
ನಿರೂಪ್ ಭಂಡಾರಿ ನಟನೆಯ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಟೀಸರ್ ಬಿಡುಗಡೆಯಾಗಿದೆ. ಶಿವಣ್ಣ ಅತಿಥಿ ಪಾತ್ರ, ಸಾಯಿಕುಮಾರ್ ಅಭಿನಯದ ಈ ಸಿನಿಮಾ 2027ರ ಜನವರಿ 22ರಂದು ತೆರೆಗೆ ಬರಲಿದೆ.
‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಟೀಸರ್ ಬಿಡುಗಡೆ- ಶಿವಣ್ಣ ಎಂಟ್ರಿ ವಿಶೇಷ
ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ, ಸಾಯಿಕುಮಾರ್ ಅವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ಸೌಭಾಗ್ಯ ಎಂದು ಸಂತಸ ಹಂಚಿಕೊಂಡರು.
‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ವಿಶೇಷವಾಗಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರು ಮಹತ್ವದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಟೀಸರ್ಗೆ ಶಿವಣ್ಣ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದಲ್ಲಿ ಹಿರಿಯ ನಟ, ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಹರಿಶ್ಚಂದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಾ ಹರಿಶ್ಚಂದ್ರನ ಹೆಸರಿಗಿರುವ ಗೌರವ ಮತ್ತು ಮಹತ್ವವನ್ನು ಉಲ್ಲೇಖಿಸಿದರು. ಕಥೆ ಕೇಳಿದ ತಕ್ಷಣವೇ ತಮಗೆ ಇಷ್ಟವಾಯಿತು ಎಂದ ಅವರು, ‘ರಂಗಿತರಂಗ’ ಬಳಿಕ ಮತ್ತೆ ನಿರೂಪ್ ಭಂಡಾರಿ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಿನಿಮಾ ಅತ್ಯುತ್ತಮ ಹಾಗೂ ಭಾವನಾತ್ಮಕ ಕಥಾಹಂದರ ಹೊಂದಿದೆ ಎಂದು ಹೇಳಿದರು.
ಇದೇ ವೇಳೆ ಶಿವರಾಜ್ಕುಮಾರ್ ಅವರ ಅತಿಥಿ ಪಾತ್ರದ ಕುರಿತು ಮಾತನಾಡಿದ ಸಾಯಿಕುಮಾರ್, ಕಥೆ ಮತ್ತು ಪಾತ್ರದ ಬಗ್ಗೆ ತಿಳಿಸಿದಾಗ ಶಿವಣ್ಣ ತಕ್ಷಣವೇ ಒಪ್ಪಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ನಿರ್ವಹಿಸಲು ಒಪ್ಪಿಕೊಂಡ ಅವರ ಸರಳತೆ ಹಾಗೂ ಸಹಕಾರ ಚಿತ್ರಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದರು.
ಎರಡು ವರ್ಷಗಳ ಪರಿಶ್ರಮ ಎಂದ ನಿರೂಪ್ ಭಂಡಾರಿ
ನಾಯಕ ನಿರೂಪ್ ಭಂಡಾರಿ ಮಾತನಾಡಿ, ಈ ಸಿನಿಮಾಗಾಗಿ ತಮ್ಮ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು. ನಿರ್ದೇಶಕ ಸಚಿನ್ ವಾಲಿ ಕಥೆ ಹೇಳಿದ ಬಳಿಕ ಇಬ್ಬರೂ ಎರಡು-ಮೂರು ತಿಂಗಳು ಕುಳಿತು ಚಿತ್ರಕಥೆಯನ್ನು ಹೊಸದಾಗಿ ರೂಪಿಸಿದ್ದಾಗಿ ಹೇಳಿದರು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸೂಕ್ತ ಎಂದು ತಮ್ಮ ತಂದೆ ಸೂಚಿಸಿದ್ದರು ಎಂದು ನೆನಪಿಸಿಕೊಂಡರು.
ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಂದರ್ಭದಲ್ಲೂ ಅವರು ತೋರಿದ ಬದ್ಧತೆ ಮತ್ತು ಉತ್ಸಾಹವನ್ನು ನಿರೂಪ್ ಶ್ಲಾಘಿಸಿದರು. ಚಿತ್ರೀಕರಣದ ವೇಳೆ ಶಾಟ್ಗೆ ಕರೆದ ತಕ್ಷಣವೇ ಬಂದು ನಟಿಸುತ್ತಿದ್ದರು. ಸಂಭಾಷಣೆಗಳನ್ನು ಮೊದಲೇ ಕಂಠಪಾಠ ಮಾಡಿಕೊಂಡು ಸಿದ್ಧರಾಗಿರುತ್ತಿದ್ದರು ಎಂದು ಹೇಳಿದರು. ಪುಣೆಯಿಂದ ಬಂದು ಕನ್ನಡದಲ್ಲಿ ತಮ್ಮ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಸೋನಿಗಾರ ಅವರ ನಂಬಿಕೆಯನ್ನು ಉಳಿಸಿಕೊಳ್ಳುವುದು ಚಿತ್ರತಂಡದ ಜವಾಬ್ದಾರಿಯಾಗಿದೆ ಎಂದರು.
ಭಾವನೆಗಳ ಜೊತೆಗೆ ಮಾಸ್ ಮನರಂಜನೆ
ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ, ಸಾಯಿಕುಮಾರ್ ಅವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುತ್ತಿರುವುದು ಸೌಭಾಗ್ಯ ಎಂದು ಸಂತಸ ಹಂಚಿಕೊಂಡರು. ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳ ಜೊತೆಗೆ ಶಿವಣ್ಣ ಮತ್ತು ಸಾಯಿಕುಮಾರ್ ಅವರ ಅಭಿನಯದಿಂದ ಮಾಸ್ ಮನರಂಜನೆಯೂ ಇರಲಿದೆ ಎಂದು ಹೇಳಿದರು.
ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಚಿತ್ರದಲ್ಲಿ ‘ಗಾನ’ ಎಂಬ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ತಂದೆ-ತಾಯಿಯ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಿನಿಮಾ ಸಾರಲಿದೆ ಎಂದು ತಿಳಿಸಿದರು. ಚಿತ್ರೀಕರಣದ ವೇಳೆ ಸಾಯಿಕುಮಾರ್ ಅವರ 50 ವರ್ಷಗಳ ಸಿನಿಮಾ ಪಯಣವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ್ದನ್ನೂ ನೆನಪಿಸಿಕೊಂಡರು.
2027ರ ಜನವರಿ 22ರಂದು ಸಿನಿಮಾ ಬಿಡುಗಡೆ
‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ನಿರ್ಮಿಸಿದ್ದು, ಪ್ರಶಾಂತ್ ಮುಲಗೆ ಸಹ-ನಿರ್ಮಾಪಕರಾಗಿದ್ದಾರೆ. ಸಚಿನ್ ವಾಲಿ ನಿರ್ದೇಶನದ ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಹಣ ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್ ಮತ್ತು ಅಶ್ವಿನ್ ಹಾಸನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ತೀರ್ಥಹಳ್ಳಿ ಸೇರಿದಂತೆ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಂಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ 2027ರ ಜನವರಿ 22ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
