ವಲವಾರ: ಈ ಚಿತ್ರದ ತುಂಬಾ ಮಣ್ಣಿದದ್ದೇ ಘಮ ಘಮ
x
ವಲವಾರ ಚಿತ್ರದ ಪೋಸ್ಟರ್‌

ವಲವಾರ: ಈ ಚಿತ್ರದ ತುಂಬಾ ಮಣ್ಣಿದದ್ದೇ ಘಮ ಘಮ

ಮಲೆನಾಡಿನ ಮಣ್ಣಿನ ವಾಸನೆ, ಹಟ್ಟಿಯ ಕರು ಮತ್ತು ಹಳ್ಳಿ ಬದುಕಿನ ತಾಕಲಾಟಗಳನ್ನು ಅನಾವರಣ ಮಾಡುವ ಅದ್ಭುತ ಚಿತ್ರ 'ವಲವಾರ'. ಸುತನ್ ಗೌಡ ನಿರ್ದೇಶನದ ಈ ಸಿನಿಮಾದ ವಿಮರ್ಶೆ ಇಲ್ಲಿದೆ.


Click the Play button to hear this message in audio format

ಇದು ನಮ್ಮ ಗಮನಕ್ಕೇ ಬಾರದೇ ನೂರಾರು ಚಿತ್ರಗಳ ನಡುವೆ ಒಂದೆಂದು ಕರಗಿ ಹೋಗುತ್ತಿತ್ತು. ಅಂತಹ ಹೊತ್ತಿನಲ್ಲಿ ನೋಡಿದ ಅಪರೂಪದ ಚಿತ್ರ ವಲವಾರ. ಚಿತ್ರದ ಆರಂಭದಿಂದಲೇ ಮಣ್ಣಿನ ವಾಸನೆ ಮೂಗಿಗೆ ಬಡಿಯಲು ಶುರುಮಾಡಿತು. ಹಳ್ಳಿ, ಊರು, ಕೊಟ್ಟಿಗೆ, ದನದ ದೊಡ್ಡಿ, ಸಗಣಿ, ಗಬ್ಬಗಟ್ಟಿದ ಹಸುಗಳನ್ನು ಕಣ್ತುಂಬಿಕೊಂಡು ಬೆಳೆದ ನನ್ನಂತೋನಿಗೆ ಈ ಚಿತ್ರ ಮರಳಿ ಆ ಲೋಕಕ್ಕೇ ಕರೆದುಕೊಂಡು ಹೋಯಿತು. ಆ ಮಣ್ಣಿನ ಘಮ ಅಷ್ಟೂ ಚಿತ್ರವನ್ನು ತುಂಬಿಕೊಂಡು ಘಮಗುಡುತ್ತಿತ್ತು. ನಾವು ನಮ್ಮದೇ ಹಟ್ಟಿಯೊಳಗೆ ಕಳೆದು ಹೋದಂತೆ ಅನಿಸಿಬಿಟ್ಟಿತು.

ಮನೆಯಲ್ಲಿ ಒಂದು ಹಸು ಗಬ್ಬಗಟ್ಟಿ ಅದು ಇನ್ನೇನು ಕರು ಹಾಕುತ್ತದೆ ಎಂಬಾಗಿನ ನಿರೀಕ್ಷೆಗಳಿವೆಯಲ್ಲ, ಅದು ಯಾವುದನ್ನೂ ಮೀರಿಸಲಾರದು. ಅಂತಹ ತಹತಹವನ್ನು ನಾವು ಬಾಲ್ಯದಲ್ಲಿ ಬಹಳಷ್ಟು ಬಾರಿ ಅನುಭವಿಸಿದ್ದೇವೆ. ಕ್ಲಾಸಿನಲ್ಲಿ ಕುಂತರೂ ಇವತ್‌ ಮನೆಗೆ ಹೋಗೋದ್ರೊಳಗೆ ನಮ್‌ ಕೆಂಪಿ ಕರು ಹಾಕಿರುತ್ತೇನೋ, ಕರು ನಮ್‌ ತೋಟದ ತುಂಬ ಕುಪ್ಪಳಿಸಿ ಕುಣಿತಿರುತ್ತೇನೋ ಎಂಬ ನಿರೀಕ್ಷೆಯಲ್ಲಿ ಪಾಠ ಮಾಡಿದ್ದೂ ಮನಸ್ಸಿಗೆ ಹತ್ತುತ್ತಿರಲಿಲ್ಲ.

