ಸರ್ಫರೋಶ್ ಸೀಕ್ವೆಲ್ ಸುಳಿವುಕೊಟ್ಟ ನಟ ಆಮೀರ್ ಖಾನ್
ಅಮೀರ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಜಾನ್ ಮ್ಯಾಥ್ಯೂ ಮತ್ತನ್ ನಿರ್ದೇಶನದ ಸರ್ಫರೋಶ್ ಸಿನಿಮಾ 25 ವರ್ಷಗಳನ್ನು ಪೂರೈಸಿದೆ.
ಮುಂಬೈ: 22 ವರ್ಷದ ಹಿಂದೆ; 1999 ರಲ್ಲಿ ಬಿಡುಗಡೆ ಆಗಿ ಭಾರಿ ಹೆಸರು ಗಳಿಸಿದ ಸೂಪರ್‌ಸ್ಟಾರ್ ಆಮೀರ್ ಖಾನ್ ನಟನೆಯ 'ಸರ್ಫರೋಶ್' ಸಿನಿಮಾದ ಮುಂದುವರೆದ ಭಾಗ 'ಸರ್ಫರೋಶ್-2ಗೆ ನಿರ್ದೇಶಕ ಜಾನ್ ಮ್ಯಾಥ್ಯೂ ಮತ್ತನ್ ಸಿದ್ದತೆ ನಡೆಸುತ್ತಿದ್ದಾರೆ. 22 ವರ್ಷದ ಹಿಂದೆ ಇವರೇ ಸರ್ಫರೋಶ್ ಸಿನಿಮಾ ನಿರ್ದೇಶಿಸಿದ್ದರು.
ಆಮೀರ್ ಖಾನ್, ಸೊನಾಲಿ ಬೇಂದ್ರೆ, ನಾಸಿರುದ್ಧೀನ್ ಶಾ ನಟಿಸಿದ್ದ ಈ ಸಿನಿಮಾ ಭಾರಿ ಹಿಟ್ ಆಗಿತ್ತು. ಅಷ್ಟು ಮಾತ್ರವೇ ಅಲ್ಲದೆ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಇಂದಿಗೂ ಈ ಸಿನಿಮಾವನ್ನು ನೆನಪಿಸಿಕೊಳ್ಳುವವರಿದ್ದಾರೆ. ಇದೀಗ ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ್ದು, ಸರ್ಫರೋಶ್ ಭಾಗ -2 ಮಾಡಲು ಸಿದ್ದತೆ ನಡೆಸುತ್ತಿದ್ದಾರೆ.
1999 ರಲ್ಲಿ ಬಿಡುಗಡೆಯಾದ ಈ ಚಿತ್ರವು ಏಪ್ರಿಲ್ 30 ರಂದು ತನ್ನ 25 ನೇ ವಾರ್ಷಿಕೋತ್ಸವನ್ನು ಆಚರಿಸುವ ನಿಟ್ಟಿನಲ್ಲಿ ಚಲನಚಿತ್ರ ನಿರ್ಮಾಪಕರು ಮುಂಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ನಟ ಆಮೀರ್ ಖಾನ್ ಸೇರಿದಂತೆ ಸೋನಾಲಿ ಬೇಂದ್ರೆ, ಮುಖೇಶ್ ರಿಷಿ, ಮಕರಂದ್ ದೇಶಪಾಂಡೆ, ಗೋವಿಂದ್ ನಾಮದೇವ್ ಮತ್ತು ಅಶೋಕ್ ಲೋಖಂಡೆ ಸೇರಿದಂತೆ ಹಲವಾರು ನಟರು ಭಾಗಿಯಾಗಿದ್ದರು.
ಈ ವೇಳೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಟ ಆಮೀರ್ ಖಾನ್, ʼಸರ್ಫರೋಶ್ 2' ಮಾಡುವಂತೆ ಜಾನ್ (ನಿರ್ದೇಶಕ) ಅವರಿಗೆ ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೆ. ಅಲ್ಲದೆ ಈ ಚಿತ್ರದ ಎರಡನೇ ಭಾಗವನ್ನು ನಾವು ಮಾಡುವ ರೀತಿಯಲ್ಲಿ ಚಿತ್ರವು ಕೊನೆಗೊಂಡಿದೆ. ನೀವು ಚೆನ್ನಾಗಿ ಕಥೆ ಬರೆದರೆ ನಾವು 'ಸರ್ಫರೋಶ್ 2' ಸಿನಿಮಾವನ್ನು ತೆರೆ ಮೇಲೆ ತರಬಹುದು ಎಂದು ಹೇಳಿದ್ದೆ. ಆದರೆ ಈ ಬಾರಿ ತಾವು ಪ್ರಯತ್ನಿಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ" ಎಂದು ತಿಳಿಸಿದ್ದಾರೆ.
