ಸ್ಟಾರ್ ನಟರಾದ ರಾಜ್‍ ಬಿ. ಶೆಟ್ಟಿ; ಹೊಸ ಬಿರುದು ನೀಡಿದ ಶಿವರಾಜಕುಮಾರ್
x
ನಟ ಶಿವರಾಜ್‌ ಕುಮಾರ್‌ ರಾಜ್‌ ಬಿ ಶೆಟ್ಟಿಗೆ ಹೊಸ ಬಿರುದು ನೀಡಿದ್ದಾರೆ. 

ಸ್ಟಾರ್ ನಟರಾದ ರಾಜ್‍ ಬಿ. ಶೆಟ್ಟಿ; ಹೊಸ ಬಿರುದು ನೀಡಿದ ಶಿವರಾಜಕುಮಾರ್

ಅವರಿಗೂ ಒಂದು ಬಿರುದು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಮಾತು ಕೇಳಿ ಬಂದಾಗ, ಶಿವರಾಜಕುಮಾರ್ ಈ ಸಂದರ್ಭದಲ್ಲಿ Soul Star ಎಂಬ ಬಿರುದನ್ನು ಸ್ಥಳದಲ್ಲೇ ನೀಡಿದರು.


ಒಂದು ಕಾಲಕ್ಕೆ ಕಲಾವಿದರು ಒಂದಿಷ್ಟು ಚಿತ್ರಗಳಲ್ಲಿ ನಟಿಸಿ, ಗುರುತಿಸಿಕೊಂಡ ನಂತರ ಅವರಿಗೆ ಅಭಿಮಾನಿಗಳು ಯಾವುದಾದರೂ ಬಿರುದು ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಯಾರಾದರೂ ಬಿರುದು ಕೊಡಲಿ ಬಿಡಲಿ, ಕೆಲವರು ತಮ್ಮ ಹಿಂದೆ ಒಂದು ಸ್ಟಾರ್ ಎಂಬ ಬಿರುದು ಅಂಟಿಸಿಕೊಂಡೇ ಚಿತ್ರರಂಗಕ್ಕೆ ಬರುತ್ತಿದ್ದಾರೆ. ರಾಜ್‍ ಬಿ ಶೆಟ್ಟಿ ಚಿತ್ರರಂಗಕ್ಕೆ ಬಂದು ಕೆಲವು ವರ್ಷಗಳಾದರೂ, ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರೂ, ಅವರಿಗೆ ಯಾವೊಂದು ಬಿರುದು ಸಿಕ್ಕಿರಲಿಲ್ಲ. ಇದೀಗ ಅವರಿಗೊಂದು ಸ್ಟಾರ್ ಬಿರುದು ನೀಡಿದ್ದಾರೆ ಶಿವರಾಜಕುಮಾರ್.

ಶಿವರಾಜಕುಮಾರ್​, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಜೊತೆಯಾಗಿ ಅಭಿನಯಿಸಿರುವ ‘45’ ಚಿತ್ರದ ಟೀಸರ್ ಬಿಡುಗಡೆ ಯುಗಾದಿ ಹಬ್ಬದಂದು ಆಗಿದೆ. ಈ ಚಿತ್ರದ ಪೋಸ್ಟರ್‌ಗಳಲ್ಲಿ ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್, ‘ರಿಯಲ್‍ ಸ್ಟಾರ್’ ಉಪೇಂದ್ರ ಎಂದು ಬರೆಯಲಾಗಿದೆ. ಆದರೆ, ರಾಜ್‍ ಬಿ. ಶೆಟ್ಟಿಗೆ ಮಾತ್ರ ಚಿತ್ರತಂಡ ಯಾವುದು ಬಿರುದು ನೀಡಿಲ್ಲ. ರಾಜ್‍ ಹೆಸರ ಹಿಂದೆ ಯಾಕೆ ಖಾಲಿ ಇದೆ, ಅವರಿಗೆ ಮಾತ್ರ ಯಾಕೆ ಯಾವ ಬಿರುದೂ ಇಲ್ಲ? ಎಂಬ ಪ್ರಶ್ನೆ, ಪತ್ರಿಕಾಗೋಷ್ಠಿಯಲ್ಲಿ ಕೇಳಿಬಂತು.

ಈ ಪ್ರಶ್ನೆಗೆ ಉತ್ತರಿಸಿದ ಅರ್ಜುನ್ ಜನ್ಯ, ‘ಟೀಸರ್‌ನಲ್ಲಿ ಶಿವಣ್ಣ ಮತ್ತು ಉಪೇಂದ್ರರ ತರಹ ರಾಜ್‍ ಅವರಿಗೂ ಒಂದು ಬಿರುದು ಕೊಟ್ಟಿದ್ದೆ. ಆದರೆ, ರಾಜ್‍ ಅದಕ್ಕೆ ಒಪ್ಪಲಿಲ್ಲ. ತಾವು ಸ್ಟಾರ್ ನಟನಾಗಿಯಲ್ಲ, ಬರೀ ನಟನಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು. ಹಾಗಾಗಿ, ಬಿರುದು ತೆಗೆದುಹಾಕಬೇಕಾಯಿತು’ ಎಂದರು. ಅವರಿಗೂ ಒಂದು ಬಿರುದು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಮಾತು ಕೇಳಿ ಬಂದಾಗ, ಶಿವರಾಜಕುಮಾರ್ ಈ ಸಂದರ್ಭದಲ್ಲಿ Soul Star ಎಂಬ ಬಿರುದನ್ನು ಸ್ಥಳದಲ್ಲೇ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್‍ ಬಿ. ಶೆಟ್ಟಿ, ‘ಈ ಚಿತ್ರದಲ್ಲಿ ಮೂವರು ಸ್ಟಾರ್ ನಟರು ನಟಿಸಿದ್ದಾರೆ ಎಂದು ಪದೇಪದೇ ಹೇಳುತ್ತಿದ್ದಾರೆ. ಶಿವಣ್ಣ ಮತ್ತು ಉಪೇಂದ್ರ ನಿಜವಾದ ಸ್ಟಾರ್‌ಗಳು. ನಾನು ಚಿತ್ರರಂಗಕ್ಕೆ ಇತ್ತೀಚೆಗೆ ಬಂದವನು. 10 ವರ್ಷ ಸಹ ಚಿತ್ರರಂಗದಲ್ಲಿ ಕಳೆದಿಲ್ಲ. ಚಿತ್ರದಲ್ಲಿ ನಟಿಸಿದ್ದೇನೆ ಎನ್ನುವ ಕಾರಣಕ್ಕೆ ನಾನು ಈ ಚಿತ್ರದ ಮೂರನೇ ಸೂಪರ್ ಸ್ಟಾರ್ ಅಲ್ಲ. ಅವರಿಬ್ಬರೂ ಸೂಪರ್ ಸ್ಟಾರ್‌ಗಳು ಮತ್ತು ನಾನು ಈ ಚಿತ್ರದಲ್ಲಿ ಒಬ್ಬ ನಟ ಅಷ್ಟೇ. ಪ್ರತೀ ಸಾರಿ ಸ್ಟಾರ್ ಎಂದಾಗಲೂ ನನಗೆ ಬಹಳ ಮುಜುಗರವಾಗುತ್ತದೆ. ಅವರಿಬ್ಬರೂ ತೆರೆಯ ಮೇಲೆ ಬರುವಾಗ, ನಾನು ಕೂತು ವಿಷಲ್‍ ಹೊಡೆಯೋದು ನನ್ನ ಭಾಗ್ಯ’ ಎಂದರು.

ಶಿವಣ್ಣ ಮತ್ತು ಉಪೇಂದ್ರ ಯಾವತ್ತೂ ತಮ್ಮ ಹಿರಿಮೆಯನ್ನು ಇನ್ನೊಬ್ಬ ನಟನ ಮೇಲೆ ಹಾಕುವುದಿಲ್ಲ ಎಂದ ರಾಜ್‍, ‘ಈ ಸಿನಿಮಾದಲ್ಲಿ ನಾನು ಇಬ್ಬರು ಸ್ಟಾರ್ ನಟರ ಜೊತೆಗೆ ನಟಿಸಿದೆ ಎಂದು ಯಾವತ್ತೂ ಅನಿಸಿಲ್ಲ. ಅವರು ಯಾವತ್ತೂ ತಮ್ಮ ಹಿರಿಮೆಯನ್ನು ಇನ್ನೊಬ್ಬ ನಟನ ಮೇಲೆ ಹಾಕಿಲ್ಲ. ನಾವು ಚೆನ್ನಾಗಿ ನಟಿಸುವುದಕ್ಕೆ ಏನೆಲ್ಲಾ ಸಹಕಾರ ಬೇಕೋ, ಅದೆಲ್ಲವನ್ನೂ ಮಾಡಿದ ಮಹಾನ್‍ ಕೆಲಸಗಾರರು ಇವರು’ ಎಂದರು.

‘45’ ಚಿತ್ರವನ್ನು ಸೂರಜ್‍ ಪ್ರೊಡಕ್ಷನ್‌ನಡಿ ರಮೇಶ್‍ ರೆಡ್ಡಿ ನಿರ್ಮಿಸಿದ್ದಾರೆ. ಇದುವರೆಗೂ ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಗುರುತಿಸಿಕೊಂಡಿದ್ದ ಅರ್ಜುನ್‍ ಜನ್ಯ, ಈ ಚಿತ್ರಕ್ಕೆ ಸಂಗೀತ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರವು ಆಗಸ್ಟ್ 15ರಂದು ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

Read More
Next Story