ʼಶಿವಾಜಿ ಮಹಾರಾಜʼರಾದ ರಿಷಭ್; ಕನ್ನಡ ಚಿತ್ರಗಳ ಗತಿಯೇನು?
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ನಂತರ ಶಿವರಾಜಕುಮಾರ್ ಅಭಿನಯದಲ್ಲಿ ಒಂದು ಚಿತ್ರವನ್ನು ರಿಷಭ್ ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರವನ್ನು ಜಯಣ್ಣ ನಿರ್ಮಿಸಬೇಕಿತ್ತು. ಆದರೆ, ಆ ಚಿತ್ರವೂ ಸುದ್ದಿಯಲ್ಲಿಲ್ಲ.
ಶಿವಾಜಿ ಮಹಾರಾಜರ ಕುರಿತಾದ ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಎಂಬ ಚಿತ್ರದಲ್ಲಿ ರಿಷಭ್ ಶೆಟ್ಟಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರವನ್ನು ಸ್ವತಃ ರಿಷಭ್, ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ರಿಷಭ್ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ‘ಜೈ ಹನುಮಾನ್’ ಮತ್ತು ‘ದಿ ಪ್ರೈಡ್ ಆಫ್ ಭಾರತ್ - ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳು, ‘ಕಾಂತಾರ – ಅಧ್ಯಾಯ 1’ ಬಿಡುಗಡೆ ಆದ ನಂತರ ಪ್ರಾರಂಭವಾಗಲಿವೆ. ಈ ಮಧ್ಯೆ, ಕನ್ನಡ ಚಿತ್ರಂಗದಿಂದ ರಿಷಭ್ ಶೆಟ್ಟಿ ದೂರವಾಗುತ್ತಿದ್ದಾರಾ? ಅವರ ಅಭಿನಯದ ಮತ್ತು ನಿರ್ದೇಶನದ ಕನ್ನಡ ಚಿತ್ರಗಳ ಕಥೆಯೇನು? ಎಂಬ ಪ್ರಶ್ನೆ ಕನ್ನಡಿಗರನ್ನು ಕಾಡುತ್ತಿದೆ.
‘ಕಾಂತಾರ’ ಬಿಡುಗಡೆಗೂ ಮುನ್ನ ರಿಷಭ್ ಶೆಟ್ಟಿ, ‘ಬೆಲ್ ಬಾಟಮ್ 2’ ಚಿತ್ರದಲ್ಲಿ ನಟಿಸಬೇಕಿತ್ತು. ಈ ಚಿತ್ರದ ಮುಹೂರ್ತವೂ ಆಗಿತ್ತು ಮತ್ತು ಪುನೀತ್ ರಾಜಕುಮಾರ್ ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ‘ಬೆಲ್ ಬಾಟಮ್ 2’ ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲೇ, ‘ಕಾಂತಾರ’ ಚಿತ್ರವನ್ನು ಘೋಷಿಸಿದರು ರಿಷಭ್. ಅದು ಬಿಡುಡೆಯಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ‘ಕಾಂತಾರ’ ನಂತರ ‘ಬೆಲ್ ಬಾಟಮ್ 2’ ಶುರುವಾಗಲಿದೆ ಎಂದು ಹೇಳಲಾಯ್ತು. ಆದರೆ, ‘ಕಾಂತಾರ’ದ ಇನ್ನೊಂದು ಭಾಗ ಶುರುವಾಯ್ತೇ ಹೊರತು, ‘ಬೆಲ್ ಬಾಟಮ್ 2’ ಶುರುವಾಗಲೇ ಇಲ್ಲ. ಆ ಚಿತ್ರವನ್ನು ಮುಗಿಸುವುದಾಗಿ ರಿಷಭ್ ಹೇಳಿಕೊಂಡಿದ್ದಾರಾದರೂ, ಯಾವಾಗ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಇದಕ್ಕೂ ಮೊದಲೇ, 2018ರಲ್ಲಿ ವಿನು ಬಳಂಜ ನಿರ್ದೇಶನದ ‘ನಾಥೂರಾಮ್’ ಎಂಬ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದರು. ಚಿತ್ರದ ಮುಹೂರ್ತವಾಗಿತ್ತು. ಆದರೆ, ಚಿತ್ರ ಮುಂದುವರಿದ ಸುದ್ದಿ ಇಲ್ಲ.
ಇದಲ್ಲದೆ, ‘ರುದ್ರಪ್ರಯಾಗ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ರಿಷಭ್ ಘೋಷಿಸಿದ್ದರು. ಈ ಚಿತ್ರದ ಕೆಲಸಗಳು ಸಹ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದವು. ಆದರೆ, ಆ ಚಿತ್ರವೂ ಮುಂದುವರಿಯಲಿಲ್ಲ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ನಂತರ ಶಿವರಾಜಕುಮಾರ್ ಅಭಿನಯದಲ್ಲಿ ಒಂದು ಚಿತ್ರವನ್ನು ರಿಷಭ್ ನಿರ್ದೇಶಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈ ಚಿತ್ರವನ್ನು ಜಯಣ್ಣ ನಿರ್ಮಿಸಬೇಕಿತ್ತು. ಆದರೆ, ಆ ಚಿತ್ರವೂ ಸುದ್ದಿಯಲ್ಲಿಲ್ಲ. ರಿಷಭ್ ಪರಭಾಷೆಗಳಲ್ಲೇ ಬ್ಯುಸಿಯಾಗಿರುವುದರಿಂದ ಈ ಚಿತ್ರಗಳು ಮುಂದುವರಿಯುವುದು ಸಂಶಯವೇ ಎಂದು ಹೇಳಲಾಗುತ್ತಿದೆ.
ಹಾಗೆ ನೋಡಿದರೆ, ಕನ್ನಡ ಚಿತ್ರಗಳಿಗೆ ತಮ್ಮ ಮೊದಲ ಪ್ರಾಶಸ್ತ್ಯ ಎಂದು ರಿಷಭ್ ಒಂದು ವರ್ಷದ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ʼಕಾಂತಾರ’ ಚಿತ್ರದ ನಂತರ ನನಗೆ ಪರಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶಗಳು ಬರುತ್ತಿವೆ. ನನ್ನ ಮೊದಲ ಆದ್ಯತೆ ಕನ್ನಡ ಚಿತ್ರರಂಗ. ನನಗೆ ಕನ್ನಡ ಚಿತ್ರರಂಗದಲ್ಲೇ ಇರುವುದಕ್ಕೆ ಆಸೆ ಮತ್ತು ಇಲ್ಲೇ ಇನ್ನಷ್ಟು ಚಿತ್ರಗಳನ್ನು ಮಾಡುವಾಸೆ. ಚಿತ್ರ ಚೆನ್ನಾಗಿದ್ದರೆ, ಅದು ಗಡಿ ಮೀರಿ ಬೇರೆ ಕಡೆ ಹೋಗುತ್ತದೆ. ನಾನೇನೇ ಮಾಡಿದರೂ ಕನ್ನಡದಲ್ಲಿ ಮಾಡುತ್ತೇನೆ. ಅದನ್ನೇ ಜಾಗತಿಕವಾಗಿ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದ್ದರು.
ಈಗ ರಿಷಭ್, ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಸಹಜವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಕರ್ನಾಟಕದಲ್ಲೇ ಅನೇಕ ವೀರ ರಾಜರು ಇರುವಾಗ, ಮರಾಠಿ ರಾಜರೊಬ್ಬರ ಕುರಿತು ಸಿನಿಮಾ ಮಾಡುವ ಅವಶ್ಯಕತೆ ಏನಿತ್ತು? ಎಂಬ ಟೀಕೆಗಳು ಕೇಳಿ ಬರುತ್ತಿವೆ.