ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ
x

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಜೋ ಸೈಮನ್ ಇನ್ನಿಲ್ಲ

ಡಾ. ವಿಷ್ಣುವರ್ಧನ್ ಅವರ ವೃತ್ತಿಜೀವನದ ಮೈಲಿಗಲ್ಲಾದ 'ಸಾಹಸ ಸಿಂಹ' ಚಿತ್ರವನ್ನು ನಿರ್ದೇಶಿಸಿ, ಆ ಬಿರುದು ಶಾಶ್ವತವಾಗಿ ಉಳಿಯುವಂತೆ ಮಾಡಿದ ಕೀರ್ತಿ ಜೋ ಸೈಮನ್ ಅವರದ್ದು.


ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ನಿರ್ಮಾಪಕ ಜೋ ಸೈಮನ್ ಅವರು ನಿಧನರಾಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆಗೆ ಹಾಜರಾಗಿದ್ದ ಅವರು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಪಕ್ಕದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಡಾ. ವಿಷ್ಣುವರ್ಧನ್ ಅವರ ವೃತ್ತಿಜೀವನದ ಮೈಲಿಗಲ್ಲಾದ 'ಸಾಹಸ ಸಿಂಹ' ಚಿತ್ರವನ್ನು ನಿರ್ದೇಶಿಸುವ ಮೂಲಕ ವಿಷ್ಣು ಅವರಿಗೆ ಆ ಬಿರುದು ಶಾಶ್ವತವಾಗಿ ಉಳಿಯುವಂತೆ ಮಾಡಿದ ಕೀರ್ತಿ ಜೋ ಸೈಮನ್ ಅವರಿಗೆ ಸಲ್ಲುತ್ತದೆ.

ಮಂಡ್ಯದ ಪ್ರತಿಭೆ

ಮೂಲತಃ ಮಂಡ್ಯ ಜಿಲ್ಲೆಯವರಾದ ಜೋ ಸೈಮನ್, 1967ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಚಿತ್ರರಂಗದ ಒಡನಾಟ ಬೆಳೆಸಿಕೊಂಡ ಅವರು, ನಂತರ ನಿರ್ದೇಶನದತ್ತ ಮುಖ ಮಾಡಿದ್ದರು. . ತಮ್ಮ ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ನಟರಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದರು.

30ಕ್ಕೂ ಹೆಚ್ಚು ಚಿತ್ರಗಳ ಸರದಾರ

ಆಕ್ಷನ್ ಮತ್ತು ಕೌಟುಂಬಿಕ ಕಥಾಹಂದರದ ಚಿತ್ರಗಳಿಗೆ ಹೆಸರಾಗಿದ್ದ ಜೋ ಸೈಮನ್, ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಸೇರಿದಂತೆ ಕನ್ನಡದ ಮೇರು ನಟರ ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಇವರದ್ದು. 'ಸಾಹಸ ಸಿಂಹ', 'ಸಿಡಿದೆದ್ದ ಸಹೋದರ', 'ಊರಿಗೆ ಉಪಕಾರಿ', 'ನ್ಯಾಯ ಗೆದ್ದಿತು', 'ಪ್ರೇಮಜಾಲ', 'ಒಡೆಯ', 'ಮಿಸ್ಟರ್ ವಾಸು', 'ರಾಜಾ ಯುವರಾಜ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಮತ್ತು ಹಲವು ತಂತ್ರಜ್ಞರನ್ನು ಪರಿಚಯಿಸುವ ಮೂಲಕ ಅವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು.

ಸಚಿವರು ಹಾಗೂ ಗಣ್ಯರ ಸಂತಾಪ

ಜೋ ಸೈಮನ್ ಅವರ ನಿಧನಕ್ಕೆ ರಾಜ್ಯದ ಸಚಿವರು, ರಾಜಕೀಯ ನಾಯಕರು ಹಾಗೂ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವ ಶಿವರಾಜ ತಂಗಡಗಿ "ಮಂಡ್ಯ ಮೂಲದ ಜೋ ಸೈಮನ್ ಅವರು ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಅವರ ನಿಧನದಿಂದ ಚಿತ್ರರಂಗ ಒಬ್ಬ ಕ್ರಿಯಾಶೀಲ ನಿರ್ದೇಶಕನನ್ನು ಕಳೆದುಕೊಂಡಿದೆ," ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದು, ಹಿರಿಯ ನಟರು, ನಿರ್ದೇಶಕರು ಹಾಗೂ ಹಲವು ಗಣ್ಯರು ಜೋ ಸೈಮನ್ ಅವರೊಂದಿಗಿನ ಒಡನಾಟ ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

Read More
Next Story