ಕನ್ನಡದ ಸ್ವತಂತ್ರ ಸಂಗೀತ ಲೋಕಕ್ಕೆ ಹೊಸ ಮೆರುಗು:  ಆಹನ ಆಲ್ಬಂ ಬಿಡುಗಡೆಗೆ ಸಿದ್ಧ
x

'ಸರಿಗಮಪ' ಖ್ಯಾತಿಯ ರಜತ್ ಹೆಗಡೆ ಈ ಹಾಡಿಗೆ ಸಂಗೀತ ಸಂಯೋಜಿಸಿ, ಧ್ವನಿ ನೀಡುವುದರ ಜೊತೆಗೆ ನಾಯಕ ನಟನಾಗಿಯೂ ಅದ್ಭುತವಾಗಿ ಅಭಿನಯಿಸಿದ್ದಾರೆ.

ಕನ್ನಡದ ಸ್ವತಂತ್ರ ಸಂಗೀತ ಲೋಕಕ್ಕೆ ಹೊಸ ಮೆರುಗು: 'ಆಹನ' ಆಲ್ಬಂ ಬಿಡುಗಡೆಗೆ ಸಿದ್ಧ

ವೈಷ್ಣವಿ ಫಿಲಂಸ್ ಹೆಮ್ಮೆಯಿಂದ ಅರ್ಪಿಸುತ್ತಿರುವ 'ಆಹನ' ಒಂದು ವಿಭಿನ್ನ ಪರಿಕಲ್ಪನೆಯ ಕನ್ನಡ ಸ್ವತಂತ್ರ ಸಂಗೀತ ಆಲ್ಬಂ. 'ಆಹನ' ಎಂದರೆ ಸೂರ್ಯನ ಮೊದಲ ಕಿರಣ.


Click the Play button to hear this message in audio format

ಕನ್ನಡದ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲು ವೈಷ್ಣವಿ ಫಿಲಂಸ್ ಸಜ್ಜಾಗಿದ್ದು, 'ಆಹನ' ಎಂಬ ವಿನೂತನ ಪರಿಕಲ್ಪನೆಯ ಮ್ಯೂಸಿಕ್ ಆಲ್ಬಂ ಅನ್ನು ಸಿದ್ಧಪಡಿಸಿದೆ. ಭಾವನಾತ್ಮಕ ಕಥಾಹಂದರ ಹಾಗೂ ವಿಶಿಷ್ಟ ಸಂಗೀತದ ಸಮ್ಮಿಲನವಾಗಿರುವ ಈ ಯೋಜನೆಯು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ವಿಜಯ್ ಲೋಹಿತ್ ನಿರ್ಮಾಣ ಹಾಗೂ ಸತೀಶ್ ಹೆಚ್. ಗೌಡ ಅವರ ಸಹ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಆಲ್ಬಂಗೆ ರಜತ್ ಹೆಗಡೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಪ್ರಾಜೆಕ್ಟ್‌ನ ವಿಶೇಷವೆಂದರೆ, ಪ್ರತಿಭಾವಂತ ಕಲಾವಿದ ರಜತ್ ಹೆಗಡೆ ಅವರು ಕೇವಲ ಸಂಗೀತ ಸಂಯೋಜನೆ ಮಾತ್ರವಲ್ಲದೆ, ತಾವೇ ಗಾಯಕರಾಗಿ ಧ್ವನಿ ನೀಡಿರುವುದಲ್ಲದೆ ವಿಡಿಯೋದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

'ಆಹನ' ಎಂದರೆ ʻಸೂರ್ಯನ ಮೊದಲ ಕಿರಣʼ. ಈ ಹಾಡು ಒಬ್ಬ ಕಲಾವಿದ ಮತ್ತು ಸಂಗೀತದ ನಡುವಿನ ಬಿಡಿಸಲಾಗದ ಸಂಬಂಧವನ್ನು ತೆರೆದಿಡುತ್ತದೆ. ಒಬ್ಬ ಕಲಾವಿದ ಸಂಗೀತವನ್ನು ತಲುಪಲು ಹಾತೊರೆಯುತ್ತಿರುವಾಗ, ಸಂಗೀತವೇ ಅವನನ್ನು ನಿರಾಕರಿಸಿದರೆ ಏನಾಗಬಹುದು? ಎನ್ನುವ ಸೃಜನಾತ್ಮಕ ಪ್ರಶ್ನೆಯ ಸುತ್ತ ಈ ಹಾಡಿನ ಕಥೆ ಸಾಗುತ್ತದೆ. ರಜತ್ ಹೆಗಡೆ ಅವರ ಸ್ವಂತ ಸೃಜನಾತ್ಮಕ ಅನುಭವಗಳಿಂದಲೇ ಈ ಕಥೆ ರೂಪುಗೊಂಡಿರುವುದು ಇಲ್ಲಿನ ಆಪ್ತತೆಯನ್ನು ಹೆಚ್ಚಿಸಿದೆ.

ತಾಂತ್ರಿಕವಾಗಿಯೂ ಈ ಆಲ್ಬಂ ಗಮನ ಸೆಳೆಯುತ್ತಿದ್ದು, ನಾರಾಯಣ ಶರ್ಮ ಅವರು ಹಾಡಿಗೆ 'ರೆಟ್ರೋ-ಮೋಡರ್ನ್' ಸ್ಪರ್ಶ ನೀಡಿದ್ದಾರೆ. ವಿಶೇಷವಾಗಿ ಭಾರತೀಯ ಶಾಸ್ತ್ರೀಯ ಸಂಗೀತದ ತಂಬೂರಿಯನ್ನು ಆಧುನಿಕ ಸಿಂತ್ ಮ್ಯೂಸಿಕ್ ಜೊತೆಗೆ ಸಮರ್ಥವಾಗಿ ಬೆರೆಸಲಾಗಿದೆ. ಚಿತ್ರೀಕರಣದ ವಿಚಾರದಲ್ಲೂ ದಾಖಲೆ ಬರೆದಿರುವ ಚಿತ್ರತಂಡ, ಕಂಠೀರವ ಸ್ಟುಡಿಯೋದಲ್ಲಿ ಕೇವಲ 14 ಗಂಟೆಗಳ ಅವಧಿಯಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಈ ಹಾಡನ್ನು ಸೆರೆಹಿಡಿದಿದೆ.

ಈ ಕುರಿತು ಮಾತನಾಡಿದ ನಿರ್ಮಾಪಕ ವಿಜಯ್ ಲೋಹಿತ್, ಪ್ರಸ್ತುತ ಕನ್ನಡದಲ್ಲಿ ಸ್ವತಂತ್ರ ಸಂಗೀತ ಆಲ್ಬಂಗಳು ಬರುತ್ತಿರುವುದು ಕಡಿಮೆ ಎಂದು ಬೇಸರ ವ್ಯಕ್ತಪಡಿಸುತ್ತಲೇ, ರಜತ್ ಹೆಗಡೆ ಅವರಂತಹ ಬಹುಮುಖ ಪ್ರತಿಭೆಗಳ ಮೂಲಕ ಹೊಸ ಆಲೋಚನೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಹಾಗೂ ಹೊಸಬರಿಗೆ ಸೂಕ್ತ ವೇದಿಕೆ ಕಲ್ಪಿಸುವುದೇ ತಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದ್ದಾರೆ.

Read More
Next Story