
ಸಂಜನಾ ಗಲ್ರಾಣಿ
‘ಬಿಗ್ ಬಾಸ್ ತೆಲುಗು 9’ ಕಾರ್ಯಕ್ರಮದಲ್ಲಿ ಸಂಜನಾ ಗಲ್ರಾನಿ ಸ್ಪರ್ಧೆ
ಪುಟ್ಟ ಪುಟ್ಟ ಮಕ್ಕಳನ್ನ ಬಿಟ್ಟು ಸಂಜನಾ ಗಲ್ರಾನಿ ತಾವು ಶೋಗೆ ಹೋಗಿರುವ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಗಂಡ - ಹೆಂಡತಿ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ‘ಬಿಗ್ ಬಾಸ್ ತೆಲುಗು 9’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಸಂಜನಾ ಗಲ್ರಾನಿ ಈ ಹಿಂದೆ ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿದ್ದರು. ಅದರಿಂದ ಹೊರಗೆ ಬಂದ ಸಂಜನಾ ಗಲ್ರಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು ಡಾ ಅಜೀಜ್ ಪಾಷಾ ಅವರನ್ನ ವಿವಾಹವಾದರು. ಸಂಜನಾ ಗಲ್ರಾನಿ ಇದೀಗ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಇದೀಗ ಇಬ್ಬರು ಪುಟಾಣಿ ಮಕ್ಕಳನ್ನು ಬಿಟ್ಟು ‘ಬಿಗ್ ಬಾಸ್ ತೆಲುಗು 9’ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದಾರೆ. ‘ಬಿಗ್ ಬಾಸ್ ತೆಲುಗು 9’ ಕಾರ್ಯಕ್ರಮವನ್ನು ನಟ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದಾರೆ.
ಪುಟ್ಟ ಪುಟ್ಟ ಮಕ್ಕಳನ್ನ ಬಿಟ್ಟು ಸಂಜನಾ ಗಲ್ರಾನಿ ತಾವು ಶೋಗೆ ಹೋಗಿರುವ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
‘’ಜೀವನದಲ್ಲಿ ಕೆಲವೊಮ್ಮೆ ಕಷ್ಟಕರ ಸವಾಲುಗಳು ಎದುರಾಗುವುದು ಸಹಜ. ಒಂದು ಕಾಲದಲ್ಲಿ ನಾನು ಸಿನಿಮಾ ತಾರೆಯಾಗಿ ಮಿಂಚುತ್ತಿದ್ದೆ. ಆದರೆ, ಪ್ರಕರಣವೊಂದರಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಯಿತು. ಇದರಿಂದ ನನ್ನ ವೃತ್ತಿಜೀವನದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ ಅಲ್ಲೋಲ ಕಲ್ಲೋಲವಾಯಿತು. ಪರಿಸ್ಥಿತಿಗೆ ಬಲಿಯಾಗದೆ, ಸರ್‌ವೈವರ್ ಆಗಿದ್ದೇನೆ. ನನ್ನ ಕಥೆಯನ್ನ ಪುನಃ ಬರೆಯಲು ಮುಂದಾಗಿದ್ದೇನೆ’’