ನಮ್ಮ ಕರಾವಳಿಯ, ಮಲೆನಾಡಿನ, ಕೃಷಿಯನ್ನು ನಂಬಿದ ಯಾವುದೇ ಮನೆಯಲ್ಲಿ ಹೀಗೆ ಕರು ಹಾಕುವುದಕ್ಕೂ ಮುಂಚಿನ ಅನುಭವಗಳು ಸಿಕ್ಕೇ ಸಿಗುತ್ತವೆ. ಅಂತಹುದೊಂದು ಯಥಾವತ್‌ ಚಿತ್ರವನ್ನು ಇಬ್ಬರು ಮಕ್ಕಳ ಕಣ್ಣುಗಳಲ್ಲಿ ತುಂಬಿಸಿ ಇಡೀ ಕುಟುಂಬದಲ್ಲಿ ಆಗುವ ತಾಕಲಾಟಗಳನ್ನು ನಮ್ಮ ಮುಂದೆ ಅನಾವರಣ ಮಾಡುವಲ್ಲಿ ʼವಲವಾರʼ ಚಿತ್ರ ಯಶಸ್ವಿಯಾಗಿದೆ. ಒಂದು ಚಿತ್ರ ನೋಡುತ್ತಿದ್ದೇವೆ ಎಂಬ ಭಾವನೆಯೇ ನಮ್ಮೊಳಗೆ ಮೂಡುವುದಿಲ್ಲ. ಅದರಲ್ಲೂ ಹಳ್ಳಿಯಿಂದ ಬಂದ ನಮ್ಮಂತವರಿಗೆ ಮರಳಿ ಅಮ್ಮನ ಮಡಿಲು ಸೇರಿಸಿದಂತಹ ಅನುಭವ.


ಯಾವುದೇ ಚಿತ್ರವನ್ನು ನೋಡಿ ಬಂದ ಮೇಲೆ ಅದರ ಇಡೀ ಕಥೆಯನ್ನು ಹೇಳುವುದು ನಿಜಕ್ಕೂ ಕ್ರಿಮಿನಲ್.‌ ಹಾಗಾಗಿ ಅದರ ಕಥೆಯ ತುಣಕನ್ನಷ್ಟೇ ಹೇಳಿ ಬಿಟ್ಟಿದ್ದೇನೆ. ಆದರೆ ಇಡೀ ಚಿತ್ರ ನೋಡಿದ ಮೇಲೆ ನಮ್ಮೊಳಗೆ ತುಂಬುವ ಎನರ್ಜಿ ತುಂಬ ಸಶಕ್ತವಾದುದು. ಕುಂಡೇಸಿ (ವೇದಿಕ್ ಕೌಶಲ್)‌ ಪಾತ್ರವಂತೂ ಅನನ್ಯವಾಗಿ ನಮ್ಮ ಮುಂದೆ ಅನಾವರಣವಾಗುತ್ತದೆ. ಒಂದರ್ಥದಲ್ಲಿ ಕುಂಡೇಸಿ ನಾವೇ ಆಗಿರುತ್ತೇವೆ. ಹಸು ಕಳೆದು ಹೋಗಿ ಮನೆಗೂ ದನದ ದೊಡ್ಡಿಗೂ (ಹಿಂದೆಲ್ಲ ಬೀಡಾಡಿ ದನಗಳನ್ನು ಕಟ್ಟಿಹಾಕುತ್ತಿದ್ದ ದನದ ದೊಡ್ಡಿ ಕಲ್ಪನೆಯೇ ಮರೆತು ಹೋಗಿತ್ತು) ಅಲೆದಾಡುತ್ತ ಆತ ಅನುಭವಿಸುವ ಪಡಿಪಾಟಲು ಮುಂದಿನ ದೃಶ್ಯದಲ್ಲಾದರೂ ಮುಗಿದು ಹೋಗಲಿ ಅಂತ ಅನ್ನಿಸದೇ ಇದ್ದರೆ ಕೇಳಿ.

ಮಕ್ಕಳ ಅಮ್ಮನ ಪಾತ್ರ ನಿರ್ವಹಿಸಿದ ಹರ್ಷಿತಾ ಆರ್.‌ ಗೌಡ ಎಂಬ ʼತಾಯಿʼಗೆ ಒಂದು ಸಲಾಂ. ಆಕೆ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಅನ್ನಿಸುವುದೇ ಇಲ್ಲ. ಮಲೆನಾಡಿನ ಅಷ್ಟೂ ತಾಯಂದಿರನ್ನು ಸೇರಿಸಿ ಒಬ್ಬಳು ʼಅವ್ವʼನನ್ನಾಗಿ ಮಾಡಲಾಗಿದೆ. ಉಮ್ಮಳಿಸಿ ಬರುವ

ಪ್ರತಿ ಸಂಕಟ, ದುಃಖವನ್ನೂ ಆಕೆ ಸಹಿಸಿಕೊಳ್ಳುವ ರೀತಿಗೆ ಫಿದಾ. ಆಕೆಯ ಗಂಡನಾಗಿರುವ ಮಾಲತೇಶ್‌ ಹುಟ್ಟಾ ಸಿಡುಕ. ಅಬ್ಬಾ, ಆತನ ಮುಖವೋ, ಕುಳಿ ಬಿದ್ದ ಕಣ್ಣುಗಳೋ, ಆತನ ನಗುಗಳೇ ನೆಗೆದು ಬಿದ್ದು ಹಣೆ ಮೇಲೆ ನಿರಿಗೆಗಳಾಗಿವೆ ಅನಿಸುತ್ತದೆ. ʼಈ ಅಪ್ಪನನ್ನು ಇವತ್ತೇ ಮುಗ್ಸ್‌ ಬುಡ್ತೀನಿʼ ಅನ್ನೋ ಸಿಟ್ಟು ಎಲ್ಲ ಮಕ್ಕಳಲ್ಲೂ ಹುಟ್ಟೋ ಹಾಗೆ ಮಾಲತೇಶ್‌ ನಟಿಸಿದ್ದಾರೆ ಅಂದರೆ ನಿಮಗೆ ಅರ್ಥವಾದೀತು…

ಅಷ್ಟೂ ಚಿತ್ರವನ್ನು ಮಲೆನಾಡಿನ ಮಡಿಲಲ್ಲಿ ಚಿತ್ರಿಸಿದ್ದಾರೆ. ಆದರೆ ಅಂತಹ ಮಲೆನಾಡನ್ನು ಇಡಿ ಇಡಿಯಾಗಿ, ಹಸಿಹಸಿಯಾಗಿ ತಂದಿರುವ ಛಾಯಾಗ್ರಹಣ ʼವಲವಾರʼದ ಇನ್ನೊಂದು ಹೆಚ್ಚುಗಾರಿಕೆ. ಒಂದು ಚಿತ್ರ ಪನೋರಮಿಕ್‌ ವಿವ್‌ ಇಲ್ಲದೇ ಹೋದರೆ ಅದು ಯಾವ ಊರನ್ನೂ ಬಿಂಬಿಸುವುದಿಲ್ಲ, ನಮ್ಮನ್ನು ಆ ಊರಿನ ʼಪ್ರತಿನಿಧಿʼ ಯನ್ನಾಗಿ ಮಾಡುವುದಿಲ್ಲ. ಆದರೆ ವಲವಾರ ನಮ್ಮನ್ನು ಒಳಗೊಳ್ಳಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದೆ ಎಂಬುದಕ್ಕೆ ಈ ಸಿನೆಮಾಟೋಗ್ರಫಿಯೂ (ಬಾಲ್-ರಾಜ್‌ ಗೌಡ) ಒಂದು ಸಾಕ್ಷಿ.