"ಸರ್ಫರೋಶ್ 25 ವರ್ಷಗಳನ್ನು ಪೂರೈಸಿದೆ ಎಂದು ನಂಬಲು ಸಾಧ್ಯವಿಲ್ಲ. ಸರ್ಫರೋಶ್' ನಮ್ಮ ದೇಶ ಮತ್ತು ಸಮಾಜಕ್ಕೆ ಬಹಳ ಮುಖ್ಯವಾದ ಚಿತ್ರವಾಗಿದೆ. ಇದು ನನ್ನ ವೃತ್ತಿಜೀವನದ ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರು ಮೆಚ್ಚಿದ ಚಿತ್ರವಾಗಿದೆ. ಈ ಸಿನಿಮಾಗೆ ಜನರು ನೀಡಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಈ ಚಿತ್ರವು ಇನ್ನೂ ನನ್ನ ಮನಸ್ಸಿನಲ್ಲಿ ತಾಜಾವಾಗಿದೆ. ಇದು ಎರಡು ಅಥವಾ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದಂತೆ ಭಾಸವಾಗುತ್ತಿದೆ. ನಾನು ಈ ಸಿನಿಮಾವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಈಗಲೂ ಈ ಸಿನಿಮಾವನ್ನು ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಮತ್ತೊಮ್ಮೆ ಸಿನಿಮಾ ನೋಡಲು ಬರುವುದಾಗಿ ಪಣ ತೊಡುತ್ತೇನೆ" ಎಂದು ನಟ ಆಮೀರ್ ಖಾನ್ ತಿಳಿಸಿದರು.
ಇನ್ನು ಈ ಸಿನಿಮಾದಲ್ಲಿ ನಾಯಕಿ ನಟಿಯಾಗಿ ನಟಿಸಿದ್ದ ಸೊನಾಲಿ ಬೇಂದ್ರೆ ಮಾತನಾಡಿ, "ಸರ್ಫರೋಷ್" ಇಂದಿಗೂ ಪ್ರಸ್ತುತವಾದ ಚಿತ್ರವಾಗಿದೆ. ಇದು ವಿಭಿನ್ನ ಚಿತ್ರ ಎಂದು ನಮಗೆ ತಿಳಿದಿತ್ತು ಆದರೆ ಅದನ್ನು ಜನ ಅಷ್ಟೊಂದು ಆರಾಧಿಸುತ್ತಾರೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ. ಕೆಲವು ದಿನಗಳ ಹಿಂದೆ, ನಾನು ಇಡೀ ಚಿತ್ರವನ್ನು ನೋಡಿದೆ ಮತ್ತು ಇಂದು ಕೂಡ ಅದೇ ವಿಷಯವನ್ನು ಹೇಳುತ್ತದೆ ಎಂದು ನಾನು ಭಾವಿಸುತ್ತೇನೆ, ಇದು ತುಂಬಾ ಪ್ರಸ್ತುತವಾಗಿದೆ. 'ಸರ್ಫರೋಶ್' ನನ್ನ ಎರಡನೇ ಚಿತ್ರ. ನಾಸಿರ್ ಸಾಹೇಬ್ ಮತ್ತು ಆಮೀರ್ ಅವರೊಂದಿಗೆ ನಾನು ಈಗಾಗಲೇ 'ಟಕ್ಕರ್' ಮಾಡಿದ್ದೇನೆ, ಆದ್ದರಿಂದ ನೀವು ಅವರೊಂದಿಗೆ ತೆರೆಯನ್ನು ಹಂಚಿಕೊಂಡಾಗ, ನೀವು ಕಲಿಯುತ್ತೀರಿ, ”ಎಂದು ಅವರು ಹೇಳಿದರು.
1999 ರಲ್ಲಿ ಏಪ್ರಿಲ್ 30 ರಂದು ಬಿಡುಗಡೆಯಾದ 'ಸರ್ಫರೋಶ್' ಸಿನಿಮಾವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದು ಕಮರ್ಶಿಯಲ್ ಹಿಟ್ ಆಗಿ ಸಾಬೀತು ಪಡಿಸಿತ್ತು. ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತ್ತು.
ಸಿನಿಮಾದ ಕಥೆಯು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ರಾಥೋಡ್ (ಖಾನ್) ಸುತ್ತ ಸುತ್ತುತ್ತದೆ. ನಾಯಕ ಪ್ರಸಿದ್ಧ ಪಾಕಿಸ್ತಾನಿ ಗಜಲ್ ಗಾಯಕ ಗುಲ್ಫಾಮ್ ಹಸನ್ (ನಾಸಿರುದ್ದೀನ್ ಶಾ) ಅವರನ್ನು ಭೇಟಿಯಾಗಿ ಸ್ನೇಹ ಬೆಳೆಸಿಕೊಳ್ಳುತ್ತಾರೆ. ರಾಜಸ್ಥಾನದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಕುರಿತು ತನಿಖೆ ನಡೆಸುತ್ತಿರುವಾಗ ರಾಥೋಡ್ ಅವರ ಜೀವನದಲ್ಲಿ ಒಂದು ದೊಡ್ಡ ಪಿತೂರಿ ಬಹಿರಂಗವಾಗುತ್ತದೆ. ಈ ಘಟನೆಯು ನಾಯಕನ ಜೀವನದಲ್ಲಿ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುವುದು ಈ ಸಿನಿಮಾದ ಕಥಾವಸ್ತು.