ಶಿವರಾತ್ರಿ ಸಂಭ್ರಮದಲ್ಲಿ ಮೊಳಗಿದ ಶಿವತಾಂಡವ: ಸರ್ವಾಂತರ್ಯಾಮಿ ಹಾಡು ಬಿಡುಗಡೆ
x

ಶಿವರಾತ್ರಿ ಸಂಭ್ರಮದಲ್ಲಿ ಮೊಳಗಿದ ಶಿವತಾಂಡವ: 'ಸರ್ವಾಂತರ್ಯಾಮಿ' ಹಾಡು ಬಿಡುಗಡೆ

ಮಹಾಶಿವರಾತ್ರಿಯ ಅಂಗವಾಗಿ, ರಂಗಸ್ವಾಮಿ ಅವರು ಬರೆದು ನಟಿಸಿರುವ 'ಶಿವ ತಾಂಡವ' ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.


Click the Play button to hear this message in audio format

ರಂಗಭೂಮಿ ಹಿನ್ನೆಲೆಯ ರಂಗಸ್ವಾಮಿ ಕಪಿನಿಪಾಳ್ಯ ನಿರ್ದೇಶಿಸಿ, ನಟಿಸಿರುವ ʻಸರ್ವಾಂತರ್ಯಾಮಿ ಎಲ್ಲರ ಕೈಯಲ್ಲೂ ನಾನೇ ಸ್ವಾಮಿʼ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಶಿವರಾತ್ರಿ ಹಿನ್ನೆಲೆ ಚಿತ್ರತಂಡ ತನ್ನ ಪ್ರಚಾರ ಕಾರ್ಯವನ್ನು ಅದ್ಧೂರಿಯಾಗಿ ಆರಂಭಿಸಿದೆ. ನಿರ್ದೇಶಕ ರಂಗಸ್ವಾಮಿ ಅವರೇ ರಚಿಸಿರುವ ಶಿವನ ಕುರಿತಾದ ವಿಶೇಷ ಹಾಡನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾದ ಮೊದಲ ಝಲಕ್ ನೀಡಲಾಗಿದೆ.

ಶಿವರಾತ್ರಿಯ ಪ್ರಯುಕ್ತ ಬಿಡುಗಡೆಯಾಗಿರುವ ಈ ಹಾಡಿಗೆ ರಮೇಶ್ ಕೃಷ್ಣ ಸಂಗೀತ ನೀಡಿದ್ದು, ರಂಗಸ್ವಾಮಿ ಹಾಗೂ ನಟಿ ಸಂಜನಾ ಅಭಿನಯಿಸಿದ್ದಾರೆ. 'ವೇದಸ್ಯ ಆಡಿಯೋ' ಮೂಲಕ ಬಿಡುಗಡೆಯಾಗಿರುವ ಈ ಹಾಡು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಈ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ, ಕಳೆದ 35 ವರ್ಷಗಳ ಹಿಂದೆ ಚಿತ್ರರಂಗದಲ್ಲಿದ್ದೆ. ಅಂದಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಹೀಗಾಗಿ ಈ ಚಿತ್ರ ಮಾಡಿದ್ದೇನೆ. ನಿರ್ದೇಶನದ ಜೊತೆಗೆ ಶಿಕ್ಷಕನ ಪಾತ್ರದಲ್ಲೂ ಆಭಿನಯಿಸಿದ್ದೇನೆ. ರಾಮ್‍ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದಲ್ಲಿ ನಾನೇ ಬರೆದಿರುವ ನಾಲ್ಕು ಹಾಡುಗಳಿದೆ. ಶಿವರಾತ್ರಿ ಸಂದರ್ಭದಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸರ್ವಾಂತರ್ಯಾಮಿ ಅಂದರೆ ಮೊಬೈಲ್‍. ಅದರಿಂದ ಆಗುವ ಅನುಕೂಲ, ಅನಾನುಕೂಲಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಮಕ್ಕಳ ಚಿತ್ರ. ಮಕ್ಕಳಿಗಾಗಿ ಮಾಡಿದ್ದೇನೆ. ಚಿತ್ರೀಕರಣ ಮುಗಿದಿದ್ದು ಡಬ್ಬಿಂಗ್ ಸಹ ಪೂರ್ಣಗೊಂಡಿದೆ. ಸದ್ಯದಲ್ಲಿಯೇ ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ನಿರ್ಮಾಪಕಿ ಹಿತಾ ಆರ್ ಗೌಡ ಮಾತನಾಡಿ, ರಂಗಭೂಮಿ ಒಲವು ಅಪ್ಪನ ಮೇಲೆ ಇತ್ತು, ಅಪ್ಪ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಕೆ ರಾಮ್ ನಾರಾಯಣ್ ಮಾತನಾಡಿ, ನಿರ್ದೇಶಕ ರಂಗಸ್ವಾಮಿ ಅವರು ನನಗೆ ಹದಿನೈದು ವರ್ಷಗಳ ಪರಿಚಯ. ಅವರ ಸಿನಿಮಾ ಮಾಡುವ ಕನನು ಈಗ ನನಸಾಗಿದೆ. ಒಳ್ಳೆಯ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ ತಂಡಕ್ಕೆ ಹಾಗೂ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.

ನಟಿ ಸಂಜನಾ ಮಾತನಾಡಿ, ಆರಂಭದ ಚಿತ್ರದಲ್ಲಿ ಪಾರ್ವತಿ ದೇವಿಯ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿರುವುದು ಖುಷಿ ಕೊಟ್ಟಿದೆ ಎಂದು ನಟಿ ಸಂಜನಾ ಹೇಳಿದರು. ಕಲಾವಿದ ಸೂರ್ಯ ಪ್ರವೀಣ್ ಮಾತನಾಡಿ ಹಾಡು ಚೆನ್ನಾಗಿ ಬಂದಿದೆ. ಇದರಲ್ಲಿ ನನ್ನದು ವಿಭಿನ್ನ ಪಾತ್ರ ಎಂದರು.

ಕಲಾವಿದ ನಾಗರಾಜ್ ಮಾತನಾಡಿ, 20 ವರ್ಷದಿಂದ ಚಿತ್ರರಂಗದಲ್ಲಿದ್ದೇನೆ. ಮೊದಲ ಬಾರಿಗೆ ಪೋಸ್ಟರ್ ನಲ್ಲಿ ಕಾಣಿಸಿಕೊಳ್ಳುವಂತಹ ಮುಖ್ಯ ಪಾತ್ರ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಮಗಳಿಗಾಗಿ ಅಪ್ಪ ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಒಂದೆಳೆ ಕಥೆ ಎಂದು ಹೇಳಿದರು.

ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ, ಕಲಾವಿದರಾದ ವಿಕ್ಟರಿ ವಾಸು, ಮೈರಾ, ಅಮೂಲ್ಯ ನಾರಾಯಣ್,ಉಮೇಶ್ ಸಕ್ಕರೆನಾಡು, ಉಮೇಶ್ ಪುಂಗ ಮತ್ತಿತರರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

Read More
Next Story