‘’ತಾಯ್ತನ ನನ್ನ ಜೀವನವನ್ನೇ ಬದಲಾಯಿಸಿತು. ಅಲಾರಿಕ್ ಪಾಷಾ ಮತ್ತು ಅಜೀನಾ ಪಾಷಾ ಎಂಬ ಎರಡು ಮುದ್ದು ಮಕ್ಕಳಿಂದ ನಾನು ನನ್ನ ಜೀವನದ ಹೊಸ ಅಧ್ಯಾಯವನ್ನು ಅಪಾರವಾದ ಪ್ರೀತಿಯಿಂದ ಆರಂಭಿಸಿದ್ದೇನೆ. ತೆರೆಮೇಲೆ ಮೆಚ್ಚುಗೆ ಗಳಿಸಿ ನಟಿಯಾಗಿದ್ದ ನನ್ನ ಗುರುತು, ಈಗ ಮಕ್ಕಳನ್ನು ಸಾಕುವ, ಪೋಷಿಸುವ ತಾಯಿಯಾಗಿ ಮಾರ್ಪಟ್ಟಿತು. ಮಕ್ಕಳ ಮುದ್ದು ನಗುವಿನ ಹಿಂದೆ ಕನಸುಗಳನ್ನು ಬೆಳೆಸಿಕೊಂಡ, ಹಂಬಲಗಳನ್ನ ಹೊತ್ತ ಮಹಿಳೆಯಾಗಿ ಬದುಕುತ್ತಿದ್ದೆ. ಮತ್ತೆ ಎದ್ದು ನಿಲ್ಲಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಆ ಕ್ಷಣ ಬಂದೇಬಿಟ್ಟಿದೆ. ‘ಬಿಗ್ ಬಾಸ್ ತೆಲುಗು 9’ ಶೋಗೆ ಕಾಲಿಡುತ್ತಿದ್ದೇನೆ’’
‘’ಬಿಗ್ ಬಾಸ್ ವೇದಿಕೆ ಸ್ಪರ್ಧಿಗಳ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಜಗತ್ತಿಗೆ ಸ್ಪರ್ಧಿಗಳ ಸತ್ಯ ಸ್ವರೂಪವನ್ನು ತೋರಿಸುತ್ತದೆ. ನನಗೆ ಇದು ನನ್ನ ಮನದ ಮಾತು, ನನ್ನ ಹೋರಾಟಗಳು, ತಾಳ್ಮೆ ಮತ್ತು ಕುಗ್ಗದ ಮನೋಬಲವನ್ನು ಲಕ್ಷಾಂತರ ಜನರೊಂದಿಗೆ ಹಂಚಿಕೊಳ್ಳುವ ಅವಕಾಶ. ಇದು ಇನ್ನಿತರ ಮಹಿಳೆಯರಿಗೆ ಪ್ರೇರಣೆ ನೀಡುವ ಅವಕಾಶ ನನಗೆ ಸಿಕ್ಕಿದೆ. ನನಗೆ ಇದು ಕೇವಲ ಶೋ ಅಲ್ಲ. ನನಗಿದು ಹೊಸ ಪ್ರಾರಂಭ’’
‘’ನನ್ನ ಪತಿ ಡಾ ಅಜೀಜ್ ಪಾಷಾಗೆ ವಿಶೇಷ ಧನ್ಯವಾದಗಳು. ಅವರಿಲ್ಲದೆ, ಅವರ ಬೆಂಬಲವಿಲ್ಲದೆ ಈ ಪಯಣವೇ ಸಾಧ್ಯವಾಗುತ್ತಿರಲಿಲ್ಲ. ನನ್ನ ಅತ್ತಿಗೆ - ನಾದಿನಿಯರಿಗೆ, ನನ್ನ ತಂದೆ-ತಾಯಿಯರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ‘ಬಿಗ್ ಬಾಸ್’ ಮನೆಯಲ್ಲಿರುವ ಸಂದರ್ಭದಲ್ಲಿ ಅವರೆಲ್ಲರೂ ನನ್ನ ಮನೆಯಲ್ಲಿ ವಾಸಿಸುವುದಾಗಿ ಭರವಸೆ ನೀಡಿರುವುದೇ ನನಗೆ ದೊಡ್ಡ ಆಧಾರ. ನಾನು ‘ಬಿಗ್ ಬಾಸ್’ ಮನೆಯಲ್ಲಿ ಇರುವ ಅವಧಿಯಲ್ಲಿ ನನ್ನ ಮಕ್ಕಳನ್ನ ನೋಡಿಕೊಳ್ಳಲು ಒಟ್ಟು 13 ಜನರು ಮನೆಯಲ್ಲಿ ನೆಲೆಸುವಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದೇನೆ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಸಂಜನಾ ಗಲ್ರಾನಿ ಬರೆದುಕೊಂಡಿದ್ದಾರೆ.
ಸಂಜನಾ ಗಲ್ರಾನಿ ಈ ಹಿಂದೆ ‘ಬಿಗ್ ಬಾಸ್ ಕನ್ನಡ 1’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು.