬಗ್ಗೆ ಧನ್ಯತಾ ಭಾವವಿರುವಂತೆ ತೋರುವ ಸಿಂಧೂ ಹೇಳುವುದು, ನಮ್ಮ ಎಲ್ಲ ಬೇಡಿಕೆಗಳನ್ನು ಮಾತಿಲ್ಲದೆ ಮನ್ನಿಸುತ್ತಿದ್ದ ಅಶ್ವಿನಿ ಅವರದ್ದು ದೊಡ್ಡ ಮನಸ್ಸು ಎಂದೇ.

ಮೈಸೂರಿನಲ್ಲಿ ಕಂಡ ಬೆಂಗಳೂರು

’ಆಚಾರ್ ಅಂಡ್ ಕೋ’ ಅರವತ್ತರ ದಶಕದ ಬೆಂಗಳೂರು ನಗರದ ಕಥೆಯಾದರೂ, ಅಂದಿನ ಬೆಂಗಳೂರನ್ನು ಈಗ ಊಹಿಸಿಕೊಳ್ಳುವುದೂ ಕಷ್ಟ ಎನ್ನುವ ಮಟ್ಟಿಗೆ ಬದಲಾಗಿದೆ. ಹಾಗಾಗಿ ಆ ಬೆಂಗಳೂರು, ಈಗ ಸ್ವಲ್ಪ ಮೈಸೂರಿನಲ್ಲಿ ಕಾಣುವುದರಿಂದ, ಮೈಸೂರಿನಲ್ಲಿ ಬೆಂಗಳೂರನ್ನು ಸೃಷ್ಟಿಸಿ, ಚಿತ್ರೀಕರಣ ನಡೆಸಲು ಅಶ್ವಿನಿ ಮೇಡಂ ಎಲ್ಲ ನೆರವೂ ನೀಡಿದರು. ಹಾಗಾಗಿಯೇ ಕಾಲದ ಅಧಿಕೃತತೆಯನ್ನು ದೃಶ್ಯದಲ್ಲಿ ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಯಿತು. ಇದಕ್ಕೆ ನಾನು ನಮ್ಮ ನಿರ್ಮಾಣ ತಂಡಕ್ಕೆ ಋಣಿ ಎನ್ನುತ್ತಾರೆ ಸಿಂಧೂ.

ನಿರ್ದೇಶನಕ್ಕಿಂತ ಅಭಿನಯದಲ್ಲಿ ನುರಿತಂತೆ ಕಾಣುವ ಸಿಂಧೂ ಅವರು ಈಗಾಗಲೇ ’ಸಿನಿಮಾ ಬಂಡಿ’, ಚಿತ್ರದ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ಪರಿಚಿತರು.

ರಂಗಭೂಮಿಯ ಸೆಳೆತ

ವಿಜ್ಞಾನ, ಗಣಿತದ ಮೂಕ ಎಂಜಿನೀಯರ್, ಡಾಕ್ಟರ್‌ಗಳಾಗಲು ಕನಸು ಕಾಣುವ ತಲೆಮಾರಿನವರ ನಡುವೆ, ಚಿಕ್ಕಂದಿನಿಂದಲೇ ತನ್ನ ಹಾದಿಯನ್ನು ತಾವೇ ಕಂಡುಕೊಂಡವರು ಸಿಂಧೂ. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ರಂಗಭೂಮಿಯ ಸಾಧ್ಯತೆಗಳನ್ನು ಕಂಡು ಬೆರಗಾದ ಈಕೆ, ಆ ರಂಗದಲ್ಲಿಯೇ ಮುಂದುವರಿಯುವ ತೀರ್ಮಾನ ಮಾಡಿದ್ದು, ಈಗಲೂ ಅವರು ತಮ್ಮ ಮುಗ್ಧ ನಗುವನ್ನು ಉಳಿಸಿಕೊಳ್ಳುವಂತೆ ಮಾಡಿದೆ. ಅಷ್ಟೇ ಅಲ್ಲ. ’ಆಚಾರ್ ಅಂಡ್ ಕೋ’ ಚಿತ್ರದಲ್ಲಿ ಈ ಕಾರಣಕ್ಕಾಗಿಯೇ ರಂಗಭೂಮಿಯ ಛಾಯೆ ದಟ್ಟವಾಗಿದೆ. ರಂಗಭೂಮಿಯ ಪದ್ಧತಿಯಂತೆ ನಾವು ಚಿತ್ರೀಕರಣಕ್ಕೆ ಮುನ್ನ ರಿಹರ್ಸಲ್ ಮಾಡಿದ್ದೇವೆ ಎಂದು ಸಿಂಧೂ ಭಿಡೆ ಇಲ್ಲದೆ ಒಪ್ಪಿಕೊಳ್ಳುತ್ತಾರೆ.