ಇನ್ನು ಚಿತ್ರದಲ್ಲೊಂದು ರೊಮ್ಯಾನ್ಸೂ ಇದೆ. ಎರಡು ಜೋಡಿಯೂ ಇದೆ. ಅವರು ಮಧ್ಯೆ ಮಧ್ಯೆ ಪ್ರತ್ಯಕ್ಷರಾಗಿ ಕಚಕುಳಿ ಕೊಡುತ್ತಲೇ ಇರುತ್ತಾರೆ. ಅದರಲ್ಲೂ ಹಳ್ಳಿ ಪಡ್ಡೇ ಹುಡುಗ ಯದು (ಅಭಯ್)‌ ಪಾತ್ರ ಮಾಡಿದಾತನ ಮ್ಯಾನರಿಸಂ, ನಡೆಯುವ ಸ್ಟೈಲು, ಹೊರಚಾಚಿರುವ ಒಂದು ಕೋರೆ ಹಲ್ಲೂ, ಅದನ್ನೇ ತೋರಿಸುವಂತೆ ಮಾದಕವಾಗಿ ಬೀರುವ ನಗುವೂ, ಅವನಿಗೇ ಫಿಟ್‌ ಆದ ಮೋಟಾರ್‌ ಸೈಕಲ್ಲೂ…. ಮಸ್ತ್

ಇಷ್ಟನ್ನೂ ಒಂದು ಚೌಕಟ್ಟಿನೊಳಗೆ ಮಣಿ ಪೋಣಿಸಿದಂತೆ ಪೋಣಿಸಿದ ನಿರ್ದೇಶಕ ಸುತನ್‌ ಗೌಡ ನಿಜಕ್ಕೂ ಮೆಚ್ಚುಗೆಗೆ ಅರ್ಹರು. ಈಗಿನ್ನೂ ಮುವತ್ತರ ಆಜೂಬಾಜಿನಲ್ಲಿರುವ ಸುತನ್‌ ಅವರಲ್ಲಿರುವ ಗಟ್ಟಿತನಕ್ಕೆ ವಲವಾರ ಎಂದೆಂದಿಗೂ ಸಾಕ್ಷಿಯಾಗಿ ನಿಲ್ಲುತ್ತದೆ. ಚಿತ್ರದ ಒಟ್ಟು ಸಂಕಲನವೂ, ಮಣಿಕಾಂತ್‌ ಕದ್ರಿ ಅವರ ಸಂಗೀತವೂ ಒಪ್ಪ-ಓರಣ. ಆ ಕಾರಣಕ್ಕೆ ಚಿತ್ರದ ಒಂದು ಸಣ್ಣ ಮೌನವೂ ಗಾಢವಾಗಿ ನಮ್ಮನ್ನು ಕಾಡುತ್ತದೆ.

ಒಂದು ವೇಳೆ ನಿಮ್ಮ ಮನೆಯಲ್ಲಿ ಇಬ್ಬರು ಗಂಡು ಮಕ್ಕಳಿದ್ದರೆ.. ನೀವೊಂದು ಹಳ್ಳಿಯಿಂದ ಬಂದಿದ್ದರೆ ಊರಲ್ಲಿರುವ ಅಮ್ಮನ ನೆನೆಯಬೇಕಿದ್ದರೆ ಗೌರನಂತಹ ಹಸುವಿನ ನೆನಪು ನಿಮ್ಮೊಳಗಿದ್ದರೆ, ಹೊಡಿಬಡಿ ಇಲ್ಲದ ಕನ್ನಡ ಸಿನೆಮಾವೊಂದನ್ನು ಗೆಲ್ಲಿಸಬೇಕಿದ್ದರೆ… ಒಮ್ಮೆ ಮಕ್ಕಳೊಂದಿಗೆ ಈ ಅಪ್ಪಟ ಮಣ್ಣಿನ ವಾಸನೆಯ ಚಿತ್ರವನ್ನು ಹೋಗಿ ನೋಡಿ. ಯಾಕೆಂದರೆ ಈ ಕನ್ನಡ ಚಿತ್ರ ಗೆಲ್ಲವುದು ನ್ಯಾಯೋಚಿತ.

Read More
Next Story