ನಿರ್ದೇಶನ-ನಟನೆ ಒಟ್ಟೊಟ್ಟಿಗೆ

ಕಳೆದ ಹದಿನಾರು ವರ್ಷಗಳಿಂದ ಅಭಿನಯವನ್ನು ಬದುಕಾಗಿಸಿಕೊಂಡಿದ್ದರೂ, ಹಲವು ನಿರ್ದೇಶಕರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದ್ದರೂ, ಚಿತ್ರವೊಂದರಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿ, ನಿರ್ದೇಶಕರಾಗಿ ಕೆಲಸ ಮಾಡುವುದು, ಒಂದು ರೀತಿಯಲ್ಲಿ ಎರಡು ದೋಣಿಗಳಲ್ಲಿ ಕಾಲಿಟ್ಟುಕೊಂಡಂತೆ ಎಂಬ ಅರಿವು ಸಿಂಧೂ ಅವರಿಗಿದೆ. ಒಮ್ಮೆ ಪಾತ್ರವೊಂದರಲ್ಲಿ ಅಭಿನಯಿಸಿ ಮುಗಿಸಿದರೆ ನಿರಾಳವಾಗಿ ನಿಟ್ಟುಸಿರು ಬಿಡಬಹುದು, ನಿರ್ದೇಶಕರಾದರೆ, ಚಿತ್ರ ನಿರ್ಮಾಣದ ಮುಂಚಿನ ಕೆಲಸಗಳು, (ಚಿತ್ರಕಥೆಯನ್ನು ರೂಪಿಸುವುದೂ ಸೇರಿದಂತೆ) ಚಿತ್ರೀಕರಣದ ನಂತರ ಚಿತ್ರೀಕರಣೋತ್ತರ ಕೆಲಸಗಳು ನಮ್ಮ ಸೃಜನಶೀಲತೆಯನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಆದರೆ ಚಿತ್ರ ತೆರೆಯ ಮೇಲೆ ಬಂದಾಗ ಆ ಸಂಕಟ, ಸಂಕಷ್ಟಗಳಾವುವೂ ಕಾಣುವುದೇ ಇಲ್ಲ ಎಂದು ಸಿಂಧೂ ಮುಗುಳ್ನಗುತ್ತಾರೆ.

’ಆಚಾರ್ ಅಂಡ್ ಕೋ’, ಬಿಡುಗಡೆಯಾಗಿದೆ. ಜನರ ಮನಗೆದ್ದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ಕಾಲದವರ, ಬದುಕು ಮಾಗಿ, ಆಧುನಿಕತೆ ಹಣ್ಣು ಮಾಡಿರುವ ಜೀವಗಳಿಗೆ ಆಪ್ಯಾಯಮಾನವಾಗಿದೆ. ಅದು ಚಿತ್ರಮಂದಿರಕ್ಕೆ ಬರುತ್ತಿರುವ ಪ್ರೇಕ್ಷಕರು ಯಾವ ವರ್ಗದವರೆಂಬುದನ್ನು ನೋಡಿದರೆ ಅರಿವಾಗುತ್ತದೆ.

’ಆಚಾರ್ ಅಂಡ್ ಕೋ’ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ನಿಲ್ಲುವುದು ಕಷ್ಟ. ಏಕೆಂದರೆ ಸಧ್ಯಕ್ಕೆ ರಜನಿಕಾಂತ್ ಅವರ ಜೈಲರ್, ಬೆಂಗಳೂರಿನ ಎಲ್ಲ ಚಿತ್ರಮಂದಿರಗಳನ್ನೂ ನುಂಗಿ ಹಾಕುವ ಹಾಗೆ ಕಾಣುತ್ತಿದೆ. ಆಸಕ್ತಿಯುಳ್ಳವರು, ಚಿತ್ರ ಓಟಿಟಿ ವೇದಿಕೆಯಲ್ಲಿ ಬರುವವರೆಗೂ ಕಾಯಬೇಕೇನೋ!

ಮುಂದೇನು? ಎಂಬ ಪ್ರಶ್ನೆಗೆ ಸಿಂಧೂ ಉತ್ತರ ಕೇವಲ ಮುಗುಳ್ನಗೆ. ಒತ್ತಾಯಿಸಿ ಕೇಳಿದರೆ. ಮುಂದಿನ ಚಿತ್ರದ ಸಿದ್ಧತೆ ಎನ್ನುತ್ತಾರೆ. ಮಾರುಕಟ್ಟೆ ಬೇಡಿಕೆಯ ಕಾರಣಕ್ಕೆ ತಮ್ಮ ನಿಲುವುಗಳೊಂದಿಗೆ ಯಾವುದೇ ರೀತಿಯಲ್ಲಿ ರಾಜಿಮಾಡಿಕೊಳ್ಳಲು ಇಚ್ಛಿಸದ ಸಿಂಧೂ ತಮ್ಮನ್ನು ಬೆಂಬಲಿಸುವ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರಂಥ ಮನಸ್ಸಿನ ನಿರ್ಮಾಪಕರು ಸಿಕ್ಕೇ ಸಿಕ್ಕುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಮುಂದಿನ ಚಿತ್ರದ ವಸ್ತು? ಗುಟ್ಟು ಬಿಟ್ಟುಕೊಡದೆ, ಈಗ ಹೇಳುವುದು ಸರಿಯಾಗಲಾರದು. ಎಲ್ಲವೂ ಇನ್ನೂ ಯೋಚನೆಯ ಹಂತದಲ್ಲಿದೆ ಎಂಬ ಚಿತ್ರರಂಗದ ಜಾಣ ನಡೆಯನ್ನು ಸಿಂಧೂ ಅವರೂ ಕೂಡ ಅನುಸರಿಸುತ್ತಾರೆ.

Read More
Next Story